ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗದು ವಹಿವಾಟಿಗೆ ಶುಲ್ಕ ಈಗ ಎಸ್‌ಬಿಐ ಸರದಿ

Last Updated 2 ಮಾರ್ಚ್ 2017, 19:35 IST
ಅಕ್ಷರ ಗಾತ್ರ

ನವದೆಹಲಿ: ಶಾಖೆಗಳಲ್ಲಿ ನಡೆಯುವ ನಗದು ವಹಿವಾಟಿನ ಮೇಲೆ ಹೆಚ್ಚುವರಿ ಶುಲ್ಕ ವಿಧಿಸಲು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳೂ ಮುಂದಾಗಲಿವೆ.
ದೇಶದ ಅತಿ ದೊಡ್ಡ ಬ್ಯಾಂಕ್‌ ಆಗಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಕೂಡ ಏಪ್ರಿಲ್‌ 1ರಿಂದ ನಗದು ವಹಿವಾಟಿನ ಮೇಲೆ ನಿರ್ವಹಣಾ ಶುಲ್ಕ ಆಕರಿಸಲು ನಿರ್ಧರಿಸಿದೆ. ಇತರ ಬ್ಯಾಂಕ್‌ಗಳೂ ಇದನ್ನು ಅನುಸರಿಸುವ ಸಾಧ್ಯತೆ ಇದೆ.

ಬ್ಯಾಂಕ್‌ ಶಾಖೆಯ ಉಳಿತಾಯ ಖಾತೆಗೆ ಒಂದು ತಿಂಗಳಲ್ಲಿ ಹಣ ಭರ್ತಿ ಮಾಡುವ ಮತ್ತು ಹಿಂದೆ ಪಡೆಯುವ  ವಹಿವಾಟುಗಳನ್ನು ಮೂರು ಬಾರಿ ಮಾತ್ರ ಉಚಿತವಾಗಿ ನಡೆಸಬಹುದು. ನಂತರ ನಡೆಯುವ ಪ್ರತಿ ವಹಿವಾಟಿಗೂ ₹50 ಶುಲ್ಕ ವಿಧಿಸಲು ಚಿಂತನೆ ನಡೆದಿದೆ.

ಚಾಲ್ತಿ ಖಾತೆಯ ಗ್ರಾಹಕರು ಬ್ಯಾಂಕ್‌ ಶಾಖೆಗಳಲ್ಲಿ ಒಂದು ದಿನಕ್ಕೆ ₹25 ಸಾವಿರದವರೆಗೆ ನಡೆಸುವ ವಹಿವಾಟಿಗೆ ಯಾವುದೇ ಶುಲ್ಕ ಇರುವುದಿಲ್ಲ.  ಅದಕ್ಕೂ ಹೆಚ್ಚಿನ ಮೊತ್ತದ ಪ್ರತಿ ನಗದು ವಹಿವಾಟಿಗೂ ₹50 ಹೆಚ್ಚುವರಿ ಶುಲ್ಕ ವಿಧಿಸಲಾಗುವುದು ಎಂದು ಎಸ್‌ಬಿಐ  ಮೂಲಗಳು ತಿಳಿಸಿವೆ. 

ಬ್ಯಾಂಕ್‌ ಶಾಖೆಯಲ್ಲಿ ನಡೆಯುವ ನಗದು ವಹಿವಾಟಿಗೆ ಮಾತ್ರ ಹೆಚ್ಚುವರಿ ಶುಲ್ಕ ಸಂಬಂಧಿಸಿರುತ್ತದೆ. ಎಟಿಎಂ ವಹಿವಾಟಿಗೆ ಈ ಶುಲ್ಕ ಅನ್ವಯವಾಗಲಾರದು. ಡೆಬಿಟ್‌ ಕಾರ್ಡ್‌ ಬಳಸಿ ಎಟಿಎಂಗಳಲ್ಲಿ ನಡೆಸುವ 5ಕ್ಕಿಂತ ಹೆಚ್ಚಿನ ವಹಿವಾಟಿಗೆ ಪ್ರತ್ಯೇಕವಾಗಿ ₹20 ಶುಲ್ಕ ನೀಡಬೇಕಾಗುತ್ತದೆ.

ಐಸಿಐಸಿಐ, ಎಚ್‌ಡಿಎಫ್‌ಸಿ, ಎಚ್‌ಎಸ್‌ಬಿಸಿ ಮತ್ತು ಎಕ್ಸಿಸ್‌ ಬ್ಯಾಂಕ್‌ಗಳು  ನಗದು ವಹಿವಾಟಿನ ಮೇಲೆ  ನಿರ್ವಹಣಾ ಶುಲ್ಕ ಮತ್ತು ತೆರಿಗೆ ಆಕರಿಸುವುದನ್ನು  ಈಗಾಗಲೇ ಜಾರಿಗೆ ತಂದಿವೆ. ಇದು ಉಳಿತಾಯ ಮತ್ತು ಸಂಬಳ ಖಾತೆಗಳಿಗೆ ಅನ್ವಯವಾಗಲಿದೆ. ಉಚಿತ ನಗದು ವಹಿವಾಟಿನ ಮಿತಿಗಳ ಸಂಖ್ಯೆ  ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಬೇರೆ, ಬೇರೆಯಾಗಿದೆ.

ಡಿಜಿಟಲ್‌ ವಹಿವಾಟಿಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಆಂಧ್ರ  ಪ್ರದೇಶ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ರಚಿಸಿದ ಮುಖ್ಯಮಂತ್ರಿಗಳ ಸಮಿತಿಯು ₹50 ಸಾವಿರಕ್ಕಿಂತ ಹೆಚ್ಚಿನ ನಗದು ವಹಿವಾಟಿನ ಮೇಲೆ ತೆರಿಗೆ ವಿಧಿಸುವಂತೆ ಶಿಫಾರಸು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT