ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವ ತಾನೇ ದೇವನಾಗುವ ಪರಿ…

Last Updated 1 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ವಿಶಾಲ್ ಕಾಂತ್ ಮತ್ತು ನಮನ್ ಗುಪ್ತ
ಆಗಾಗ ಎಣ್ಣೆ ಹೊಡೆಯುವ ಗೆಳೆಯರು ಇವರು! ಎಂಜಿನಿಯರಿಂಗ್ ಪದವಿ ಪಡೆದಿದ್ದರೂ ಕೆಲಸ ಮಾಡದೇ ಸದಾ ಪಾರ್ಟಿ, ಪಬ್ ಅಂತ ಗೆಳೆಯರೊಂದಿಗೆ ಸುತ್ತುವುದೇ ಇವರ ಕೆಲಸ! ಯಾರೂ ಮಾಡದಂತಹ ವಿಭಿನ್ನವಾದಂಥ ಸ್ಟಾರ್ಟ್್ಅಪ್ ಆರಂಭಿಸಬೇಕು ಎಂಬುದು ಇವರ ಜೀವನದ ಕನಸಾಗಿತ್ತು. ಒಮ್ಮೆ ಪಾರ್ಟಿಯೊಂದರಲ್ಲಿ ಸಿಗರೇಟ್ ಸೇದಿ ಬಿಸಾಡಿದ ತುಂಡುಗಳ ರಾಶಿಯನ್ನು ಕಂಡು ಹೌಹಾರಿದ್ದರು! ಆಗ ಹೊಳೆದದ್ದು ಸಿಗರೇಟ್ ತುಂಡುಗಳನ್ನು ಪುನರ್ ನವೀಕರಿಸುವ ಐಡಿಯಾ!

ಈ ಐಡಿಯಾದಿಂದ ದೇಶದ ಗಮನ ಸೆಳೆದವರು ದೆಹಲಿಯ ವಿಶಾಲ್ ಕಾಂತ್ ಮತ್ತು ನಮನ್ ಗುಪ್ತ. ಈ ಐಡಿಯಾ ಹೊಳೆದದ್ದೇ ತಡ, ಸಿಗರೇಟ್ ತುಂಡಿನ
(ಫಿಲ್ಟರ್) ಬಗ್ಗೆ ಅಧ್ಯಯನ ನಡೆಸತೊಡಗಿದರು. ಕೆಮಿಸ್ಟ್‌ಗಳನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿದರು. ರಾಸಾಯನಿಕಗಳನ್ನು ಬಳಸಿ ಸಿಗರೇಟ್ ತುಂಡನ್ನು ಕರಗಿಸಿ  ಬಟ್ಟೆ, ಕಾಗದ, ರೊಟ್ಟಿನಂತಹ ನವೀನ ವಸ್ತುಗಳನ್ನು ತಯಾರಿಸಬಹುದು ಎಂಬುದು ಗೊತ್ತಾಯಿತು. 6 ತಿಂಗಳಲ್ಲಿ ಬಂಡವಾಳ ಸಂಗ್ರಹಿಸಿ 2016ರ ಮಾರ್ಚ್ ತಿಂಗಳಲ್ಲಿ ‘ಕೋಡ್’ ಎಂಬ ನವೋದ್ಯಮವನ್ನು ನೊಯಿಡಾದಲ್ಲಿ ಪ್ರಾರಂಭಿಸಿದರು.

ಇದೀಗ ದೇಶದಾದ್ಯಂತ ಟನ್‌ಗಟ್ಟಲೆ ಸಿಗರೇಟ್ ತುಂಡುಗಳನ್ನು ಖರೀದಿಸಿ ಅವನ್ನು ಮರುಬಳಕೆ ಮಾಡುತ್ತಿದ್ದಾರೆ. ಒಂದು ಕೆ.ಜಿ. ಸಿಗರೇಟ್ ತುಂಡಿಗೆ 800 ರೂಪಾಯಿ ನೀಡುವುದಾಗಿ ಕೋಡ್ ತಂಡ ಹೇಳುತ್ತದೆ. ಸಿಗರೇಟಿನ ಫಿಲ್ಟರ್, ಮಣ್ಣಿನಲ್ಲಿ ಬಹು ಬೇಗ ಕೊಳೆಯುವುದಿಲ್ಲವಾದ್ದರಿಂದ ಪರಿಸರಕ್ಕೆ ಹೆಚ್ಚು ಹಾನಿ ಉಂಟುಮಾಡುತ್ತದೆ. ಈ ಫಿಲ್ಟರ್ ಅನ್ನು ಮರುಬಳಕೆ ಮಾಡುವುದರಿಂದ ಪರಿಸರಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ ಎಂದು ವಿಶಾಲ್ ಹೇಳುತ್ತಾರೆ. ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ ದೇಶದ ಮಹಾನ್ ನಗರಗಳಿಂದ ಹತ್ತಾರು ಟನ್ ಸಿಗರೇಟ್ ತುಂಡುಗಳನ್ನು ಖರೀದಿಸಿ ಅವುಗಳನ್ನು ರಾಸಾಯನಿಕದಲ್ಲಿ ಕರಗಿಸಿ ಮರುಬಳಕೆ ಮಾಡಲಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ 5 ಕೋಟಿ ರೂಪಾಯಿ ವಹಿವಾಟು ನಡೆದಿದೆ ಎಂದು ನಮನ್ ಗುಪ್ತ ಹೇಳುತ್ತಾರೆ. ಈ ಯುವಕರ ಭಿನ್ನ ಹಾದಿ ನವೋದ್ಯಮ ಆರಂಭಿಸುವವರಿಗೆ ಸ್ಫೂರ್ತಿಯ ಚಿಲುಮೆ ಎಂದರೆ ಅತಿಶಯೋಕ್ತಿಯಲ್ಲ.  www.code.org

***
ಪ್ರತಾಪ್ ದಿವಾಕರ್

ಬಡತನದಲ್ಲಿ ಹುಟ್ಟಿ, ರೈತನಾಗಿ ದುಡಿಯುತ್ತ, ದೂರಶಿಕ್ಷಣದಲ್ಲಿ ಪದವಿ ಪಡೆದು ಐಪಿಎಸ್ ಅಧಿಕಾರಿಯಾಗಿರುವ ಪ್ರತಾಪ್ ದಿವಾಕರ್ ಅವರ ಸಾಧನೆಯ ಕಥೆ ಇದು. ಪ್ರತಾಪ್ ದಿವಾಕರ್ ಮಹಾರಾಷ್ಟ್ರದವರು. ನಾಸಿಕ್ ಸಮೀಪದ ಒಂದು ಕುಗ್ರಾಮದಲ್ಲಿ ಹುಟ್ಟಿದ ಪ್ರತಾಪ್ ಮೂಲತಃ ರೈತ ಕಾರ್ಮಿಕ ಕುಟುಂಬದವರು.

ಪ್ರತಾಪ್ ಚಿಕ್ಕವರಿದ್ದಾಗ, ಆಗಸದಲ್ಲಿ ಹಾರಾಡುವ ವಿಮಾನಗಳನ್ನು ನೋಡಿ ಈ ವಿಮಾನಗಳು ಯಾರವು ಎಂದು ತಾಯಿಯನ್ನು ಕೇಳುತ್ತಿದ್ದರಂತೆ! ಅದಕ್ಕೆ ಅವರ ತಾಯಿ ಈ ವಿಮಾನ ಸರ್ಕಾರದವು ಎನ್ನುತ್ತಿದ್ದರಂತೆ! ತಾಯಿಯ ಮಾತಿನಿಂದ ಪ್ರೇರಿತನಾಗಿ ಸರ್ಕಾರಿ ಕೆಲಸಕ್ಕೆ ಸೇರಬೇಕು ಎಂಬ ಕನಸು ಕಟ್ಟಿಕೊಂಡೆ ಎನ್ನುತ್ತಾರೆ ಪ್ರತಾಪ್.

ಹುಟ್ಟಿದ ಊರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮುಗಿಸಿದರು. ಹತ್ತನೇ ತರಗತಿ ಬಳಿಕ ಪ್ರತಾಪ್‌ಗೆ ಎದುರಾಗಿದ್ದು ಕಾಲೇಜಿಗೆ ಸೇರುವ ಸಮಸ್ಯೆ. ಕಾಲೇಜಿಗೆ ಹೋಗಬೇಕಾದರೆ 50 ಕಿ.ಮೀ ಪ್ರಯಾಣ ಮಾಡಲೇಬೇಕಿತ್ತು. ಹೇಗೋ ಕಷ್ಟಪಟ್ಟು ಪ್ರತಾಪ್ ಪಿಯುಸಿಯನ್ನು ಮುಗಿಸಿದರು. ಮುಂದೆ ಪದವಿ ಓದಲು ನಾಸಿಕ್ ನಗರಕ್ಕೆ ತೆರಳಬೇಕಿತ್ತು. ಈ ವೇಳೆ ಪ್ರತಾಪ್ ತಂದೆ, ‘ನೀನು ಓದುವುದು ಬೇಡ ತೋಟದಲ್ಲೇ ಕೆಲಸ ಮಾಡು’ ಎಂದು ಹೇಳಿ ವಿದ್ಯಾಭ್ಯಾಸ ಮೊಟಕುಗೊಳಿಸಿದರು. ಇತ್ತ ಪ್ರತಾಪ್‌ಗೆ ಚೆನ್ನಾಗಿ ಓದಿ ಸರ್ಕಾರಿ ನೌಕರಿ ಪಡೆಯಬೇಕು ಎಂಬ ಹಂಬಲ! ಅಪ್ಪನ ಒತ್ತಾಸೆಗೆ ಮಣಿದು ತೋಟದಲ್ಲಿ ದುಡಿಯಲು ಮುಂದಾದರು. ಆದರೆ ಓದುವ ಕನಸನ್ನು ಕೈಬಿಡಲಿಲ್ಲ!

ದೂರಶಿಕ್ಷಣದಲ್ಲಿ ಪದವಿಗೆ ಪ್ರವೇಶ ಪಡೆದರು. ಕೃಷಿ ಮಾಡುತ್ತಲೇ ಚೆನ್ನಾಗಿ ಓದಿದ ಪ್ರತಾಪ್, ಶೇಕಡ 87ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾದರು. ನಂತರದ ದಿನಗಳಲ್ಲಿ ಮಹಾರಾಷ್ಟ್ರ ಪೊಲೀಸ್ ಸೇವಾ ಪರೀಕ್ಷೆಯನ್ನು ತೆಗೆದುಕೊಂಡರು. ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿ ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಯನ್ನು ಪಡೆದರು. ಇದೀಗ ಐಪಿಎಸ್‌ಗೆ ಬಡ್ತಿ ಪಡೆದು ಹೆಚ್ಚುವರಿ ಆಯುಕ್ತರಾಗಿ (ಮುಂಬೈ ಪೊಲೀಸ್) ಕೆಲಸ ಮಾಡುತ್ತಿದ್ದಾರೆ. 
ಪ್ರತಾಪ್, ತನ್ನ ಹುಟ್ಟೂರಿನಲ್ಲಿ ಶಾಲೆಯನ್ನು ಕಟ್ಟಿಸಿದ್ದಾರೆ. ಹತ್ತು ಸಾವಿರ ಪೊಲೀಸರಿಗೆ ಮನೆ ಕಟ್ಟಿಸಿಕೊಡುವ ಯೋಜನೆಯನ್ನು ರೂಪಿಸಿದ್ದಾರೆ. ಪರಿಶ್ರಮದ ಮೂಲಕ ಕಂಡ ಕನಸನ್ನು ನನಸಾಗಿಸಿಕೊಂಡ ಪ್ರತಾಪ್ ಸಾಧನೆ ಅನನ್ಯ.

***
ದಿವ್ಯೇಶ್

ಕೆಲವೊಮ್ಮೆ ಏನೋ ಮಾಡಲು ಹೋಗಿ ಅದೆನೋ ಆಗಿಬಿಡುತ್ತದೆ ಎಂಬ ಮಾತನ್ನು ನಾವು ಅಲ್ಲಲ್ಲಿ ಕೇಳಿರುತ್ತೇವೆ ಅಥವಾ ನಮ್ಮ ಜೀವನದಲ್ಲೇ ಇಂತಹ ಘಟನೆಗಳನ್ನು ಎದುರಿಸಿರುತ್ತೇವೆ. 28ರ ಹರೆಯದ ದಿವ್ಯೇಶ್ ಕೂಡ ಲಂಡನ್‌ನಲ್ಲಿ ಉದ್ಯಮ ಸ್ಥಾಪಿಸಲು ಹೋಗಿ ಕೈಸುಟ್ಟುಕೊಂಡು ಮರಳಿ ಭಾರತಕ್ಕೆ ಬಂದು ಮತ್ತೆ ಉದ್ಯಮ ಸ್ಥಾಪಿಸಿ ಯಶಸ್ವಿ ಸಾಧಕ ಎನಿಸಿಕೊಂಡಿದ್ದಾರೆ.

ದಿವ್ಯೇಶ್ ಗುಜರಾತ್ ರಾಜ್ಯದವರು. ವಾಣಿಜ್ಯ ಪದವಿ ಪಡೆಯಲು ಬ್ರಿಟನ್‌ಗೆ ತೆರಳಿದ್ದರು. ಪದವಿ ಪಡೆದ ಬಳಿಕ ಅಲ್ಲೇ ಆನ್‌ಲೈನ್‌ ಮಾರ್ಕೆಟಿಂಗ್‌ಗೆ ಸಂಬಂಧಿಸಿದಂತೆ ನವೋದ್ಯಮ ಆರಂಭಿಸಿದರು. ಆದರೆ ಅದು ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಲಿಲ್ಲ. ಹಾಕಿದ ಬಂಡವಾಳ ವಾಪಸ್ಸು ಬರಲಿಲ್ಲವಾದ್ದರಿಂದ ದಿವ್ಯೇಶ್ ಭಾರತಕ್ಕೆ ಮರಳಬೇಕಾಯಿತು.



ಸುಮ್ಮನೇ ಕೂರದ ದಿವ್ಯೇಶ್ ತಾಜಾ ತರಕಾರಿ ಮತ್ತು ಹಣ್ಣುಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವುದರ ಬಗ್ಗೆ ಯೋಚನೆ ಮಾಡಿದರು. ತಳ್ಳುವ ಗಾಡಿಗಳಲ್ಲಿ ತರಕಾರಿ ಮಾರುವ ಐಡಿಯಾವನ್ನು ಸ್ವಲ್ಪ ಬದಲಾಯಿಸಿ ‘ಮೊಬೈಲ್ ವ್ಯಾನ್’ಗಳಲ್ಲಿ ಹಣ್ಣು ಮತ್ತು ತರಕಾರಿ ಮಾರುವುದಕ್ಕೆ ಮುಂದಾದರು. ಕಡಿಮೆ ಬಂಡವಾಳದಲ್ಲಿ ‘ವೆಜಿಕಾಕಾ’ ಎಂಬ ತರಕಾರಿ ಮಾರಾಟ ಕಂಪೆನಿಯನ್ನು ಎರಡನೇ ದರ್ಜೆ ನಗರವಾದ ರಾಜ್‌ಕೋಟ್‌ನಲ್ಲಿ ಆರಂಭಿಸಿದರು. ನಾಲ್ಕು ವ್ಯಾನ್‌ಗಳನ್ನು ಖರೀದಿಸಿ ಅವುಗಳಿಗೆ  ಶೀತಲ ಘಟಕ ಅಳವಡಿಸಿದರು. ಸುಮಾರು 33 ನಮೂನೆಯ ತರಕಾರಿ ಮತ್ತು ಹಣ್ಣುಗಳನ್ನು ತುಂಬಿಕೊಂಡು ಮಾರಾಟಕ್ಕೆ ಮುಂದಾದರು.

ನಿರ್ದಿಷ್ಟ ಸ್ಥಳವೊಂದರಲ್ಲಿ ತರಕಾರಿ ವ್ಯಾನನ್ನು ನಿಲ್ಲಿಸುತ್ತಾರೆ. ಗ್ರಾಹಕರು ವ್ಯಾನ್ ಬಳಿ ಬಂದು ತಮಗೆ ಬೇಕಿರುವ ತರಕಾರಿ ಅಥವಾ ಹಣ್ಣುಗಳನ್ನು ಖರೀದಿಸುತ್ತಾರೆ. ನಿತ್ಯ 2000ಕ್ಕೂ ಹೆಚ್ಚು ಗ್ರಾಹಕರು ತರಕಾರಿ ಮತ್ತು ಹಣ್ಣುಗಳನ್ನು ಕೊಂಡುಕೊಳ್ಳುತ್ತಾರೆ. ಇದರಿಂದ ಕಂಪೆನಿಗೆ ಮಾಸಿಕ ಇಪ್ಪತ್ತು ಲಕ್ಷ ರೂಪಾಯಿ ಆದಾಯ ಬರುತ್ತಿದೆ ಎಂದು ದಿವ್ಯೇಶ್ ಹೇಳುತ್ತಾರೆ. ಸಾಧಿಸುವ ಛಲ ಇದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ದಿವ್ಯೇಶ್ ಮಾದರಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT