ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಂಕಿತರಿಗೆ ನೇಮಕಾತಿ ಆದೇಶ ಸರ್ಕಾರದ ನಡೆಯೇ ಸರಿಯಲ್ಲ

Last Updated 3 ಮಾರ್ಚ್ 2017, 8:55 IST
ಅಕ್ಷರ ಗಾತ್ರ
2011ನೇ ಸಾಲಿನ 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಆಯ್ಕೆ ಪಟ್ಟಿಯಲ್ಲಿ ಭಾರೀ ಅಕ್ರಮ ನಡೆದಿದೆ ಎನ್ನುವುದು ಗೊತ್ತಿದ್ದರೂ ಕಳಂಕಿತರೂ ಸೇರಿದಂತೆ ಎಲ್ಲಾ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲು  ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಿರ್ಧರಿಸಿದೆ. ಇದು ಅನೈತಿಕ ಮತ್ತು  ಲಜ್ಜೆಗೆಟ್ಟ ನಡೆ. ಮುಂದಿನ ವರ್ಷ ವಿಧಾನಸಭೆ ಚುನಾವಣೆ ಇರುವಾಗ ರಾಜ್ಯ ಸರ್ಕಾರ ಇಂತಹ ನಿರ್ಧಾರ ಕೈಗೊಂಡಿರುವುದು ಅನುಮಾನಗಳಿಗೆ ಎಡೆಮಾಡಿದೆ.
 
 ಭ್ರಷ್ಟಾಚಾರದ ವಿರುದ್ಧ ಹೋರಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರು, ಈಗ ತಾವು ಭ್ರಷ್ಟಾಚಾರದ ವಿರುದ್ಧವೂ ಇಲ್ಲ. ತಮ್ಮದು ಭಿನ್ನ ಸರ್ಕಾರವೂ ಅಲ್ಲ ಎನ್ನುವುದನ್ನು ತೋರಿಸಿದ್ದಾರೆ. ಅವರ ನಡೆ ನಿಗೂಢ. ತಾವು ಯಾವ ಕಾರಣಕ್ಕೆ ಇಂತಹ ನಿರ್ಣಯ ಕೈಗೊಳ್ಳಬೇಕಾಯಿತು ಎನ್ನುವುದನ್ನು ಅವರು ಬಹಿರಂಗಪಡಿಸಬೇಕಿದೆ.
 
ಈ ಹಿಂದೆ ಅಧಿಸೂಚನೆಯನ್ನೇ ರದ್ದು ಮಾಡಿ, ಆಯ್ಕೆ ಪಟ್ಟಿಯನ್ನು ತಿರಸ್ಕರಿಸಿದ ಇದೇ ಸರ್ಕಾರ ಈಗ ಅದೇ ಪಟ್ಟಿಯನ್ನು ಒಪ್ಪಿಕೊಂಡಿರುವುದು ಶಂಕೆಗೆ  ಕಾರಣವಾಗಿದೆ.  ‘2011ನೇ ಸಾಲಿನ ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ. ಯಾವ ಯಾವ ಹುದ್ದೆಗೆ ಎಷ್ಟು ಹಣ ಪಡೆಯಲಾಗಿದೆ’ ಎನ್ನುವುದನ್ನು ಈ ಬಗ್ಗೆ ತನಿಖೆ ನಡೆಸಿದ ಸಿಐಡಿ ತನ್ನ ವರದಿಯಲ್ಲಿ ಹೇಳಿದೆ. ಈ ವರದಿಯನ್ನು ರಾಜ್ಯ ಸರ್ಕಾರ ಈ ಹಿಂದೆ ಒಪ್ಪಿಕೊಂಡಿತ್ತು. ಅದರ ಪ್ರಕಾರವೇ ಕೆಪಿಎಸ್‌ಸಿ ಸದಸ್ಯರ ವಿರುದ್ಧ ಕ್ರಮವನ್ನೂ ಕೈಗೊಂಡಿತ್ತು. ಸದಸ್ಯರೊಬ್ಬರನ್ನು ಅಮಾನತು ಮಾಡಿತ್ತು.
 
ಆಗಿನ ಅಧ್ಯಕ್ಷರು ಮತ್ತು ಕೆಲವು ಅಧಿಕಾರಿಗಳ ವಿರುದ್ಧ ಪ್ರಕರಣವನ್ನೂ ದಾಖಲಿಸಲಾಗಿತ್ತು. ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿ ಹೋಗಿರುವ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಕಾಯಕಲ್ಪ ಮಾಡುವುದಕ್ಕಾಗಿಯೇ ಪಿ.ಸಿ.ಹೋಟಾ ಸಮಿತಿ ನೇಮಕ ಮಾಡಲಾಗಿತ್ತು. ಆಯೋಗದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಎಂಬಂತೆ ಆಯ್ಕೆ ಪಟ್ಟಿಯನ್ನೇ ತಿರಸ್ಕರಿಸುವ ಐತಿಹಾಸಿಕ ನಿರ್ಣಯವನ್ನೂ ಇದೇ ಸರ್ಕಾರ ಕೈಗೊಂಡಿತ್ತು.
 
ಆಗ ಬೇಡವಾಗಿದ್ದ ಪಟ್ಟಿ ಈಗ ಯಾಕೆ ಬೇಕಾಯಿತು ಎನ್ನುವುದು ತಿಳಿಯುತ್ತಿಲ್ಲ. ಇದಕ್ಕೆ ಕಾರಣವಾದ ಹಕೀಕತ್ ಏನು? ಕೆಪಿಎಸ್‌ಸಿಯನ್ನು ಭ್ರಷ್ಟಾಚಾರ ಮುಕ್ತಗೊಳಿಸಿ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವುದಾಗಿ ಹೇಳಿದ್ದ ಸರ್ಕಾರ ಈಗ ಹೀಗೇಕೆ ನಡೆದುಕೊಂಡಿತು? ಇಂತಹ ಎಡವಟ್ಟು ತೀರ್ಮಾನ ಕೈಗೊಳ್ಳುವ ಮೂಲಕ ಸರ್ಕಾರ ರಾಜ್ಯದ ಜನರಿಗೆ ಕೆಟ್ಟ ಸಂದೇಶವನ್ನೇ ನೀಡಿದೆ. ಭ್ರಷ್ಟಾಚಾರ ವಿರುದ್ಧ  ಮಾತನಾಡುವ ಅರ್ಹತೆಯನ್ನೂ ಕಳೆದುಕೊಂಡಿದೆ. ಆಗ ಆಡಿದ ಎಲ್ಲ ಮಾತುಗಳೂ ‘ನಾಟಕ’ ಎನ್ನುವುದನ್ನು ತಿಳಿಯದಷ್ಟು ದಡ್ಡರೇನಲ್ಲ ರಾಜ್ಯದ ಜನರು.
 
ಭ್ರಷ್ಟಾಚಾರ ನಿಯಂತ್ರಣ ವಿಷಯದಲ್ಲಿ ಈ ಸರ್ಕಾರ ದೃಢ ನಿರ್ಧಾರ ತೆಗೆದುಕೊಂಡ ಉದಾಹರಣೆಯೇ ಇಲ್ಲ.  ತನ್ನದೇ ನಿರ್ಧಾರವನ್ನು ಬದಲಿಸುವುದು ಈ ಸರ್ಕಾರಕ್ಕೆ ಹೊಸದೂ ಅಲ್ಲ. ಆದರೂ 2013ರಲ್ಲಿ ಅಧಿಕಾರಕ್ಕೆ ಬಂದಾಗ ತೋರಿದ್ದ ಆರಂಭಶೂರತ್ವ ಈಗ ಉತ್ತರನ ಪೌರುಷದಂತೆ ಕಾಣುತ್ತಿದೆ. ಕೆಎಟಿ ಆದೇಶವನ್ನು ಪರಿಗಣಿಸಿ ಈ ತೀರ್ಮಾನಕ್ಕೆ  ಬಂದಿರುವುದಾಗಿ  ಸರ್ಕಾರ ಹೇಳಿಕೊಂಡಿದೆ. ಆದರೆ ಕಳಂಕಿತರಿಗೂ ನೇಮಕಾತಿ ಆದೇಶ ನೀಡಿ ಎಂದು ಕೆಎಟಿ ಹೇಳಿರಲಿಲ್ಲ. ಅಲ್ಲದೆ ಕೆಎಟಿ ತೀರ್ಮಾನ ಅಂತಿಮವೂ ಅಲ್ಲ. ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಇತ್ತು.  
 
ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಶಿಫಾರಸು ಮಾಡಿತ್ತು. ಕಾನೂನು ಇಲಾಖೆ ಕೂಡ ಹೀಗೆಯೇ ಹೇಳಿತ್ತು. ಅಡ್ವೊಕೇಟ್ ಜನರಲ್ ಅವರೂ 46 ಮಂದಿ ಕಳಂಕಿತರನ್ನು ಹೊರಗಿಟ್ಟು ಉಳಿದವರಿಗೆ ನೇಮಕಾತಿ ಆದೇಶ ನೀಡಬಹುದು ಎಂದು  ಸಲಹೆ ಮಾಡಿದ್ದರು. ‘ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವುದಾಗಿ ಹೇಳಿಕೊಳ್ಳುತ್ತಿರುವ ನಾವು ಈಗ ಇಂತಹ ತೀರ್ಮಾನ ಕೈಗೊಳ್ಳುವುದು ಸೂಕ್ತ ಅಲ್ಲ’ ಎಂದು ಸಚಿವ ಸಂಪುಟ ಸಭೆಯಲ್ಲಿ ಹಲವು ಸಚಿವರು ಹೇಳಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂತಹ  ನಿರ್ಧಾರ ಕೈಗೊಳ್ಳಲು ಕಾರಣ ಏನು? ಸರ್ಕಾರ ಏನೇ ಸಮಜಾಯಿಷಿ ಕೊಟ್ಟರೂ  ಪ್ರಜ್ಞಾವಂತ ಜನರು ಈ ತೀರ್ಮಾನವನ್ನು  ಒಪ್ಪಲಾರರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT