ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರವಣ ಮಾಂದ್ಯರ ಶಾಲೆ ಆರಂಭಿಸಲು ಆಗ್ರಹ

ಜಿಲ್ಲಾ ಕಿವುಡರ ಸಂಘದಿಂದ ಪ್ರತಿಭಟನಾ ಮೆರವಣಿಗೆ
Last Updated 2 ಮಾರ್ಚ್ 2017, 7:29 IST
ಅಕ್ಷರ ಗಾತ್ರ

ಬೀದರ್: ರಾಜ್ಯದ ಎಲ್ಲ  ಜಿಲ್ಲೆಗಳಲ್ಲಿ ಶ್ರವಣ ಮಾಂದ್ಯರ ಶಾಲೆ ಆರಂಭಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶ್ರವಣ ಮಾಂದ್ಯರು ನಗರದಲ್ಲಿ ಬುಧವಾರ ಧರಣಿ ನಡೆಸಿದರು.

ಜಿಲ್ಲಾ ಕಿವುಡರ ಸಂಘದ ನೇತೃತ್ವದಲ್ಲಿ  ನಗರದ ಅಂಬೇಡ್ಕರ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಶ್ರವಣ ಮಾಂದ್ಯರು ಬಳಿಕ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲಕಾಲ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ಅಧಿಕಾರಿಗೆ ಸಲ್ಲಿಸಿದರು.

ರಾಜ್ಯದ ಮೈಸೂರು, ಕಲಬುರ್ಗಿ, ಬಳ್ಳಾರಿ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಮಾತ್ರ ಶ್ರವಣ ಮಾಂದ್ಯರ ಶಾಲೆಗಳು ಇವೆ. ಇನ್ನೂ 26 ಜಿಲ್ಲೆಗಳಲ್ಲಿ ಈ ಶಾಲೆಗಳ ಸೌಲಭ್ಯ ಇಲ್ಲದ ಕಾರಣ ಶ್ರವಣ ಮಾಂದ್ಯರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕೂಡಲೇ ಉಳಿದ ಜಿಲ್ಲೆಗಳಲ್ಲೂ ಶ್ರವಣ ಮಾಂದ್ಯರ ಶಾಲೆಗಳು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಶ್ರವಣ ಮಾಂದ್ಯರ ಶಾಲಾ, ಕಾಲೇಜು ಹಾಗೂ ಐಟಿಐ ಸಂಸ್ಥೆಗಳಲ್ಲಿ ಸನ್ನೆಯಿಂದ ಪಾಠ ಮಾಡುವ ಶಿಕ್ಷಕರ ಸಂಖ್ಯೆ ಕೊರತೆ ಇದೆ. ಇಂದರಿಂದ ಶ್ರವಣ ಮಾಂದ್ಯರ ಶಿಕ್ಷಣ ಕುಂಠಿತವಾಗುತ್ತಿದೆ. ಕೂಡಲೇ ಸರ್ಕಾರ ಶಿಕ್ಷಕರಿಗೆ ಸಂಕೇತ (ಸಂಜ್ಞೆ) ಭಾಷೆಯ ತರಬೇತಿಯನ್ನು ನೀಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿ ಕಚೇರಿ, ಪುರಸಭೆ, ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ, ಕೆಎಂಎಫ್‌ಕೆ, ನೀರಾವರಿ ಇಲಾಖೆಗಳಲ್ಲಿ ಇರುವ ಸಿ ಹಾಗೂ ಡಿ ದರ್ಜೆ ಹುದ್ದೆಗಳ ನೇಮಕಾತಿಯಲ್ಲಿ ಮೀಸಲಾತಿ ಒದಗಿಸಬೇಕು.

ಸದ್ಯ ಜಾರಿಯಲ್ಲಿ ಇರುವ ಅಂಗವಿಕಲರ ಮೀಸಲಾತಿಯಿಂದ ಶ್ರವಣ ಮಾಂದ್ಯರಿಗೆ ಯಾವುದೇ ಪ್ರಯೋಜನೆಯಾಗುತ್ತಿಲ್ಲ. ಆದ್ದರಿಂದ ಈ ಮೀಸಲಾತಿ ಪ್ರಮಾಣ ಶೇ 3 ರಿಂದ 20ರ ವರೆಗೆ ಹೆಚ್ಚಿಸಬೇಕು. ಕಿವುಡ–ಮೂಕ ಕ್ರೀಡಾಪಟುಗಳಿಗೆ ಸಹಾಯಧನ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಕಿವುಡ–ಮೂಕರಿಗೆ ರಾಜ್ಯದ ಮೈಸೂರಿನಲ್ಲಿ ಮಾತ್ರ ವೈದ್ಯಕೀಯ ಪ್ರಮಾಣಪತ್ರ ವಿತರಿಸಲಾಗುತ್ತಿದೆ. ಇದರಿಂದ ಅಲ್ಲಿಗೆ ತೆರಳಿ ವೈದ್ಯಕೀಯ ಪ್ರಮಾಣಪತ್ರ ಪಡೆಯಲು ತುಂಬಾ ಕಷ್ಟವಾಗುತ್ತಿದೆ. ಅಲ್ಲದೇ, ಬಹಳಷ್ಟು ಹಣ ಖರ್ಚಾಗುತ್ತಿದೆ. ಆದ್ದರಿಂದ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರದಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಪ್ರಮಾಣ ಪತ್ರ ಸರಳವಾಗಿ ವಿತರಿಸುವ ವ್ಯವಸ್ಥೆ ಜಾರಿಗೊಳಿಸಬೇಕು.

ಪಿಂಚಣಿ ಹಣವನ್ನು ಒಂದು ಸಾವಿರದಿಂದ ಐದು ಸಾವಿರದ ವರೆಗೆ ಹೆಚ್ಚಿಸಿ ನೇರವಾಗಿ ಬ್ಯಾಂಕ್‌ ಖಾತೆ ಜಮಾ ಮಾಡಬೇಕು. ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ನಡೆಯುವ ನೇಮಕಾತಿಯಲ್ಲಿ ಶೇ 5 ರಷ್ಟು ಮೀಸಲಾತಿ ಕಲ್ಪಿಸಬೇಕು, ಸ್ವಉದ್ಯೋಗ ಆರಂಭಿಸಲು ರಿಯಾಯಿತಿ ದರದಲ್ಲಿ ಸಹಾಯಧನ ಹಾಗೂ ಸಾಲ ನೀಡಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ಕಿವುಡರ ಕಲ್ಯಾಣ ಸಂಘದ ಗೌರವಾಧ್ಯಕ್ಷ ಕೆ.ಎಚ್‌. ಶಂಕರ, ಪ್ರಧಾನ ಕಾರ್ಯದರ್ಶಿ ಎಚ್‌.ಎಸ್. ದೇವರಾಜ, ಜಿಲ್ಲಾ ಕಿವುಡರ ಸಂಘದ ಉಪಾಧ್ಯಕ್ಷ ಸತೀಶ ಬೀರನೂರ, ಪ್ರಧಾನ ಕಾರ್ಯದರ್ಶಿ ಗೋವಿಂದರೆಡ್ಡಿ ಪಾಟೀಲ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT