ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರಿನ ದರ್ಶನವೇ ಇಲ್ಲ, ಎಲ್ಲೆಡೆ ಬಯಲು

ಹೆಚ್ಚಿದ ಬರ ಪರಿಸ್ಥಿತಿ, ರೈತರಲ್ಲಿ ಮನೆಮಾಡಿದ ಆತಂಕ
Last Updated 2 ಮಾರ್ಚ್ 2017, 7:01 IST
ಅಕ್ಷರ ಗಾತ್ರ

ವಿಜಯಪುರ: ‘ಕುಡಿಯಲು ನೀರಿಲ್ಲ,  ದನಕರುಗಳಿಗೆ ಮೇವಿಲ್ಲ. ಊಟಕ್ಕೂ ಬರ, ಎತ್ತ ಕಣ್ಣು ಹಾಯಿಸಿದರೂ ಬಯಲು ಕಾಣಿಸುತ್ತಿದೆ. ಹಸಿರಿನ ದರ್ಶನವೇ ಇಲ್ಲ. ಇಂತಹ ಸ್ಥಿತಿಯಲ್ಲಿ ಬದುಕಿನ ಬಂಡಿಯನ್ನು ಸಾಗಿಸುವುದು ದುಸ್ತರವಾಗುತ್ತಿದೆ. ಮುಂದಿನ ದಿನಗಳಲ್ಲಿ ಹೇಗೆ ಬದುಕೋದು ಎನ್ನುವ ಚಿಂತೆ ಕಾಡುತ್ತಿದೆ’ ಎಂದು ಹಿರಿಯ ರೈತ ನಂಜಪ್ಪ ಬರಗಾಲವನ್ನು ಕುರಿತು ಆತಂಕ ವ್ಯಕ್ತಪಡಿಸಿದರು.

ನಾಲ್ಕು ವರ್ಷಗಳಿಂದ ಮಳೆಯಾಗಿಲ್ಲ, ಒಂದು ಹೊಲದಲ್ಲೂ ಬೆಳೆಗಳಾಗಿಲ್ಲ, ದನಕರುಗಳು ಮೇವು ನೀರಿಗಾಗಿ ಪರದಾಡುತ್ತಿವೆ. ಒಣಗಿದ ಮೇವು ಮುಟ್ಟುತ್ತಿಲ್ಲ, ಕಣಜಗಳಲ್ಲಿ ರಾಗಿ ಕಾಳಿಲ್ಲ, ಒಂದು ಕ್ವಿಂಟಲ್ ರಾಗಿಯ ಬೆಲೆ ₹4 ಸಾವಿರ ಮುಟ್ಟಿದೆ.

ವಾರದಲ್ಲಿ ಕನಿಷ್ಠ 5 ದಿನಗಳಾದರೂ ಕೂಲಿ ಸಿಗ್ತಿತ್ತು. ಈಗ ವಾರದಲ್ಲಿ ಎರಡು ದಿನ ಕೂಲಿಗೆ ಕರೆಯೋರಿಲ್ಲ. ಒಂದು ಹೊತ್ತು ತಿಂದರೆ ಒಂದು ಹೊತ್ತು ಹಾಗೆಯೇ ಮಲಗಬೇಕಾದಂತಹ ಸ್ಥಿತಿ, ಈ ಕಾಲಕ್ಕೆ ಬಂದಿದೆ ಸ್ವಾಮಿ ಕಣ್ಣು ಕಿವಿಯಿಲ್ಲದ ಸರ್ಕಾರಗಳಿಗೆ ನಮ್ಮ ಗೋಳು ಕೇಳಿಸೊಲ್ಲ ಎಂದು ಅವರು ದುಃಖ ತೋಡಿಕೊಂಡರು.

ತೀವ್ರ ಮಳೆಯ ಕೊರತೆಯಿಂದಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ ಹೋಬಳಿಯ ಬಹುತೇಕ ಹಳ್ಳಿಗಳ ಸ್ಥಿತಿ ಇದಾಗಿದೆ.
ಉಷ್ಣಾಂಶದಲ್ಲೂ ಏರಿಕೆಯಾಗುತ್ತಿದೆ. ಕುರಿ ಮೇಕೆಗಳಿಗೂ ಮೇವುಗಳ ಕೊರತೆ ಕಾಡುತ್ತಿದೆ. ಬೆಳಿಗ್ಗೆ 11 ಗಂಟೆಯ ನಂತರ ಕುರಿಮೇಕೆಗಳನ್ನು ಮೇಯಿಸಲು ಸಾಧ್ಯವಾಗದಷ್ಟು ಬಿಸಿಲು ಬೀಳುತ್ತಿದೆ. ರೈತರು ತಮ್ಮ ತೋಟಗಳಿಗೆ ಡ್ರಿಪ್  ಅಳವಡಿಸಿರುವುದರಿಂದ ನೀರು ಕುಡಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅವುಗಳನ್ನು ಮಾರಾಟ ಮಾಡಲು ತೀರ್ಮಾನಿಸಿದ್ದೇವೆ ಎನ್ನುತ್ತಾರೆ.

ಆರೋಗ್ಯ ಹದಗೆಡುತ್ತಿದೆ: ಬರ ಪರಿಹಾರದಡಿಯಲ್ಲಿ ಸರ್ಕಾರ ಈ ಭಾಗಕ್ಕೆ ಇದುವರೆಗೂ ಯಾವುದೇ ಅನುದಾನಗಳನ್ನು ಬಿಡುಗಡೆ ಮಾಡಿಲ್ಲ, ಶುದ್ಧವಾದ ಕುಡಿಯುವ ನೀರನ್ನು ಕೊಡಲಿಕ್ಕೂ ಸಾಧ್ಯವಾಗುತ್ತಿಲ್ಲ, ಜನರ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಅಲ್ಲಲ್ಲಿ ಒಣಗಿರುವ ಜೋಳದ ಕಡ್ಡಿಗಳನ್ನು ತಂದಿಟ್ಟಿದ್ದಾರೆ. ಇದುವರೆಗೂ ವಿತರಣೆಯಾಗಿಲ್ಲ.

ಜೋಳದ ಕಡ್ಡಿಗಳನ್ನು ಹಸುಗಳು ತಿನ್ನುವುದೂ ಇಲ್ಲ. ದಿನೇ ದಿನೇ ಹಾಲಿನ ಉತ್ಪಾದನೆ ಕಡಿಮೆಯಾಗುತ್ತಿದೆ ಎಂದು ರೈತ ಮುಖಂಡರಾದ ಮಂಡಿಬೆಲೆ ದೇವರಾಜಪ್ಪ, ನಾರಾಯಣಸ್ವಾಮಿ, ಕಲ್ಯಾಣ್ ಕುಮಾರ್ ಬಾಬು, ಹರೀಶ್, ಮುಂತಾದವರು ಹೇಳಿದ್ದಾರೆ.

ಕುಟುಂಬಗಳ ನಿರ್ವಹಣೆ ಕಷ್ಟವಾಗುತ್ತಿದೆ. ಸರ್ಕಾರ ಬರಪೀಡಿತ ಪ್ರದೇಶಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಶೀಘ್ರವಾಗಿ ಬಿಡುಗಡೆ ಮಾಡಬೇಕು. ನೀರಿನಲ್ಲಿ ಸಮೃದ್ಧವಾಗಿರುವ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಂದ ಹಸಿರು ಮೇವು ಖರೀದಿ ಮಾಡಿ ವಿತರಿಸಬೇಕು.

ಈ ಭಾಗದಲ್ಲಿನ ರೈತರು ರಾಷ್ಟ್ರೀಕೃತ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳಲ್ಲಿ ಕೃಷಿ ಉದ್ದೇಶಗಳಿಗೆ ಮಾಡಿರುವ ಸಾಲಗಳನ್ನು ಬಡ್ಡಿ ಸಮೇತ ಮನ್ನಾ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT