ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮ್ಯುನಿಸ್ಟರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ

Last Updated 2 ಮಾರ್ಚ್ 2017, 6:39 IST
ಅಕ್ಷರ ಗಾತ್ರ

ಸಾಗರ: ‘ಕೇರಳದಲ್ಲಿ ದೇಶಭಕ್ತ ಸಂಘಟನೆಯ ಧ್ಯೇಯನಿಷ್ಠ ಕಾರ್ಯಕರ್ತರನ್ನು ಹತ್ಯೆ ಮಾಡುತ್ತಿರುವ ಕಮ್ಯುನಿಸ್ಟರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಹೆಚ್ಚುತ್ತಿರುವ ಕಮ್ಯುನಿಸ್ಟರ ಹಿಂಸಾಚಾರವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಅಲ್ಲಿನ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು’ ಎಂದು ಒತ್ತಾಯಿಸಿ ಬುಧವಾರ ನಾಗರಿಕ್ ಮಂಚ್ ಹಾಗೂ ಸಂಘ ಪರಿವಾರದ ಸದಸ್ಯರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಪೊಲೀಸ್ ಸ್ಟೇಷನ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ, ಉಪವಿಭಾಗಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ಉಪವಿಭಾಗಾಧಿಕಾರಿ ಕಚೇರಿ ಎದುರು ನಡೆದ ಸಭೆಯಲ್ಲಿ ಮಾತನಾಡಿದ ಮುಖಂಡ ಅ.ಪು.ನಾರಾಯಣಪ್ಪ, ‘ದೇಶದಲ್ಲಿ ಅಸಹಿಷ್ಣುತೆ ಸೃಷ್ಟಿಸಿ, ಕೋಮು ಸೌಹಾರ್ದತೆ ಕದಡುವ ಕೆಲಸವನ್ನು ಕಮ್ಯುನಿಸ್ಟರು ಹಾಗೂ ಕಾಂಗ್ರೆಸ್ಸಿಗರು ಮಾಡುತ್ತಿದ್ದಾರೆ. ಅವರಿಗೆ ಸಂಘದ ತತ್ವ, ಸಿದ್ಧಾಂತಗಳನ್ನು ನೇರವಾಗಿ ಎದುರಿಸಲು ಸಾಧ್ಯವಾಗದೆ, ಪರಿವಾರದ ಕಾರ್ಯಕರ್ತರನ್ನು ಹತ್ಯೆ ಮಾಡುವ ಮೂಲಕ ಹಿಮ್ಮೆಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳೂರಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಸಂಘ ಪರಿವಾರ ಪ್ರತಿಭಟನೆ ನಡೆಸಿದೆ. ಇದನ್ನು ಸಹಿಸದ ರಾಜ್ಯದ ಆಹಾರ ಖಾತೆ ಸಚಿವ ಯು.ಟಿ.ಖಾದರ್ ಪರಿವಾರದ ಬಗ್ಗೆ ಅಸಡ್ಡೆಯಿಂದ ಮಾತನಾಡಿದ್ದಾರೆ. ಖಾದರ್ ಅವರಿಗೆ ಪಿಣರಾಯಿ ವಿಜಯನ್ ಬಗ್ಗೆ ಅಷ್ಟೊಂದು ಗೌರವ ಇದ್ದರೆ ಅವರ ಚಪ್ಪಲಿಯನ್ನು ತಲೆಯ ಮೇಲೆ ಹೊತ್ತು ತಿರುಗಲಿ’ ಎಂದು ಹೇಳಿದರು.

ಶಿವಮೊಗ್ಗದ ದಿನೇಶ್ ಪೈ ಮಾತನಾಡಿ, ‘1965ರಿಂದ ಈತನಕ ಕೇರಳದಲ್ಲಿ ಸಂಘ ಪರಿವಾರದ 284ಕ್ಕೂ ಹೆಚ್ಚು ಕಾರ್ಯಕರ್ತರನ್ನು ಕಗ್ಗೊಲೆ ಮಾಡಿದೆ. ರಷ್ಯಾ, ಚೀನಾದಲ್ಲಿ ಮಳೆ ಬಂದರೆ ನಮ್ಮಲ್ಲಿ ಛತ್ರಿ ಹಿಡಿಯುವ ಮಾವೋವಾದಿಗಳು ಅಶಾಂತಿ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರು ಸಂವಿಧಾನ ವಿರೋಧಿಯಾಗುವ ಜೊತೆಗೆ ಜಾತ್ಯತೀತ ತತ್ವದ ವಿರೋಧಿಗಳಾಗಿದ್ದಾರೆ. ಇಂತಹವರನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇವರ ವಿರುದ್ದ ದೇಶಾದ್ಯಂತ ಜನಜಾಗೃತಿ ಅಗತ್ಯವಾಗಿದೆ’ ಎಂದರು.

ಸಂಘ ಪರಿವಾರದ ಐ.ವಿ.ಹೆಗಡೆ, ಅರಗ ಚಂದ್ರಶೇಖರ್, ಸುರೇಶ್, ಕೋಮಲ ರಾಘವೇಂದ್ರ, ರವೀಶ್, ಸುದರ್ಶನ್, ಸುಬ್ರಾವ್, ರಾಜೇಂದ್ರ ಪೈ, ಬಿಜೆಪಿ ಪ್ರಮುಖರಾದ ಟಿ.ಡಿ.ಮೇಘರಾಜ್, ಆರ್.ಶ್ರೀನಿವಾಸ್, ಗಣೇಶಪ್ರಸಾದ್, ಬಿ.ಮೋಹನ್, ಸತೀಶಬಾಬು, ಕೆ.ಜಿ.ಸಂತೋಷಕುಮಾರ್, ವಿ.ಶಂಕರ್, ಗಂಗಮ್ಮ, ಮೀನಾಕ್ಷಿ, ರಾಮು, ಗಣಪತಿ ಮಂಡಗಳಲೆ ಇನ್ನಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT