ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಧಾರ್‌’ಗಾಗಿ ತಪ್ಪದ ಜನರ ಪರದಾಟ

ಆಧಾರ್‌ ಸಂಖ್ಯೆ ನೋಂದಣಿ; ಕಂಪ್ಯೂಟರ್‌, ತಂತ್ರಾಂಶ ಸಮಸ್ಯೆ ಹೇಳುವ ಸಿಬ್ಬಂದಿ
Last Updated 2 ಮಾರ್ಚ್ 2017, 8:47 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಇತ್ತೀಚಿನ ದಿನಗಳಲ್ಲಿ ಸರ್ಕಾರದ ಆದೇಶದಂತೆ ಎಲ್ಲ ಕೆಲಸ ಗಳಿಗೂ ಆಧಾರ್ ಸಂಖ್ಯೆ ಕಡ್ಡಾಯ. ಆದರೆ ಆಧಾರ್‌ ನೋಂದಣಿಗೆ ತಾಲ್ಲೂಕು ಕಚೇರಿಗೆ ಬಂದರೆ ಇಲ್ಲಿ ತಂತ್ರಾಂಶ ಸರಿಯಿಲ್ಲ ಎಂದು ನೋಂದಣಿ ಬಂದ್‌ ಮಾಡಿದ್ದಾರೆ. ಇದರಿಂದಾಗಿ ಸಾರ್ವಜನಿಕರು ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್‌ ಹೋಗುತ್ತಿದ್ದಾರೆ.

ಆಧಾರ್‌ ನೋಂದಣಿಗೆ ಶಾಲಾ ಮಕ್ಕಳು ಶಾಲೆಗೆ ಹೋಗುವುದನ್ನು ಬಿಟ್ಟು ಇಲ್ಲಿಗೆ ಬರಬೇಕಿದೆ. ಹಿರಿಯ ನಾಗರಿಕರ ಪಿಂಚಣಿಗೆ, ಸರ್ಕಾರಿ ಸೇವೆಯಲ್ಲಿರು ವವರಿಗೆ, ಬ್ಯಾಂಕ್ ಖಾತೆ ತೆರೆಯಲು, ಪಡಿತರ ಪಡೆಯಲು, ರೋಗಿಗಳಿಗೆ ರಿಯಾಯಿತಿ ದೊರೆಯಲು ಎಲ್ಲದಕ್ಕೂ ಆಧಾರ್ ಕಾರ್ಡ್‌ ಅವಶ್ಯಕವಾಗಿದೆ. ಆದರೆ ತಾಲ್ಲೂಕು ಕೇಂದ್ರದಲ್ಲಿ ಆಧಾರ್ ನೋಂದಣಿ ಮಾಡುತ್ತಿಲ್ಲ. ವಾರದಿಂದ ನಿತ್ಯ ಸಾರ್ವಜನಿಕರು ಮತ್ತು ಶಾಲಾ ಮಕ್ಕಳು ತಾಲ್ಲೂಕು ಕಚೇರಿಗೆ ಬಂದು ಹೋಗುವುದು ಸಾಮಾನ್ಯವಾಗಿದೆ.

ದಿನನಿತ್ಯ ಗ್ರಾಮಾಂತರ ಪ್ರದೇಶಗಳಿಂದ 25ಕ್ಕೂ ಹೆಚ್ಚು ಕಿ.ಮೀ ದೂರದ ಹಳ್ಳಿಗಳಿಂದ ಆಧಾರ್ ಕಾರ್ಡ್‌ ಮಾಡಿಸ ಬೇಕೆಂದು ಕೆಲಸಕಾರ್ಯ, ಕೂಲಿಗಳನ್ನು ಬಿಟ್ಟು ಬರುತ್ತಿದ್ದಾರೆ. ಆದರೆ ಇಲ್ಲ, ಕಂಪ್ಯೂಟರ್ ಸರಿ ಇಲ್ಲ, ತಂತ್ರಾಂಶ ದುರಸ್ತಿಯಲ್ಲಿದೆ ಎಂಬ ಉತ್ತರಗಳನ್ನು ನೀಡುತ್ತಾ ಸಿಬ್ಬಂದಿ ಕಾಲ ತಳ್ಳುತ್ತಿದ್ದಾರೆ.

ತಾಲ್ಲೂಕು ಕೇಂದ್ರ ಮತ್ತು ಹೋಬಳಿ ಮಟ್ಟದಲ್ಲಿ ಸರ್ಕಾರದ ಕಂದಾಯ ಇಲಾಖೆಯಡಿಯಲ್ಲಿ ಬರುವ  ನಾಡ ಕಚೇರಿಗಳಲ್ಲಿ ಆಧಾರ್ ತಂತ್ರಾಂಶವನ್ನು ಆಳವಡಿಸಲಾಗಿದೆ.

ಆದರೆ ಗುಂಡ್ಲುಪೇಟೆ ತಾಲ್ಲೂಕಿನ ನಾಲ್ಕು ಹೋಬಳಿ ಕೇಂದ್ರ ಗಳಲ್ಲಿ ಆಧಾರ್ ನೋಂದಣಿ ಕೇಂದ್ರ ಸ್ಥಗಿತ ಗೊಂಡಿದೆ. ಇದರಿಂದ ಜಿಲ್ಲಾ ಕೇಂದ್ರಕ್ಕೆ ಹೋಗಿ ನೋಂದಣಿ ಮಾಡಿ ಕೊಳ್ಳಬೇಕಾಗಿದೆ. 

ಈ ಬಗ್ಗೆ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ  ಶೀಘ್ರ ಕ್ರಮ ಕೈ ಗೊಂಡು ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಿ, ಅನುಕೂಲ ಮಾಡಿ ಕೊಡುವಂತೆ ಒತ್ತಾಯಿಸಿದ್ದಾರೆ.

ಮೂರು ದಿನಗಳಿಂದ ಸುತ್ತಾಟ
ಗುಂಡ್ಲುಪೇಟೆ:
ಸತತ ಮೂರು ದಿನಗಳಿಂದ ಶಾಲಾ ಮಕ್ಕಳನ್ನು ಆಧಾರ್ ಕಾರ್ಡ್‌ ನೋಂದಣಿಗೆ ಕರೆದುಕೊಂಡು ಬಂದು ಹೋಗುತ್ತಿದ್ದೇನೆ. ಆದರೆ ಇಲ್ಲಿನ ಸಿಬ್ಬಂದಿ ನಿತ್ಯ ಒಂದಿಲ್ಲೊಂದು ಕಾರಣ ಹೇಳುತ್ತಿದ್ದಾರೆ. ನಿತ್ಯ ಬಸ್‌ ಚಾರ್ಜ್‌ ಕೊಡುವವರು ಯಾರು? ಎಂದು ಪ್ರಶ್ನಿಸುತ್ತಾರೆ ಆಲತ್ತೂರು ನಿವಾಸಿ ಮುಕುಂದ.

*
ಆಧಾರ್ ತಂತ್ರಾಂಶ ಅಪ್‌ಡೆಟ್ ಆಗುತ್ತಿದೆ. ಆದ್ದರಿಂದ ಕೆಲ ದಿನಗಳ ವರೆಗೆ ಸ್ಥಗಿತ ಮಾಡಲಾಗಿದ್ದು, ಕೂಡಲೇ ಪುನಃ ಆರಂಭಿಸಲಾಗುವುದು.
-ರಾಮಪ್ರಸಾದ್,
ಆಧಾರ್ ಜಿಲ್ಲಾ ಸಂಯೋಜಕರು

*
ಆಧಾರ್ ಕಾರ್ಡ್‌ ನೋಂದಣಿ ಏಕೆ ನಿಲ್ಲಿಸಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ.  ಕೂಡಲೇ ಆಧಾರ್ ಕಾರ್ಡ್‌ ನೋಂದಣಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು.
-ಕೆ.ಸಿದ್ದು
ತಹಶೀಲ್ದಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT