ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕರಂದ ಹೀರುವ ಡ್ರೋಣ್

Last Updated 1 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಜೇನ್ನೊಣಗಳ ಹಾಗೂ ಪರಾಗಸ್ಪರ್ಶಿ ಕೀಟಗಳ ಸಂಖ್ಯೆ ಇಳಿಮುಖವಾಗುತ್ತಿರುವುದು ಹೊಸ ವಿಷಯವೇನಲ್ಲ. ಆದರೆ ಸಾಕಷ್ಟು ಹೂವು ಹಾಗೂ ಆಹಾರ ಧಾನ್ಯಗಳಿಗೆ ಪರಾಗಸ್ಪರ್ಶದ ಅವಶ್ಯಕತೆಯಿರುವುದರಿಂದ ಪರಿಸ್ಥಿತಿ ಹೀಗೇ ಮುಂದುವರೆದರೆ, ಭವಿಷ್ಯದಲ್ಲಿ ಆಹಾರ ಕೊರತೆ ಎದುರಿಸುವ ದಿನಗಳೂ ದೂರವಿಲ್ಲ.

ಹೀಗೆ ಆತಂಕ ವ್ಯಕ್ತಪಡಿಸುತ್ತಲೇ ಅದಕ್ಕೆ ಪರ್ಯಾಯ ಹುಡುಕುವ ಹಾದಿಯಲ್ಲಿ ಪುಟ್ಟ ಡ್ರೋಣ್ ಅಭಿವೃದ್ಧಿಪಡಿಸಿದ್ದಾರೆ ಸಂಶೋಧಕರು. ಜಪಾನ್‌ನ ನ್ಯಾನೊಮೆಟೀರಿಯಲ್ಸ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಡಾ.ಇಜಿರೊ ಮಿಯಾಕೊ ಹಾಗೂ ಸಂಶೋಧಕರ ತಂಡ, ಜೇನಿನಂತೆಯೇ ಹೂವಿನ ಪರಾಗಸ್ಪರ್ಶ ಮಾಡಬಲ್ಲ ಪುಟ್ಟ ಡ್ರೋಣ್ ಅಭಿವೃದ್ಧಿಪಡಿಸಿದೆ.

ಡ್ರೋಣ್ ಇರುವುದು ಹೀಗೆ
ಹಮ್ಮಿಂಗ್ ಬರ್ಡ್ ಗಾತ್ರದ ಈ ಡ್ರೋಣ್‌ಗೆ ಹಾರಲು ಅನುವಾಗುವಂತೆ ನಾಲ್ಕು ರೆಕ್ಕೆಗಳನ್ನು ನೀಡಲಾಗಿದೆ. ರಿಮೋಟ್ ನಿಯಂತ್ರಿತ ಡ್ರೋಣ್ ಇದಾಗಿದೆ. ಮಕರಂದ ಹೀರಲು ಸಹಾಯವಾಗುವಂತೆ ಡ್ರೋಣ್ ಕೆಳಗೆ ಕುದುರೆಯ ಕೂದಲನ್ನು ಅಳವಡಿಸಲಾಗಿದೆ. ಐಯಾನಿಕ್ ಲಿಕ್ವಿಡ್ ಜೆಲ್ (ಅಂಟಿಕೊಳ್ಳುವ, ಬಿಡಿಸಿಕೊಂಡು ಮತ್ತೆ ಅಂಟಿಕೊಳ್ಳಬಲ್ಲ ಅಂಶ) ಅನ್ನು ಇದರಲ್ಲಿ ಬಳಸಲಾಗಿದೆ. ರಿಮೋಟ್‌ ಮೂಲಕ ಮಕರಂದ ಹೀರುವ ಹಾಗೂ ಮತ್ತೊಂದು ಹೂವಿಗೆ ಪರಾಗಸ್ಪರ್ಶ ನಡೆಸುವ ಕೆಲಸವನ್ನು ನಿರ್ವಹಿಸಬಹುದು.


ಮೊದಲ ಬಾರಿ ಪರಾಗಸ್ಪರ್ಶದ ಪ್ರಯೋಗಕ್ಕೆ ಜಪಾನ್‌ನಲ್ಲಿನ ಲಿಲ್ಲಿ ಹೂವನ್ನು ಆರಿಸಿಕೊಳ್ಳಲಾಯಿತು. ಪರೀಕ್ಷೆ ನಡೆಸಿದಾಗ, ಹೂವಿನ ಕೇಸರವನ್ನು ಸ್ಪರ್ಶಿಸಿ ಅದರಿಂದ ಮಕರಂದ ಹೀರಿಕೊಳ್ಳುವಲ್ಲಿ ಡ್ರೋಣ್ ಯಶಸ್ವಿಯೂ ಆಯಿತು. ಪ್ರಯೋಗಾರ್ಥವಾಗಿ ಅಭಿವೃದ್ಧಿಪಡಿಸಿರುವ ಈ ಡ್ರೋಣ್‌ನಲ್ಲಿ ಕೆಲವು ಕೊರತೆಗಳನ್ನು ಕಂಡುಕೊಂಡು ಅದನ್ನು ಮುಂದೆ ಇನ್ನಷ್ಟು ಅಭಿವೃದ್ಧಿಗೊಳಿಸುವ ಆಲೋಚನೆ ತಂಡಕ್ಕಿದೆಯಂತೆ.

ಜತೆಗೆ, ‘ಈ ಡ್ರೋಣ್ ಅನ್ನು ಜೇನ್ನೊಣಕ್ಕೆ ಪರ್ಯಾಯವಾಗಿ ರೂಪಿಸಿಲ್ಲ. ಅದರ ಕೆಲಸವನ್ನು ಯಾವುದೇ ತಂತ್ರಜ್ಞಾನವೂ ಮಾಡಲು ಸಾಧ್ಯವಿಲ್ಲ. ಆದರೆ ಪರಾಗಸ್ಪರ್ಶಕ್ಕೆ ನೆರವಾಗಬಲ್ಲ ಪುಟ್ಟ ಪ್ರಯತ್ನ ಇದು’ ಎಂದು ಹೇಳಿಕೊಂಡಿದ್ದಾರೆ.

ಸದ್ಯಕ್ಕೆ ಇದು ಮನುಷ್ಯ ನಿಯಂತ್ರಿತ. ಮುಂದಿನ ದಿನಗಳಲ್ಲಿ ಡ್ರೋಣ್ ತಂತಾನೇ ಹಾರುವ, ಜಿಪಿಎಸ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆಯನ್ನು ರೂಪಿಸಿ ಇದನ್ನು ಹಾರಾಡುವಂತೆ ಮಾಡುವ ಆಲೋಚನೆಯೂ ಇದೆಯಂತೆ. ಆದರೆ ಈ ಪ್ರಯೋಗ ದೊಡ್ಡ ಮಟ್ಟದಲ್ಲಿ ಪ್ರಯೋಜನಕಾರಿಯಾಗುವ ನಿರೀಕ್ಷೆಯಿಲ್ಲ.  ಪರಾಗಸ್ಪರ್ಶದ ಕೆಲಸವನ್ನು ಸುಲಭಗೊಳಿಸುವ ಉದ್ದೇಶವಷ್ಟೇ ಇದರ ಹಿಂದಿದೆ ಎಂದೂ ತಂಡ ಹೇಳಿಕೊಂಡಿದೆ.

­ಡ್ರೋಣ್ ಮೂಲಕ ಪರಾಗಸ್ಪರ್ಶ ನಡೆಸುವ ಪರಿಕಲ್ಪನೆ ಇದೇ ಮೊದಲೇನಲ್ಲ. 2013ರಲ್ಲಿ ಹಾರ್ವರ್ಡ್‌ ವಿಶ್ವವಿದ್ಯಾಲಯದ ಸಂಶೋಧಕರು ಇದೇ ಪರಿಕಲ್ಪನೆಯಲ್ಲಿ ‘ರೋಬೊ ಬೀ’ ಅಭಿವೃದ್ಧಿಪಡಿಸಿದ್ದರು.  ಈ ಪುಟ್ಟ ರೋಬೊ ವಿದ್ಯುತ್ ಅವಲಂಬಿತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT