ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಂ ಕುಡಿಯುವ ನೀರಿಗೆ ₹ 100!

ಪಾಲೆಮಾಡು ಗ್ರಾಮ: ಪಂಚಾಯಿತಿ ನೀರಿಗಾಗಿ ಜನರ ಪರದಾಟ
Last Updated 2 ಮಾರ್ಚ್ 2017, 9:14 IST
ಅಕ್ಷರ ಗಾತ್ರ

ನಾಪೋಕ್ಲು:  ಎರಡು ಗಂಟೆ ಕಾದರೂ ಎರಡು ಕೊಡ ನೀರು ಸಿಗುತ್ತಿಲ್ಲ...
– ಇದು ಪಾಲೆಮಾಡುವಿನ ಕಾರ್ಮಿಕ ಮಹಿಳೆ ಲಲಿತ ಅವರ ಅಳಲು. ಕೂಲಿ ಕೆಲಸ ಪೂರೈಸಿ ಬಂದು ಕುಡಿಯುವ ನೀರಿಗಾಗಿ ಇಲ್ಲಿ ಗಂಟೆಗಟ್ಟಲೆ ಕಾಯಬೇಕು. ಪಂಚಾಯಿತಿ ಎರಡು ದಿನಗಳಿಗೆ ಒಮ್ಮೆ ನೀರು ಬಿಡುತ್ತದೆ.

ಹಾಗೆ ಸಿಗುವ ನಾಲ್ಕು ಬಿಂದಿಗೆ ನೀರಿಗೆ ಕಾದು ನಿಂತವರ ಸಂಖ್ಯೆ ಸಾಕಷ್ಟು ದೊಡ್ಡದು. ಹಾಗಾಗಿ, ನೀರಿಗಾಗಿ ಈ ಗ್ರಾಮಸ್ಥರು ಪಡುವ ಪರಿಪಾಟಲು ಹೇಳತೀರದು. ಇದು ಒಂದೆರಡು ದಿನಗಳ ಕಥೆಯಲ್ಲ. ಹತ್ತು ವರ್ಷಗಳಿಂದ ಪಾಲೆಮಾಡು ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆ ಅನುಭವಿಸುತ್ತಲೇ ಬಂದಿದ್ದಾರೆ.

ಬರದಿಂದಾಗಿ ಈ ವರ್ಷ ಸಮಸ್ಯೆ ಮತ್ತಷ್ಟು ಉಲ್ಭಣಿಸಿದೆ. ಮಡಿಕೇರಿ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವ ಗ್ರಾಮಗಳ ಪಟ್ಟಿಯಲ್ಲಿ ಒಂದಾಗಿರುವ ಸಮೀಪದ ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲೆಮಾಡು ನಿವಾಸಿಗಳಿಗೆ ಹನಿನೀರಿಗೆ ನೂರು ಬೆಲೆ ಎಂಬಂತಾಗಿದೆ. ಬೇಸಿಗೆಗೂ ಮುನ್ನ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ.

ಪಾಲೆಮಾಡಿನಲ್ಲಿ ವಾಸವಾಗಿರುವ ಸುಮಾರು ಮುನ್ನೂರಕ್ಕೂ ಅಧಿಕ ಕುಟುಂಬಗಳು ಪಂಚಾಯಿತಿ ನೀರನ್ನು ಮನೆಬಳಕೆಗೆ ಅವಲಂಬಿಸಿಕೊಂಡಿದ್ದಾರೆ. ಬಹುತೇಕ ಮಂದಿ ಕೂಲಿ ಕಾರ್ಮಿಕರು. ಎರಡು ದಿನಗಳಿಗೊಮ್ಮೆ  ಪೂರೈಕೆಯಾಗುವ ನೀರು ಸಂಜೆ 3ರಿಂದ 5.30ರವರೆಗೆ ಪೈಪ್‌ಗಳಲ್ಲಿ ಹರಿದುಬಂದರೆ ನೀರು ಹಿಡಿದಿಡಲು ಉದ್ದನೆಯ ಕ್ಯೂ. 3–4 ಸದಸ್ಯರಿರುವ ಕುಟುಂಬಕ್ಕೆ ಸಿಗುವುದು ನಾಲ್ಕಾರು ಕೊಡ ನೀರು. ಅದಕ್ಕಾಗಿ ಮಹಿಳೆಯರು, ಮಕ್ಕಳು, ಯುವಕರು ಸಾಲಾಗಿ ನಿಲ್ಲುವ ದೃಶ್ಯ ಇಲ್ಲಿ ಸಾಮಾನ್ಯ.

ಹೊದ್ದೂರು ಗ್ರಾಮ ಪಂಚಾಯಿತಿ ವತಿಯಿಂದ ವಾಟೆಕಾಡಿನ ಸರ್ಕಾರಿ ಶಾಲೆಯ ಬಳಿ ನಿರ್ಮಿಸಲಾಗಿರುವ ನೀರಿನ ಟ್ಯಾಂಕ್‌ನಿಂದ ನೀರು ಪೂರೈಸಲಾಗುತ್ತಿದೆ. ಪಂಪ್‌ ಕೆಟ್ಟರೆ, ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾದರೆ ಈ ನೀರಿಗೂ ತತ್ವಾರ.

ನೀರಿಗಾಗಿ ಇಲ್ಲಿನ ನಿವಾಸಿಗಳು ವರ್ಷಗಳ ಹಿಂದೆ ಪಂಚಾಯಿತಿ ಎದುರು ಖಾಲಿಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ. ನಮ್ಮ ಕೂಗಿಗೆ ಸ್ಪಂದನೆ ಸಿಕ್ಕಿಲ್ಲ. ಕುಡಿಯುವ ನೀರಿನ ಸಮಸ್ಯೆ ನೀಗಿಲ್ಲ ಎನ್ನುತ್ತಾರೆ ಸ್ಥಳಿಯ ನಿವಾಸಿ ಬಹುಜನ ಕಾರ್ಮಿಕ ಸಂಘದ ಕಾರ್ಯದರ್ಶಿ ಪೂವಣ್ಣಿ.

ಈ ವ್ಯಾಪ್ತಿಯಲ್ಲಿ ನಾಲ್ಕು ಬಾವಿಗಳಿದ್ದು ಒಂದನ್ನು ಹೊರತುಪಡಿಸಿ ಮತ್ತೆಲ್ಲದರ ತಳ ಕಾಣುತ್ತಿದೆ. ಪಾಲೆಮಾಡು ದರ್ಗಾದ ಬಳಿಯೂ ಒಂದು ಬಾವಿಯಿದ್ದು ಅದರಲ್ಲೂ ನೀರು ತಳಸೇರಿದೆ. ಇಲ್ಲಿನ ಅಲ್ಪಸಂಖ್ಯಾತ ಮಹಿಳೆಯರೂ ನೀರಿಗಾಗಿ ಮಾರು ದೂರ ಸಾಗುತ್ತಾರೆ.

ಪಾಲೆ ಮಾಡು ವಿಗೆ ಸಾಗುವ ರಸ್ತೆಯಲ್ಲಿ ನಾಲ್ಕು ಕೊಳ ವೆಗಳಿವೆ. ಒಂದು ಕೊಳಾಯಿ ಗುಂಡಿ ಯಲ್ಲಿದ್ದು ಕಾರ್ಮಿಕ ಮಹಿಳೆಯರಿಗೆ ನೀರೆತ್ತುವುದೇ ಸವಾಲಾಗಿದೆ. ಟ್ಯಾಂಕ್‌ ನೀರು ಸಿಕ್ಕರೆ ಪುಣ್ಯ. ಇಲ್ಲದಿದ್ದರೆ ಕೊಳವೆ ಬಾವಿಯ ನೀರೇ ಗತಿ ಎನ್ನುತ್ತಾ ಇತ್ತೀಚೆಗೆ ದುರಸ್ತಿಪಡಿಸಿದ ಕೊಳವೆ ಬಾವಿಯಿಂದ ನೀರು ತೆಗೆದು ಸೈಕಲ್‌ ಮೂಲಕ ಕೊಂಡೊಯ್ಯುತ್ತಿದ್ದ ಕಾರ್ಮಿಕ ಯುವಕ ಮುತ್ತಪ್ಪ ಹೇಳಿದರು.

ಕೊಳವೆ ಬಾವಿಯ ನೀರು ಬಳಕೆಗೆ ಯೋಗ್ಯವಾಗಿಲ್ಲ. ಹಾಗಿದ್ದೂ ನಿವಾಸಿಗಳಿಗೆ ಅದೇ ನೀರು ಗತಿಯಾಗಿದೆ. ಇನ್ನು ನೀರು ಪೂರೈಕೆಯಾಗದಿರುವ ದಿನಗಳಲ್ಲಿ ಅಥವಾ ಹೆಚ್ಚು ನೀರು ಬೇಕೆಂದವರಿಗೆ ಬಲಮುರಿ ಹೊಳೆಯಿಂದ ನೀರು ಪೂರೈಸಲಾಗುತ್ತಿದೆ.

ಒಂದು ಡ್ರಂ ನೀರಿಗೆ ₹ 100 ಕೊಟ್ಟು ಖರೀದಿಸುವ ಪರಿಸ್ಥಿತಿ ಇಲ್ಲಿನವರದ್ದು. ಕಾವೇರಿ ನದಿಯ ತವರಿನ, ಪುಣ್ಯಕ್ಷೇತ್ರ ಬಲಮುರಿಯ ಸನಿಹದ ಪಾಲೆಮಾಡು ನಿವಾಸಿಗಳಿಗೆ ಮಾತ್ರ ನೀರಿನ ಕೊರತೆಯ ಬಿಸಿ ಮುಟ್ಟಿದೆ.
-ಸಿ.ಎಸ್‌. ಸುರೇಶ್‌

*
ಖಾಲಿಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದೇವೆ, ಜಿಲ್ಲಾಡಳಿತಕ್ಕೆ ಮನವಿಯನ್ನೂ ಸಲ್ಲಿಸಿದ್ದೇವೆ. ಆದರೂ, ನಮ್ಮ ಕೂಗಿಗೆ ಸ್ಪಂದನೆ ಸಿಕ್ಕಿಲ್ಲ. ನೀರಿನ ಸಮಸ್ಯೆ ನೀಗಿಲ್ಲ.
-ಪೂವಣ್ಣಿ,
ಕಾರ್ಯದರ್ಶಿ, ಬಹುಜನ ಕಾರ್ಮಿಕ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT