ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸಿನ ತೋಟಕ್ಕೆ ನೀರೆರೆದು...

Last Updated 2 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಮಹಾನಗರ ಬೆಳೆದಂತೆಲ್ಲಾ ಮಣ್ಣಿನ ಜತೆಗಿನ ಒಡನಾಟ ವಿರಳವಾಗುತ್ತಿದೆ. ಹೆಚ್ಚುತ್ತಿರುವ ಪರಿಸರ ಮಾಲಿನ್ಯ, ಸಂಚಾರ ದಟ್ಟಣೆ, ದಿಢೀರ್ ಹವಾಮಾನ ಬದಲಾವಣೆ ಜತೆಗೆ ಆರೋಗ್ಯವೂ ಆಗಾಗ ಏರುಪೇರು...

ಇದು ನಗರವಾಸಿಗಳ ಜೀವನವನ್ನು ಯಾಂತ್ರಿಕ ಮಾಡುವುದಷ್ಟೇ ಅಲ್ಲ ಮಾನಸಿಕವಾಗಿಯೂ ಒತ್ತಡವನ್ನುಂಟು ಮಾಡುತ್ತಿದೆ. ಈ ಒತ್ತಡ ನಿವಾರಣೆಗಾಗಿ ನಗರವಾಸಿಗಳು ಕಂಡುಕೊಂಡಿರುವ ಪರಿಹಾರ ತಾರಸಿ ತೋಟ ಅರ್ಥಾತ್ ಟೆರೇಸ್‌ ಗಾರ್ಡನ್ ಎನ್ನುವ ವಿನೂತನ ಚಿಕಿತ್ಸೆ!

ಹೌದು, ಕಚೇರಿಗಳಲ್ಲಿ ದುಡಿದು ಹೈರಾಣದ ಮೈಮನಕ್ಕೆ, ಮನೆಯಲ್ಲೇ ಇರುವ ಗೃಹಿಣಿಯರಿಗೆ ತಾರಸಿ ತೋಟ ಉತ್ಸಾಹ ನೀಡುವ ತಾಣ ಮಾತ್ರವಲ್ಲ ಸಂಬಂಧ ಬೆಸೆಯುವ ತಾಣವೂ  ಹೌದು.

ಈ ಹಿಂದೆ ನಿಮ್ಮ ಹೊಲ–ತೋಟಗಳಲ್ಲಿ ಏನು ಬೆಳೆದಿದ್ದೀರಿ ಎನ್ನುವ ಕಾಲವೊಂದಿತ್ತು. ಅದೀಗ ಬದಲಾಗಿ ನಿಮ್ಮ ತಾರಸಿ ತೋಟದಲ್ಲೇನು ಬೆಳೆದಿದ್ದೀರಿ ಎನ್ನುವ ಕಾಲವಿದು.

ತಾರಸಿ ತೋಟ ಮಾಡುವ ಹುಮ್ಮಸ್ಸು, ಉತ್ಸಾಹವೇನೋ ಇದೆ. ಆದರೆ, ಅದಕ್ಕೆ ಬೇಕಾದ ಸಾಮಾನುಗಳು, ಅದನ್ನು ನಿರ್ವಹಿಸುವುದು, ತೋಟದಲ್ಲಿ ಬೆಳೆಯಬೇಕಾದ ಮಾಹಿತಿಗಳೆಲ್ಲಾ ಎಲ್ಲಿ ಸಿಗುತ್ತವೆ ಅಂತೀರಾ?

ಅದಕ್ಕೂ ನಗರವಾಸಿಗಳು ಕಷ್ಟಪಡಬೇಕಿಲ್ಲ. ತಾರಸಿ ತೋಟಕ್ಕೆ ಬೇಕಾಗುವ ಸಾಮಾನು ಸರಂಜಾಮುಗಳೆಲ್ಲಾ ತೋಟಗಾರಿಕೆ ಇಲಾಖೆಯಲ್ಲಿ ಸುಲಭವಾಗಿ ದೊರೆಯುತ್ತವೆ. ಅಷ್ಟೇ ಅಲ್ಲ ಕೆಲ ಖಾಸಗಿ ಗಾರ್ಡನಿಂಗ್ ಸಂಘ–ಸಂಸ್ಥೆಗಳೂ ಮಾರ್ಗದರ್ಶನವನ್ನು ನೀಡುತ್ತಿವೆ.

ಸ್ವಂತ ಮನೆ ಇದ್ದವರು ತಾರಸಿ ಮೇಲೆ ಸುಲಭವಾಗಿ ತೋಟ ಮಾಡಬಹುದು. ಆದರೆ, ಬಾಡಿಗೆ ಮನೆಯಲ್ಲಿದ್ದವರಿಗೆ ತಾರಸಿ ತೋಟ ಮಾಡುವುದು ತುಸು ಕಷ್ಟವಾದರೂ ವಿವಿಧ ಪರಿಕರಗಳ ಸಹಾಯದಿಂದ ಮನೆಗೆ ಬೇಕಾದ ತರಕಾರಿಗಳನ್ನು ಬಾಲ್ಕನಿಯಲ್ಲೇ ಅಥವಾ ಮನೆಯ ಹೊರ ಅಂಗಳದಲ್ಲೋ ಸುಲಭವಾಗಿ ಬೆಳೆಯಬಹುದು.


ಬೆಳೆಯುವುದು ಹೇಗೆ?
ತಾರಸಿಯಲ್ಲಿ ಮನೆಗೆ ಬೇಕಾಗುವ ನಾನಾ ಬಗೆಯ ತರಕಾರಿಗಳು, ಸೊಪ್ಪು ಬೆಳೆಯಬಹುದು. ಅಷ್ಟೇ ಅಲ್ಲ ಕೆಲ ಔಷಧೀಯ ಸಸ್ಯಗಳನ್ನೂ ಬೆಳೆಯಬಹುದು. ಕೆಲವರು ಪಪ್ಪಾಯಿ, ಸಪೋಟ, ಪೇರಲ, ಸೇಬು ಹಣ್ಣುಗಳನ್ನು ಬೆಳೆಯುವ ಪರಿಪಾಠ ಬೆಳೆಸಿ ಕೊಂಡಿದ್ದಾರೆ.

ಗ್ರೋ ಬ್ಯಾಗ್ ಅಥವಾ ಕುಂಡಗಳಲ್ಲಿ ಸಾವಯವ ಗೊಬ್ಬರ ಭರಿತ ಮಣ್ಣನ್ನು ತುಂಬಿ, ಬೀಜ ನಾಟಿ ಮಾಡಬೇಕು.  ಪ್ರತಿನಿತ್ಯ ಅಗತ್ಯವಿರುವಷ್ಟು ಮಾತ್ರ ನೀರುಣಿಸಬೇಕು. ಬೀಜ ಮೊಳಕೆಯೊಡೆದು ಗಿಡವಾಗಿ ಬೆಳೆಯುವ ವಿವಿಧ ಹಂತದ ಬೆಳವಣಿಗೆಯ ಬಗ್ಗೆ ನಿಗಾ ವಹಿಸಿ, ರೋಗಬಾಧೆ ಕಾಡಿದಾಗ ಔಷಧೋಪಚಾರ ಮಾಡುವುದು ಒಳಿತು.

ಲಾಲ್‌ಬಾಗ್‌ನ ತೋಟಗಾರಿಕಾ ಇಲಾಖೆಯಲ್ಲಿ ಕುಂಡಗಳು, ವಿವಿಧ ನಮೂನೆಯ ತರಕಾರಿ ಬೀಜಗಳು, ಕೆಂಪು ಮಣ್ಣು ಮತ್ತು ಗೊಬ್ಬರಭರತಿ ಮಣ್ಣು ಕೈಗೆಟುಕುವ ದರದಲ್ಲಿ ದೊರೆಯುತ್ತದೆ. ಅಷ್ಟೇ ಅಲ್ಲ ಆಗಾಗ ಅಲ್ಲಿ ಕೈತೋಟ ಕುರಿತ ಕಾರ್ಯಾಗಾರ ಮತ್ತು ಪ್ರಾತ್ಯಕ್ಷಿಕೆಗಳೂ ಕ ನಡೆಯುತ್ತವೆ. ಆಸಕ್ತರು ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದು.

ತೋಟವ ಮಾಡಿ, ಮನವ ಅರಳಿಸಿ
ನಗರದಲ್ಲಿ ಇತ್ತೀಚೆಗೆ ಟೆರೇಸ್ ಗಾರ್ಡನ್ ದೊಡ್ಡದೊಂದು ಟ್ರೆಂಡ್ ಆಗಿ ಬೆಳೆದಿದೆ. ಧ್ಯಾನ, ಯೋಗಕ್ಕಿಂತ ನಗರ ಕೃಷಿಯ ಧ್ಯಾನದಿಂದ ಆಗುವ ಪ್ರಯೋಜನಗಳು ಹಲವು ಎನ್ನುತ್ತಾರೆ ಡ್ರೀಂ ಗಾರ್ಡನ್‌ನ ರೂವಾರಿ ಅಶೋಕ್ ಕುಮಾರ್ ಕೆ.ಸಿ.

‘ನಮ್ಮ  ಸಂಸ್ಥೆಯಿಂದ ಕೈತೋಟ ಕೃಷಿ ಬಗ್ಗೆ ನಿರಂತರವಾಗಿ ಕಾರ್ಯಾಗಾರ, ಪ್ರಾತ್ಯಕ್ಷಿಕೆ ಮಾಡುತ್ತೇವೆ. ಇದುವರೆಗೆ 209 ಕಾರ್ಯಾಗಾರಗಳನ್ನು ಮಾಡಿದ್ದೇವೆ. ನಗರದಲ್ಲೇ ಸುಮಾರು 3 ಸಾವಿರ ಮನೆಗಳಲ್ಲಿ ತಾರಸಿ ತೋಟಗಳಿವೆ. ಅವುಗಳಿಗೆಲ್ಲಾ ಮನೆಯಲ್ಲೇ ತಯಾರಾಗುವ ತ್ಯಾಜ್ಯಗೊಬ್ಬರ ಬಳಸಲಾಗುತ್ತಿದೆ. ಇದರಿಂದ  ವರ್ಷಕ್ಕೆ ಸುಮಾರು 60 ಲಕ್ಷ ಟನ್‌ನಷ್ಟು ತ್ಯಾಜ್ಯ ಗೊಬ್ಬರವಾಗಿ ಸದುಪಯೋಗವಾಗುತ್ತಿದೆ. ಮಹಾನಗರ ಕಸ ವಿಲೇವಾರಿ ಸಮಸ್ಯೆಗೆ ಸುಲಭವಾಗಿ ಪರಿಹಾರ ದೊರೆಯುತ್ತದೆ’ ಎನ್ನುತ್ತಾರೆ ಅವರು.

ಮಾಹಿತಿಗೆ facebook.com/itsmydreamgarden, ಅಥವಾ ಮೊಬೈಲ್‌– 7676021777 ನೋಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT