ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಇ ಅಧಿನಿಯಮ ಮತ್ತು ಅರ್ಥನಿರ್ಣಯ

ಖಾಸಗಿ ಶಾಲೆಗಳನ್ನು ಮಣಿಸಲು ಆರ್‌ಟಿಇ ಅಧಿನಿಯಮವನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ತಪ್ಪಾಗಿ ಅರ್ಥೈಸಿಕೊಂಡದ್ದೇ ಸದ್ಯದ ಅವಾಂತರಗಳಿಗೆ ಕಾರಣ
Last Updated 2 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯಲು ಮಕ್ಕಳ ಹಕ್ಕು ಅಧಿನಿಯಮ 2009ರ ಅಧ್ಯಾಯ 2ರಲ್ಲಿ ವ್ಯಾಖ್ಯಾನಿಸಿರುವಂತೆ, ಆರ್‌ಟಿಇ ಎಂದರೆ ‘ಆರರಿಂದ ಹದಿನಾಲ್ಕು ವರ್ಷದೊಳಗಿನ ಪ್ರತಿ ಮಗುವೂ ತನ್ನ ಹತ್ತಿರದ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರ್ತಿ ಮಾಡುವವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯುವ ಹಕ್ಕು ಹೊಂದಿದೆ’.
 
ಇದರ ಪ್ರಕಾರ, ಮಗುವಿಗೆ ‘ತನ್ನ ಹತ್ತಿರದ ಶಾಲೆ’ ಎಂದು ಇದೆಯೇ ಹೊರತು ಖಾಸಗಿ ಶಾಲೆ ಎಂದು ಇಲ್ಲ. ಹಾಗಾಗಿ ಹತ್ತಿರದಲ್ಲಿ ಸರ್ಕಾರಿ ಶಾಲೆ ಇದ್ದರೆ ಮಗುವನ್ನು ಅಲ್ಲಿಗೇ ಸೇರಿಸಬೇಕು. ಅಲ್ಲಿ ಹೇಗಿದ್ದರೂ ಉಚಿತ ಶಿಕ್ಷಣವೇ ಲಭ್ಯವಿದೆ. ಇನ್ನು ಖಾಸಗಿ ಅನುದಾನಿತ ಶಾಲೆ ಹತ್ತಿರವಿದ್ದರೆ ಅಲ್ಲಿ ಪೂರ್ಣ ಉಚಿತ ಶಿಕ್ಷಣವನ್ನು ಪಡೆಯುವ ಹಕ್ಕು ಇದೆ. ಇಂತಹ ಶಾಲೆಗಳು ಮನೆಯ ನೆರೆಹೊರೆಯಲ್ಲಿ ಲಭ್ಯ ಇರುವಾಗ, ಇವುಗಳಿಂದ ದೂರವಿರುವ ಅನುದಾನರಹಿತ ಖಾಸಗಿ ಶಾಲೆಗೆ ಪ್ರವೇಶ ಬಯಸುವುದಾಗಲೀ ಶಿಕ್ಷಣ ಇಲಾಖೆಯವರು ಹಾಗೆ ನೀಡುವುದಾಗಲೀ ಸರಿಯಲ್ಲ.
 
ಆರ್‌ಟಿಇ ಜಾರಿಗೆ ಬಂದಲಾಗಾಯ್ತು ಸರಿಯಲ್ಲದ್ದನ್ನೇ ನಮ್ಮ ಶಿಕ್ಷಣ ಇಲಾಖೆ ಮಾಡುತ್ತಿದೆ. ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ಲಭ್ಯ ಇರುವ ಸೀಟುಗಳ ಸಂಖ್ಯೆಯನ್ನು ಘೋಷಿಸಿ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ನಿಜವಾಗಿ ನೆರೆಹೊರೆಯಲ್ಲಿ ಸರ್ಕಾರಿ ಶಾಲೆ ಇದ್ದವರು ಆರ್‌ಟಿಇ ಅಡಿಯಲ್ಲಿ ಅರ್ಜಿ ಹಾಕುವುದೇ ಬೇಡ. ಅವರು ನೇರವಾಗಿ ಸರ್ಕಾರಿ ಶಾಲೆಗೆ ಸೇರಿದರಾಯಿತು.
 
ಆದರೆ ಶಿಕ್ಷಣಾಧಿಕಾರಿಗಳ ದಯೆಯಿಂದ ಪ್ರಸಿದ್ಧ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಸೀಟು ಪಡೆಯಬೇಕೆಂಬ ಆಕಾಂಕ್ಷೆಯುಳ್ಳ ಹೆತ್ತವರು ಅರ್ಜಿ ಸಲ್ಲಿಸುತ್ತಾರೆ. ಇಂತಹವರನ್ನು ಶಿಕ್ಷಣ ಇಲಾಖೆ ನಿಜಕ್ಕೂ ಉತ್ತೇಜಿಸಬಾರದು. ಇದೇ ತಿಂಗಳ 1ರಿಂದ ಆರ್‌ಟಿಇ ಹೆಸರಿನಲ್ಲಿ  ಸ್ವೀಕರಿಸಲಾದ ಅರ್ಜಿಗಳನ್ನು ಪರಿಶೀಲಿಸಿ ಯಾವ ಅರ್ಜಿದಾರರ ಮನೆಯ ಹತ್ತಿರ ಸರ್ಕಾರಿ ಶಾಲೆ ಇದೆಯೋ ಅಲ್ಲಿಗೇ ಸೇರಲು ಶಿಕ್ಷಣಾಧಿಕಾರಿಗಳು ತಿಳಿಸಲಿ. ಹೀಗೆ ಮಾಡುವುದರಿಂದ ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಿದ ಪುಣ್ಯ ಶಿಕ್ಷಣ ಇಲಾಖೆಗೆ ಸಲ್ಲುತ್ತದೆ.
 
ಇತ್ತೀಚೆಗೆ ವಿಧಾನ ಪರಿಷತ್ತಿನಲ್ಲಿ ಬಸವರಾಜ ಹೊರಟ್ಟಿ ಅವರು ಆರ್‌ಟಿಇಯನ್ನೇ ಕೈಬಿಡಿ ಎಂದರು. ಆದರೆ ಇದು ಕೈಬಿಡುವ ಸಂಗತಿಯಲ್ಲ. ಸರಿಯಾಗಿ ಕೈಹಿಡಿದು ನಡೆಸಬೇಕಾದ ಸಂಗತಿ. ಈ ಅಧಿನಿಯಮದ ಉದ್ದೇಶವೇ ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು ಎಂಬುದು. ಅದಕ್ಕಾಗಿ ಅನಿವಾರ್ಯವಾದರೆ ಖಾಸಗಿ ಅನುದಾನರಹಿತ ಶಾಲೆಯಲ್ಲಾದರೂ ಸರಿ, ಅಲ್ಲಿ ಉಚಿತ ಶಿಕ್ಷಣ ನೀಡಬೇಕು. ಅದರ ವೆಚ್ಚವನ್ನು ಸರ್ಕಾರವೇ ಭರಿಸಬೇಕು.

ಇಷ್ಟು ಸರಳವಾದ ಅಧಿನಿಯಮವನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಂಕೀರ್ಣವಾಗಿ ಅರ್ಥೈಸಿಕೊಂಡು ಖಾಸಗಿ ಶಾಲೆಗಳ   ಶೇ 25ರಷ್ಟು ಸೀಟುಗಳ ವಿತರಕರು ತಾವೇ ಎಂದು ಹೇಳಿಕೊಂಡರು. ಅವರಿಗೆ ವಿತರಣೆಯ ಹೊಣೆ ಬರುವುದು ತಮ್ಮ ಮನೆಯ ಬಳಿ ಖಾಸಗಿ ಶಾಲೆ ಬಿಟ್ಟು ಬೇರೆ ಶಾಲೆ ಇಲ್ಲ ಎಂಬ ಕಾರಣಕ್ಕೆ ಅರ್ಜಿ ಹಾಕುವ ಮಕ್ಕಳದ್ದು ಮಾತ್ರ.

ಅಂತಹ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದರೆ ಹತ್ತಿರದ ಖಾಸಗಿ ಶಾಲೆಯಲ್ಲಿ ಶೇ 25ರಷ್ಟು ಸೀಟು ತುಂಬುವವರೆಗೆ ಶಿಕ್ಷಣ ಇಲಾಖೆ ಆಯ್ಕೆ ಪ್ರಕ್ರಿಯೆ ನಡೆಸಬೇಕು. ಅದಕ್ಕಿಂತ ಕಡಿಮೆ ಅರ್ಜಿಗಳಿದ್ದರೆ ಆಯ್ಕೆ ಪ್ರಕ್ರಿಯೆಯ ಅಗತ್ಯವಿಲ್ಲ. ನೇರವಾಗಿ ಅಂತಹ ಶಾಲೆಗಳಿಗೆ ಅರ್ಜಿದಾರ ಮಕ್ಕಳನ್ನು ಸೇರಿಸಿಕೊಳ್ಳಲು ಆದೇಶ ನೀಡಿದರಾಯಿತು. ಹಾಗಾಗಿ ಹೊರಟ್ಟಿಯವರು ಬಯಸಿದ ಸುಧಾರಣೆಯನ್ನು ಆರ್‌ಟಿಇಯನ್ನು ಕೈಬಿಡದೇ ಮಾಡಬಹುದು. ಮಾಡಬೇಕಾದ್ದಿಷ್ಟೆ: ಅಧಿನಿಯಮವನ್ನು ಅದರಲ್ಲಿ ಹೇಳಲಾದ ಭಾಷೆಯಲ್ಲೇ ಅರ್ಥೈಸಿಕೊಳ್ಳುವುದು ಮತ್ತು ಅಧಿಕಾರಿಗಳು ತಮ್ಮದೇ ವ್ಯಾಖ್ಯಾನ ನೀಡದಿರುವುದು.
 
ಖಾಸಗಿ ಶಾಲೆಗಳನ್ನು ಮಣಿಸಲು ಹಾಗೂ ಅವುಗಳ ಮೇಲೆ ಒಂದಿಷ್ಟು ಪ್ರಭಾವ ಹೊಂದಲು ಆರ್‌ಟಿಇ ಅಧಿನಿಯಮವನ್ನು ಒಂದು ಕೈ ಆಯುಧವೆಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಪ್ಪಾಗಿ ಅರ್ಥೈಸಿಕೊಂಡದ್ದೇ ಸದ್ಯದ ಅವಾಂತರಗಳಿಗೆ ಕಾರಣವಾಯಿತು. ಖಾಸಗಿ  ಶಾಲೆಗಳಿಗೆ ಬಡ ಮಕ್ಕಳನ್ನು ಸೇರಿಸಲು ವಹಿಸಿದ ಮುತುವರ್ಜಿಯನ್ನು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಹಾಗೂ ಶಿಕ್ಷಕರನ್ನು ಒದಗಿಸಲು ವಹಿಸಿದ್ದರೆ ಎಷ್ಟು ಚೆನ್ನಾಗಿತ್ತು. ಆದರೆ ಮರದ ಕೊಂಬೆಯನ್ನೇರಿ ಬುಡ ಕಡಿಯುವ ಜಾಣ್ಮೆಯುಳ್ಳ ಅಧಿಕಾರಿಗಳಿಂದಾಗಿ ಎರಡು ಪರಿಣಾಮಗಳುಂಟಾದವು.
 
ಒಂದು: ಸರ್ಕಾರಿ ಶಾಲೆಗಳಿಗೆ ಸೇರಬೇಕಾದ ಮಕ್ಕಳು ಖಾಸಗಿ ಶಾಲೆಗಳಲ್ಲಿ ತುಂಬಿದರು.
ಎರಡು: ಈ ಮಕ್ಕಳ ಬಾಬ್ತು ಖಾಸಗಿ ಶಾಲೆಗಳಿಗೆ ಸರ್ಕಾರ ತುಂಬುವ ಶುಲ್ಕದ ಮೊತ್ತ ಕೋಟ್ಯಂತರ ರೂಪಾಯಿಗಳಿಗೆ ಏರಿತು. ಇದು ವರ್ಷ ಕಳೆದಂತೆ ಏರುತ್ತಲೇ ಇದೆ. ಅದೆಷ್ಟು ಏರುತ್ತದೆಂದರೆ, ಅಷ್ಟು ಹಣದಲ್ಲಿ ಸರ್ಕಾರಿ ಶಾಲೆಗಳ ತುಂಬ ಶಿಕ್ಷಕರನ್ನು ನೇಮಿಸಿಬಿಡಬಹುದು ಮತ್ತು ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಬೇಕಾದಷ್ಟು ಸಂಪನ್ಮೂಲ ಉಳಿಸಿಕೊಳ್ಳಬಹುದು.
 
ಈ ಎರಡು ಪರಿಣಾಮಗಳು ಕರ್ನಾಟಕದ ಆಧುನಿಕ ಶಿಕ್ಷಣದ ಇತಿಹಾಸಕ್ಕೆ ಅಸಾಧಾರಣ ತಿರುವು ನೀಡುತ್ತವೆ. ಇದೀಗ ಜನರಿಗೆ ಇಂಗ್ಲಿಷ್‌ ಮಾಧ್ಯಮದ ಮೋಹ ಎಷ್ಟು ಹೆಚ್ಚಾಗಿದೆಯೆಂದರೆ, ಸೃಜನಶೀಲ ಚಿಂತನೆಯ ಮೂಲಕ ಕಲಿಕೆ ಪಡೆವ ಪೀಳಿಗೆಯ ಬೆಳವಣಿಗೆಗೆ ಅದು ಅಡ್ಡಗಾಲಾಗಿದೆ. ಕನ್ನಡದ ಉಳಿವಿಗೆ ಆತಂಕಕಾರಿಯಾದ ಈ ವಿದ್ಯಮಾನವನ್ನು ತಡೆಯಲು ಈಗ ಆಗಬೇಕಾಗಿರುವುದೇನು? ನನ್ನ ದೃಷ್ಟಿಯಲ್ಲಿ ಆರ್‌ಟಿಇಯ ವೈಭವೀಕರಣಕ್ಕೆ ಹೋಗದೆ ಅದನ್ನು ಅರ್ಥಪೂರ್ಣವಾಗಿ ಅನ್ವಯಿಸುವುದು. 
 
ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಸಾಕಷ್ಟು ಶಿಕ್ಷಕರ ನೇಮಕ ಮಾಡಿ ಸಮರ್ಪಕವಾದ ಶಿಕ್ಷಣ ಲಭಿಸುವ ಬಗ್ಗೆ ಜನರಲ್ಲಿ ಭರವಸೆ ಮೂಡಿಸುವುದು. ಫೆಬ್ರುವರಿ 27ರಂದು ಸರ್ವ ಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕರು ಘೋಷಿಸಿರುವಂತೆ, ಆರ್‌ಟಿಇ ಅಡಿಯಲ್ಲಿ ಲಭ್ಯವಿರುವ 1.30 ಲಕ್ಷ ಸೀಟುಗಳನ್ನು ತುಂಬುವ ಅಭಿಯಾನವನ್ನು ಕೈಬಿಟ್ಟು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಅಭಿಯಾನ ಕೈಗೊಳ್ಳಬೇಕು.

ಇದಕ್ಕಾಗಿ ಎಷ್ಟು ಮಕ್ಕಳಿಗೆ ಮನೆ ಹತ್ತಿರ ಸರ್ಕಾರಿ ಶಾಲೆ ಇಲ್ಲವೆಂಬುದರ ಅಂಕಿ ಅಂಶಗಳನ್ನು ಆಗಿಂದಾಗ್ಗೆ ನಡೆಸುತ್ತಿರುವ ಶೈಕ್ಷಣಿಕ ಗಣತಿಯ ಆಧಾರದಿಂದ ನಿರ್ಧರಿಸಬೇಕು. ಈಗ ಹೇಳಿರುವಂತೆ ಪ್ರತಿ ವರ್ಷ ಲಕ್ಷಕ್ಕೂ ಮಿಕ್ಕಿ ಆರ್‌ಟಿಇ ಸೀಟು ನೀಡಿದರೆ, ಸರ್ಕಾರ ನೀಡಬೇಕಾದ ಅವರ ಶುಲ್ಕದ ಮೊತ್ತ ನೂರಾರು ಕೋಟಿಗಳಾಗಲಿದೆ ಎಂಬ ಎಚ್ಚರ ವಹಿಸಬೇಕು. ಸರ್ಕಾರಿ ಶಾಲೆಗಳಿಗೆ ಬಡಿದಿರುವ ‘ಕ್ಷಯ ರೋಗ’ವನ್ನು ಗುಣಪಡಿಸಲು ಆರ್‌ಟಿಇ ನಿಯಮಾವಳಿಯನ್ನು ನಿಜವಾದ ಅರ್ಥದಲ್ಲಿ ಅಳವಡಿಸಿದರೆ ಸಾಕು. ಏಕೆಂದರೆ ಅದು ಭಾರತದ ಸದೃಢ ಭವಿಷ್ಯಕ್ಕಾಗಿ ಬೇಕೇ ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT