ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಗಿ ಕಣಜ’ ಈಗ ಬಣ ಬಣ, ಬಿರುಕು ಬಿಟ್ಟ ನೆಲ

ನೀರಿಲ್ಲದ ಆನೇಕಲ್ ತಾಲ್ಲೂಕಿನಲ್ಲಿ ಈಗ ಅಂತರ್ಜಲ ಕುಸಿತ
Last Updated 2 ಮಾರ್ಚ್ 2017, 7:07 IST
ಅಕ್ಷರ ಗಾತ್ರ

ಆನೇಕಲ್‌: ರಾಗಿ ಕಣಜವೆಂದು ಖ್ಯಾತಿಗಳಿಸಿದ್ದ ಆನೇಕಲ್ ತಾಲ್ಲೂಕು ಬರಗಾಲದಿಂದಾಗಿ ಬಣಗುಡುತ್ತಿದೆ. ಕೆರೆಗಳಲ್ಲಿ ನೀರಿಲ್ಲ, ಅಂತರ್ಜಲ ಕುಸಿತ ಉಂಟಾಗಿದ್ದು ಕೊಳವೆ ಬಾವಿಗಳು ಬರಿದಾಗಿವೆ.

ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗೂ ಪರದಾಡುವಂತಾಗಿದೆ. ಆನೇಕಲ್ ತಾಲ್ಲೂಕಿನ ಗಡಿ ಭಾಗದ ಪಂಚಾಯಿತಿ ಸಮಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲ್ಕು ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬೇಸಿಗೆಯ ಪ್ರಾರಂಭದಲ್ಲಿಯೇ ಎಲ್ಲೆಡೆ ನೀರಿನ ಸಮಸ್ಯೆ ಉಂಟಾಗಿದ್ದು ಮುಂದಿನ ಮೂರು ತಿಂಗಳನ್ನು ಎದುರಿಸುವುದು ಹೇಗೆ ಎಂಬ ಸವಾಲು ಜನರನ್ನು ಕಾಡುತ್ತಿದೆ. 12 ಹಳ್ಳಿಗಳುಳ್ಳ ಸಮಂದೂರು ಗ್ರಾಮ ಪಂಚಾಯಿತಿಯಲ್ಲಿ ಅಂದಾಜು 10,526 ಜನಸಂಖ್ಯೆಯಿದೆ. 12 ಗ್ರಾಮಗಳ ಪೈಕಿ ಗುಡ್ಡನಹಳ್ಳಿ, ಸಬ್‌ಮಂಗಲ, ಕೆಂಪೇಗೌಡ ನಗರ, ಮುತ್ತಗಟ್ಟಿ ಗ್ರಾಮಗಳಿಗೆ ಜನವರಿ ತಿಂಗಳಿನಿಂದಲೂ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

ಜನವರಿ ಒಂದು ತಿಂಗಳಿಗೆ ₹ 1.40 ಲಕ್ಷ ಟ್ಯಾಂಕರ್ ನೀರಿಗಾಗಿ ವೆಚ್ಚ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಹೊಂಪಲಘಟ್ಟ, ಗೆರಟಿಗನಬೆಲೆ ಗ್ರಾಮಗಳಿಗೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕಾಗಿದೆ.

ಪ್ರಸ್ತುತ ಸರಬರಾಜು ಮಾಡುತ್ತಿರುವ ಗ್ರಾಮಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಸರಬರಾಜು ಮಾಡಬೇಕಾಗುತ್ತದೆ. ಹಾಗಾಗಿ ತಿಂಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜಿಗಾಗಿ 8–10ಲಕ್ಷ ಹಣ ವೆಚ್ಚ ಮಾಡಬೇಕಾಗುತ್ತದೆ ಎಂದು ಗ್ರಾಮ ಪಂಚಾಯಿತಿ ಗ್ರೇಡ್ 1 ಕಾರ್ಯದರ್ಶಿ ರಾಘವೇಂದ್ರ ರೆಡ್ಡಿ ಮಾಹಿತಿ ನೀಡಿದರು.

ಗ್ರಾಮಗಳಲ್ಲಿ ಕುಡಿಯುವ ನೀರಿನ ಮೂಲಗಳಾಗಿದ್ದು ಕೊಳವೆ ಬಾವಿಗಳು ಬತ್ತಿ ಹೋಗುತ್ತಿವೆ ಹಾಗೂ ಕಾರ್ಯ ನಿರ್ವಹಿಸುತ್ತಿರುವ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಗ್ರಾಮಗಳಿಗೆ ನೀರು ಪೂರೈಕೆ ಬಹುದೊಡ್ಡ ಸವಾಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 80 ಕೊಳವೆ ಬಾವಿಗಳಿದ್ದವು. 57 ಕೊಳವೆ ಬಾವಿಗಳು ಬತ್ತಿ ಹೋಗಿದ್ದು ಕೇವಲ 23 ಕೊಳವೆ ಬಾವಿಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ.

ಇವುಗಳಿಂದ ದೊರೆಯುವ ನೀರು ಸಹ ಕಡಿಮೆಯಾಗಿರುವುದರಿಂದ ಗ್ರಾಮಗಳಿಗೆ ನೀರು ಪೂರೈಕೆಗೆ ಸಮಸ್ಯೆಯಾಗಿದೆ. 1400 ಅಡಿ ಕೊರೆದರೂ ಸಹ ನೀರು ದೊರೆಯುತ್ತಿಲ್ಲ. ಸಮಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 12ಗ್ರಾಮಗಳಲ್ಲಿ 12 ಕೆರೆಗಳಿವೆ. ಆದರೆ ಗುಡ್ಡನಹಳ್ಳಿ ಕೆರೆ ಹಾಗೂ ಮಾರನಾಯನಹಳ್ಳಿ ಕೆರೆಯಲ್ಲಿ ಸ್ವಲ್ಪ ನೀರಿದೆ. ಉಳಿದಂತೆ 10 ಕೆರೆಗಳು ಸಂಪೂರ್ಣ ಬರಿದಾಗಿವೆ.

ಕೊಳವೆ ಬಾವಿಗಳಲ್ಲಿ ಸಹ ನೀರಿಲ್ಲದಾಗಿರುವುದರಿಂದ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲು ಯಾರು ಮುಂದೆ ಬರುತ್ತಿಲ್ಲ. ಟ್ಯಾಂಕರ್‌ಗೆ ₹ 500 ನೀಡಿದರೂ  ಸರಬರಾಜಿಗೆ ಮುಂದಾಗಿಲ್ಲ. ಟೆಂಡರ್ ಕರೆದರೆ ಯಾರೂ ಟೆಂಡರ್‌ ಹಾಕಿಲ್ಲ ಎಂದು ಪಂಚಾಯಿತಿಯ ಅಧಿಕಾರಿಗಳು ಅಲವತ್ತುಕೊಂಡರು. ಈ ಬೇಸಿಗೆಯನ್ನು ನಿಭಾಯಿಸಿದರೆ ಸಾಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗುಡ್ಡನಹಳ್ಳಿಯ ವಾಟರ್‌ಮೆನ್ ಬಸವರಾಜು ಹೇಳುತ್ತಾರೆ.

ಸಮಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯಿತಿಯಿಂದ 5 ಕೊಳವೆ ಬಾವಿಗಳನ್ನು ಕೊರೆಯಿಸಲಾಗಿದೆ. ಇವುಗಳಲ್ಲಿ ನೀರು ಸಿಕ್ಕಿದೆ. ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಅವಶ್ಯಕತೆ ಇರುವ ಎಲ್ಲೆಡೆ ಕೊಳವೆ ಬಾವಿಗಳನ್ನು ಕೊರೆಯಿಸಿ ನೀರು ಪೂರೈಕೆ ಮಾಡಲು ಪಂಚಾಯಿತಿಗಳೊಂದಿಗೆ ಶ್ರಮಿಸಲಾಗುತ್ತಿದೆ.

ಸಮಂದೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಕುಡಿಯುವ ನೀರು ಪೂರೈಕೆಗಾಗಿ ಜಿಲ್ಲಾ ಪಂಚಾಯಿತಿಯಿಂದ 1.30 ಕೋಟಿ ಹಣ ಮಂಜೂರಾಗಿದೆ. ಗಾಂಧಿನಗರ, ಎಸ್.ಮಡಿವಾಳ, ಸಮಂದೂರು, ಚನ್ನೇನಅಗ್ರಹಾರ, ಕುವೆಂಪುನಗರ, ಹೊಂಪಲಘಟ್ಟ ಗ್ರಾಮಗಳಿಗೆ ಕೊಳವೆ ಬಾವಿಗಳನ್ನು ಶೀಘ್ರದಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ಕೊರೆಯಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಟಿ.ನಾರಾಯಣ್ ತಿಳಿಸಿದರು.

ಆನೇಕಲ್ ತಾಲ್ಲೂಕಿನಲ್ಲಿ ಗಡಿ ಭಾಗದಲ್ಲಿರುವ ಸಮಂದೂರು ಗ್ರಾಮ ಪಂಚಾಯಿತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಗ್ರಾಮಗಳಿಗೆ ನೀರು ಪೂರೈಕೆ ಮಾಡುತ್ತಿದ್ದ ಕೊಳವೆ ಬಾವಿಗಳು ಬತ್ತಿ ಹೋಗಿವೆ. ಹಾಗಾಗಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

ಸಮಂದೂರು ಪಕ್ಕದ ಗ್ರಾಮಗಳಾದ ತಮಿಳುನಾಡಿನ ಕೊಮಾರನಹಳ್ಳಿ, ಮ್ಯಾನಾಗರ, ಸೆಕೆಂಡ್‌ ಮದ್ರಾಸ್, ಪೂನಃಹಳ್ಳಿ ಗ್ರಾಮಗಳಿಗೆ ಕಾವೇರಿ ನೀರು ಪೂರೈಕೆಯಾಗುತ್ತಿದೆ. ಹಾಗಾಗಿ ಗಡಿಭಾಗದ ಸಮಂದೂರು ಪಂಚಾಯಿತಿಗೆ ಸಹ ಆನೇಕಲ್‌ಗೆ ಕಾವೇರಿ ನೀರು ಪೂರೈಕೆಯಾದ ನಂತರ ಸರಬರಾಜು ಮಾಡಬೇಕು ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಿ.ವಿ.ರೆಡ್ಡಿ ಒತ್ತಾಯಿಸಿದರು.

ಬತ್ತಿದ ಕೊಳವೆ ಬಾವಿಗಳು: ಕೃಷಿ, ತೋಟಗಾರಿಕೆಗಾಗಿ ಆನೇಕಲ್ ತಾಲ್ಲೂಕಿನಲ್ಲಿ ಶಾಶ್ವತವಾದ ಯಾವುದೇ ನೀರಾವರಿ ಸೌಲಭ್ಯವಿಲ್ಲ. ಹಾಗಾಗಿ ರೈತರು ನೀರಿಗಾಗಿ ಕೊಳವೆ ಬಾವಿಗಳ ಮೇಲೆ ಅವಲಂಬಿತರಾಗಿದ್ದಾರೆ. ಮಳೆಯಿಲ್ಲದೇ ಕೆರೆಗಳು ಬತ್ತಿ ಹೋಗಿರುವುದರಿಂದ ಅಂತರ್ಜಲ ಕುಸಿತ ಉಂಟಾಗಿ ಇದ್ದಕ್ಕಿದ್ದಂತೆ ಕೊಳವೆ ಬಾವಿಗಳು ಬತ್ತಿ ಹೋಗಿವೆ. 

ತಿಮ್ಮಸಂದ್ರ ಗ್ರಾಮದ ಪುಟ್ಟಪ್ಪ, ರಾಮಣ್ಣ, ಮಡಿವಾಳ ಗ್ರಾಮದ ಮಾಣಿಕ್ಯಪ್ಪ, ಪಾಪಯ್ಯ ಅವರಿಗೆ ಸೇರಿದ ಕೊಳವೆ ಬಾವಿಗಳು ಕಳೆದ ಒಂದು ವಾರದಿಂದ ಬತ್ತಿ ಹೋಗಿದ್ದು ಮಳೆಯಿಲ್ಲದ್ದರೆ ತೋಟಗಳನ್ನು ಮಾಡುವುದು ಅತ್ಯಂತ ಕಷ್ಟವಾಗುತ್ತದೆ ಎಂದು ಗ್ರಾಮಸ್ಥರು ಅಲವತ್ತುಕೊಳ್ಳುತ್ತಿದ್ದ ದೃಶ್ಯ ಕಂಡು ಬಂದಿತು.
ಸಬ್‌ಮಂಗಲ ಗ್ರಾಮದ ಮುನಿಯಪ್ಪ ಅವರನ್ನು ಮಾತನಾಡಿಸಿದಾಗ ಕೊಳವೆ ಬಾವಿ ಮೂಲಕ ತೋಟ ಮಾಡಲಾಗುತ್ತಿತ್ತು.

ಇದೀಗ ಕುಡಿಯುವ ನೀರಿಗೂ  ಸಮಸ್ಯೆ ಉಂಟಾಗಿದೆ. ಜಾನುವಾರುಗಳಿಗೆ ನೀರಿಗಾಗಿ ಟ್ಯಾಂಕರ್‌ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದೆ. ರೈತರು ಜೀವನ ಮಾಡುವುದಾದರೂ ಹೇಗೆ ಎಂದು ಪ್ರಶ್ನೆ ಮಾಡಿದರು. ನೀರಿದ್ದರೆ ಕಷ್ಟಪಟ್ಟು ಜೀವನ ಸಾಗಿಸುತ್ತೇವೆ. ತ್ವರಿತವಾಗಿ ಶಾಶ್ವತ ನೀರಾವರಿ ಯೋಜನೆಗಳ ಬಗ್ಗೆ ಗಮನ ಹರಿಸಬೇಕು ಎಂದರು.

ಸಿಮೆಂಟ್ ಡ್ರಮ್‌ಗಳು: ಗ್ರಾಮಗಳಲ್ಲಿ ಜಾನುವಾರುಗಳಿಗೆ ಹಾಗೂ ದಿನಬಳಕೆಗೆ ನೀರನ್ನು ಸಂಗ್ರಹಿಸಲು ಸಂಪ್‌ಗಳಿಲ್ಲ. ಹಾಗಾಗಿ ಸಿಮೆಂಟ್ ಡ್ರಮ್‌ಗಳನ್ನು ಮನೆಯ ಮುಂದೆ ನಿರ್ಮಿಸಿಕೊಂಡು ಟ್ಯಾಂಕರ್ ನೀರು ಬಂದಾಗ ಸಂಗ್ರಹ ಮಾಡಿಕೊಳ್ಳುವುದು ಕಂಡು ಬಂದಿತು.

ಬೇಸಿಗೆ ಕಾಲದಲ್ಲಿ ಬೆಳೆ ಮತ್ತು ಜಾನುವಾರುಗಳನ್ನು ಸಾಕುವುದು ತುಂಬಾ ಕಷ್ಟವಾಗಿದೆ. 1400 ಅಡಿ ಕೊರೆದರೂ  ಕೊಳವೆ ಬಾವಿಗಳಲ್ಲಿ ನೀರು ಬರುತ್ತಿಲ್ಲ. ಕೊಳವೆ ಬಾವಿ ಕೊರೆಯಿಸಿದಾಗ ಸ್ವಲ್ಪ ನೀರು ಸಿಕ್ಕಿದರೂ ಬೇಗನೇ ಬತ್ತಿ ಹೋಗುತ್ತಿವೆ. ರೈತರ ಜೀವನ ಕಷ್ಟವಾಗಿದೆ ಎಂದು ಸಬ್‌ಮಂಗಲ ರೈತ ಮುನಿಯಪ್ಪ ಹೇಳುತ್ತಾರೆ.        
– ಶಿವಣ್ಣ ಆನೇಕಲ್

*
ಸಮಂದೂರು ಗ್ರಾಪಂ  ಗಡಿ ಭಾಗವಾಗಿದ್ದು ನೆರೆಯ ತಮಿಳುನಾಡಿನ ಗ್ರಾಮಗಳಿಗೆ ಕಾವೇರಿ ನೀರು ಪೂರೈಕೆ ಮಾಡಲಾಗುತ್ತಿದೆ. ಸಮಂದೂರು ಗ್ರಾಮ ಪಂಚಾಯಿತಿಗೂ ಸಹ ಕಾವೇರಿ ನೀರು ಪೂರೈಕೆ ಮಾಡಬೇಕು.
-ಜಿ.ವಿ.ರೆಡ್ಡಿ,  ಸಮಂದೂರು ಗ್ರಾಪಂ  ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT