ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 592 ಕೋಟಿ ಬೇಡಿಕೆ ಪ್ರಸ್ತಾವ

ಬರಗಾಲ ನಿರ್ವಹಣೆ; ರಾಜ್ಯ ಬಜೆಟ್‌ನಲ್ಲಿ ಸಿಗಲಿದೆಯೇ ಜಿಲ್ಲೆಗೆ ಪ್ರಾಶಸ್ತ್ಯ?
Last Updated 2 ಮಾರ್ಚ್ 2017, 9:27 IST
ಅಕ್ಷರ ಗಾತ್ರ

ಮಂಡ್ಯ: ರಾಜ್ಯ ಬಜೆಟ್‌ ಮಂಡನೆಗೆ ಎರಡು ವಾರ ಬಾಕಿ ಇದೆ. ಬರಗಾಲ ದಿಂದ ತತ್ತರಿಸುತ್ತಿರುವ ಜಿಲ್ಲೆಗೆ ವಿಶೇಷ ಪ್ಯಾಕೇಜ್‌ ನೀಡಬೇಕು ಎಂಬುದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ಅವರ ಆಗ್ರಹ. ₹ 592 ಕೋಟಿ ವೆಚ್ಚದ ಪ್ರಸ್ತಾವ ಸಲ್ಲಿಸಲಾಗಿದೆ.

ಜಿಲ್ಲೆಯ ಏಳೂ ಜಿಲ್ಲೆಗಳು ಬರ ಪೀಡಿತವಾಗಿವೆ. ರೈತರ ಆತ್ಮಹತ್ಯೆಯ ಪ್ರಕರಣಗಳು ಹೆಚ್ಚುತ್ತಿವೆ. ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ಉಂಟಾಗಿದೆ. ಜಾನುವಾರುಗಳ ಮೇವಿಗೂ ಕೊರತೆ ಎದುರಾಗಿದೆ.

ಈ ಎಲ್ಲ ಕಾರಣಕ್ಕಾಗಿ ಕೃಷಿ, ಪ್ರವಾಸೋದ್ಯಮ, ಲೋಕೋಪಯೋಗಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಬೇಡಿಕೆ ಪಟ್ಟಿಯನ್ನು ಮುಖ್ಯಮಂತ್ರಿಗೆ ನೀಡಲಾಗಿದೆ.

ಜಿಲ್ಲೆ ರಚನೆಯಾದ ಸವಿನೆನಪಿನಲ್ಲಿ ಆಚರಿಸಿಕೊಂಡ ಅಮೃತ ಮಹೋತ್ಸವ ಸಂದರ್ಭದಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿಕೊಳ್ಳಲಾಗಿತ್ತು. ಬಜೆಟ್‌ನಲ್ಲಿ ಪರಿಶೀಲನೆ ಮಾಡುವುದಾಗಿ ತಿಳಿಸಿದ್ದರು. ಆ ನಂತರ ಮಂಡಿಸಿದ ಬಜೆಟ್‌ನಲ್ಲಿ ಬೇಡಿಕೆ ಈಡೇರಿರಲಿಲ್ಲ.

ಅಮೃತ ಮಹೋತ್ಸವ ಅಂಗವಾಗಿ 400 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ₹ 77 ಕೋಟಿ ನೀಡಬೇಕು ಎಂಬ ಬೇಡಿಕೆ ಇಡಲಾಗಿದೆ. ಜಿಲ್ಲೆಯಲ್ಲಿ ಕೆಆರ್ಎಸ್‌ ಹಾಗೂ ಹೇಮಾವತಿ ಅಣೆಕಟ್ಟು ವ್ಯಾಪ್ತಿಯಲ್ಲಿ ಕ್ರಮವಾಗಿ 232, 268 ಕೆರೆಗಳಿವೆ. ಆ ಪೈಕಿ 202 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಾಗಿ
₹ 96.43 ಕೋಟಿ ನೀಡುವಂತೆ ಕೋರಲಾಗಿದೆ.

ಜಿಲ್ಲೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ 200 ಕಿ.ಮೀ. ವಾಹನ ಸಂಚಾರಕ್ಕೆ  ₹ 210 ಕೋಟಿ ನೀಡ ಬೇಕು. ಜಿಲ್ಲೆಯಲ್ಲಿ ತೀವ್ರ ಬರಗಾಲ ಇರುವುದರಿಂದ ಎರಡು ಏತ ನೀರಾವರಿ ಯೋಜನೆಗಳ ಪುನರುಜ್ಜೀವನ ಕಾಮಗಾರಿಗೆ ಹಾಗೂ ನಾಲ್ಕು ಕೆರೆಗಳ ನೀರಿನ ಸಂಗ್ರಹಣೆ ಪುನರ್‌ ಸ್ಥಾಪಿಸುವ ಉದ್ದೇಶದಿಂದ ₹ 10 ಕೋಟಿ ಕೇಳಲಾಗಿದೆ.

69 ಕೆರೆಗಳ ಹೂಳು ತೆಗೆಯಲು ₹ 12 ಕೋಟಿ, ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ₹ 75 ಕೋಟಿ, ಮಣ್ಣು ಸುಧಾರಣೆ, ಕಬ್ಬಿನಲ್ಲಿ ಅಂತರ ಬೆಳೆ ಪ್ರಾತ್ಯಕ್ಷತೆ, ತರಬೇತಿ, ಸಿರಿ ಧಾನ್ಯಗಳ ಉತ್ತೇಜನಕ್ಕೆ ₹ 16.47 ಕೋಟಿ ನೀಡಲು ಮನವಿ ಮಾಡಲಾಗಿದೆ.

ತೋಟಗಾರಿಕೆ ಬೆಳೆಗಳಿಗೆ ಮಾರುಕಟ್ಟೆ ಅಭಿವೃದ್ಧಿ, ಹೋಬಳಿವಾರು ಮಾದರಿ ಹನಿ ನೀರಾವರಿ ಅಳವಡಿಕೆ, ಕೆಆರ್‌ಎಸ್‌ನಲ್ಲಿ ಗಾಜಿನ ಮನೆ ನಿರ್ಮಾಣ, ಮಂಡ್ಯದಲ್ಲಿರುವ ಕಾವೇರಿ ವನ ಅಭಿವೃದ್ಧಿಗಾಗಿ ₹43.90 ಕೋಟಿ ಬೇಡಿಕೆ ಮಂಡಿಸಲಾಗಿದೆ.

ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳ ಸಮಗ್ರ ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿಗೆ ₹ 38.47 ಕೋಟಿ, ನಗರದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಎರಡು ಕಡೆ, ಫುಟ್‌ಪಾತ್‌ ನಿರ್ಮಾಣ ಕಾಮಗಾರಿ, ನಾಲ್ಕು ಕಡೆ ಸ್ಕೈವಾಕ್‌ ನಿರ್ಮಾಣ ಕಾಮಗಾರಿಗೆ, ಅತ್ಯಾಧುನಿಕ ಈಜುಕೋಳ ನಿರ್ಮಾಣಕ್ಕೆ, ಜಿಲ್ಲೆಯ ಆರು ಪಟ್ಟಣಗಳಲ್ಲಿ ಈಜುಕೋಳ ನಿರ್ಮಾಣಕ್ಕೆ ₹ 16 ಕೋಟಿ ಅನುದಾನ ಕೇಳಲಾಗಿದೆ.

ಬಜೆಟ್‌ನಲ್ಲಿ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬಗ್ಗೆ ಇತ್ತೀಚೆಗೆ ಮಂಡ್ಯಕ್ಕೆ ಮುಖ್ಯಮಂತ್ರಿ ಅವರು ಬಂದಾಗಲೂ ಮನವಿ ಮಾಡಲಾಗಿದೆ. ಆದರೆ, ಅನುದಾನ ಸಿಗಲಿದೆಯೇ ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT