ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಕ್ಷಣದಲ್ಲೇ ಇರುವುದು ಬದುಕಿನ ಅರ್ಥ

Last Updated 1 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಜಲಾಲುದ್ದೀನ್ ರೂಮಿಯ ಮಾತೊಂದು ಇಂಗ್ಲಿಷಿನಲ್ಲಿ ಅನುವಾದಗೊಂಡಿರುವುದು ಹೀಗೆ: ‘‘The Sufi is the child of the present moment, my friend. The word ‘tomorrow’ is excluded from the doctrine of those who travel the Path.’’ ಕನ್ನಡದಲ್ಲಿ ಅದರ ಭಾವಾರ್ಥವನ್ನು ಹೀಗೆ ಹೇಳಬಹುದು: ‘‘ಸೂಫಿ ಈ ಕ್ಷಣದ ಮಗು. ಮಾರ್ಗದಲ್ಲಿ ಸಾಗುವವರ ಸಿದ್ಧಾಂತದಲ್ಲಿ ‘ನಾಳೆ’ ಎನ್ನುವುದಕ್ಕೆ ಎಡೆಯಿಲ್ಲ.’’

ರೂಮಿ ಹದಿಮೂರನೇ ಶತಮಾನದಲ್ಲಿದ್ದ ಸೂಫಿಸಂತ. ಈ ಕ್ಷಣದಲ್ಲಿ ಬದುಕಿ – ಎಂದು ಅವನು ಹೇಳಿ ಹಲವು ಶತಮಾನಗಳೇ ಆಗಿವೆ. ಹೀಗೆಂದು ಈ ಮಾತಿನ ಕಾವೇನೂ ಕಡಿಮೆಯಾಗಿಲ್ಲ. ವರ್ತಮಾನದಲ್ಲಿ ಬದುಕಿ ಎಂದು ಹೇಳಿದ ಮಾತು ಭೂತಕಾಲಕ್ಕೆ ಸೇರಿದ್ದು ಎಂದು ಅಸಡ್ಡೆ ಮಾಡುವಂತಿಲ್ಲ. ‘ಈ ಕ್ಷಣದಲ್ಲಿ ಬದುಕಬೇಕು’. ಇದರ ಇನ್ನೂ ಸರಳ ರೂಪ ಎಂದರೆ ‘ವರ್ತಮಾನದಲ್ಲಿ ಬದುಕಿ.’

ನಾವು ಬೇಡವೆಂದರೂ ವರ್ತಮಾನದಲ್ಲಿಯೇ ಬದುಕುತ್ತಿರುತ್ತೇವೆ. ನಮ್ಮ ಮನಸ್ಸು ಭೂತದಲ್ಲೋ ಅಥವಾ ಭವಿಷ್ಯದಲ್ಲೋ ನಿಂತಿರಬಹುದು; ಆದರೆ ದೇಹ ಮಾತ್ರ ವರ್ತಮಾನದ ಕಾಲಧರ್ಮಕ್ಕೆ ವಶವಾಗಿಯೇ ಸ್ಪಂದಿಸುತ್ತಿರುತ್ತದೆ. ವರ್ತಮಾನವನ್ನು ಝಾಡಿಸಿಕೊಂಡು ಬದುಕುವುದಕ್ಕೆ ನಮಗಾರಿಗೂ ಸಾಧ್ಯವಿಲ್ಲ. ಒಂದು ವೇಳೆ ನಮ್ಮ ಪ್ರಾಣಶಕ್ತಿ ಏನಾದರೂ ‘ವರ್ತಮಾನದ ಸಹವಾಸ ನನಗೆ ಬೇಡ’ ಎಂದು ದೂರ ಸರಿದರೆ ನಾವು ಆ ಕೂಡಲೇ ಭೂತಕ್ಕೆ ಸೇರಿದವರಾಗಿಬಿಟ್ಟಿರುತ್ತೇವೆ, ಅಷ್ಟೆ!

ಇದು ಸರಿ – ಎನ್ನುವುದಾದರೆ ‘ವರ್ತಮಾನದಲ್ಲಿ ಬದುಕಿ’ ಎಂದು ಏಕಾದರೂ ಹೇಳಬೇಕು? ಇದು ದಿಟವಾದ ಪ್ರಶ್ನೆ. ವರ್ತಮಾನದಲ್ಲಿದ್ದೂ ವರ್ತಮಾನದಲ್ಲಿ ಇಲ್ಲದಿರುವ ಸ್ಥಿತಿ ನಮಗೆ ಎದುರಾಗಿರುವುದರಿಂದ ಹಾಗೆ ಹೇಳುವುದು ಅನಿವಾರ್ಯವಾಗಿರಬಹುದೆ? ಹಾಗಾದರೆ ವರ್ತಮಾನದಲ್ಲಿ ಬದುಕುವುದು ಹೇಗೆ? ಇದು ಪ್ರಶ್ನೆಯಷ್ಟೆ ಅಲ್ಲ; ಸಮಸ್ಯೆಯೂ ಹೌದು.

ನಮ್ಮ ವರ್ತಮಾನದಲ್ಲಿ ಮಾಡುವ ಎಲ್ಲ ಕೆಲಸಗಳನ್ನೂ ಒಮ್ಮೆ ಅವಲೋಕನ ಮಾಡಿಕೊಳ್ಳೋಣ. ಈ ಎಲ್ಲ ಕೆಲಸಗಳ ಗುರಿಯೂ ‘ನಾಳೆ’ ಆಗಿರುತ್ತದೆಯೇ ಹೊರತು ‘ಇಂದು’ ಆಗಿರುವುದಿಲ್ಲ. ನಮ್ಮ ಶಿಕ್ಷಣ, ಉದ್ಯೋಗ, ಸಂಪಾದನೆ, ಮಾತು, ಧಾರ್ಮಿಕತೆ, ಕೊನೆಗೆ ಊಟವೂ ನಾಳೆಗಾಗಿಯೇ ಆಗಿರುತ್ತದೆ. ಆದುದರಿಂದಲೇ ಈ ಕೆಲಸಗಳು ನಮಗೆ ಕೊಡಬಹುದಾದ ದಿಟವಾದ ಆನಂದದಿಂದ ವಂಚಿತರಾಗುತ್ತಿರುತ್ತೇವೆ. ನಾಳೆ ‘ಸಿಗಬಹುದಾದ’ ಸುಖ ಈಗಾಗಲೇ ಒದಗುತ್ತಿರುವ ಸಂತೋಷವನ್ನು ಗಮನಿಸುವುದಕ್ಕೂ ಅವಕಾಶ ನೀಡದು; ಇನ್ನು ಅದನ್ನು ಅನುಭವಿಸುವ ಮಾತು ದೂರವೇ ಉಳಿಯಿತು.

ನಾಳೆ ನಮಗೆ ಶಕ್ತಿ ಸಿಗಬೇಕು; ದೇಹ ಆರೋಗ್ಯವಾಗಿರಬೇಕು– ಎಂದು ಬಯಸಿ ಊಟ ಮಾಡುವುದು ತಪ್ಪು ಎಂದೇನಲ್ಲ. ಆದರೆ ಈ ಹಂಬಲ ನಮ್ಮ ಈ ಕ್ಷಣದ ನಾಲಗೆಯ ಗುಣವನ್ನೇ ಅದು ಕಳೆಯುವಂತಾಗಬಾರದು; ನಾಳೆಯ ಕನಸು ಇಂದು ನಾವು ತಿನ್ನುತ್ತಿರುವ ಅನ್ನದ ರುಚಿಯನ್ನೇ ಮರೆಸುವಂತಾಗಬಾರದು. ಮೊದಲು ಈ ಹೊತ್ತು ನಮ್ಮ ಮುಂದಿರುವ ಅನ್ನವನ್ನು ಆಸ್ವಾದಿಸುವುದನ್ನು ಕಲಿಯಬೇಕು. ಹೀಗೆ ಆಯಾ ಕ್ಷಣಕ್ಕೆ ಸ್ಪಂದಿಸುವ ಗುಣವನ್ನು ನಾವು ಕಳೆದುಕೊಂಡರೆ ಆಗ ಬದುಕು ರಸಹೀನವೂ ಆಗುತ್ತದೆ. ರಸಹೀನವಾದ ಮನಸ್ಸು ಮಾತ್ರವೇ ಸ್ವಾರ್ಥವನ್ನು ಹುಟ್ಟಿಸಬಲ್ಲದು; ಕ್ರೌರ್ಯ, ನಿರಾಶೆಗಳನ್ನೂ ಉಂಟುಮಾಡಬಲ್ಲದು. ಬದುಕಿನ ಅರ್ಥದಿಂದ ಅದು ದೂರ ಸರಿದಿರುತ್ತದೆ; ಆದ್ದರಿಂದ ಅನರ್ಥಗಳನ್ನೇ ಬದುಕಿನ ಮಾರ್ಗವನ್ನಾಗಿಯೂ ಗುರಿಯನ್ನಾಗಿಯೂ ಅಪ್ಪಿಕೊಂಡು ನರಳುವಂತಾಗುತ್ತದೆ.
–ಹಾರಿತಾನಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT