ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಕೆಲಸ ದೇವರ ಕೆಲಸ...!

ಸರ್ಕಾರವೆಂಬ ದೇವರನ್ನು ಒಲಿಸಿಕೊಳ್ಳುವುದು ಬೇರೆ ಯಾವುದೇ ದೇವರನ್ನು ಒಲಿಸಿಕೊಂಡಷ್ಟು ಸುಲಭವಲ್ಲವೆಂಬುದು ಆಧಾರ್‌ ಕಾರ್ಡ್‌ ಮಾಡಿಸಲು ಹೊರಟಾಗ ಅನುಭವಕ್ಕೆ ಬಂದಿತು
Last Updated 1 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಡಾ. ಮನೋಜ ಗೋಡಬೋಲೆ
ಸರ್ಕಾರಿ ಸೌಲಭ್ಯ ಪಡೆಯಬೇಕಾದರೆ ಸಾಮಾನ್ಯರು ಪಡುವ ಬವಣೆಗಳನ್ನು ವಿವರಿಸಲು, ಆಧಾರ್‌ ಕಾರ್ಡಿಗೆ ಸಂಬಂಧಪಟ್ಟಂತೆ ಎರಡು ಘಟನೆಗಳನ್ನು ಉಲ್ಲೇಖಿಸುತ್ತೇನೆ. ಎರಡೂ ಘಟನೆಗಳು ನಡೆದ ಅವಧಿಯು ನಾಲ್ಕು ತಿಂಗಳ ಅಂತರದ್ದು.
 
ಮೊದಲನೆಯ ಘಟನೆ ನಡೆದದ್ದು ಕಳೆದ ಅಕ್ಟೋಬರ್‌ನಲ್ಲಿ. ಆಗ ಸಿದ್ದಾಪುರದ ಆಧಾರ್‌ ನೋಂದಣಿ ಕೇಂದ್ರಕ್ಕೆ ನನ್ನಜ್ಜಿ, 91 ವರ್ಷದ ಹಣ್ಣು ಹಣ್ಣು ಮುದುಕಿಯನ್ನು ಪ್ರಯಾಸಪಟ್ಟು ಕರೆದೊಯ್ಯಬೇಕಾಗಿತ್ತು. ಕಾರಣವಿಷ್ಟೆ: ಅವಳಿಗೆ ಬರುತ್ತಿರುವ ಪಿಂಚಣಿ ಸೌಲಭ್ಯವನ್ನು ಮುಂದುವರೆಸುವುದಕ್ಕಾಗಿ ಅವಳಿಗೆ ಆಧಾರ್‌ ಬೇಕಾಗಿತ್ತು. ಆದರೆ ನೋಂದಣಿ ಕೇಂದ್ರವಿದ್ದದ್ದು ಮೊದಲ ಅಂತಸ್ತಿನಲ್ಲಿ. ಅದನ್ನು ಹತ್ತುವುದಕ್ಕೆ ನಾಲ್ಕು ಹಂತಗಳಲ್ಲಿ ನಲವತ್ತರ ಆಜೂ ಬಾಜೂ ಮೆಟ್ಟಿಲುಗಳನ್ನು ಹತ್ತಿಳಿಯಬೇಕಾಗಿತ್ತು.
 
ಅಜ್ಜಿಗೆ ಅದು ಕಷ್ಟವಾದ್ದರಿಂದ ಅಲ್ಲಿನ ಸಿಬ್ಬಂದಿಯನ್ನು ಕಟ್ಟಡದ ಕೆಳಗೇ ಬಂದು ಮಾಹಿತಿ ಮತ್ತು ದಾಖಲೆಗಳ ಅಡಕ ಮಾಡಿಕೊಳ್ಳುವಂತೆ ವಿನಂತಿಸಿಕೊಂಡರೆ, ಅವರು ತಮ್ಮ ಅಂತಸ್ತು ಬಿಟ್ಟು ಕೆಳಗಿಳಿಯಲು ಒಪ್ಪಲಿಲ್ಲ. ಆದರೆ ಆಧಾರ್‌ಗೆ ಸಂಬಂಧಪಟ್ಟಂತೆ ಸರ್ಕಾರದ್ದೇ ಜಾಹೀರಾತುಗಳಲ್ಲಿ, ವಯಸ್ಸಾದವರ ಬಳಿಗೇ ಹೋಗಿ ನೋಂದಣಿ ಮಾಡಿಕೊಳ್ಳಲಾಗುವುದೆಂಬ ಘೋಷಣೆ ಇರುವುದನ್ನು ಸಿಬ್ಬಂದಿಯ ಗಮನಕ್ಕೆ ತಂದರೆ ಅವರು ಕಿಸಕ್ಕೆಂದು ನಕ್ಕು, ಡೆಸ್ಕ್‌ಟಾಪ್‌, ಯುಪಿಎಸ್‌ಗಳತ್ತ ಕೈಮಾಡಿ ಅಸಹಾಯಕತೆ ಪ್ರದರ್ಶಿಸಿಬಿಟ್ಟರು!
 
ಅವರ ಬಳಿ ವಾದ ಮಾಡಿ ಪ್ರಯೋಜನವಿಲ್ಲವೆಂದರಿತು, ಅಯ್ಯಪ್ಪನ ದರ್ಶನದ ಮೆಟ್ಟಿಲುಗಳನ್ನೂ ಮೀರಿಸುವಂತಿದ್ದ ಆ ನಾಲ್ಕೈದು ಹಂತದ ಮೆಟ್ಟಿಲುಗಳನ್ನು ಚತುಷ್ಪಾದಿಯಾಗಿ ಅಜ್ಜಿಯು ನಮ್ಮ ಸಹಾಯದಿಂದ ಪಡಿಪಾಟಲು ಪಟ್ಟಿ ಹತ್ತಿಳಿದಳು. ಸರ್ಕಾರವೆಂಬ ದೇವರನ್ನು ಒಲಿಸಿಕೊಳ್ಳುವುದು ಬೇರೆ ಯಾವುದೇ ದೇವರನ್ನು ಒಲಿಸಿಕೊಂಡಷ್ಟು ಸುಲಭವಲ್ಲವೆಂದು ಅರಿಕೆಯಾಗಿದ್ದು ಆವಾಗಲೇ.
 
ಇನ್ನು ಎರಡನೆಯ ಘಟನೆ ಕೆಲ ದಿನಗಳ ಹಿಂದಷ್ಟೇ ನಡೆದದ್ದು. ಮಗಳನ್ನು ಎಲ್‌ಕೆಜಿಗೆ  ಸೇರಿಸಲು ನಿಗದಿತ ನಮೂನೆಯನ್ನು ತುಂಬಲು ಹೊರಟಾಗ, ಶಾಲೆಯ ಸಿಬ್ಬಂದಿ ಕಡ್ಡಾಯವಾಗಿ ಆಧಾರ್‌ ಕಾರ್ಡ್ ಬೇಕೇಬೇಕೆಂದು ಹೇಳಿದ್ದರು. ಆದಕಾರಣ ಹತ್ತಿರದಲ್ಲಿನ (ಐದು ಕಿಲೊಮೀಟರ್ ದೂರ) ಒಂದು ಕಾಯಂ ನೋಂದಣಿ ಕೇಂದ್ರಕ್ಕೆ, ಮಗಳಿಗೆ ಹುಷಾರಿಲ್ಲದಿದ್ದರೂ ಅನಿವಾರ್ಯವಾಗಿ ಕರೆದುಕೊಂಡು ಹೋದೆವು. ಅದಕ್ಕೂ ಮುನ್ನ ಇಲಾಖೆಯ ವೆಬ್‌ಸೈಟಿಗೆ ಭೇಟಿಯಿತ್ತು ಅದರಲ್ಲಿನ ಮಾಹಿತಿ ಓದಿದೆ.
 
ಮಗಳಿಗೆ ಐದು ವರ್ಷವೂ ಆಗದ್ದರಿಂದ ಆಕೆಯ ಜನನ ಪ್ರಮಾಣಪತ್ರದ ನಕಲನ್ನೂ, ನನ್ನ ಆಧಾರ್‌ ಕಾರ್ಡಿನ ಜೆರಾಕ್ಸನ್ನೂ ಮೂಲಪ್ರತಿಗಳೊಂದಿಗೆ ತೆಗೆದುಕೊಂಡು ನೋಂದಣಿ ಕೇಂದ್ರಕ್ಕೆ ತೆರಳಿದರೆ ಅಲ್ಲಿನ ಸಿಬ್ಬಂದಿ ‘ಸಾರ್, ನಮ್ಮ ಟ್ಯಾಬ್ಲೆಟ್ ಕೆಟ್ಟು ಹೋಗಿದೆ. ಅದು ಸರೀ ಇದ್ದಿದ್ದರೆ ನೀವು ಹೇಳಿದಂತೆ ಬರ್ತ್ ಸರ್ಟಿಫಿಕೇಟ್, ಮತ್ತೆ ನಿಮ್ಮ ಆಧಾರ್‌ ಕಾರ್ಡಿನ ಜೆರಾಕ್ಸ್ ಸಾಕಾಗಿತ್ತು. ಆದರೆ ಈಗ (ಅಂದರೆ, ಅದು ಸರೀ ಆಗೋ ತನಕ!) ನಮ್ಮ ಬಳಿ ಇರೋ ಔಟ್‌ಡೇಟೆಡ್ ಡೆಸ್ಕ್ ಟಾಪ್ ಕಂಪ್ಯೂಟರ್ರು ಮಗಳ ಗುರುತಿನ ಪ್ರಮಾಣಪತ್ರವನ್ನೂ ಕೇಳುತ್ತದೆ. ನೀವು ನಿಮ್ಮ ಗ್ರಾಮ ಪಂಚಾಯಿತಿಗೆ ಹೋಗಿ ಅವಳ ಹೆಸರಿನಲ್ಲಿ ಗುರುತಿನ ಪ್ರಮಾಣಪತ್ರವನ್ನು ತನ್ನಿ’ ಎಂದರು. 
 
ಬೇಸ್ತು ಬಿದ್ದ ನಾನು ಸಾವರಿಸಿಕೊಂಡು ವ್ಯಂಗ್ಯವಾಗಿ ‘ಅಷ್ಟೇ ಸಾಕಾ? ಇನ್ನೇನಾರೂ ಇದೆಯಾ?’ ಎಂದು ಕೇಳಿದೆ. ಕೂಡಲೇ ಅಲ್ಲಿನ ಯುವತಿ ‘ಮಗಳು ಉಜಿರೆಯ ವಾಸಿ ಅಂತಾ ಗೊತ್ತಾಗಲಿಕ್ಕೆ ಅಡ್ರೆಸ್ ಪ್ರೂಫ್ ಬೇಕಾಗುತ್ತೆ. ಪಂಚಾಯಿತಿಯವರು ಕೊಟ್ಟ ಐಡೆಂಟಿಟಿ ಸರ್ಟಿಫಿಕೇಟ್‌ನಲ್ಲಿ ಅಡ್ರೆಸ್ ಇರ್ತದೆ. ಆದರೆ ನಿಮ್ಮ ಆಧಾರ್ ಕಾರ್ಡ್ ಎಲ್ಲಿ ಮಾಡ್ಸಿದ್ದು? ಅವಳು ಮೈನರ್ ಆದ್ರಿಂದ ಅವಳ ಮಾಹಿತಿಯನ್ನು ನಿಮ್ಮ ಕಾರ್ಡ್ ಜೊತೆಗೆ ಲಿಂಕ್ ಮಾಡ್ತೇವೆ. ಹಂಗಾಗಿ ನಿಮ್ಮದೂ, ಮಗಳದ್ದೂ ಒಂದೇ ಅಡ್ರೆಸ್ಸಾಗಿರ್ಬೇಕು. ನೀವು ಉಜಿರೆಯ ವಾಸಿಗಳು ಅನ್ನೋದಕ್ಕೂ ದಾಖಲೆ ಬೇಕಾಗುತ್ತೆ’ ಎಂದಳು. ‘ಮೂರು ತಿಂಗಳ ಕರೆಂಟ್ ಬಿಲ್ ನಡೆಯತ್ತೆ ಅಲ್ವಾ?’ ಎಂದಿದ್ದಕ್ಕೆ ‘ಅದು ನಿಮ್ಮ ಹೆಸರಲ್ಲಿದೆಯಾ?’ ಎಂಬ ಪ್ರಶ್ನೆ ಬಂದಿತು.
 
ನಾವು ಉದ್ಯೋಗಕ್ಕಾಗಿ ಉಜಿರೆಗೆ ಬಂದವರು. ಐದು ವರ್ಷಗಳ ಹಿಂದೆ ಧಾರವಾಡದಲ್ಲಿದ್ದವರು ಅಲ್ಲಿಯೇ ಆಧಾರ್‌ ಕಾರ್ಡ್‌ ಮಾಡಿಸಿಕೊಂಡಿದ್ದೆವು. ಮುಂದೆ ಯಾವ ಊರಿನ ಋಣವಿದೆಯೋ ನಮಗೇ ಗೊತ್ತಿಲ್ಲ. ಹೋದಹೋದಲ್ಲೆಲ್ಲಾ ಮನೆಯ ವಿದ್ಯುತ್ ಸಂಪರ್ಕವನ್ನೂ, ಪಂಚಾಯಿತಿಯ ನೀರಿನ ಸಂಪರ್ಕವನ್ನೂ ಬಾಡಿಗೆದಾರರ ಹೆಸರಿಗೆ ಮಾಡಿಕೊಡಲು ಯಾವ ಮಾಲೀಕ ಒಪ್ಪಿಯಾನು? ಅದಕ್ಕಾಗಿಯೇ ಅಲ್ಲವೇ ಇತ್ತೀಚೆಗಿನ ಮೂರು ತಿಂಗಳ ವಿದ್ಯುತ್ ಮತ್ತು ನೀರಿನ ಬಿಲ್‌ಗಳನ್ನು ಅಡ್ರೆಸ್ ಪ್ರೂಫ್‌ಗಾಗಿ ಮಾನ್ಯ ಮಾಡಿದ್ದು? ಈ ಬಗ್ಗೆ ಯುವತಿಯನ್ನು ಪ್ರಶ್ನಿಸಿದರೆ ‘ಆಯ್ತು ಸಾರ್, ನೀವು ಏನು ದಾಖಲೆ ಕೊಡ್ತೀರೋ ಅದನ್ನೇ ನಾವು ಅಪ್‌ಲೋಡ್ ಮಾಡ್ತೇವೆ. ಒಂದ್ ವೇಳೆ ಆಧಾರ್‌ ಏನಾದ್ರೂ ರಿಜೆಕ್ಟಾದ್ರೆ ನಮ್ಮನ್ನ ದೂಷಿಸಬೇಡಿ.
 
ನಿಮ್ ಹಂಗೇ ಸುಮಾರು ಜನ ವಾದಾ ಮಾಡಿ ಅವರ ಎಂಟ್ರಿಗಳೆಲ್ಲಾ ರಿಜೆಕ್ಟಾಗಿದಾವೆ’ ಎಂದು ಬೆದರಿಕೆಯ ಧ್ವನಿಯಲ್ಲಿ ಅಂದಳು. ಬೇಸತ್ತು ಹೋಗಿ ‘ನೋಡ್ರೀ, ನಿಮಗೆ ಪಂಚಾಯಿತಿಯಿಂದ ಮಗಳ ಐಡೆಂಟಿಟಿ ಪ್ರೂಫನ್ನ ತಂದು ಕೊಡ್ತೇನೆ. ಇನ್ನು ಬೇರೆ ಮಾಹಿತಿಯನ್ನ ನೀವು ಹೇಳಿದಂಗೆ ನನಗೆ ಕೊಡೋಕಾಗಲ್ಲ. ನನ್ನ ಆಧಾರ್‌ನ ಜೆರಾಕ್ಸನ್ನ ಕೊಡ್ತೀನಿ. ಒಂದ್ ವೇಳೆ ನಮ್ಮ ಎಂಟ್ರಿ ರಿಜೆಕ್ಟಾದ್ರೆ ಆಗ್ಲಿ.
 
ಆಮೇಲೆ ನೋಡ್ಕೋತೀನಿ’ ಎಂದು ಸಿಟ್ಟಿನಿಂದ ಒದರಿ, ಮಗಳ ಮಾಹಿತಿಯನ್ನು ಭರ್ತಿ ಮಾಡಲು, ನೋಂದಣಿ ಕೇಂದ್ರದಲ್ಲಿ ಉಚಿತವಾಗಿ ಸಿಗಬೇಕಾಗಿದ್ದ ನಿಗದಿತ ಅರ್ಜಿ ನಮೂನೆಯನ್ನು ಕೇಳಿದೆ. ಅದಕ್ಕೆ ಆಕೆ ‘ನಮ್ಮಲ್ಲಿ ಅದನ್ನೆಲ್ಲಾ ಇಟ್ಕೊಳಲ್ಲ, ಹತ್ತಿರದಲ್ಲಿ ಬೇಕಾದಷ್ಟು ಜೆರಾಕ್ಸ್ ಅಂಗಡಿಗಳಿದ್ದಾವೆ. ಅಲ್ಲಿ ದುಡ್ಡುಕೊಟ್ಟು ತೊಗೊಳ್ಳಿ’ ಎಂದು ಸಾಗ ಹಾಕಿದಳು. ಉಜಿರೆ ಪಂಚಾಯಿತಿಯಲ್ಲಿ ನಮ್ಮ ಪುಣ್ಯಕ್ಕೆ ಎರಡೇ ತಾಸಿನಲ್ಲಿ ಬೇಕಾದ ದಾಖಲೆ ಸಿಕ್ಕಿತು. 
 
ಆಗ ಸಮಯ ಹನ್ನೆರಡೂವರೆಯಾಗಿತ್ತು. ಐದು ಕಿಲೊ ಮೀಟರ್ ದೂರದ ಆಧಾರ್‌ ಕೇಂದ್ರಕ್ಕೆ ಹೋಗುವಾಗ ಊಟದ ಸಮಯವಾಗಿರುತ್ತದಾದ್ದರಿಂದ ಮಧ್ಯಾಹ್ನ ಎರಡೂವರೆಗೆ ಅಲ್ಲಿಗೆ ತೆರಳಿದರೆ, ಅಲ್ಲಿನ ಮಹಿಳಾ ಸಿಬ್ಬಂದಿ ಇರಲಿಲ್ಲ. ನಮ್ಮ ಗ್ರಹಚಾರಕ್ಕೆ ಕೇಂದ್ರದಲ್ಲಿದ್ದ ಒಂದೇ ಒಂದು ಡೆಸ್ಕ್‌ಟಾಪಿಗೆ ಆ ಯುವತಿಯದ್ದೇ ಬೆರಳಚ್ಚಿನ ಅಗತ್ಯ ಇದ್ದಿದ್ದರಿಂದ ಆಕೆ  ಹಿಂದಿರುಗುವ ತನಕ ನೋಂದಣಿಯಾಗದೆಂದರು ಅಲ್ಲಿದ್ದವರು.
 
ಬಳಿಕ ಆಕೆ ಮರಳಿದ್ದು ಮೂರೂ ಮುಕ್ಕಾಲಿಗೆ. ಅಂತೂ ಇಂತೂ ಆಧಾರ್‌ಗೆ ಸಂಬಂಧಪಟ್ಟ ದಾಖಲೆಗಳನ್ನು ಉಣಬಡಿಸಿದ್ದಾಯಿತು. ನೋಂದಣಿ ಕಾರ್ಯಪೂರೈಸಿ ಸ್ವೀಕೃತಿ ಪತ್ರವನ್ನು ನಮಗೆ ಕೊಡುವಾಗ ‘ನೀವು ನೂರು ರೂಪಾಯಿ ಕೊಡಬೇಕು’ ಅಂದಳು. ಬೆಳಗ್ಗಿನಿಂದ ಅಂಡಲೆದು ಸುಸ್ತಾಗಿದ್ದ ನನಗೆ ಕೋಪ ನೆತ್ತಿಗೇರಿ ‘ಏನ್ರೀ ತಮಾಷೆ ಮಾಡ್ತಿದೀರಾ? ಇದೆಲ್ಲಾ ಫ್ರೀ ಅಲ್ವಾ?’ ಎಂದದ್ದಕ್ಕೆ ಆಕೆ  ‘ಸಾರ್ ಇದು ಪ್ರೈವೇಟು. ಹಂಗಾಗಿ ತೊಗೊಳ್ತಾ ಇದೀವಿ’ ಎಂದಳು.
 
ಹತಾಶನಾಗಿ, ಕೆಲಸವಾದರೆ ಸಾಕೆಂದುಕೊಂಡ ನಾನು ತೆಪ್ಪಗೆ ನೂರು ರೂಪಾಯಿಯನ್ನು ಆಕೆಯ ಎದುರಿಟ್ಟು ಅವುಡುಗಚ್ಚಿ ಮರಳಿದೆ. ಅಂದು ಅಲ್ಲಿ ನೋಂದಣಿಗಾಗಿ ನಮ್ಮದೇ ಕಾಲೇಜಿನ ಇನ್ನೊಬ್ಬ ಪ್ರಾಧ್ಯಾಪಕರೂ, ಮತ್ತೊಬ್ಬ  ಡಾಕ್ಟರೂ, ಪ್ರಾಥಮಿಕ ಶಾಲಾ ಶಿಕ್ಷಕರೂ ಸೇರಿದಂತೆ ಹತ್ತು–ಹನ್ನೆರಡು ಜನರಿದ್ದೆವು. ಎಲ್ಲರದ್ದೂ ಇದೇ ಕತೆ. ವಿದ್ಯಾವಂತರಾದ ನಾವೇ ಹೀಗೆ ಇವರ ಕೈಯಲ್ಲಿ ಈ ನಮೂನೆ ನರಳಿದರೆ ಇನ್ನು ಏನೂ ಗೊತ್ತಿರದವರ ಪಾಡೇನು? ನಾನ್ಯಾಕೆ ದುಡ್ಡು ಕೊಟ್ಟೆನೆಂದು ಒಮ್ಮೊಮ್ಮೆ ಅನಿಸುತ್ತದೆ.
 
ಆದರೆ ದುಡ್ಡಿನ ಮುಖ ನೋಡಿಕೊಂಡು ಜಗಳವಾಡಿದರೆ, ಒಂದು ವೇಳೆ ಯಾವುದೋ ಕಾರಣದಿಂದ ನಮ್ಮ ಆಧಾರ್‌ಗೆ ಸಂಚಕಾರ ಬಂದರೆ ಹೊಸದಾಗಿ ನೋಂದಣಿ ಮಾಡಿಸಲು ಅವರ ಬಳಿಗೇ ತೆರಳಬೇಕಾಗುತ್ತದೆ. ಅದಕ್ಕೂ ಮಿಗಿಲಾಗಿ ಮತ್ತೊಂದು ದಿವಸ ಕಾಲೇಜಿಗೆ ರಜೆ ಹಾಕಿ, ಮಗಳನ್ನು ಕರೆದುಕೊಂಡು ಬಿರು ಬಿಸಿಲಿನಲ್ಲಿ ತೆರಳಬೇಕಲ್ಲವೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT