ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರ ಉಳಿದ ಬಿಜೆಪಿ ಸಂಸದ, ಶಾಸಕ

ಬೆಳಗಾವಿ ಮಹಾನಗರಪಾಲಿಕೆಗೆ ನೂತನ ಮೇಯರ್‌, ಉಪಮೇಯರ್‌ ಆಯ್ಕೆ
Last Updated 2 ಮಾರ್ಚ್ 2017, 5:02 IST
ಅಕ್ಷರ ಗಾತ್ರ

ಬೆಳಗಾವಿ: ಬಿಜೆಪಿಯ ಸಂಸದ ಸುರೇಶ ಅಂಗಡಿ ಹಾಗೂ ಶಾಸಕ ಸಂಜಯ ಅಂಗಡಿ ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಬುಧವಾರ ನಡೆದ ಮೇಯರ್‌ ಹಾಗೂ ಉಪಮೇಯರ್‌ ಚುನಾವಣೆಯಲ್ಲಿ ಭಾಗವಹಿಸಿದೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾದರು. ಜಿಲ್ಲಾಧಿಕಾರಿಯೂ ಆಗಿರುವ ಪ್ರಾದೇಶಿಕ ಆಯುಕ್ತ ಎನ್‌. ಜಯರಾಮ್‌ ಅವರ ಅಧ್ಯಕ್ಷತೆಯಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು.

ಬೆಳಿಗ್ಗೆ 10ರಿಂದ 11ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರಿಗೆ ಸದಸ್ಯರು ನಾಮಪತ್ರ ಸಲ್ಲಿಸಿದ್ದರು. ನಿಗದಿಯಂತೆ ಮಧ್ಯಾಹ್ನ 1ಕ್ಕೆ ಸಭಾಂಗಣ ಪ್ರವೇಶಿಸಿದ ಪ್ರಾದೇಶಿಕ ಆಯುಕ್ತರು, ಸಮಯ ಮೀರಿದರೂ ಕೋರಂಗೆ ಬೇಕಾಗುವಷ್ಟು ಸದಸ್ಯರು ಹಾಜರಿಲ್ಲದೆ ಇದ್ದುದ್ದರಿಂದ 10 ನಿಮಿಷಸಭೆ ಮುಂದೂಡಿದರು.

ಈ ನಡುವೆ, ‘ನಿಗದಿಗಿಂತ ಐದು ನಿಮಿಷ ತಡವಾಗಿರುವುದರಿಂದ ಸಭಾಂಗಣದ ಬಾಗಿಲು ಮುಚ್ಚಬೇಕು. ಬೇರೆ ಸದಸ್ಯರು ಒಳಬರಲು ಅವಕಾಶ ನೀಡಬಾರದು’ ಎಂದು ಕನ್ನಡಿಗ ಸದಸ್ಯ ರಮೇಶ ಸೊಂಟಕ್ಕಿ ಕೋರಿದರು. ಇದಕ್ಕೆ ಜಿಲ್ಲಾಧಿಕಾರಿ ಸೊಪ್ಪು ಹಾಕಲಿಲ್ಲ. 10 ನಿಮಿಷ ಸಭೆ ಮುಂದೂಡಿ ಕೊಠಡಿಗೆ ತೆರಳಿದರು. ಅವರು ಹೊರ ಹೋಗುತ್ತಿದ್ದಂತೆಯೇ, ಸದಸ್ಯರು ಒಳಪ್ರವೇಶಿಸಿದರು!

ಹೀಗಿತ್ತು ಪ್ರಕ್ರಿಯೆ: ಬಿಸಿಎ ಮಹಿಳೆಗೆ ಮೀಸಲಾಗಿದ್ದ ಮೇಯರ್‌ ಸ್ಥಾನಕ್ಕೆ ಎಂಇಎಸ್‌ ಬೆಂಬಲಿತರಾದ ಮೀನಾಕ್ಷಿ ಚಿಗರೆ (48ನೇ ವಾರ್ಡ್‌), ಸಂಜೋತಾ ಬಾಂದೇಕರ (36), ಮಧುಶ್ರೀ ಪೂಜಾರಿ (47), ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಬಣದಿಂದ ಜಯಶ್ರೀ ಮಾಳಗಿ (47) ಹಾಗೂ ಶಾಸಕ ಸತೀಶ ಜಾರಕಿಹೊಳಿ ಬಣದಿಂದ ಪುಷ್ಪಾ ಪರ್ವತರಾವ (53) ನಾಮಪತ್ರ ಸಲ್ಲಿಸಿದ್ದರು.

ಇವರಲ್ಲಿ ಎಂಇಎಸ್‌ ಬಣದ ಮೀನಾಕ್ಷಿ ಚಿಗರೆ ಹಾಗೂ ಮಧುಶ್ರೀ ಪೂಜಾರಿ ಉಮೇದುವಾರಿಕೆ ಹಿಂಪಡೆದರು. ಅಂತಿಮವಾಗಿ ಮೂವರು ಕಣದಲ್ಲಿದ್ದುದ್ದರಿಂದ ಚುನಾವಣೆ ನಡೆಯಿತು. ಸದಸ್ಯರು ಕೈ ಎತ್ತುವ ಮೂಲಕ ಮುಕ್ತ ಮತದಾನ ಮಾಡಿದರು.

ಚಲಾವಣೆಯಾದ 59 ಮತಗಳಲ್ಲಿ, ಸಂಜೋತಾ ಬಾಂದೇಕರ 32, ಜಯಶ್ರೀ ಮಾಳಗಿ 17 ಹಾಗೂ ಪುಷ್ಪಾ ಪರ್ವತರಾವ 10 ಮತ ಪಡೆದರು. ಮೇಯರ್‌ ಆಗಿ ಸಂಜೋತಾ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಿಸಿದರು.

ಉಪಮೇಯರ್‌ ಸ್ಥಾನಕ್ಕೆ ಎಂಇಎಸ್‌ ಬೆಂಬಲಿತ ಮೋಹನ ಬಾಂದೂರಗೆ (4ನೇ ವಾರ್ಡ್‌), ನಾಗೇಶ ಮಂಡೋಳ್ಕರ (49), ರಮೇಶ ಜಾರಕಿಹೊಳಿ ಬಣದ ಮುಜಾಮಿಲ್‌ ಡೋಣಿ (35) ಮತ್ತು ಸತೀಶ ಜಾರಕಿಹೊಳಿ ಬಣದ ಫಹೀಮ್‌ ನಾಯಕವಾಡಿ (55) ಕಣದಲ್ಲಿದ್ದರು. ಈ ಪೈಕಿ ಎಂಇಎಸ್‌ ಬೆಂಬಲಿತ ಮೋಹನ ಬಾಂದೂರಗೆ ನಾಮಪತ್ರ ವಾಪಸ್‌ ಪಡೆದರು. ನಂತರ ನಡೆದ ಚುನಾವಣೆಯಲ್ಲಿ ನಾಗೇಶ ಮಂಡೋಳ್ಕರ 32, ಮುಜಾಮಿಲ್‌ 17 ಹಾಗೂ ಫಹೀಮ್‌ 10 ಮತ ಗಳಿಸಿದರು.

ವಿಜೇತರನ್ನು ಪ್ರಾದೇಶಿಕ ಆಯುಕ್ತ ಎನ್‌. ಜಯರಾಮ್‌, ಪಾಲಿಕೆ ಆಯುಕ್ತ ಶಶಿಧರ ಕುರೇರ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಭಾಗವಹಿಸಿದ್ದರು.

ಪಾಲಿಕೆಯೊಳಗೆ ಅಭಿವೃದ್ಧಿಗಷ್ಟೇ ಆದ್ಯತೆ: ಮಹಾನಗರಪಾಲಿಕೆಯಲ್ಲಿ ಅಭಿವೃದ್ಧಿಗಷ್ಟೇ ಆದ್ಯತೆ ನೀಡಲಾಗುವುದು. ಗಡಿ ಹಾಗೂ ಭಾಷೆಯ ವಿಚಾರವನ್ನೇನಿದ್ದರೂ  ಹೊರಗಡೆ ಇಟ್ಟುಕೊಳ್ಳುತ್ತೇವೆ ಎಂದು ಎಂಇಎಸ್‌ ಬೆಂಬಲಿತ, ಪಕ್ಷೇತರ ಶಾಸಕ ಸಂಭಾಜಿ ಪಾಟೀಲ ಹೇಳಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಎಂಇಎಸ್‌ನಲ್ಲಿ ಒಡಕಿರಲಿಲ್ಲ. ಎಲ್ಲರೂ ಒಟ್ಟಾಗಿ ಮೇಯರ್‌ ಆಯ್ಕೆ ಮಾಡಿದ್ದೇವೆ. ನಗರದ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವಂತೆ ಕೋರಲು ಮುಖ್ಯಮಂತ್ರಿ ಬಳಿಗೆ ಮೇಯರ್‌ ನೇತೃತ್ವದಲ್ಲಿ ನಿಯೋಗ ತೆರಳಲಾಗುವುದು. ನಗರದ ಹಿತಕ್ಕಾಗಿ ಎಲ್ಲರೂ ಒಂದಾಗುತ್ತೇವೆ’ ಎಂದರು.

‘ಬಲಾಬಲ’ದ ನೋಟ
* ನಗರಪಾಲಿಕೆಯ ಸದಸ್ಯರ ಬಲ 58. ಎಂಇಎಸ್‌ ಬೆಂಬಲಿತರು –32, ಕನ್ನಡ ಹಾಗೂ ಉರ್ದು ಸದಸ್ಯರು 26. ಇವರಲ್ಲಿ ಕನ್ನಡಿಗ ಬೈರಗೌಡ ಪಾಟೀಲ ಅವರು ಸುಳ್ಳು ಜಾತಿಪ್ರಮಾಣಪತ್ರ ಸಲ್ಲಿಸಿದ ಆರೋಪ ಎದುರಿಸುತ್ತಿದ್ದು, ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಅವರಿಗೆ ಮತದಾನದ ಹಕ್ಕಿಲ್ಲ. ಎಂಇಎಸ್‌ ಬೆಂಬಲಿತ ಸಂಭಾಜಿ ಪಾಟೀಲ ಅವರು ಶಾಸಕ ಹಾಗೂ ನಗರಪಾಲಿಕೆ ಸದಸ್ಯರೂ ಆಗಿರುವುದರಿಂದ ಅವರಿಗೆ ಒಂದು ಮತದ ಹಕ್ಕಷ್ಟೇ ಇದೆ.

*ಸಂಭಾಜಿ ಪಾಟೀಲ ಸೇರಿ ಒಟ್ಟು ಆರು ಮಂದಿ ಪದನಿಮಿತ್ತ ಸದಸ್ಯರಿದ್ದಾರೆ. ಇವರಲ್ಲಿ ಶಾಸಕರಾದ ಸತೀಶ ಜಾರಕಿಹೊಳಿ, ಫಿರೋಜ್‌ಸೇಠ್‌, ಸಂಸದ ಪ್ರಕಾಶ ಹುಕ್ಕೇರಿ ಭಾಗವಹಿಸಿದ್ದರು. ಬಿಜೆಪಿಯ ಸುರೇಶ ಅಂಗಡಿ, ಶಾಸಕ ಸಂಜಯ ಪಾಟೀಲ ಗೈರುಹಾಜರಾಗಿದ್ದರು. ಒಟ್ಟು 60 ಮಂದಿಯಲ್ಲಿ 59 ಮತಗಳು ಚಲಾವಣೆಯಾದವು. ಪ್ರಕಾಶ ಹುಕ್ಕೇರಿ ಮತ ಚಲಾಯಿಸಲಿಲ್ಲ.

‘ಇದು ನನ್ನ ವೈಫಲ್ಯವಲ್ಲ, ಜಯ’
ಬೆಳಗಾವಿ:
‘ನಗರಪಾಲಿಕೆಯಲ್ಲಿ ಕನ್ನಡಿಗರನ್ನು ಅಧಿಕಾರಕ್ಕೆ ತರಲು ಬಹುಮತವಿಲ್ಲ. ಆದರೂ ಪ್ರಯತ್ನಿಸಿದೆವು. ಹೀಗಾಗಿ, ಇದು ನನ್ನ ವೈಫಲ್ಯವಲ್ಲ; ಜಯ’ ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಇಲ್ಲಿ ಬುಧವಾರ ಹೇಳಿದರು.

ಮೇಯರ್‌, ಉಪಮೇಯರ್‌ ಚುನಾವಣೆ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಎಂಇಎಸ್‌ನವರು ಒಟ್ಟಾಗಿಯೇ ಇದ್ದರು. ಅವರ ನಡುವೆ ಒಡಕೇನೂ ಇರಲಿಲ್ಲ. ಚುನಾವಣೆಯಲ್ಲಿ ಕನ್ನಡಿಗರು ಗೆಲ್ಲುವುದಕ್ಕೆ ಸಂಬಂಧಿಸಿದಂತೆ ಯಾರು ನೇತೃತ್ವ ವಹಿಸಬೇಕಿತ್ತೋ ಅವರು ನೇತೃತ್ವ ತೆಗೆದುಕೊಳ್ಳಲಿಲ್ಲ. ನಾವೂ ಕನ್ನಡದ ಅಭ್ಯರ್ಥಿಯನ್ನೇ ನಿಲ್ಲಿಸಿದ್ದೆವು. ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರು ಬೆಂಬಲಿಸಬೇಕಿತ್ತು’ ಎಂದು ಹೇಳಿದರು.

‘ಎಂಇಎಸ್‌ ಬೆಂಬಲಿತ ಮೇಯರ್‌ ಹಾಗೂ ಉಪಮೇಯರ್‌ ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡರೆಂದು ನಗರಪಾಲಿಕೆ ಸೂಪರ್‌ಸೀಡ್‌ಗೆ ಆಗ್ರಹಿಸಲಾಗಿತ್ತು. ಸೂಪರ್‌ಸೀಡ್ ಆಗುವುದನ್ನು ತಡೆದಿದ್ದಕ್ಕೂ, ಈ ಚುನಾವಣೆಗೂ ಸಂಬಂಧವಿಲ್ಲ. ಸೂಪರ್‌ಸೀಡ್‌ ಮಾಡಿಸಿದ್ದರೂ ಪ್ರಯೋಜನ ಆಗುತ್ತಿರಲಿಲ್ಲ.

ಸಚಿವರು ಎಲ್ಲರನ್ನೂ ಸೇರಿಸಿ ಸಭೆ ನಡೆಸಿದ್ದರೆ, ಹೋಗುತ್ತಿದ್ದೆವು. ನಗರಪಾಲಿಕೆಯಲ್ಲಿ ಕನ್ನಡಿಗರು ಸೋತಿದ್ದಕ್ಕೆ ಯಾರನ್ನೂ ಕಾರಣ, ಹೊಣೆ ಮಾಡುವುದಕ್ಕೆ ಹೋಗುವುದಿಲ್ಲ. ಸಚಿವರು ನಮ್ಮನ್ನು ಹೊರಗಿಟ್ಟು ತಂತ್ರ ಮಾಡಿದ್ದರಿಂದ, ನಾವು ನಮ್ಮ ಅಭ್ಯರ್ಥಿ ಕಣಕ್ಕಿಳಿಸಬೇಕಾಯಿತು’ ಎಂದು ತಿಳಿಸಿದರು.

*
ನಗರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಸ್ಮಾರ್ಟ್‌ ಸಿಟಿ, ಕುಡಿಯುವ ನೀರು, ರಸ್ತೆ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು.
-ಸಂಜೋತಾ ಬಾಂದೇಕರ,
ಮೇಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT