ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸದ ಮಾರ್ಚ್

Last Updated 1 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಕಚೇರಿಗಳಲ್ಲಿ ಬಡ್ತಿ, ವರ್ಗಾವಣೆ, ತೆರಿಗೆಗಳ ತಲ್ಲಣಗಳ ಜೊತೆಗೆ ಶಾಲಾ ಕಾಲೇಜುಗಳಲ್ಲಿನ ಬೀಳ್ಕೊಡುಗೆಯ ಪರಿತಾಪ ಮಾರ್ಚ್‌ ಬೇಗೆಯನ್ನೂ ಮೀರಿಸುತ್ತದೆ. ಸಾಲ ಮರುಪಾವತಿ, ಬಜೆಟ್‌ಗಳ ಪಟ್ಟಿಯ ಕಾವೇರುವುದೂ ಈಗಲೇ. ಹೊಸ ವರ್ಷ, ಪ್ರೇಮದಿನ ಎಲ್ಲವೂ  ದಾಟಿದ ನಂತರ ಅಂಕದ ಹಿಂದೆ ಓಡುವ ವಿದ್ಯಾರ್ಥಿಗಳು ಪರೀಕ್ಷೆಯ ಯುದ್ಧಕ್ಕೆ  ಸಿದ್ಧಗೊಳ್ಳುವುದೂ ಈ ಮಾಸದಲ್ಲೇ.  ಇದೊಂದು ರೀತಿ ಟರ್ನಿಂಗ್ ಪಾಯಿಂಟ್ ಇದ್ದಂತೆ.


ಹಳೆ ಎಲೆಗಳು ಉದುರುವ ಈ ತಿಂಗಳಿನಲ್ಲೇ ಬದುಕಿನ ನಿರ್ಣಾಯಕ ಸಂಗತಿಗಳು ಚಿಗುರುವುದು! ಇದೇ ನೆಲೆಯಲ್ಲಿ, ‘ಮಾರ್ಚ್ ತಿಂಗಳು ನಿಮ್ಮ ಬದುಕಿನ ದಿನದರ್ಶಿಕೆಯಲ್ಲಿ ಯಾವ ಸ್ಥಾನ ಪಡೆದುಕೊಂಡಿದೆ? ನಿಮ್ಮ ಭಾವಜಗತ್ತು ಈ ತಿಂಗಳನ್ನು ಹೇಗೆ ಒಳಗೊಂಡಿದೆ’ ಎಂದು ‘ಕಾಮನಬಿಲ್ಲು’ ಓದುಗರಿಂದ ಅನುಭವಗಳನ್ನು ಹಂಚಿಕೊಳ್ಳಲು ಆಹ್ವಾನಿಸಿತ್ತು. ಮಾರ್ಚ್‌ ತಿಂಗಳಿನಲ್ಲಿ ಘಟಿಸಿದ ಹಲವು ಸಂಗತಿಗಳನ್ನು ಹಂಚಿಕೊಂಡ ಸಾಕಷ್ಟು ಪತ್ರಗಳು ಹರಿದುಬಂದವು. ಅದರಲ್ಲಿ ಆಯ್ದ ಕೆಲವು ಇಲ್ಲಿವೆ...

ಬೆಳದಿಂಗಳ ನೋಡಾ...

ಸುರಿವ ಬಿಸಿಲುಮಳೆಗೆ ಪ್ರತಿಯಾಗಿ ಬೆವರು ಕೂಡ ಧಾರಾಕಾರವಾಗಿ ಸುರಿಯುವ ತಿಂಗಳು ಏಪ್ರಿಲ್. ಬಿಸಿಲ ಬೇಗೆಯ ತಾರಕದ ದಿನಗಳ ಈ ತಿಂಗಳಿಗೆ ಬೆಳದಿಂಗಳ ಆಯಾಮವೂ ಇದೆ – ಕತ್ತಲ ಅಂಚಿನಲ್ಲಿ ಹೊಳೆಯುವ ಬೆಳ್ಳಿರೇಖೆಯಂತೆ! ‘ಅಂಬೇಡ್ಕರ್‌ ಜಯಂತಿ’ ಕಾರಣದಿಂದಾಗಿ ಇದು ಅರಿವು, ಬಿಡುಗಡೆ ಹಾಗೂ ಮಾನವೀಯತೆಯ ರೂಪಕದ ತಿಂಗಳೂ ಹೌದು. ಬಿಸಿಲಿನ ಬಗ್ಗೆ, ಬಿಸಿಲು ಉಂಟುಮಾಡುವ ದಣಿವಿನ ಕುರಿತು ವಿಷಾದ–ವಿರಾಗ ಭಾವ ತಳೆಯುವ ಬದಲು, ಇದೇ ಅವಧಿಯಲ್ಲಿ ನಮ್ಮೊಳಗನ್ನು ಬೆಳಗುವ ಸಂಗತಿಗಳ ಬಗ್ಗೆ ಯೋಚಿಸಿದರೆ ಮನಸ್ಸು ತುಂಬಿಬರುತ್ತದೆ. ಹೀಗೆ, ಏಪ್ರಿಲ್‌ ನಿಮ್ಮನ್ನು ಸೆಳೆದ, ನಿಮ್ಮೊಳಗನ್ನು ಬೆಳಗಿದ ಸಂದರ್ಭ ಯಾವುದು? ನಿಮ್ಮ ಬದುಕಿನಲ್ಲಿ ಏಪ್ರಿಲ್‌ಗೆ ಇರುವ ಮಹತ್ವ ಯಾವ ರೀತಿಯದು? ಈ ಬಿಸಿಲ ತಿಂಗಳಿನೊಂದಿಗೆ ನಿಮ್ಮ ಬದುಕು ಬೆಸೆದುಕೊಂಡ ಬಗೆ ಯಾವ ಬಗೆಯದು? ಏಪ್ರಿಲ್‌ನೊಂದಿಗಿನ ನಿಮ್ಮ ಸಖ್ಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಮಾರ್ಚ್ 30ರ ಒಳಗೆ ಪತ್ರಗಳು ತಲುಪಬೇಕು. ವಿಳಾಸಕ್ಕೆ 7ನೇ ಪುಟದ ಅಂಚನ್ನು ನೋಡಿ.

***

ಸುರಗಿ ಗಂಧ ತೇಲಿ ಬಂತು

ಮಾರ್ಚ್‌ ಬಂತೆಂದರೆ ವಿಭಿನ್ನ ಭಾವವೊಂದು ತೇಲಿಬರುತ್ತೆ. ಗಿರಗಿಟ್ಟಲೆ ಹೂ ಉದುರಿಸೊ ಭೋಗಿ ಮರಗಳು, ಸುರಗಿ ಹೂವಿನ ನರುಗಂಪು. ಚಳಿ ತನ್ನ ಕಂಬಳಿ ಬಿಟ್ಟು ಹೋಗುವ ಕಾಲ. ಪ್ರಕೃತಿಯೇ ಕೆಂದೂಳಿನಲ್ಲಿ ಮಿಂದೇಳುವ ಕಾಲ.

ಕಾಲೇಜು ವಿದ್ಯಾರ್ಥಿಗಳಾದ ನಮಗೆ ಹೊಸ ಕೆಲಸಗಳ ಕನಸು. ಮುರಿದ ಪ್ರೇಮಗಳ, ಅಗಲುವಿಕೆಯ ಪರ್ವ ಕಾಲ. ಆದರೆ ನನಗೆ ಮಾರ್ಚ್ ಬಂತೆಂದರೆ ಬಿಡದೇ ನೆನಪಾಗೋದು ಸೂರಿ, ಚೀಪೆ, ಮುರುಗಲ, ಗೋಳಿ, ಗರಚ ಮುಂತಾದ ಕಾಡಹಣ್ಣುಗಳು. ರಕ್ಕಸರಿಗೆ ಸುರಪಾನದ ನಶೆ ಏರಿಸುವ ಚಿಂತೆಯಾದರೆ, ನಮಗೆ ಹಣ್ಣಿನ ತಪಸ್ಸು. ಕಾಡು ಹಣ್ಣು ಎಲ್ಲೇ ಆಗಲಿ ಕೇವಲ ಅದರ ವಾಸನೆಯಿಂದ ಪತ್ತೆ ಹಚ್ಚುತ್ತಿದ್ದೆವು.

ಎಣಿಸಿಕೊಂಡರೆ ಈಗಲೂ ಬಾಯಲ್ಲಿ ನೀರೂರುವುದು. ಅವುಗಳಿಗಾಗಿಯೇ ಕಾಡು ಮೇಡೆಲ್ಲಾ ಸುತ್ತಿ ಬಳಸಿ ಶಾಲೆಗೆ ಹೋಗಿ ಬೈಸಿಕೊಳ್ಳುತ್ತಿದ್ದೆವು. ನಮ್ಮ ದಾಳಿಗೆ ನಲುಗದ ಗಿಡವೇ ಇಲ್ಲ! ಯಾವ ಮರದಲ್ಲಿ ಯಾವ ಹಣ್ಣು ಯಾವಾಗ ಬಿಡುವುದೆಂಬುದು ನಮ್ಮ ನಾಲಗೆ ತುದಿಯಲ್ಲಿ. ಹೊಸ ಹೊಸ ಜಾತಿಯ ಹಣ್ಣುಗಳನ್ನು ಪತ್ತೆ ಹಚ್ಚುವುದರಲ್ಲಿ ನಾನು ನಿಸ್ಸೀಮ. ಒಮ್ಮೆಯೊಂದು ಹಣ್ಣನ್ನು ಪತ್ತೆ ಹಚ್ಚಿ ತಿಂದುಬಿಟ್ಟಿದ್ದೆವು. ನಂತರ ನಾವು ಸಾಯುತ್ತೇವೆಂದು ಗೆಳೆಯ ಹೆದರಿಸಿದಾಗ ತುಂಬಾ ಹೆದರಿಕೆಯಾಗಿತ್ತು. ಸಂಜೆಯಾದರೂ ಸಾಯದಿದ್ದಾಗ ಹೇಳ ತೀರದಷ್ಟು ಸಂತೋಷವಾಗಿತ್ತು! ಒಮ್ಮೆಯಂತೂ ಚಾರ್ ಎಂಬ ಹಣ್ಣು ತಿಂದು ಮುಖವನ್ನು ಹನುಮನಂತೆ ಊದಿಸಿಕೊಂಡು ಮಾರ್ಚ್‌ನ ಪರೀಕ್ಷೆ ತಪ್ಪಿಸಿಕೊಂಡದ್ದು ಇನ್ನೂ ನೆನಪಿದೆ. ಅದನ್ನೆಣಿಸಿ ಅಮ್ಮ ಈಗಲೂ ಕಾಲೆಯುತ್ತಾಳೆ. ಹೀಗೆ ಕಾಡು ಹಣ್ಣುಗಳ ಚಟಕ್ಕೆ ಬಿದ್ದು ಪಟ್ಟ ಗೋಳು ಒಂದೆರಡೇ. ಅದಕ್ಕೆ ನನಗೆ ಮಾರ್ಚ್ ಬಂದರೆ ಹಣ್ಣುಗಳೇ ನೆನಪಾಗೋದು. ಚೀಪಿ ಹಣ್ಣು ಕೊಯ್ಯಲು ಹೋಗಿ ಕಣಜದಿಂದ ಕಟುಕಿಸಿಕೊಂಡದ್ದು ನನ್ನ ಇನ್ನೊಂದು ಸಾಹಸಗಾಥೆ, ಮನೆಯವರಿಗೆ ಮಾತ್ರ ಬಾಧೆ.

ಹೊಸ ಜಾತಿ ಕೆಂಪು ಹಲಸಿನ ತೆವಲಿಗೆ ಬಿದ್ದು ಮರ ಹತ್ತಿ ಇಳಿಯಲಾಗದೆ ಪೇಚಾಡಿಕೊಂಡಿದ್ದು ಕೊನೆಗ್ಯಾರೋ ದಾರಿಹೋಕರು ಬಂದು ನನ್ನನ್ನು ಇಳಿಸಿ ಹೋದ ನೆನಪು. ಮಾರ್ಚ್ ಬಂತೆಂದರೆ ಹಣ್ಣುಗಳ ನೆನಪ ಮೆರವಣಿಗೆ. ಪರೀಕ್ಷೆಗಳ ಪರ್ವಗಾಲದಲ್ಲಿ ನಮ್ಮದು ಫಲ ಪರ್ವ. ಕೆಲವೊಂದು ಹಣ್ಣುಗಳು ಹೇಳ ಹೆಸರಿಲ್ಲದೇ ನಮ್ಮೂರಿಂದ ಕಾಲ್ಕಿತ್ತಿವೆ. ನನಗೆ ಹಣ್ಣುಗಳ ಸೆಳೆತವಾದರೆ, ಅಕ್ಕನಿಗೆ ಸುರಗಿಗಂಪಿನ ಸೆಳೆತ. ಸುರಗಿಗೂ ಅವಳಿಗೂ ಬಿಡಿಸಲಾಗದ ನಂಟು. ಸುರಗಿ ಹೂವಾಯಿತೆಂದರೆ ಮಾರ್ಚ್‌ ಬಂತೆಂದೇ ಅರ್ಥ. ಸೂರ್ಯ ಹುಟ್ಟುವ ಮುಂಚೆ ಅಮ್ಮ ಕೊಟ್ಟ ಕಾಫಿ ಹೀರಿ ಸುರಗಿ ಗಿಡಕ್ಕೆ ನಮ್ಮ ದಾಳಿ. ಮರ ಹತ್ತಲು ಬಾರದ ಅಕ್ಕ ನನ್ನ ಪೀಡಿಸಿ ಮರ ಹತ್ತಿಸುತ್ತಿದ್ದಳು. ಸುರಗಿ ಚಿಕ್ಕ ಮರವಾದುದರಿಂದ ಪರವಾಗಿಲ್ಲ. ತೃಪ್ತಿಯಾಗುವಷ್ಟು ಕೊಯ್ದು ಬುಟ್ಟಿಗೆ ತುಂಬಿಕೊಳ್ಳುತ್ತಿದ್ದೆವು. ಕೊಯ್ದ ಹೂವನ್ನು ಮಾಲೆ ಮಾಡದೇ ಅವಳಿಗೆ ಸಮಾಧಾನವಿಲ್ಲ. ಹೂ ಕಟ್ಟದೇ ಶಾಲೆಗೆ ಹೋಗುತ್ತಿರಲಿಲ್ಲ. ಮಾರ್ಚ್‌ ಬಂದರೆ ಸುರಗಿ, ಅಕ್ಕ ಮತ್ತು ನನ್ನ ಪ್ರೀತಿಯ ಹಣ್ಣುಗಳು ನೆನಪಾಗುತ್ತವೆ!
  –ಶ್ರೀಧರ್. ಎಸ್. ಸಿದ್ದಾಪುರ

***

ಮಾರ್ಚ್ ಎಂಬ ಮಾಯೆ!
ಹೊಸ ವರ್ಷದ ಗುಂಗಬಿಟ್ಟ ಹೋಗಾಕ ಜನವರಿ ಒಂದ ತಿಂಗಳ ಸಾಲಾಂಗಿಲ್ಲ, ಆಮ್ಯಾಲ ಫೆಬ್ರುವರಿ ತಿಂಗಳದಾಗ ಓದುದ ಬಿಟ್ಟು ಬ್ಯಾರೆ ದಗದನ ಇಲ್ಲ. ಅಷ್ಟ ಅನ್ನುದ್ರಾಗ ಬಂದ ಬಿಡ್ತದ ನೋಡ್ರ ಈ ಮಾರ್ಚ. ಶಿವರಾತ್ರಿ ಮುಗಿಸಿ ಶಿವಾ ಶಿವಾ ಅಂತ ಅನ್ನುದ್ರಾಗ ಮೈತುಂಬಾ ಬೆವರ ಹರದ ಹೋಗ್ತದ. ಸಣ್ಣ ಹುಡುಗ್ರು ಗ್ಯಾದರಿಂಗ್ ಗದ್ದಲ ಮುಗಿಸಿ ಫೈನಲ್ ಎಕ್ಸಾಮ್ ಬರಿಮುಂದ ಅವ್ರಿಗಿ ಖುಷಿನ್ ಖುಷಿ ಮುಂದ ಸೂಟಿ ಬಿಡ್ತೈತಿ ಅಂತ. ಸರಕಾರಿ ನೌಕರಿ ಮಾಡೋರಿಗಂತು ಕುಂತ್ರು ಸಮಾಧಾನ ಇಲ್ಲ ನಿಂತ್ರು ಸಮಾಧಾನ ಇಲ್ಲ ಯಾ ಹೊತ್ತನ್ಯಾಗ ಎಲ್ಲಿ ಟ್್ರಾನ್ಸ್‌ಫರ್ ಆಗ್ತೈತೇನೋ ಅನ್ನು ಅಂಜಿಕಿ ಎದ್ಯಾಗ ಗುದ್ದತಿರ್ದದ ನೋಡ್ರಿ.

ಇನ್ನ ಬೋರ್ಡ ಎಕ್ಸಾಮ್ ಬರಿಯೂ ಹುಡುಗರ ಪಾಡ ಅಂತೂ ಕೇಳಬಾರದ ನೋಡ್ರಿ. ಮನ್ಯಾಗ ಎಲ್ಲಾರ ಬಾಯಿಂದೂ ಒಂದ ಮಾತ ಕೇಳುದು ಓದು ಓದು ಓದು ಅಂತ ಹೇಳಿ. ಎನ್ ಓದ್ತಾರೋ ಏನೋ ಆದ್ರ ಮನಸನ್ಯಾಗಿನ ದುಗುಡ ಆತಂಕ ಹೇಳ್ಕೊಳಿಕ್ಕ ಅವಕಾಶನ ಇರಲಾರದಂತ ಸ್ಥಿತಿಯೊಳಗ ಇರುದಂತೂ ಖರೆ ಐತಿ. ಇನ್ನ ನಮ್ಮ ಹಳ್ಳಿಗೊಳ ಕಡೆ ಹುಡುಗ್ರಿಗಿ ಹಬ್ಬ ಇದ್ಹಂಗ ನೋಡ್ರಿ ಮಾರ್ಚ ತಿಂಗಳ ಅಂತ ಅಂದ್ರ. ಕೈಯಾಗ ಪುಸ್ತಕ ಹಿಡ್ಕೊಂಡು ಹೊಲ ಹೊಲ ತಿರಗ್ಯಾಡಿ ಗಿಡದ ಮ್ಯಾಲ ಕುಂತು, ಹರಿಯುವ ಹಳ್ಳದಾಗ ಕಾಲ ಬಿಟಗೊಂಡು ಕುಂತು, ದೇಹದ ಆಯಾಸ ತೀರಸ್ಕೊಂತ, ಮನಸ ಹಗರ ಆಗಸ್ಕೊಂತ, ತಲಿಯೊಳಗ ಅಕ್ಷರಗೊಳ ಹೊಂಟ್ರ ಪೆಪರ್ದಾಗ ಅಂಕಗೋಳು ಹಂಗ ಹೆಚ್ಚಾಕ್ಕೊಂತ ಹೊಗ್ತಾವ ನೋಡ್ರಿ.

ಅದ್ಕ ದೊಡ್ಡ ದೊಡ್ಡ ಮೇಧಾವಿಗಳ ಮೂಲ ನಮ್ಮ ಹಳ್ಳದ ದಂಡಿಗೊಳು ಗಿಡದಾನ ಟೊಂಗಿಗೊಳು. ಅಂತ ಅನ್ನೂದು. ಹಿಂಗ ಮಾರ್ಚ ಅನ್ನೂ ಮಾಸ ನಮ್ಮ ವಿದ್ಯಾರ್ಥಿಗೊಳ ಬದುಕನ್ಯಾಗ ಮಹಿಮಾ ತೋರದ್ರ. ಮಾರ್ಚ ಇದು ಮದುವೆಗಳ ಸುಗ್ಗಿ ಐತ್ರಿ ಸಾವಿರಾರು ಮದುವಿಗಳಿಗಿ ಮಾರ್ಚ ಮಣಿ ಹಾಕತದ್ರಿ. ಮದುವಿಯಾಗಿ ಬಾಳಿಗೊಂದು ಜೋಡಿ ಆರಸ್ಕೊಂಡ ಹೋಗವ್ರ ಪಾಡ ಅಂತು ಕೇಳಬಾರದು ಅಂತೀನಿ. ಭವಿಷ್ಯ ನೆನಸ್ಕೊಂಡ ಅರ್ಧ  ತಣ್ಣಗಾಗಿತಾರ, ಮತ್ತ ಅಂತಾ ಬಿಸಲ ಗದ್ದಲದಾಗ ಬೆವತು ಮತ್ತಿಷ್ಟ ತಣ್ಣಗ ಆಗಿ ಬಿಡ್ತಾರ ನೋಡ್ರಿ. ಹಿಂಗ ಮಾರ್ಚ ಅನ್ನೂದು ಭಯ ಖುಷಿ ಸಂಭ್ರಮ ಸಡಗರ ನೋವು ನಲಿವು ಎಲ್ಲ ಭಾವನೆಗಳ ಒಂದು ಮಿಶ್ರಣ ಒಂಥರಾ ಸ್ಪೇಷಲ್ ತಿಂಗಳ ನೋಡ್ರಿ ಈ ಮಾರ್ಚ.

ಅದೆಲ್ಲನೂ ಬ್ಯಾಲೆನ್ಸ ಮಾಡ್ಕೊಂಡು ಮಾರ್ಚ ತಿಂಗಳಿಗಿ ಟಾ ಟಾ ಹೇಳಿಬಿಟ್ರ ಅರ್ಧ ವರ್ಷನ ಗೆದ್ದಷ್ಟು ಸಂಭ್ರಮ ಆಗ್ತದ ಅನ್ನೊದ್ರೊಳಗ ಎರಡ ಮಾತಿಲ್ಲ ನೋಡ್ರಿ... ಇಂತಾ ಮಾರ್ಚ ನಿಮ್ಮ ಬದುಕಿನ ಎಲ್ಲ ಸಂತಸಗಳಿಗೆ  ಸಾಕ್ಷಿಯಾಗಲಿ.                                                
  -ಸುಕೃತಾ ಜಗದೀಶ ಪಟ್ಟಣಶೆಟ್ಟಿ ಸಿಂದಗಿ

***

ಕಾಲೇಜ್ ಲೈಫ್..
ಮಾರ್ಚ್ ತಿಂಗಳು ಸಮೀಪಿಸುತ್ತಿದೆ. ಅದೆಷ್ಟು ಬೇಗ ದಿನಗಳು ಉರುಳುತ್ತವೆ ಎಂಬುದು ಗೊತ್ತಾಗುವುದಿಲ್ಲ. ಮಾರ್ಚ್ ಎಂದರೆ ಏನೋ ಸಣ್ಣಗೆ ನಡುಕ, ಟೆನ್‌ಶನ್. ಅದರಲ್ಲೂ ನಮ್ಮ ಪ್ರಾಜೆಕ್ಟ್ ಸಬ್‌ಮಿಶನ್ ಮಾಡಲೇಬೇಕು. ಮಾಡಿಲ್ಲಾಂದ್ರೆ ಕಥೆ ಮುಗೀತು. ಮೇಡಂನ ಬೈಗುಳ ಕೇಳೋದ್ಯಾರಪ್ಪ? ಅದರ ಜೊತೆಗೆ 3ನೇ ಟೆಸ್ಟ್ ಎಕ್ಸಾಂ ಅದರೊಂದಿಗೆ ಅಂತಿಮ ವರ್ಷದವರ ಬೀಳ್ಕೊಡುಗೆ ಸಮಾರಂಭ ಬೇರೆ! ಏಪ್ರಿಲ್‌ನಲ್ಲಿ ಫೈನಲ್ ಎಕ್ಸಾಂ. ಶಿಕ್ಷಕರ ಗೀತೋಪದೇಶ ಚೆನ್ನಾಗಿ ಓದಿ, ಅದು ಇಂಪಾರ್ಟ್ಂಟ್ ಇದು ಇಂಪಾರ್ಟ್ಂಟ್, ಯಾವುದು ಓದುವುದು? ಯಾವುದು ಬಿಡುವುದು? ಎಂಬ ಯೋಚನೆ.

ಅಸೈನ್ಮೆಂಟ್ ನಾಳೆ ಸಬ್‌ಮಿಶನ್ ಅಂತಾದರೆ ರಾತ್ರಿ ಪೂರ್ತಿ ಜಾಗರಣೆ ಮಾಡಿ ಕೂತು ಬರೆದು ಬೆಳಿಗ್ಗೆ ಫ್ರೆಂಡ್ಸ್ ಇಡೋ ಮುಂಚೆ ಇಡಬೇಕುನ್ನುವಷ್ಟರಲ್ಲಿ ಸ್ನೇಹಿತರ ಗುಂಪು ಇವತ್ತು ಅಸೈನ್ಮೆಂಟ್ ಸಬ್‌ಮಿಟ್ ಮಾಡಬೇಡ ಎಂದು ತಡೆಯೋಕೆ ಕಾಯುತ್ತಿರುತ್ತದೆ.

ಇನ್ನು ಎಕ್ಸಾಂ ಬಂದರಂತೂ ಕೇಳಬೇಕೇ? ಯಾವತ್ತೂ ಇಲ್ಲದ ಓದು ಅವತ್ತಿನಿಂದ ಶುರು. ಫೇಸ್ಬುಕ್, ವಾಟ್ಸ್ಆ್ಯಪ್ ಜಾಲಾತಾಣಗಳಿಗೆಲ್ಲ ದೊಡ್ಡ ಬ್ರೇಕ್. ದೇವರ ಕಡೆ ಮುಖವೇ ಮಾಡದಿದ್ದ ನಮ್ಮಲ್ಲಿ ಎಕ್ಸಾಂ ಮುಗಿಯೋ ತನಕ ಅದೆಂಥ ಭಕ್ತಿ. ಗ್ರೂಪ್ ಡಿಸ್ಕಷನ್ ಅಂತ ಫ್ರೆಂಡ್ಸ್‌ಗೆ ಕರೆ ಮಾಡಿ ಒಂದೆಡೆ ಸೇರಿ ಗ್ರೂಪ್ ಸ್ಟಡೀಸ್. ಎಕ್ಸಾಂ ಮುಗಿದ ಮೇಲೆ ಬಿಂದಾಸ್, ನಮ್ಮದೇ ಸಾಮ್ರಾಜ್ಯ. ಎಕ್ಸಾಂನಲ್ಲಿ ಅಂಕ ಕಡಿಮೆ ಬಂದರೆ ಮಾರ್ಕ್ ಕಾರ್ಡ್ ಮನೆಗೆ ತಲುಪುವ ಬದಲು ಗೆಳೆಯ/ಗೆಳತಿಯರಿಗೆ ತಲುಪಿಸಿ ಸೈನ್ ಹಾಕಿಸಿದ್ದುಂಟು. ಕಾಲೇಜು ಲೈಫಿನ ಇಂಥ ಮೋಜಿಗೆಲ್ಲಾ ಅವಕಾಶವಾಗುವುದು ಮಾರ್ಚ್‌ನಲ್ಲೇ ತಾನೇ?
–ಸುಹಾನಿ ಬಡೆಕ್ಕಿಲ ಬಂಟ್ವಾಳ

***
ಮರೆಯೊಳಡಗಿದ ಧಗೆ ಮಾರ್ಚ್
‘ಶಿವರಾತ್ರಿಗೆ ಶಿವ ಶಿವ ಅಂತ ಚಳಿ ಹೋಗಿ ಹರ ಹರ ಅಂತ ಬಿಸಿಲು ಶುರುವಾಗುತ್ತಂತೆ’ ಈ ಸಾಲಿನೊಂದಿಗೆ ನನ್ನ ಮಾರ್ಚಿನೊಂದಿಗಿನ ನೆನಪುಗಳು ಶುರುವಾಗುವುದು. ಮಾರ್ಚಿಗೂ ನನಗೂ ಹುಟ್ಟಿನ ಸಂಬಂಧ. ಯಾಕೆಂದರೆ ನಾನು ಹುಟ್ಟಿದ್ದೇ ಹರ ಹರ ಅಂತ ಬಿಸಿಲು ಕಾಲಿಟ್ಟ ಮಾರ್ಚಿನಲ್ಲಿ. ಅಂದಮೇಲೆ ಮಾರ್ಚ್ ನಿನ್ನ ಮರೆತೇನೆಂದರೆ ಮರೆಯಲಿ ಹೆಂಗ?

ಹುಟ್ಟಿನೊಂದಿಗೆ ಶುರುವಾದ ಈ ಮಾರ್ಚಿನ ಬಂಧ ಇಲ್ಲಿಯವರೆಗೂ ಬೇರೆ ಬೇರೆ ತರಹದಲ್ಲಿ ಜೊತೆಯಾಗಿ ಮಾರ್ಚ್ ಮಾಡುತ್ತಲೇ ಬರುತ್ತಿದೆ. ಸ್ಕೂಲಿಗೆ ಹೋಗುವವರೆಗೂ ಈ ತಿಂಗಳುಗಳ ಗೊಡವೆಯಿರಲಿಲ್ಲ. ಹೋದ ಮೇಲೆ ಪರೀಕ್ಷೆ ಅನ್ನೋದು ಅರ್ಥವಾಗುವ ಕಾಲಕ್ಕೆ ಕ್ಯಾಲೆಂಡರಿನಲ್ಲಿ ಎರಡು ತಿಂಗಳನ್ನು ಅನಾಮತ್ತು ಅಳಿಸುವಂತಿದ್ದರೆ ಅನ್ನಿಸುತ್ತಿದ್ದದ್ದು ಒಂದು ಅಕ್ಟೋಬರ್ ಮತ್ತೊಂದು ಮಾರ್ಚ್. ಹೌದಪ್ಪ ಹೌದು.

ಪರೀಕ್ಷೆಗಳ ಭಯಂಕರ ಕಾಟ. ಪ್ರತೀ ಸಾರಿ ಪರೀಕ್ಷೆಗೆ ಹೋಗುವಾಗಲೂ ‘ಇದೊಂದು ಸಾರಿ ನಾನು ಓದಿರೋಷ್ಟರಲ್ಲಿ ಮಾತ್ರ ಪ್ರಶ್ನೆಗಳನ್ನು ಕೇಳಿಬಿಡಲಪ್ಪ. ಮುಂದಿನ ಸಾರಿ ಖಂಡಿತ ಪರೀಕ್ಷೆಗೂ ಮುಂಚೆನೇ ಎಲ್ಲ ಓದಿ ದಬಾಕ್ಬಿಡ್ತಿನಿ’ ಅಂತ ಮನಸಲ್ಲೇ ಪ್ರಶ್ನೆಪತ್ರಿಕೆಯ ಹಿಂದಿನ ದೇವರನ್ನ ಕೇಳಿಕೊಳ್ಳುತ್ತಿದ್ದೆ. ಆದರೆ ಒಂದು ಸಾರಿಯೂ ಕೇಳಿಕೊಂಡಿದ್ದು ನಡೀಲಿಲ್ಲ, ಮಾಡ್ತೀನಿ ಅಂದದ್ದೂ ನಾನು ಮಾಡಲಿಲ್ಲ. ಅದು ಬಿಡಿ. ಏನೆಲ್ಲವನ್ನು ಆರಾಮಾಗಿ ನೆನಪಿಟ್ಟುಕೊಳ್ಳಬಹುದು.

ಆದರೆ ಪ್ರಶ್ನೆಗೆ ಉತ್ತರಗಳು ಮಾತ್ರ ಯಾಕೆ ಸರಿಯಾಗಿ ನೆನಪಿರಲ್ಲ ಅನ್ನೋ ಬೆಲೆಕಟ್ಟಲಾಗದ ಪ್ರಶ್ನೆಯೊಂದಿಗೆ ಪಬ್ಲಿಕ್ ಎಕ್ಸಾಂ ಅನ್ನೋ ಗುಡ್ಡದ ಭೂತವನ್ನು ಎದುರಿಸೋ ಕಾಲ ಬಂದಾಗಿತ್ತು. ಇದರ ಜೊತೆ ಹೊಸ ಸ್ಕೂಲು ಕಾಲೇಜುಗಳಿಗೆ ಸೇರೋ ಸಂದರ್ಭ. ಸೆಂಡ್‌ಆಫ್ ಕಾರ್ಯಕ್ರಮಗಳ ಭರಾಟೆ.
‘ಮನಸು ಹೇಳಬಯಸಿದೆ ನೂರೊಂದು..’ ಅನ್ನೋ ಹಾಡನ್ನು ಯಾರೋ ಹಾಡಿದಾಗ ಎಲ್ಲರ ಕಣ್ಣಾಲಿಗಳೂ ತುಂಬಿದ ಕ್ಷಣ. ಆಟೋಗ್ರಾಫ್ ಪುಸ್ತಕ ಹಿಡಿದು ಎಲ್ಲರ ಮುಂದೆ ಬಿಡದೆ ಹಿಡಿದ ಕ್ಷಣ. ಆಟೋಗ್ರಾಫ್‍ ಪುಸ್ತಕ ಕಂಡ ತಕ್ಷಣ ಏನು ಬರೆಯೋದು ಗೊತ್ತಾಗದೆ ಬೆಪ್ಪಾದ ಕ್ಷಣ. ಎಲ್ಲೋ ಓದಿದ್ದ, ಕೇಳಿದ್ದ ಸಾಲುಗಳನ್ನೆಲ್ಲ ಚಕಚಕ ಸೇರಿಸಿ ತಮ್ಮದೇ ಅನ್ನೋ ಹಾಗೆ ಬರೆದು  ಸಹಿ ಮಾಡಿ ತಮ್ಮ ಹೆಸರು ನಮೂದಿಸುತ್ತಿದ್ದವರ ಪ್ರತಿಭೆಗೆ ಶರಣು ಎನ್ನುತ್ತಾ, ಸ್ನೇಹ ಅಮರ, ಗಿಮರ ಮಾವಿನಮರ ಅಂತೆಲ್ಲ ಬರೆದ ಕ್ಷಣ. ಆ ಆಟೋಗ್ರಾಫ್‍ ಪುಸ್ತಕ ಆ ಕ್ಷಣಕ್ಕೆ ಅತ್ಯಮೂಲ್ಯದ ಆಸ್ತಿ ಎನಿಸಿ ಆಮೇಲೆ ಅಟ್ಟ ಸೇರಿದ್ದು ಬದುಕಿನ ಮುಂದಿನ ಕ್ಷಣ.

ಅಲ್ಲಿಂದ ಮುಂದೆ ಉದ್ಯೋಗ ಪರ್ವದ ಭರಾಟೆ. ಮತ್ತೆ ಮಾರ್ಚ್ ತಿಂಗಳ ಪೆಡಂಭೂತ ಪರೀಕ್ಷೆಯಾಗಿ ಬೆನ್ನುಹತ್ತಿದ್ದು, ವೃತ್ತಿಗೆ ಅಂಟಿಬಂದ ಕರ್ತವ್ಯದೊಂದಿಗೆ. ಪಾಠ ಮಾಡುವಾಗ ಆಗುವ ಖುಷಿ ಪರೀಕ್ಷೆಗೆ ಪತ್ರಿಕೆ ಸಿದ್ಧಪಡಿಸುವಾಗ, ಉತ್ತರಪತ್ರಿಕೆ ತಿದ್ದುವಾಗ ಇರಲ್ಲ. ಇಡೀ ವರ್ಷದಲ್ಲಿ ಮತ್ತೆ ಇಷ್ಟವಾಗದ ತಿಂಗಳು ಅಂತ ಇದ್ದದ್ದು ಮತ್ತದೇ ಮಾರ್ಚ್.

‘ಈ ಪಾಠ ಮಾಡೋಕೆ ಹೋದರೆ ತಾನೆ ಪರೀಕ್ಷೆ, ಮಾರ್ಚ್ ಭೂತದ ಉಸಾಬರಿ. ಈ ಕೆಲಸ ಬಿಟ್ಟು ಬೇರೆ ಕೆಲಸ ಮಾಡೋಣ’ ಅಂತ ಕೆಲಸದಿಂದ ಬೇರೆಡೆಗೆ ಹಾರಿದ್ದೆ. ಆದರೀಗ ಮಾರ್ಚ್ ಇಯರ್ ಎಂಡ್/ ಟ್ಯಾಕ್ಸ್‌ ಪೇಮೆಂಟ್ ಅಂಬೋ ಭಯಂಕರ ಗಣಿತವಾಗಿ ಬೆನ್ನು ಹತ್ತಿದೆ. ಅದನ್ನು ಹಂಚಿಕೊಳ್ಳಲು ಸಂಗಾತಿಯ ಹೆಗಲು ಸಿಕ್ಕು ನಿರಮ್ಮಳವಾದೆ ಅಂದುಕೊಂಡೆ.

ಅಷ್ಟರಲ್ಲಿ ಮಗಳು ಸ್ಕೂಲಿನ ದಿನಗಳು ಶುರುವಾಯ್ತು. ಮತ್ತದೇ ಮಾರ್ಚ್... ಅದೇ ಟೈಂ ಟೇಬಲ್ಲು... ಮತ್ತದೇ ಪರೀಕ್ಷೆಗಳ ಸಾಲು ಸಾಲು... ವರುಷಕೊಂದು ಹೊಸತು ಜನ್ಮ ಸಕಲಜೀವಜಾತಕೆ... ಒಂದೇ ಒಂದು ಜನ್ಮದಲ್ಲಿ ಇಷ್ಟು ಸಲ ಪರೀಕ್ಷೆಯ ಭೀತಿ ನಮಗ್ಯಾಕೆ ಹೇ ಸನತ್ಕುಮಾರ ದೇವ!! ಅಂತ ಮಗಳೊಂದಿಗೆ ಮತ್ತೆ ಪರೀಕ್ಷೆಗಳಿಗೆ ಸಿದ್ಧಗೊಳ್ಳುತ್ತಿದೆ ಮನಸ್ಸು.
–ಹೇಮಾ ಬೆಂಗಳೂರು

***

ಮರ್ಸಿಲೆಸ್ ಮಾರ್ಚ್‌ನಲ್ಲಿ ಯಾವ ಕೆಲಸಗಳೂ ಪಾಸ್ ಆಗುವುದಿಲ್ಲ
ಬೇರೆ ಯಾವುದೇ ತಿಂಗಳಾಗಿದ್ದರೆ ಒಂದು ಆಸೆಯನ್ನು ಇಟ್ಟುಕೊಂಡಿರುತ್ತಿದ್ದೆನೇನೊ! ಆದರೆ ಈ ಮಾರ್ಚ್‌ನಂತಹ ಮರ್ಸಿಲೆಸ್ ಈ ಜನ್ಮದಲ್ಲಿ ಮತ್ತೊಂದಿಲ್ಲ ನನಗೆ. ಈ ಮಾರ್ಚ್ ಅನ್ನೋದು ನನ್ನನ್ನು ಲೈಫ್‌ನಲ್ಲಿ ಕರುಣಾಹೀನವಾಗಿ ನಡೆಸಿಕೊಂಡುಬಿಟ್ಟಿದೆ. ಲೆಕ್ಕಕ್ಕೆ ಇಲ್ಲದಂತೆ ತೆಗೆದು ಹಾಕಿಬಿಟ್ಟಿದೆ. ವಿಧಿ ಲಿಖಿತವೋ, ಕಾಕತಾಳಿಯವೋ ಈ ಮಾರ್ಚ್‌ನಲ್ಲಿ ನಾನು ಫೇಲ್‌ಗಳ ಫೇಲ್ ಅನುಭವಿಸುತ್ತಿದ್ದೇನೆ ಅಂದಿನಿಂದ. ಅಂದಿನಿಂದ ಅಂದರೆ ಎಂದಿನಿಂದ ಅನ್ನುವಿರೇನು? ಹೇಳುತ್ತೇನೆ, ಅದಕ್ಕೆ ಈ ಪ್ರಯತ್ನ.

ನನಗೆ ಮಾರ್ಚ್‌ಗಿಂತ ಈ ಫೆಬ್ರುವರಿ ಮೇಲೆ ತುಂಬಾ ಕೋಪ. ಇದ್ಯಾಕೆ ಮಾರ್ಚ್‌ಗಿಂತ ಮೊದಲೇ ಬಂದು ಕೂತು ಬಿಟ್ಟಿದೆ ಅಂತ. ಅಷ್ಟೇ ಅಲ್ಲದೇ ಸುಮ್ಮನೆ ಕೂತಿರದೇ ತಲೆಕೆಡಿಸುವ 14ನೇ ತಾರೀಖಿನ ದಿನವೊಂದನ್ನು ಹುದುಗಿಸಿಕೊಂಡಿದೆ. ಆ ದಿನದ ದೆಸೆಯಿಂದಲೇ ಮುಂದಿನ ಮಾರ್ಚ್ ತಿಂಗಳಂತೂ ಬಹುಜನರಿಗೆ ಕರಾಬು. ಅವು ನನ್ನ ಹುಡುಗಾಟಿಕೆಯ ದಿನಗಳು. ಬಹುಶಃ ಎರಡನೇ ಪಿಯುಸಿ ಅನ್ಸುತ್ತೆ. ಅನ್ಸುತ್ತೆ ಏನು, ಎರಡನೇ ಪಿಯುಸಿಯೇ. ಕಾಲೇಜಿನ ಪ್ರಭಾವವೋ, ವಯಸ್ಸಿನ ಪ್ರಭಾವವೋ ನನ್ನ ಕಾಲುಗಳು ನೆಲದ ಮೇಲೆ ನಿಂತುಕೊಳ್ಳಲು ಒಲ್ಲವು.

ಲಾಸ್ಟ್ ಬೆಂಚು, ತಲೆ ಹರಟೆ, ರೇಗಿಸೋದು ಇವೇ ನಮ್ಮ ಬಂಡವಾಳಗಳು. ಹಾಗಂತ ನಾನೇನು ಹಿಂದುಳಿದ ವಿದ್ಯಾರ್ಥಿಯಲ್ಲ. ಎಸ್ಸೆಸ್ಸೆಲ್ಸಿಯಲ್ಲಿ ಎಂಬತ್ತೈದು ಪರ್ಸೆಂಟೇಜ್ ತಗೊಂಡು ಬಂದವನು. ಇಲ್ಲಿ ಕುಣಿಯ ಹತ್ತಿದ್ದೆ.  ಪಾಪ ಅವಳದೇನೂ ತಪ್ಪಿಲ್ಲ. ಅವಳ ಹಿಂದೆ ಹುಚ್ಚನಂತೆ ಬಿದ್ದವನು ನಾನೇ. ಈಗ ಯಾಕೆ ಅವಳ ಹಿಂದೆ ಬಿದ್ದೆ ಅಂದ್ರೆ ಕಾರಣ ತಿಳಿಯದೇ ನಗು ಬರುತ್ತೆ. ಈ ಕಾಲೇಜುಗಳಲ್ಲಿ ಈ 14ನೇ ತಾರೀಖನ್ನು ಅವರವರ ಜೀವನದ ಟರ್ನಿಂಗ್ ಪಾಯಿಂಟೋ ಎಂಬಂತೆ ಕಾಣಿತ್ತಿರುತ್ತಾರೆ.

ನಾನೂ ಅಷ್ಟೇ. ಅವಳಿಗೆ ನೀನು ಇಷ್ಟ ಕಣೇ ಅಂತ ಹೇಳಿಬಿಡಬೇಕು ಅಂತ ಧೈರ್ಯ ತಗೊಂಡು ಅಪ್ಪನ ಜೇಬಿನಿಂದ ಎಕ್ಸಟ್ರಾ ಐದು ರೂಪಾಯಿ ಎಗರಿಸಿ, ಜೋಡಿ ಗುಲಾಬಿ ಹೂಗಳಿರುವ ಒಂದು ಗ್ರೀಟಿಂಗ್ ಕಾಡ್  ಖರೀದಿಸಿ, ಷೋ ಮ್ಯಾನ್ ತರಹ ಇಂಗ್ಲಿಷ್‌ನಲ್ಲಿ ಒಲವಿನೋಲೆ ಗೀಚಿ ಅವಳ ಮುಂದೆ ನಗುತ್ತಲೇ ನಿಂತಿದ್ದೆ. ಅವಳು ‘ನಂಗೆ ಟೈಮ್ ಬೇಕು ಮಾರ್ಚ್ ಫಸ್ಟ್ ವೀಕ್‌ನಲ್ಲಿ ಹೇಳ್ತಿನಿ’ ಅಂದ್ಲು. ಕಾದಿದ್ದೇ ಕಾದಿದ್ದು.

ಮಾರ್ಚ್ ಏಳನೇ ತಾರೀಖು. ಅವತ್ತು ಬೆಳಿಗ್ಗೆ ಬಂದವನೇ ಅವಳ ಮುಂದೆ ನಿಂತೆ. ‘ಥೂ, ಏನೇನೋ ಬರೆದಿದೀರಾ ಇಂಗ್ಲಿಷ್‌ನಲ್ಲಿ, ಅದೂ ತಪ್ಪು ತಪ್ಪಾಗಿ. ನಿನಗೆ ಲವ್ವು ಬೇರೆ ಕೇಡು’ ಅಂದು ಹೊರಟು ಹೋದಳು. ಆಮೇಲೇನಾಯ್ತು ಅಂತ ನಾನು ನಿಮಗೆ ಹೇಗೆ ಹೇಳಲಿ. ಅವತ್ತಿಂದ ಕಾಲೇಜ್ ಬಿಟ್ಟೆ. ಮನೆಯಿಂದ ಕಾಲೇಜಿಗೆ ಬರ್ತಿದ್ದೆ. ಆದರೆ ಕಾಲೇಜಿಗೆ ಹೋಗ್ತಿರಲಿಲ್ಲ. ಸುತ್ತಾಡಿಕೊಂಡು ಮನೆಗೆ ಹೋಗ್ತಿದ್ದೆ. ಮಾರ್ಚ್ ಹದಿನೆಂಟರಿಂದ ಪರೀಕ್ಷೆ. ಏನ್ ಬರೆದೆನೋ ಗೊತ್ತಿಲ್ಲ. ಬಹುಶಃ ಏನೂ ಬರೆಯಲಿಲ್ಲ ಅನಿಸುತ್ತದೆ. ಕೂತು ಎದ್ದು ಬಂದೆ.

ನಾನಂತೂ ತುಂಬಾ ಓವರ್ ಆಗಿ ಆಡ್ತಿದ್ದೆ ಅಂತ ಈಗ ಅನಿಸುತ್ತಿದೆ. ಫಲಿತಾಂಶ ಕೇಳುವುದೇ ಬೇಡ. ಇದು ಮಾರ್ಚ್ ತಿಂಗಳ ಎರಡನೇ ಕೊಡುಗೆ. ಮಾರ್ಚ್ ತಿಂಗಳು ಈ ಎರಡು ಫೇಲ್‌ಗಳಿಗೆ ಸಾಕ್ಷಿಯಾಗಿ ಉಳಿದುಬಿಟ್ಟಿತು. ಪರೀಕ್ಷೆಯನ್ನು ಮತ್ತೆ ಕಟ್ಟಿ ಪಾಸ್ ಮಾಡಿಕೊಂಡೆ. ಚೆನ್ನಾಗಿಯೇ ಓದಿದೆ. ಕೆಲಸವನ್ನೂ ಗಿಟ್ಟಿಸಿಕೊಂಡೆ. ಆದರೆ ಮತ್ತೆ ಕಟ್ಟಿ ಪ್ರೀತಿನಾ ಪಾಸ್ ಮಾಡಿಕೊಳ್ಳಲು ಸಾಧ್ಯವಾ? ಅವಳು ತಿರಸ್ಕರಿಸಿ ಹೋದ ಮೇಲೆ ನಾನು ಮತ್ಯಾವತ್ತೂ ಅವಳ ಮುಂದೆ ನಿಲ್ಲಲಿಲ್ಲ. ಹಾಗೆಯೇ ಉಳಿದುಬಿಟ್ಟೆ ಇಂದಿಗೂ.

ಮಾರ್ಚ್‌ನ ಆ ಗಾಯಗಳು ಮಾಸಿ ಹೋಗಿವೆ. ಆದರೆ ಕಲೆಗಳು ಮಾತ್ರ ಹಾಗೇ ಉಳಿದುಕೊಂಡಿವೆ. ಪೂರ್ವಗ್ರಹದಿಂದಲೋ ಏನೋ ಈ ಮಾರ್ಚ್‌ನಲ್ಲಿ ನನ್ನ ಯಾವ ಕೆಲಸಗಳೂ ಪಾಸ್ ಆಗುವುದಿಲ್ಲ. ಈ ತಿಂಗಳೊಂದು ಕರುಣಾಹೀನ ತಿಂಗಳು. ಈ ತಿಂಗಳಿಂದ ನಾನು ಏನನ್ನೂ ಬಯಸುವುದಿಲ್ಲ. ಎಲ್ಲನೂ ಬಿಟ್ಟುಬಿಟ್ಟಿದೀನಿ. ಈ ತಿಂಗಳನ್ನು ತೆಗಳಬೇಕು ಅಂತ ಮನಸ್ಸಿನಲ್ಲಿಯೇ ಉಳಿಸಿಕೊಂಡಿದ್ದೆ. ನೋಡಿ ನನ್ನ ಅದೃಷ್ಟ ತಿಂಗಳನ್ನು ಬೈಯಲಿಕ್ಕೂ ಅಂತ ಒಂದು ವೇದಿಕೆ ಸಿಕ್ಕಿದೆ. ಈಗ ನನ್ನ ಮನಸ್ಸು ನಿರಾಳ.
 –ಸದಾಶಿವ್ ಸೊರಟೂರು ಚಿಂತಾಮಣಿ

***

ಇಡೀ ವರ್ಷದ ಆಗುಹೋಗುಗಳನ್ನು ನಿರ್ಧರಿಸುವ ತಿಂಗಳು
ಒಬ್ಬ ತಂದೆಯಾಗಿ ಹಾಗೂ ಒಬ್ಬ ರೈತನಾಗಿ ನನ್ನ ಪಾಲಿಗೆ ಮಾರ್ಚ್‌ ತಿಂಗಳು ತುಂಬಾ ಮಹತ್ವಪೂರ್ಣವಾದದ್ದು. ಮಕ್ಕಳು ವರ್ಷವಿಡೀ ಓದಿ ಈ ತಿಂಗಳಿನಲ್ಲಿ ಪರೀಕ್ಷೆ ಎದುರಿಸುತ್ತಿರುವಾಗ ನಿಜಕ್ಕೂ ನನಗೆ ನಾನೇ ಪರೀಕ್ಷೆಗೆ ಒಡ್ಡಿಕೊಂಡ ಅನುಭವ.

ಮಕ್ಕಳು ಬೆಳಿಗ್ಗೆ ಎದ್ದು ಎಲ್ಲಾ ಸಿದ್ಧತೆ ಮಾಡಿಕೊಂಡು ಪರೀಕ್ಷೆಯನ್ನೆದುರಿಸುವ ಆತಂಕದಿಂದ ಶಾಲೆಗೆ ಹೋದಾಗ ಆ ದಿನವಿಡೀ ನಾನು ಮಕ್ಕಳ ಬರುವಿಕೆಗಾಗಿ ಚಾತಕಪಕ್ಷಿಯಂತೆ ಕಾಯುತ್ತಾ ಕುಳಿತಿರುತ್ತೇನೆ. ಸಂಜೆ ಅವರು ಮನೆಗೆ ಬಂದಾಗ ಅವರ ಮುಖಭಾವದಲ್ಲೋ ಅಂದಿನ ‘ಪರೀಕ್ಷೆ ಹೇಗಿತ್ತು’ ಎಂಬುದನ್ನು ಸ್ವಲ್ಪ ಮಟ್ಟಿಗೆ ಗ್ರಹಿಸಿಕೊಂಡು, ತಕ್ಷಣ ಕೇಳಿದರೆ ಏನಂದುಕೊಳ್ಳುತ್ತಾರೋ ಎನ್ನುವ ಭಯದಿಂದ ಸ್ವಲ್ಪ ಸುಧಾರಿಸಿಕೊಳ್ಳುವವರಿಗೆ ತಾಳ್ಮೆವಹಿಸಿ ನಂತರ ‘ಪರೀಕ್ಷೆ ಹೇಗಿತ್ತು?’ ಎನ್ನುವ ಪ್ರಶ್ನೆ ಹಾಕಿ ಉತ್ತರಕ್ಕಾಗಿ ಅವರು ಮುಖವನ್ನೇ ದಿಟ್ಟಿಸುತ್ತಾ ಕುಳಿತುಬಿಡುತ್ತೇನೆ.

ಅವರ ಬಾಯಿಂದ ‘ಬಹಳ ಸುಲಭ ಇತ್ತು’ ಎನ್ನುವ ಉತ್ತರ ಬಂದರೆ ನನಗದೇ ಸಂತೃಪ್ತ ಮನೋಭಾವನೆ. ನನ್ನ ಮುಖದಲ್ಲಿ ಮಂದಹಾಸ ಮೂಡಿ ಅವರ ಬೆನ್ನು ತಟ್ಟಿ ಅವರನ್ನು ಹುರಿದುಂಬಿಸುತ್ತೇನೆ. ಅದೇ ‘ಕಷ್ಟ ಇತ್ತು’ ಎಂದು ಅವರು ಮುಖ ಸಿಂಡರಿಸಿಕೊಂಡು ಹೇಳಿದರೆ ನನ್ನ ಮನಸ್ಸಿನಲ್ಲಾಗುವ ತಳಮಳವನ್ನು ಅವರಿಗೆ ತೋರಗೊಡದೇ ‘ಆಗಲಿ ನಾಳೆ ಚೆನ್ನಾಗಿ ಮಾಡು’ ಎಂದು ಮನಸ್ಸಿಲ್ಲದ ಮನಸ್ಸಿನಲ್ಲಿ ಸಮಾಧಾನ ಹೇಳಿಬಿಡುತ್ತೇನೆ.

ಇನ್ನು ಮಾರ್ಚ್‌ ತಿಂಗಳು ನಾವು ಬೆಳೆದ ಬೆಳೆಗಳೆಲ್ಲಾ ನಮ್ಮ ಕೈಸೇರಿ ನಮಗೆ ಆರ್ಥಿಕ ಭದ್ರತೆಯನ್ನೊದಗಿಸುವ ಸಂತಸ ಒಂದೆಡೆಯಾದರೆ, ಬ್ಯಾಂಕು ಸೊಸೈಟಿಗಳಿಗೆಲ್ಲ ಸಾಲ ಮರುಪಾವತಿಸುವ ಒತ್ತಡ ಇನ್ನೊಂದೆಡೆ. ಈ ತಿಂಗಳು ಸಾಲ ಮರುಪಾವತಿ ಮಾಡಿ ಉಳಿದ ಹಣದಲ್ಲಿ ಆ ಇಡೀ ವರ್ಷದ ಒಂದು ಅಂದಾಜು ಆಯವ್ಯಯ (ಬಜೆಟ್) ವನ್ನು ಸಿದ್ಧಪಡಿಸಿಕೊಂಡು ನಮ್ಮ ಮನೆ ಜಮೀನುಗಳ ಅಭಿವೃದ್ಧಿ ಕಾಮಗಾರಿಗಳ ಕನಸು ಕಾಣುವ ಕಾಲ. ಒಟ್ಟಿನಲ್ಲಿ ಮಾರ್ಚ್‌ ತಿಂಗಳು ನಮ್ಮ ಸಂಸಾರದ ಇಡೀ ವರ್ಷದ ಆಗುಹೋಗುಗಳನ್ನು ನಿರ್ಧರಿಸುವ ತಿಂಗಳು ಎಂದರೆ ತಪ್ಪಾಗಲಿಕ್ಕಿಲ್ಲ!
–ಚಾವಲ್ಮನೆ ಸುರೇಶ್ ಗಾಯಕ್ ಕೊಪ್ಪ

***
ಮಾರ್ಚ್‌ ಬೀಳ್ಕೊಡುಗೆ
ನಾನು ಈಗ ಮೆಲುಕು ಹಾಕಲು ಹೊರಟಿರುವುದು ನನ್ನ ಜೀವನದ ಮೊದಲ ಬೀಳ್ಕೊಡುಗೆ ಸಮಾರಂಭದ ಕುರಿತು. ನಾನಾಗ ಹತ್ತನೆಯ ತರಗತಿಯಲ್ಲಿ ಓದುತ್ತಿದ್ದೆ. ಮಾರ್ಚ್ ತಿಂಗಳ ಕೊನೆಯ ಗುರುವಾರ ಮಧ್ಯಾಹ್ನದ ಬಿಸಿಲಿಗೆ ಅಪ್ಪನ ಸೈಕಲ್ ಏರಿ ಶಾಲೆಗೆ ಹೋದಾಗ ನನ್ನ  ಸ್ನೇಹಿತರೆಲ್ಲರೂ ಬೇರೆಯಾಗೇ ಕಂಡರು.

ಎರಡು ಜಡೆಗಳು ಮಾಯವಾಗಿ ಒಂದೇ ಜಡೆಯಾಗಿದ್ದವು. ಗಂಡು ಮಕ್ಕಳ ಹಣೆಯಲ್ಲಿರುತ್ತಿದ್ದ ದೇವರ ಕುಂಕುಮ ಆವತ್ಯಾಕೋ ಕಾಣುತ್ತಿರಲಿಲ್ಲ. ಬಣ್ಣ-ಬಣ್ಣದ ಬಟ್ಟೆಗಳನ್ನು ಧರಿಸಿ ಕೈಯಲ್ಲಿ ಒಂದು ಪಟ್ಟಿ ಹಿಡಿದು ಶಿಕ್ಷಕರು, ಸ್ನೇಹಿತರ ಆಟೋಗ್ರಾಫ್ ಕೇಳುತ್ತಿದ್ದರು...

ಇದರ ನಡುವೆ ನನ್ನ ಬಗ್ಗೆ ಹೇಳುವುದನ್ನೇ ಮರೆತೆ. ಆವತ್ತು ಅರ್ಧ ಲೀಟರ್ ಕೊಬ್ಬರಿ ಎಣ್ಣೆಯಲ್ಲಿ ಮುಳುಗಿಸಿದ ಜಡೆಗಳನ್ನು ಬಿಚ್ಚಿ ನಾಗವೇಣಿಯಂತಹ ಉದ್ದನೆಯ ಒಂದು ಜಡೆ ಹಾಕಿ ಒಂದು ಮಾರು ಅಬ್ಬಲ್ಲಿಗೆ ಹೂವು ಮುಡಿದು, ದೊಡ್ಡಕ್ಕಳ ಚೂಡಿದಾರ ಹಾಕಿಕೊಂಡಿದ್ದೆ. ಅದು ಇರುವೆಗೆ ಆನೆ ಅಂಗಿ ತೊಡಿಸಿದಂತಿತ್ತು. ಅಮ್ಮನ ಓಲೆಗಳು, ಪಕ್ಕದ ಮನೆಯ ಪದ್ಮಕ್ಕಳ ಚಪ್ಪಲಿ, ಅತ್ತಿಗೆಯ ವಾಚು ಒಟ್ಟಿನಲ್ಲಿ ಮೇಳದ ಪ್ರದರ್ಶನ ಮಳಿಗೆಯಂತೆ ಎಲ್ಲರ ವಸ್ತುವನ್ನು ನನ್ನ ಮೇಲೆ ಹೊರಿಸಿಕೊಂಡಿದ್ದೆ.

ಆಟೋಗ್ರಾಫ್ ಹಾಕಿಸಿಕೊಂಡು ಮುಗಿದ ಮೇಲೆ ನಮ್ಮನ್ನು ತರಗತಿಯಲ್ಲಿ ಕೂಡಿಸಲಾಯಿತು. ಯಾವಾಗಲೂ ಸಿಡಸಿಡ ಅನ್ನೋ ಮೇಕೆ ಮಾಸ್ಟರರೂ ಅವತ್ತು ನಮ್ಮನ್ನು ನೋಡಿ ಹಲ್ಲು ತೋರಿಸಿ ನಗುತ್ತಿದ್ದರು. ಶಿಕ್ಷಕರು ಹಿತನುಡಿ ಶುರು ಮಾಡದಾಗಲೇ ತಿಂಡಿ ತಂದುಕೊಟ್ಟರು. ಈಗ ಹೇಳಲಾಗದ ಸ್ಥಿತಿ.
ಮುಖ್ಯೋಪಾಧ್ಯಾಯರು ನಾವು ಶಾಲೆ ಬಿಟ್ಟು ಹೋಗುವ ಬೇಸರವನ್ನು ವ್ಯಕ್ತಪಡಿಸುತ್ತಿದ್ದರು. ನಾವು ಕೈಯಲ್ಲಿದ್ದ ತಿಂಡಿ ತಿನ್ನುವುದು ಹೇಗೆ ಎಂದು ಯೋಚಿಸುತ್ತಿದ್ದೆವು.

‘ಮಕ್ಕಳೇ ನಾವೇನಾದರೂ ಸಿಟ್ಟಿನಿಂದ ನಿಮಗೆ ಹೊಡೆದಿದ್ದರೆ ಬೇಸರ ಮಾಡಿಕೊಳ್ಳಬೇಡಿ’ ಅಂತ ಶಿಕ್ಷಕರು ಒಬ್ಬರು ಹೇಳಿದಾಗ, ಜಗ್ಗು ಎದ್ದು ನಿಂತು ‘ಇಲ್ಲ ಸಾರ್ ನಾವು ಬೇಸರ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ನೀವು ಹೊಡೆದಿದ್ದು ನಮ್ಮ ಒಳ್ಳೆದಕ್ಕೆ ತಾನೇ. ಆ ದಿನ ನೀವು ನನಗೆ ಹೊಡೆದಿದ್ದಿರಿ. ಕೋಲಿಗೆ ಸಿಕ್ಕಿ ನನ್ನ ಚಡ್ಡಿ ಹರಿದಿತ್ತು. ಅದಕ್ಕೆ ನಮ್ಮಪ್ಪ ಹೊಸಾ ಚಡ್ಡಿ ಕೊಡಿಸಿದರು. ಇದು ನನ್ನ ಒಳ್ಳೆಯದಕ್ಕೆ ಆಲ್ವಾ?’ ಎಂದಾಗ ಎಲ್ಲರೂ ಬಿದ್ದು ಬಿದ್ದು ನಕ್ಕರು.

ಸಮಾರಂಭದ ಕಡೆಯ ಹಂತ ಫೋಟೊಗ್ರಫಿ. ಶಿಕ್ಷಕರು ಮುಂದೆ ಸಾಲಾಗಿ ಕುಳಿತಿದ್ದರು. ಅವರ ಹಿಂದೆ ನಾವೆಲ್ಲರೂ ನಿಂತುಕೊಂಡರೆ, ಫೋಟೊಗ್ರಾಫರ್ ನಮ್ಮನ್ನು ಕುಳ್ಳಕ್ಕಿರುವವರು, ಎತ್ತರವಿರುವವರು ಅಂತ ನಿಲ್ಲಿಸಿದ್ದರು.  ಬೇಸರವಾದರೂ ‘ಸ್ಮೈಲ್ ಪ್ಲೀಸ್’ ಅಂದ ಮೇಲೆ ಹಲ್ಲುಕಿರಿದೆವು. ಫೋಟೊ ಕ್ಲಿಕ್ ಆಯಿತು. ಇವತ್ತಿಗೂ ಮಾರ್ಚ್ ತಿಂಗಳಾಯಿತ್ತೆಂದರೆ ಈ ಬೀಳ್ಕೊಡುಗೆ ಸಮಾರಂಭ ನೆನಪಿಗೆ ಬರುತ್ತೆ.
–ಆರತಿ ಗಣಪತಿ ತಳೇಕರ ಕಾರವಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT