ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವನೆಗಳ ಬಯೋಸ್ಕೋಪಿನ ಟ್ರೈಲರ್

ಪ್ರಜಾವಾಣಿ ಪ್ರೇಮಪತ್ರ ಸ್ಪರ್ಧೆ–2017
Last Updated 1 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ನನ್ನೊಲವಿನ ಸಾಪ್ತಾಹಿಕ ಪುರವಣಿಗೆ...
ಲಬ್ ಡಬ್ ಅನ್ನುವುದ ಬಿಟ್ಟು, ನಿನ್ನ ಕಂಡಾಗಿಂದ ಒಂದೇ ಸಮಾ ಬೊಂಬಡಾ ಹೊಡೆದುಕೊಳ್ಳುತ್ತಿರುವ ನನ್ನ ಹತ್ತಿಯಂಥ ಹೃದಯದ ಒಂಟಿತನದ ಪೀಕಲಾಟವ ಹತ್ತಿಕ್ಕುವ ಸಲುವಾಗಿ ವಕಾಲತ್ತು ವಹಿಸಿಕೊಂಡು ಈ ಪತ್ರ  ಬರೆಯುತ್ತಿದ್ದೇನೆ ಹುಡುಗಿ. ಯಾವ ಸೀಮೆಯ ನಾಚಿಕೆಯೂ ಇಲ್ಲದೆ ಹೇಳಿಕೊಳ್ಳುವೆ ಮುದ್ದು, ಬರೋಬ್ಬರಿಯಾಗಿ ನಿನ್ನ ಸ್ತುತ್ಯರ್ಹ ನೆನಪುಗಳಿಗೆ ಅಡಿಯಾಳಾಗಿಬಿಟ್ಟಿದ್ದೇನೆ ನಾನು.

ನಭೋಮಂಡಲದ ಗೆಲಾಕ್ಸಿಯ ತಾರೆಗಳ ಒಟ್ಟಾರೆ ಹೊಂಬೆಳಕಿನ ಗುಣಲಬ್ಧದಂತಿರುವ ನಿನ್ನ ಕಿರುನಗೆ, ನನ್ನಂತಹ ಅಡ್ನಾಡಿಯಲ್ಲಿಯೂ ಒಲವನ್ನು ಸಂಶೋಧಿಸಿರುವ ಉದಯೋನ್ಮುಖ ವಿಜ್ಞಾನಿಯಂಥ ನಿನ್ನ ತುಂಟ ಕಣ್ಣುಗಳು, ಬೆಚ್ಚನೆ ಒಲೆಗಡ್ಡೆಯ ಪಲ್ಲಂಗದಿಂದ ಆಗಷ್ಟೇ ಎದ್ದು ಬಂದು ಸೋಕಿ ಹೋಗುವ ನಮ್ಮ ಮನೆಯ ಪುನುಗು ಬೆಕ್ಕಿನಂಥ ಆ ನಿನ್ನ ಅಜೀವ ಸ್ಪರ್ಶ, ನಾಟಿ ಕೋಳಿ ಪಿಳ್ಳೆಯಂತೆ ಮೆಲ್ಲಗೆ ನೀನು ಪುಟ್ಟ ಹೆಜ್ಜೆ ಇಡುವಾಗ ಥೇಟು ನಮ್ಮ ಕೊಟ್ಟಿಗೆಯ ಎಳೆ ಕರುವಿನ ಕೊರಳ ಗಂಟೆಯ ಸದ್ದನ್ನೇ ಪುನರುಚ್ಚರಿಸುವ ಆ ನಿನ್ನ ಕಾಲ್ಗೆಜ್ಜೆಯ ದನಿ, ಆಲೆಮನೆಯಂಥ ನಿನ್ನ ತುಟಿಗಳು, ಸಂಪಿಗೆ ಹೂವಿಗೆ ಬ್ರಾಂಡ್ ಅಂಬಾಸಡರ್ ಆಗುವಷ್ಟರ ಮಟ್ಟಿಗೆ ಅರ್ಹತೆ ಹೊಂದಿರುವ ಆ ಮೂಗುತಿ ಮೂಗು, ಛೂಮಂತ್ರ ಹಾಕುವ ಕಿವಿಯ ಲೋಲಾಕು, ಶಾಲೆಯಲ್ಲಿ ಸ್ವತಂತ್ರ ದಿವಸದಂದು ಮೇಷ್ಟ್ರು ಕೊಡುತ್ತಿದ್ದ ಕೆಂಪನೆಯ ಬತ್ತಾಸು ಬಿಲ್ಲೆಯನ್ನೇ ನಿವಾಳಿಸಿ ಬಿಸಾಕುವಂತಹ ನಿನ್ನ ಕೆನ್ನೆಗಳು, ಎಂಥವರಿಗೂ  ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಕಾಯಂ ಆಗಿ ಹಾಸಿಗೆಯನ್ನು ಕೊಡಿಸಿಬಿಡುವಷ್ಟು ತಿಕ್ಕಲು ಹಿಡಿಸುವ ನಿನ್ನ ಮುಂಗುರುಳು, ಬರೀ ನಿನ್ನ ಕುರಿತೇ ಕವಿತೆ ಬರೆಯುತ್ತಿರುವ ನನ್ನ ಮೇಲೆ ಉರಿದುಕೊಂಡು  ಸ್ವತಃ ತನ್ನ  ಮೇಲೆಯೂ ಕವಿತೆ ಬರೆಯಲೇಬೇಕೆಂದು ಮೀಸಲಾತಿ ಕೇಳುವಷ್ಟರ ಮಟ್ಟಿಗೆ ಚಂದಮಾಮನನ್ನೇ ಬೀದಿಗೆ ತಂದು ನಿಲ್ಲುವಂತೆ ಮಾಡಿಬಿಟ್ಟ ನೀನೆಂಬ ನೀನೇ ನನ್ನ ಎದೆಯ ಪಾಠಶಾಲೆಗೆ ಭಾವನೆಗಳೆಂಬ ವಿದ್ಯಾರ್ಥಿಗಳನ್ನು ಖುದ್ದು ತಂದು ದಾಖಲು  ಮಾಡಿಸಿರುವುದು.

ಹಾಲು ಬೆಳದಿಂಗಳಂತೆ ನೀನು ಸುಮ್ಮನೆ ನಕ್ಕರೂ ಸಾಕು ಪಾರಿಜಾತದ ಅಸ್ತಿತ್ವಕ್ಕೂ ಧಕ್ಕೆ ಬರುತ್ತದೆ. ಎಲ್ಲರನ್ನೂ ಧಿಮಾಕಿನಿಂದ ಗುರಾಯಿಸುತ್ತಿದ್ದ ನನಗೆ, ಕದ್ದು ನೋಡುವುದ ಹೇಳಿಕೊಟ್ಟ ಗುರು ನೀನು!. ಈಗ ಕದ್ದು ನೋಡುವುದೇ ನನಗೆ ನೌಕರಿಯಾಗಿಬಿಟ್ಟಿದೆ. ಅಕಸ್ಮಾತ್ತಾಗಿ ನೀನೂ ಮರಳಿ ನೋಡಿದರೆ, ಅದೇ ಕದ್ದು ನೋಡುವ ನನ್ನಂಥ ಶ್ರಮಜೀವಿಯ ಪಾಲಿಗೆ ಸಿಗುವ ಸಂಬಳ. ನನ್ನ ದೈನಂದಿನ ಬದುಕಿನ ಅವಶ್ಯಕತೆ  ಪಟ್ಟಿಗೆ ಹೊಸದಾಗಿ  ಸೇರಿಕೊಂಡಿರುವ ಬೆಲೆಕಟ್ಟಲಾಗದ ಸಾಮಗ್ರಿ ಅಂದ್ರೆ ಅದು ಕೂಡ ನೀನೆ!. ಅಂದಾಜಿಗೆ ನಿಲುಕದ ನಿನ್ನ ಅಂದವ ಕಟ್ಟಿಹಾಕಲು ಕನ್ನಡದ ನಲವತ್ತೊಂಬತ್ತು ಅಕ್ಷರಗಳ ಸೈನ್ಯ ಸಾಲುವುದಿಲ್ಲ.

ಹಾಗಾಗಿ ಇಡೀ ಜಗದ ಎಲ್ಲಾ ಭಾಷೆಗಳನ್ನು ಒಂದುಮಾಡಿ ನಿನ್ನ ಚಂದದ ವಿರುದ್ಧ ಯುದ್ಧ ಸಾರಿದರೂ ನಾನು ಸೋತು ಶರಣಾಗತನಾಗಿಬಿಡುತ್ತೇನೆ ಎನ್ನುವುದು ಖಾತರಿಯಾಗಿಬಿಟ್ಟಿದೆ. ಅತಿ ಆಸೆಯಿಂದ ಸದಾ ನಿನ್ನ ಮುದ್ದು ಮುಖದ ನಿವೇಶನಕ್ಕೆ ಅತಿಕ್ರಮ ಪ್ರವೇಶ ನೀಡಿ ಬಿಡಾರ ಹೂಡುವ ಕೊರಮ ಮುಂಗುರುಳುಗಳನ್ನೆಲ್ಲಾ, ಪಾಪ ಅಸಹಾಯಕಳಾಗಿ  ನೀನೊಬ್ಬಳೇ ಪದೇ ಪದೇ ದೂರ ತಳ್ಳುವುದನ್ನು ನೋಡುತ್ತಿದ್ದರೆ ನನ್ನ ಎದೆಯೊಳಗೆ ನವಿಲುಗರಿಯು ತಾಕಿ ಮುಲಮುಲ ಎನ್ನುವಂಥ ಭಾವ ಮೂಡುತ್ತದೆ.

ಒಂದು ವೇಳೆ ಹೂಗಳ ನಡುವೆ ಕೋಮಲತೆಯ ವಿಷಯಕ್ಕೆ ಚುನಾವಣೆ ಅಂತ ಏನಾದರೂ ಏರ್ಪಟ್ಟರೆ ನೀನು ಅವಿರೋಧವಾಗಿ ಆಯ್ಕೆಯಾಗಿಬಿಡುತ್ತೀಯ ಎನ್ನುವ ಸತ್ಯವೂ ನನಗೆ ಗೊತ್ತಿದೆ. ನಿನ್ನಂತಹ ಐವತ್ತೆರಡು ಕೆ.ಜಿ ತೂಕದ ಹೂವೊಂದನ್ನು ಎದೆಯಲ್ಲಿಟ್ಟುಕೊಂಡು ಊರೆಲ್ಲಾ ಹೊತ್ತು ತಿರುಗುವ ನಾನು ಈ ಜಗತ್ತು ಗುರುತಿಸದೆ ಹೋದಂತಹ ಸಾರ್ವಕಾಲಿಕ ವೇಟ್ ಲಿಫ್ಟರ್!.

ಎದೆಯಾಳದಲ್ಲಿ ಭಾವನೆಗಳು ಬಿಡುವು ಕೊಡದೆ ಡಂಗೂರ ಹೊಡೆಯುತ್ತಿದ್ದರೂ, ಹೊರಗೆ ಏನೂ ಅರಿಯದ ಮುಗ್ಧೆಯಂಥ ಮೌನದಲ್ಲೇ ಎಲ್ಲವನ್ನೂ ವ್ಯಕ್ತಪಡಿಸುವ ನೀನೆಂದರೆ ನನ್ನ ಸಕ್ಕರೆ ನಿದ್ದೆಯ ಕನಸಿನಷ್ಟೇ ಹಿತ. ನನ್ನ ನೆನಪಿನಲ್ಲಿಯೇ ಮೂಡಿದ ಅನುರಾಗದ ಆಲೋಚನೆಗಳನ್ನೆಲ್ಲಾ ಕಥೆ-ಕವಿತೆ, ಹನಿಗವನಗಳನ್ನಾಗಿಸಿಕೊಂಡು ಆ ನಿನ್ನ ನಿರ್ಮಲ ಕಣ್ಣುಗಳು ಪುಟದೊಳಗೆ ಚೆಂದವಾಗಿ ಅಚ್ಚು ಮಾಡಿಕೊಂಡು ವಾರಕ್ಕೊಮ್ಮೆ ನನ್ನ ಭೇಟಿಗೆಂದು ಸಿಗುವ ನೀನು, ನನ್ನಂಥ ಪ್ರೇಮಕಾವ್ಯಸಕ್ತನ ಪಾಲಿನ ಪರಿಪೂರ್ಣ ಸಾಪ್ತಾಹಿಕ ಪುರವಣಿ. ಮುಂದಿನ ಬದುಕಿನ ಪ್ರತೀ ಕ್ಷಣವನ್ನೂ ನಿನ್ನ ಕಣ್ಣುಗಳನ್ನೇ ನೋಡುತ್ತಾ ಕಳೆಯಬೇಕೆಂದಿರುವ ನನ್ನಂಥ ಒಲವ ಓದುಗನ ಬೇಡಿಕೆಯನ್ನು ಈಡೇರಿಸಿ ಪುಣ್ಯಕಟ್ಟಿಕೋ. ಅದೇ ರೀತಿ ನನ್ನ ನಿರಾಶ್ರಿತ ತುಟಿಗಳಿಗೆ ನಿನ್ನ ಕೆನ್ನೆ ಮೇಲೊಂದು ಶಾಶ್ವತ ವಸತಿ ಕಲ್ಪಿಸಬೇಕೆಂಬ ಮಹದಾಸೆ ಇದೆ, ದಯಮಾಡಿ ನಿವೇಶನ ಮಂಜೂರು ಮಾಡಿ ನೋಡಿದರೆ, ಅದರ ಕಥೆಯೇ ಬೇರೆಯಾಗುತ್ತದೆ ಹುಡುಗಿ.

ಅರೇ... ಬರೀ ಇಷ್ಟೇನಾ? ಅಂತ ಅಂದುಕೊಳ್ಳಬೇಡ. ಹೈಸ್ಕೂಲಿನಲ್ಲಿ ನಾವಿಬ್ಬರೂ ಒಟ್ಟಿಗೆ ಕುಳಿತು ಓದಿಕೊಂಡ ಜೀವಶಾಸ್ತ್ರದ ಪುಸ್ತಕದಲ್ಲಿದ್ದ  ಹೃದಯಕ್ಕಿಂತ ಚಂದನೆಯ ಹೃದಯ ನನ್ನದು. ನನ್ನ ಉಚ್ವಾಸ ನಿಶ್ವಾಸಗಳ ಮೇಲೆ ನಿನ್ನ ಹೂನಗೆಯ ಋಣವಿದೆ ಗೆಳತಿ. ಭವಿಷ್ಯದ ಬದುಕಿನ ಸಲುವಾಗಿ, ನಿನ್ನ ದಿನಚರಿ ಪುಸ್ತಕದೊಳಗೆ  ನೀನು ಬರೆದಿಟ್ಟುಕೊಂಡಿರುವ ಅಷ್ಟೂ ಕನಸುಗಳನ್ನು ನನ್ನ ಹೆಗಲಿಗೆ ವರ್ಗಾಯಿಸಿಕೊಂಡು, ನಂಬಿಕೆಗಳ ಬಂಡವಾಳ ಹೂಡಿ ಕಾರ್ಯರೂಪಕ್ಕೆ ತರುವ ಜವಾಬ್ದಾರಿ ನನ್ನದು. ನಾನು ಸುಮ್ಮನಿದ್ದರೂ ಬೇಕಂತಲೇ ಕೆಣಕುವ ನಿನ್ನ  ನಟೋರಿಯಸ್ ಗೋರಂಟಿ ಬೆರಳುಗಳನ್ನು ಅರೆಸ್ಟ್ ಮಾಡಿ, ಜೀವನ ಪರ್ಯಂತ  ನನ್ನ ಎದೆಯ ರೋಮದೊಳಗೆ  ಬಚ್ಚಿಟ್ಟುಕೊಳ್ಳಬೇಕು ಅಂತ ಕನಸುಗಳ ಹೆತ್ತಿದ್ದೇನೆ ಕಣೇ.  ನನ್ನ ಕನಸಿನ ಕೂಸಿನ ಕೈಗೆ ಒಲವಿನ ಗಿಲಕಿಯನ್ನು ನೀಡಿ ಸಲಹುತ್ತೀಯಾ ಎಂಬ ನಂಬುಗೆಯೊಂದಿಗೆ ಮನದ ತೆರೆಯ ಭಾವನೆಗಳ ಬಯೋಸ್ಕೋಪಿನ ಟ್ರೈಲರನ್ನಷ್ಟೇ ನಿನ್ನ ಮುಂದೆ ಬಿತ್ತರಿಸಿದ್ದೇನೆ. ಇನ್ನೂ ಪೂರ್ತಿ ಸಿನಿಮಾ ನೋಡಬೇಕಂದ್ರೆ, ಬತ್ತಾಸು ಬಿಲ್ಲೆಯಂತಿರುವ ನಿನ್ನ ಕೆನ್ನೆ ಮೇಲೊಂದು ದೃಷ್ಟಿ ಬೊಟ್ಟಿಟ್ಟುಕೊಂಡು ನಾಳೆ ಸಂಜೆ ಸಿಗು. ದಿಢೀರನೆ ಜೀವನ ರಸದೌತಣ ಆಗುವ ಪರಿಯ ನಿನ್ನ ಬೆರಗು ಕಣ್ಣುಗಳಲ್ಲಿಯೇ ನೀನೇ ಖುದ್ದು  ನೋಡುವೆಯಂತೆ!.       
- ಇಂತಿ ನಿನ್ನ ಬತ್ತಾಸು ಬಿಲ್ಲೆಯ ಅಭಿಮಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT