ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದ ಹಿಂಸಾಚಾರ ಖಂಡಿಸಿ ಪ್ರತಿಭಟನೆ

ಧರಣಿ ಸತ್ಯಾಗ್ರಹದಲ್ಲಿ ಜಿಲ್ಲೆಯ ಮಠಾಧೀಶರು ಭಾಗಿ
Last Updated 2 ಮಾರ್ಚ್ 2017, 7:30 IST
ಅಕ್ಷರ ಗಾತ್ರ

ಬೀದರ್: ಕೇರಳದಲ್ಲಿ ಕಮ್ಯುನಿಸ್ಟ್‌ ಪಕ್ಷದ ಕಾರ್ಯಕರ್ತರು ನಡೆಸುತ್ತಿದ್ದಾರೆ ಎನ್ನಲಾದ ಹಿಂಸಾಚಾರವನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್‌ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಮಾನವ ಹಕ್ಕುಗಳ ಸಂರಕ್ಷಣಾ ವೇದಿಕೆ  ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದಲ್ಲಿ ಬುಧವಾರ  ಪ್ರತಿಭಟನೆ ನಡೆಸಿದರು.

ನಗರದ ನೆಹರೂ ಕ್ರೀಡಾಂಗಣದಿಂದ ಅಂಬೇಡ್ಕರ್‌ ವೃತ್ತ, ಬಸವೇಶ್ವರ ವೃತ್ತ, ಭಗತ್‌ಸಿಂಗ್‌ ವೃತ್ತದ ಮಾರ್ಗವಾಗಿ ಶಿವಾಜಿ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ರಸ್ತೆ ಮೇಲೆ ಹಾಕಲಾದ ಪೆಂಡಾಲ್‌ನಲ್ಲಿ ಧರಣಿ ನಡೆಸಿ ರಾಷ್ಟ್ರಪತಿಗೆ ಬರೆದ ಮನವಿ ಪತ್ರವನ್ನು ಉಪವಿಭಾಗಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಿದರು.

ಕೇರಳದಲ್ಲಿ ಅಲ್ಲಿನ ಸರ್ಕಾರವೇ ಧಾರ್ಮಿಕ ಹಕ್ಕುಗಳಿಗೆ ಧಕ್ಕೆ ಉಂಟು ಮಾಡುವ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿದೆ. ಅಲ್ಲಿ ಕಮ್ಯುನಿಸ್ಟ್‌ ಕಾರ್ಯಕರ್ತರು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಬಿಜೆಪಿ ಕಾರ್ಯಕರ್ತರನ್ನು ವ್ಯವಸ್ಥಿತವಾಗಿ ಹತ್ಯೆ ಮಾಡುತ್ತಿದ್ದಾರೆ. ಈವರೆಗೆ ಸುಮಾರು 280ಕ್ಕೂ ಅಧಿಕ ಕಾರ್ಯಕರ್ತರ ಕೊಲೆ ನಡೆದಿದೆ. ಕಮ್ಯುನಿಸ್ಟ್‌ರ ಸಾಮಾಜಿಕ ನ್ಯಾಯವೇ ಎಂದು ಪ್ರಶ್ನಿಸಿದರು.

ಕಮ್ಯುನಿಸ್ಟ್‌ ಕಾರ್ಯಕರ್ತರು ಜಿಹಾದ್‌ ಸಂಘಟನೆಗಳ ಬೆಂಬಲ ಪಡೆದು ತಮ್ಮ ಪಕ್ಷದ ವಿಚಾರಗಳನ್ನು ಒಪ್ಪಿಕೊಳ್ಳದ ಇತರ ಸಂಘಟನೆಗಳ ಕಾರ್ಯಕರ್ತರನ್ನು ಹತ್ಯೆ ಮಾಡುತ್ತಿದ್ದಾರೆ. ಈ ಕೃತ್ಯಕ್ಕೆ ಕಣ್ಣೂರು ಕೇಂದ್ರ ಸ್ಥಾನವಾಗಿದೆ. ಕೇರಳದ 10 ಜಿಲ್ಲೆಗಳಲ್ಲಿ ಹಿಂಸಾಚಾರ ಹರಡಿದೆ ಎಂದು ಆರೋಪಿಸಿದರು.

2016ರ ಮೇ 19 ರಂದು ಕೇವಲ ಮೂರು ಗಂಟೆಯಲ್ಲಿ 55 ಹಿಂಸಾಚಾರ ಘಟನೆಗಳು ನಡೆದಿವೆ. ಕೇರಳದಲ್ಲಿ ನಡೆಯುತ್ತಿದೆ ಎನ್ನಲಾದ ಹಿಂಸಾಚಾರಕ್ಕೆ ಕಡಿವಾಣ ಹಾಕಬೇಕು. ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ಸಸ್ತಾಪುರದ ಈಶ್ವರಾನಂದ ಸ್ವಾಮೀಜಿ, ಹಲಬರ್ಗಾದ ಹಾವಗಿಲಿಂಗೇಶ್ವರ ಶಿವಾಚಾರ್ಯ, ಮುಚಳಂಬದ ಪ್ರಣವಾನಂದ ಸ್ವಾಮೀಜಿ, ಗಡಿಗೌಡಗಾಂವ್‌ನ ಶಾಂತವೀರ ಶಿವಾಚಾರ್ಯ, ಮಾನವ ಹಕ್ಕುಗಳ ಸಂರಕ್ಷಣಾ ವೇದಿಕೆ ಜಿಲ್ಲಾ ಘಟಕದ ಸಂಯೋಜಕ ಶಿವಶರಣಪ್ಪ ಪಾಟೀಲ, ಮುಖ್ಯ ವಕ್ತಾರ ನಾಗೇಶ, ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ರಾಮಕೃಷ್ಣ ಸಾಳೆ  ಪ್ರತಿಭಟನೆಯಲ್ಲಿ  ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT