ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗ ಸರ್ಕಾರವೂ ಹೇಳುತ್ತಿದೆ ‘ಉಕ್ಕಿನ ಸೇತುವೆ ಬೇಡ’

ಭ್ರಷ್ಟಾಚಾರದ ಸ್ಮಾರಕವಾಗಲಿದೆ ಎಂಬ ಆತಂಕ
Last Updated 2 ಮಾರ್ಚ್ 2017, 19:55 IST
ಅಕ್ಷರ ಗಾತ್ರ

ಬೆಂಗಳೂರು: ವಿವಾದಿತ ಉಕ್ಕಿನ ಸೇತುವೆ ಕಾಮಗಾರಿಯಲ್ಲಿ ಕಪ್ಪ ಕಾಣಿಕೆ ಪಡೆದಿಲ್ಲ, ಪಾರದರ್ಶಕವಾಗಿ ಯೋಜನೆ ಅನುಷ್ಠಾನವಾಗಲಿದೆ ಎಂದು ಪ್ರತಿಪಾದಿಸುತ್ತಿದ್ದ ಸಚಿವರು, ಕಾಂಗ್ರೆಸ್‌ ಶಾಸಕರು ಯೋಜನೆ ರದ್ದತಿಗೆ ಪರೋಕ್ಷವಾಗಿ ಒತ್ತಾಯಿಸಿದ ಘಟನೆ ಗುರುವಾರ ನಡೆಯಿತು.

ಬೆಂಗಳೂರಿನ ನೀರಿನ ಸಮಸ್ಯೆ ನೆಪದಲ್ಲಿ ನಡೆದ ಸಭೆಯಲ್ಲಿ ಆರಂಭದಲ್ಲಿ ಮಾತನಾಡಿದ ಎನ್.ಎ. ಹ್ಯಾರಿಸ್‌, ಉಕ್ಕಿನ ಸೇತುವೆ ಬಗ್ಗೆ ಹೊರಗಡೆ ಹಲವು ಅನುಮಾನಗಳು ಮೂಡಿವೆ. ಇದು ಗಂಭೀರವಾದ ವಿಷಯವಾಗಿದ್ದು ಚರ್ಚೆಗೆ ಅವಕಾಶ ನೀಡಬೇಕು ಎಂದು ಬೇಡಿಕೆ ಇಟ್ಟರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ದಿನೇಶ ಗುಂಡೂರಾವ್‌ ಮಾತನಾಡಿ, ಉಕ್ಕಿನ ಸೇತುವೆ ಗುತ್ತಿಗೆಗಾಗಿ ಕಪ್ಪಕಾಣಿಕೆ ಪಡೆಯಲಾಗಿದೆ ಎಂಬ ಆಪಾದನೆಯಿಂದಾಗಿ ಯೋಜನೆ ಮುಂದುವರಿಸಿದರೆ ಭ್ರಷ್ಟಾಚಾರದ ಸ್ಮಾರಕವಾಗಿ ಉಳಿಯುವ ಆತಂಕ ಇದೆ. ಇದನ್ನು ಕೈಬಿಡುವ ಬಗ್ಗೆ ಯೋಚನೆ ಮಾಡುವುದು ಸೂಕ್ತ ಎಂದರು.

ಕಾಂಗ್ರೆಸ್‌ ಶಾಸಕ ಮುನಿರತ್ನ, ಕೆಲವರು ದಿನಬೆಳಗಾದರೆ ಮರವನ್ನು ಅಪ್ಪಿಕೊಂಡು ನಿಲ್ಲುತ್ತಾರೆ. ಬೆಳಿಗ್ಗೆ, ಸಂಜೆ ಎರಡೂ ಹೊತ್ತು ಕಪ್ಪ ಕಾಣಿಕೆಯದೇ ಚರ್ಚೆ ನಡೆದಿದೆ.  ಯೋಜನೆ ಬೇಕೇ ಬೇಡವೇ ಎಂಬ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಸಮಿತಿ ರಚಿಸಿ. ಇದರ ಬಗ್ಗೆ ಬಹಿರಂಗ ಚರ್ಚೆಯಾಗಲಿ. ಬೆಂಗಳೂರಿನವರಿಗೆ ಈ ಯೋಜನೆ ಬೇಡ ಎಂದರೆ ನಮಗೂ ಯೋಜನೆ ಬೇಡ. ಕೈಬಿಡಿ ಎಂದು ಆಗ್ರಹಿಸಿದರು.

ಆಗ ಮಧ್ಯ ಪ್ರವೇಶಿಸಿದ  ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ‘ನೀರಿನ ಬಗ್ಗೆ ಮಾತನಾಡಿ, ಉಕ್ಕಿನ ಸೇತುವೆ ಬಗ್ಗೆಯಲ್ಲ. ಪರಿಸರ ನಾಶದ ಯೋಜನೆ ಬೇಡ’ಎಂದು ಹೇಳಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ರಾಮಲಿಂಗಾರೆಡ್ಡಿ, ಉಕ್ಕಿನ ಸೇತುವೆಯಿಂದ ಪರಿಸರ ಹಾಳಾಗುತ್ತದೆ. ಮರ ಕಡಿಯಬೇಕಾಗುತ್ತದೆ ಎಂದರೆ ಕೆ.ಆರ್‌.ಪುರ–ಸಿಲ್ಕ್‌ ಬೋರ್ಡ್‌ ಮಧ್ಯದ ಮೆಟ್ರೊ ಯೋಜನೆಗೂ ಮರ ಕಡಿಯಬೇಕಾಗುತ್ತದೆ. ಯಾವುದೇ ಯೋಜನೆಯನ್ನೂ ಕೈಗೆತ್ತಿಕೊಳ್ಳಲಾಗುವುದಿಲ್ಲ. ಕಪ್ಪ ಕಾಣಿಕೆ ಹೆಸರಿನಲ್ಲಿ ಆಪಾದನೆ ಮಾಡಿ, ಉಕ್ಕಿನ ಸೇತುವೆ ಅಡ್ಡಿ ಪಡಿಸುತ್ತಿರುವ ಬಿಜೆಪಿಯವರಿಗೆ  ಮಲ್ಲೇಶ್ವರ, ಹೆಬ್ಬಾಳ, ಬ್ಯಾಟರಾಯನಪುರ, ಯಲಹಂಕ ಕ್ಷೇತ್ರದ ಜನರು ಶಾಪ ಹಾಕುತ್ತಾರೆ. ಮುಂದಿನ ಚುನಾವಣೆಯಲ್ಲಿ ಬುದ್ದಿ ಕಲಿಸುತ್ತಾರೆ ಎಂದರು.

ಇದಕ್ಕೆ ಬಿಜೆಪಿ ಶಾಸಕರು ತಕರಾರು ತೆಗೆದರಲ್ಲದೇ, ಕಪ್ಪ ಪಡೆದ ನಿಮಗೆ ಮುಂದಿನ ಚುನಾವಣೆಯಲ್ಲಿ ಜನರು ಪಾಠ ಕಲಿಸುತ್ತಾರೆ ಎಂದು ಎದಿರೇಟು ನೀಡಿದರು.

ಇದಕ್ಕೆ ತಿರುಗೇಟು ಕೊಟ್ಟ ರಾಮಲಿಂಗಾರೆಡ್ಡಿ, ಬಿಜೆಪಿ ಅಭಿವೃದ್ಧಿ ವಿರೋಧಿ.  ನಿಮಗೆ ಬೆಂಗಳೂರು ಅಭಿವೃದ್ಧಿ ಬೇಕಿಲ್ಲ ಎಂದು ಜರಿದರು. ‘ಹೌದು, ಅದಕ್ಕಾಗಿಯೇ ಕೋಟಿಗಟ್ಟಲೇ ಕಿಕ್‌ ಬ್ಯಾಕ್‌ ಪಡೆದಿದ್ದೀರಲ್ಲವೇ’ ಎಂದು ಲಿಂಬಾವಳಿ, ವೈ.ಎ. ನಾರಾಯಣಸ್ವಾಮಿ ಪ್ರತಿಕ್ರಿಯೆ ನೀಡಿದರು.

‘ಸಾಕ್ಷಿ ಇದೆಯೇ ಕೊಡಿ, ಯಾರ್ರೀ ಕಿಕ್‌ಬ್ಯಾಕ್‌  ಕೊಟ್ಟಿದ್ದಾರೆ’ ಎಂದು ಸಚಿವರಾದ ಎಂ.ಆರ್‌. ಸೀತಾರಾಂ, ಜಾರ್ಜ್‌ ಪ್ರಶ್ನಿಸಿದರು.
ಸಭೆಯ ಉದ್ದಕ್ಕೂ ನೀರಿನ ಬದಲು  ಉಕ್ಕಿನ ಸೇತುವೆಯೇ ಪ್ರಧಾನ ಚರ್ಚೆಯ ವಸ್ತುವಾಗಿತ್ತು.

ಎನ್‌ಜಿಟಿ ಭಯವೂ ಕಾರಣವೇ?
ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯಲ್ಲಿ (ಎನ್‌ಜಿಟಿ) ಸಿಟಿಜನ್‌ ಆ್ಯಕ್ಷನ್‌ ಫೋರಂ ಹಾಗೂ ಸಿಟಿಜನ್ಸ್‌ ಆಫ್‌ ಬೆಂಗಳೂರು ಸಂಘಟನೆಯ ಪರ ವಕೀಲರು ಪ್ರಬಲವಾಗಿ ವಾದ ಮಂಡಿಸಿದ್ದರು. ಆದರೆ, ಬಿಡಿಎ ಪರ ವಕೀಲರ ವಾದ ದುರ್ಬಲವಾಗಿತ್ತು. ಇನ್ನೊಂದು ವಾರದಲ್ಲಿ ಎನ್‌ಜಿಟಿ ಅಂತಿಮ ಆದೇಶ ಪ್ರಕಟಿಸಲಿತ್ತು. ‘ಪ್ರಕರಣದಲ್ಲಿ ಸೋಲಾಗುತ್ತದೆ ಎಂಬ ಸುಳಿವು ರಾಜ್ಯ ಸರ್ಕಾರಕ್ಕೆ ಸಿಕ್ಕಿತ್ತು. ಇದು ಸಹ ಯೋಜನೆ ರದ್ದುಪಡಿಸಲು ಕಾರಣ. ಯೋಜನೆ ಕೈಬಿಡಲು ಎನ್‌ಜಿಟಿ ಆದೇಶಿಸಿದ್ದರೆ ಸರ್ಕಾರಕ್ಕೆ ಮುಖಭಂಗವಾಗುತ್ತಿತ್ತು’ ಎಂದು ಬಿಡಿಎ ಮೂಲಗಳು ತಿಳಿಸಿವೆ.



‘ಕಾರ್ಯಾದೇಶ ನೀಡಿರಲಿಲ್ಲ’
‘ಜನರ ವಿರೋಧದ ಕಾರಣ ಯೋಜನೆ ಕೈಬಿಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇದರಲ್ಲಿ ಬಿಡಿಎ ಪಾತ್ರ ಇಲ್ಲ. ರಾಜ್ಯ ಸರ್ಕಾರ ಸೂಚಿಸಿದ ಯೋಜನೆಯನ್ನು ನಾವು ಕೈಗೆತ್ತಿಕೊಳ್ಳುತ್ತೇವೆ. ನಮಗೆ ಯಾವ ಹಿತಾಸಕ್ತಿಯೂ ಇಲ್ಲ. ಎಲ್ ಆ್ಯಂಡ್‌ ಟಿ ಕಂಪೆನಿಗೆ ನಾವು ಕಾರ್ಯಾದೇಶ ಪತ್ರವನ್ನೂ ಕೊಟ್ಟಿಲ್ಲ. ಹಾಗಾಗಿ ಅವರಿಗೆ ಹಣ ಪಾವತಿಸುವ ಪ್ರಮೇಯವೇ ಇಲ್ಲ.  ಒಪ್ಪಿಗೆ ಪತ್ರ ಮಾತ್ರ ಕೊಟ್ಟಿದ್ದೇವೆ’ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಸಭೆಗೆ ಗೋವಿಂದರಾಜ್‌ ಗೈರು
ಬೆಂಗಳೂರಿನ ನೀರಿನ ಸಮಸ್ಯೆ ನೆಪದಲ್ಲಿ ಉಕ್ಕಿನ ಸೇತುವೆ ರದ್ದುಪಡಿಸಲು ಗುರುವಾರ ಕರೆದಿದ್ದ ಸಭೆಗೆ ವಿಧಾನಪರಿಷತ್ತಿನ ಕಾಂಗ್ರೆಸ್‌ ಸದಸ್ಯ ಕೆ. ಗೋವಿಂದರಾಜ್‌ ಪಾಲ್ಗೊಂಡಿರಲಿಲ್ಲ. ಬೆಂಗಳೂರನ್ನು ಪ್ರತಿನಿಧಿಸುವ ಸಚಿವ ರೋಷನ್‌ ಬೇಗ್‌ ಹೊರತು ಎಲ್ಲಾ ಸಚಿವರು, ಕಾಂಗ್ರೆಸ್ ಶಾಸಕರು, ವಿಧಾನಪರಿಷತ್ತಿನ ಕಾಂಗ್ರೆಸ್‌ ಸದಸ್ಯರು ಭಾಗವಹಿಸಿದ್ದರು. ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿಯೂ ಆಗಿರುವ ಗೋವಿಂದರಾಜ್‌ ಅನುಪಸ್ಥಿತಿ ಕುರಿತು ಶಾಸಕರು ಪರಸ್ಪರ ಚರ್ಚಿಸುತ್ತಿದ್ದುದು ಕೇಳಿಬಂತು.

ಪರವಾಗಿಯೂ ಹೋರಾಟ
ಉಕ್ಕಿನ ಸೇತುವೆ ಯೋಜನೆಯನ್ನು ಅನುಷ್ಠಾನ ಮಾಡಬೇಕು ಎಂದು ಆಗ್ರಹಿಸಿ  ಹೆಬ್ಬಾಳ ನಾಗರಿಕರ ಹಿತರಕ್ಷಣಾ ಸಮಿತಿಯಿಂದ ಸಹಿ ಸಂಗ್ರಹ ಅಭಿಯಾನ ನಡೆದಿತ್ತು.  ಎರಡು ಸಲ ಪ್ರತಿಭಟನೆ ಮಾಡಲಾಗಿತ್ತು. ‘ಹೆಬ್ಬಾಳದ 80 ಸಾವಿರಕ್ಕೂ ಅಧಿಕ ಮಂದಿ ಪ್ರತಿದಿನ ಸಂಚಾರ ದಟ್ಟಣೆಯಿಂದ ಕಿರಿಕಿರಿ, ಒತ್ತಡ, ಪರಿಸರ ಮಾಲಿನ್ಯದಂತಹ ತೊಂದರೆ ಅನುಭವಿಸುತ್ತಿದ್ದಾರೆ. ಅದಕ್ಕೆ ಪರಿಹಾರ ಇಲ್ಲವೇ’ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದರು.

‘ರಾಜೀವ್‌ ನಿಲುವು ರಾಜ್ಯಕ್ಕೆ ಮಾರಕ’
‘ಬಿಜೆಪಿ ಬೆಂಬಲ ಪಡೆದು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ರಾಜೀವ್‌ ಚಂದ್ರಶೇಖರ್‌ ನಮ್ಮ ರಾಜ್ಯದ ಅಭಿವೃದ್ಧಿಗೆ ಮಾರಕವಾದ ನಿಲುವು ತಾಳುತ್ತಿದ್ದಾರೆ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌  ಹರಿಹಾಯ್ದರು.

ರಾಜ್ಯ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳಿಂದ  ಬೆಂಗಳೂರು ಶರವೇಗದಲ್ಲಿ ಬೆಳೆಯುತ್ತಿದೆ. ಇದನ್ನು ಸಹಿಸಲಾಗದೇ ರಾಜೀವ್‌ ಅವರು ಪಕ್ಕದ ರಾಜ್ಯದ ಜತೆ ಸೇರಿಕೊಂಡು ಸರ್ಕಾರ, ಬೆಂಗಳೂರಿನ ಅಭಿವೃದ್ಧಿ  ವಿರುದ್ಧ ನಿಂತಿದ್ದಾರೆ ಎಂದು ದೂಷಿಸಿದರು.

ಉಕ್ಕಿನ ಸೇತುವೆಯಲ್ಲಿ ₹400 ಕೋಟಿ ಕಿಕ್‌ಬ್ಯಾಕ್‌ ಪಡೆಯಲಾಗಿದೆ ಎಂದು ಆರೋಪಿಸಿದ್ದ ಅವರು, ಇತ್ತೀಚೆಗೆ ಲೋಕಾಯುಕ್ತಕ್ಕೆ ಪತ್ರ ಬರೆದಿದ್ದಾರೆ.

ಬಡವರು, ಮಧ್ಯಮವರ್ಗದವರಿಗೆ ಅನುಕೂಲ ಮಾಡಿಕೊಡಲು ಅಕ್ರಮ–ಸಕ್ರಮ ಯೋಜನೆ ಜಾರಿಗೊಳಿಸಲು ಮುಂದಾದಾಗ ಅದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಹೋದರು. ಯಾವುದೇ ರಾಜ್ಯದಲ್ಲಿಯೂ ಕೆರೆಗಳ ಸಂರಕ್ಷಿತ ವಲಯದ ವ್ಯಾಪ್ತಿಯ 75 ಮೀಟರ್‌ ಎಂದು ಇಲ್ಲ. ಹಸಿರು ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ ಅವರ ನಮ್ಮ ಬೆಂಗಳೂರು ಫೌಂಡೇಷನ್‌, ಬೆಂಗಳೂರಿಗೆ ಮಾರಕವಾಗುವ ತೀರ್ಪು ಕೊಡಿಸಿತು ಎಂದು ದೂರಿದರು.

ಸಮರ್ಥನೆಯ ಈ ಪರಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಅವರು ಯೋಜನೆಯನ್ನು ಸಮರ್ಥಿಸಿಕೊಂಡಿದ್ದ ಪರಿ ಇದು...

ಸಿದ್ದರಾಮಯ್ಯ
ಅಕ್ಟೋಬರ್‌ 9:
ಸೇತುವೆ ಇಲ್ಲದಿದ್ದರೆ ಹಾರ್ಕೊಂಡು ಹೋಗ್ತಿಯಾ

ಅಕ್ಟೋಬರ್‌ 19: ನಾವು ಪರಿಸರ ನಾಶವಾಗಲಿ ಎನ್ನುವವರು ಅಲ್ಲ. ಯಾವುದೇ ಯೋಜನೆ ಜಾರಿ ಮಾಡುವಾಗ ಕೆಲವು ಮರಗಳು ಹೋಗುವುದು ಸಹಜ. ಹೊಟ್ಟೆ ಉರಿಯಿಂದ ಹಾಗೂ ರಾಜಕೀಯ ಕಾರಣದಿಂದ ಬಿಜೆಪಿಯವರು ಈ ಯೋಜನೆಗೆ ವಿರೋಧ ಮಾಡುತ್ತಿದ್ದಾರೆ.

ಅಕ್ಟೋಬರ್‌ 31: 2010ರಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಪ್ರಸ್ತಾವ ಸಿದ್ದಪಡಿಸ ಲಾಗಿತ್ತು. 2014–15ರ ಬಜೆಟ್‌ ನಲ್ಲಿ ನಾನು ಯೋಜನೆಯನ್ನು ಪ್ರಕಟಿಸಿದ್ದೆ. ಅದರಂತೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ ಟೆಂಡರ್‌ ಕರೆಯಲಾಗಿತ್ತು. ಕಾನೂನಿನ ಪ್ರಕಾರ ಅತಿ ಕಡಿಮೆ ದರ ನಮೂದಿಸಿರುವ ಎಲ್ ಅಂಡ್‌ ಟಿ ಕಂಪೆನಿಗೆ ಕಾಮಗಾರಿಯ ಗುತ್ತಿಗೆ ನೀಡಲಾಗಿದೆ. ರಾಜಕೀಯ ಕಾರಣಕ್ಕಾಗಿ ಬಿಜೆಪಿ ವಿರೋಧ ಮಾಡುತ್ತಿದೆ.

ಕೆ.ಜೆ. ಜಾರ್ಜ್‌ 
ಅಕ್ಟೋಬರ್‌ 9: ಯಾವುದೇ ಕಾರಣಕ್ಕೂ ಯೋಜನೆ ಕೈಬಿಡುವುದಿಲ್ಲ. ಈ ವಿಷಯದಲ್ಲಿ ಸರ್ಕಾರದ ನಿರ್ಧಾರವೇ ಅಂತಿಮ.

ಅಕ್ಟೋಬರ್‌ 13: ಯೋಜನೆ ಜಾರಿಗೆ ಮುನ್ನ ಸಾರ್ವಜನಿಕ ಅಭಿಪ್ರಾಯ ಪಡೆದಿದ್ದೇವೆ. ಶೇ 73 ಮಂದಿ ಇದನ್ನು ಬೆಂಬಲಿಸಿದ್ದಾರೆ.

ಅಕ್ಟೋಬರ್‌ 14: ಉಕ್ಕಿನ ಮೇಲ್ಸೇತುವೆ ಹೆಬ್ಬಾಳ ಮೇಲ್ಸೇತುವೆ ವರೆಗೆ ಮಾತ್ರ ಅಲ್ಲ. ಅದನ್ನು ಎಸ್ಟೀಮ್ ಮಾಲ್‌ ವರೆಗೆ ವಿಸ್ತರಿಸುತ್ತೇವೆ.

ಅಕ್ಟೋಬರ್‌ 21: ಈ ಸೇತುವೆಗೆ ₹400 ಕೋಟಿ ವೆಚ್ಚ ಹೆಚ್ಚಿರುವ ಬಗ್ಗೆ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯುತ್ತೇವೆಯೋ, ಬಿಡುತ್ತೇವೋ ಅದರ ಉಸಾಬರಿ ನಿಮಗೇಕೆ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಏಕೆ ಮಾಡುತ್ತೀರಿ?

ಸೇತುವೆಯ ಇದುವರೆಗಿನ ಹಾದಿ...
* ಅಕ್ಟೋಬರ್‌ 7: ₹1800 ಕೋಟಿ ಮೊತ್ತದ ಈ ಯೋಜನೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ.

* ಅಕ್ಟೋಬರ್‌ 21: ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ ಯೋಜನೆಗೆ ಅನುಮೋದನೆ.

* ಅಕ್ಟೋಬರ್‌ 28: ಹಸಿರು ನ್ಯಾಯಮಂಡಳಿಯು ರಿಟ್‌ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿತ್ತು. ಮುಂದಿನ ವಿಚಾರಣೆಯವರೆಗೆ ಯೋಜನೆಗೆ ತಡೆಯಾಜ್ಞೆ ನೀಡಿತ್ತು.

* ಡಿಸೆಂಬರ್‌ 21: ಕಾಮಗಾರಿಗೆ ನೀಡಿದ್ದ ತಡೆಯಾಜ್ಞೆ 2017ರ ಜ. 18ರ ವರೆಗೆ ವಿಸ್ತರಣೆ. ‘ಯೋಜನೆ ಸಂಬಂಧ ಮಣ್ಣು ಪರೀಕ್ಷೆ ಹಾಗೂ ಸರ್ವೆ ನಡೆಸುವುದಕ್ಕೆ ಯಾವುದೇ ಅಡ್ಡಿ ಇಲ್ಲ. ಯಾವುದೇ ಕಾರಣಕ್ಕೂ ಕಾಮಗಾರಿ ಆರಂಭಿಸಬಾರದು’ ಎಂದು ಎನ್‌ಜಿಟಿ ತಾಕೀತು ಮಾಡಿತ್ತು.

* ಡಿಸೆಂಬರ್‌ 18: ತಡೆಯಾಜ್ಞೆ ಜನವರಿ 30ರವರೆಗೆ ಮತ್ತೆ ವಿಸ್ತರಣೆ.

* ಡಿಸೆಂಬರ್‌ 30: ಕಾಮಗಾರಿಗೆ ಮಣ್ಣು ಪರೀಕ್ಷೆ ನಡೆಸಲು ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರ.

* ಜನವರಿ 2: ಮಣ್ಣು ಪರೀಕ್ಷೆ ಆರಂಭ

* ಜನವರಿ 30: ಯೋಜನೆಗೆ ಸಂಬಂಧಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯಲ್ಲಿ (ದಕ್ಷಿಣ ವಲಯ) ಮತ್ತೆ ವಿಚಾರಣೆ ಆರಂಭ.

* ಜನವರಿ 31: ಎನ್‌ಜಿಟಿಯಲ್ಲಿ ಬಿಡಿಎ ಪರ ವಕೀಲರಿಂದ ವಾದ ಮಂಡನೆ

* ಫೆ.1: ವಾದ– ಪ್ರತಿವಾದ ಅಂತ್ಯ. ಆದೇಶ ಕಾಯ್ದಿರಿಸಿದ ಎನ್‌ಜಿಟಿ
* * *
ಹೋರಾಟಗಾರರ ಅಭಿಪ್ರಾಯ...
ಬಸ್‌ ಓಡಿಸಲು ಈ ಹಣ ನೀಡಲಿ

ಪ್ರಕರಣಕ್ಕೆ ಸಂಬಂಧಿಸಿ ಎನ್‌ಜಿಟಿ ಒಂದು ವಾರದಲ್ಲಿ ಆದೇಶ ಪ್ರಕಟಿಸಲಿತ್ತು. ಅದಕ್ಕೂ ಮುನ್ನವೇ ಯೋಜನೆಯನ್ನು ಹಿಂಪಡೆದಿರುವುದು ಉತ್ತಮ ನಿರ್ಧಾರ. ಈ ಬಗ್ಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಎನ್‌ಜಿಟಿಗೆ ಅಫಿಡವಿಟ್‌ ಸಲ್ಲಿಸಬೇಕು. ಸಂಚಾರ ದಟ್ಟಣೆಗೆ ಉಕ್ಕಿನ ಸೇತುವೆ, ಮೇಲ್ಸೇತುವೆ ನಿರ್ಮಾಣ ಪರಿಹಾರ ಅಲ್ಲ. ಈ ಯೋಜನೆಗೆ ರಾಜ್ಯ ಸರ್ಕಾರ ₹2,200 ಕೋಟಿ ವೆಚ್ಚ ಮಾಡಲು ಉದ್ದೇಶಿಸಿತ್ತು. ಈಗ ಹಣವನ್ನು ಬಿಎಂಟಿಸಿಗೆ ನೀಡಲಿ. ಅದರಿಂದ ಸಂಸ್ಥೆ 2,500 ಹವಾನಿಯಂತ್ರಿತ ಬಸ್‌ಗಳನ್ನು ಖರೀದಿ ಮಾಡಬಹುದು. ಆ ಬಸ್‌ಗಳ ಮೂಲಕ ನಿತ್ಯ 12 ಲಕ್ಷ ಮಂದಿ ಪ್ರಯಾಣ ಮಾಡಬಹುದು.
ವಿ. ಬಾಲಸುಬ್ರಮಣಿಯನ್‌
ನಿವೃತ್ತ  ಹೆಚ್ಚುವರಿ ಮುಖ್ಯ ಕಾರ್ಯದರ್ಶಿ. 

ಬೆಂಗಳೂರಿನ ಜನರ ಜಯ
ಸಾರ್ವಜನಿಕ ಅಭಿಪ್ರಾಯ ಪಡೆಯದೆ ತರಾತುರಿಯಲ್ಲಿ ಈ ಯೋಜನೆ ಅನುಷ್ಠಾನ ಮಾಡಲು ಸರ್ಕಾರ ಮುಂದಾಗಿತ್ತು. ಈಗ ಅಷ್ಟೇ ವೇಗದಲ್ಲಿ ಹಿಂದಕ್ಕೆ ಸರಿದಿದೆ. ಇದು ಬೆಂಗಳೂರಿನ ಜನರ ವಿಜಯ. ಜನರ ಸೇವೆಗಾಗಿ ಇರುವ ವರು ಎಂಬುದನ್ನು ಸರ್ಕಾರ ಹಾಗೂ ಜನಪ್ರತಿನಿಧಿಗಳು ಮೊದಲು ಅರಿತುಕೊಳ್ಳಬೇಕು. ನಗರದ ಪರಂಪರೆ ಹಾಗೂ ಅಭಿವೃದ್ಧಿಗಾಗಿ ಮಾಡಿರುವ ಯುದ್ಧದಲ್ಲಿ ನಾವೆಲ್ಲ ಭಾಗಶಃ ಗೆದ್ದಿದ್ದೇವೆ. ನೀರಿನ ಬಿಕ್ಕಟ್ಟು, ಕಸ ಸಮಸ್ಯೆ, ಬೆಳ್ಳಂದೂರು ಕೆರೆ ಮಾಲಿನ್ಯ, ಮಕ್ಕಳ ಸುರಕ್ಷತೆ, ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರದ ನಿರ್ಲಕ್ಷ್ಯ ಹಾಗೂ ಭ್ರಷ್ಟಾಚಾರ ವ್ಯಾಪಕ ಪ್ರಮಾಣದಲ್ಲಿ ಇದೆ. ಅವುಗಳ ವಿರುದ್ಧ ಹೋರಾಟ ಮಾಡಬೇಕಿದೆ.
ರಾಜೀವ್‌ ಚಂದ್ರಶೇಖರ್,
ರಾಜ್ಯಸಭಾ ಸದಸ್ಯ.

ನಾಗರಿಕರಿಗೆ ವಿಶೇಷ ದಿನ
ಸರ್ಕಾರದ ನಿರ್ಧಾರ ಸ್ವಾಗತಾರ್ಹ. ತಡವಾಗಿಯಾದರೂ ಒಳ್ಳೆಯ ನಿರ್ಧಾರ  ಪ್ರಕಟಿಸಿದೆ. ಇದು ಬೆಂಗಳೂರಿನ ಜನರ ಪಾಲಿಗೆ ವಿಶೇಷ ದಿನ. ಯಾವುದೇ ಯೋಜನೆ ಅನುಷ್ಠಾ ನಕ್ಕೆ ಮುನ್ನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಪರಿಸರ ಪೂರಕ ವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಬೇಕು. ಮೆಟ್ರೊ  ಯೋಜನೆಯ ರೀತಿಯಲ್ಲೇ ವ್ಯವಸ್ಥಿತವಾಗಿ  ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು.
ನರೇಶ್‌ ನರಸಿಂಹನ್‌,
ಹೋರಾಟದ ಮಂಚೂಣಿಯಲ್ಲಿದ್ದವರು

ಹೋರಾಟದಲ್ಲಿ ಕೈಜೋಡಿಸಿದ ಎಲ್ಲರಿಗೂ ಇದು ಶ್ರೇಷ್ಠ ಕ್ಷಣ. ಇದು ದೊಡ್ಡ ಗೆಲುವು. ಇದು ಮುಂದಿನ ಹೋರಾಟಕ್ಕೂ ಸ್ಫೂರ್ತಿ ನೀಡಲಿದೆ.
ಪ್ರಿಯಾ ಚೆಟ್ಟಿ ರಾಜಗೋಪಾಲ್‌,
ಸಿಎಫ್‌ಬಿ ಸದಸ್ಯೆ

ಯೋಜನೆಯ ವಿರುದ್ಧದ ಹೋರಾ ಟದಲ್ಲಿ ಕೈಜೋಡಿಸಿದ  ವಿವಿಧ ಸಂಘಟನೆಗಳು, ಬಡಾವಣೆ ನಿವಾಸಿ ಗಳ ಕ್ಷೇಮಾಭಿವೃದ್ಧಿ ಸಂಘಟನೆಗಳು, ಬುದ್ಧಿಜೀವಿಗಳು ಹಾಗೂ ನಾಗರಿಕರಿಗೆ ಆಭಾರಿ.
ಶ್ರೀನಿವಾಸ ಅಲವಿಲ್ಲಿ,
ಸಿಎಫ್‌ಬಿ ಸದಸ್ಯ
* * *
ಹೋರಾಟದ ವೇಳೆ ಗಣ್ಯರು ಹೇಳಿದ್ದು...
ನನ್ನ ಮುತ್ತಜ್ಜ, ಅಜ್ಜ, ಅಪ್ಪ ಸತ್ತಿದ್ದು ಬೆಂಗಳೂರಿನಲ್ಲೇ. ನಾನು ಬೆಂಗಳೂರಿನಲ್ಲೇ ಸಾಯಬಹುದು. ಸಾಯುವ ಮುನ್ನ ಇಲ್ಲಿ ಉಕ್ಕಿನ ಸೇತುವೆಯನ್ನು ನೋಡಲು ಬಯಸುವುದಿಲ್ಲ.
–ರಾಮಚಂದ್ರ ಗುಹಾ,
ಇತಿಹಾಸತಜ್ಞ

ಬೆಂಗಳೂರಿನ ಅಸ್ಮಿತೆ ದೃಷ್ಟಿಯಿಂದ ಉಕ್ಕಿನ ಸೇತುವೆ ವಿರೋಧಿ ಹೋರಾಟ ಅತ್ಯಂತ ಮಹತ್ವದ್ದು. ಸಾರ್ವಜನಿಕ ವಿಚಾರಕ್ಕಾಗಿ ಬೆಂಗಳೂರಿನ ಜನತೆ ಈ ರೀತಿಯ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ನಾವು ಬೆಂಗಳೂರಿಗರು ಎಂಬುದನ್ನು ಮುಕ್ತವಾಗಿ ವ್ಯಕ್ತಪಡಿಸಲು ಇಲ್ಲಿನವರು ತಡಕಾಡುತ್ತಿದ್ದರು. ಸಾರ್ವಜನಿಕ ಕಾಳಜಿಯನ್ನು ಹಂಚಿಕೊಳ್ಳುವ ಅಸ್ಮಿತೆಯ ಹೊಸ ಮಾರ್ಗವನ್ನು ಇಲ್ಲಿನವರು ಕಂಡುಕೊಂಡಿದ್ದಾರೆ.
–ಸುಂದರ್‌ ಸಾರುಕ್ಕೈ,
ಚಿಂತಕ

ಈಗಿನ ನಗರಗಳು ಜನರ ಯೋಗಕ್ಷೇಮಕ್ಕೆ ಅನುಗುಣವಾಗಿ ರೂಪುಗೊಳ್ಳುತ್ತಿಲ್ಲ. ಜನರ ಆಶಯಕ್ಕೆ ವಿರುದ್ಧವಾಗಿ ಮೂಲಸೌಕರ್ಯ ನಿರ್ಮಿಸಲಾಗುತ್ತಿದೆ. ಉಕ್ಕಿನ ಸೇತುವೆ ನಮ್ಮದು ಎಂಬ ಭಾವನೆ ಜನರಲ್ಲಿ ಬರುವುದೇ ಇಲ್ಲ.
ಡಾ. ಗೋಪಾಲ್‌ ಗುರು,
ಸಮಾಜ ವಿಜ್ಞಾನ ಮತ್ತು ರಾಜಕೀಯ ವಿಜ್ಞಾನ ಪ್ರಾಧ್ಯಾಪಕ, ಜೆಎನ್‌ಯು

ಸಾವಿರಾರು ಜನರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸುತ್ತಾರೆ ಎಂದರೆ ಅವರಿಗೆ ಉಕ್ಕಿನ ಸೇತುವೆ ಬೇಕಿಲ್ಲ. ಸರ್ಕಾರ ಮನ ಬಂದಂತೆ ನಡೆದುಕೊಳ್ಳುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಶೋಭೆ ತರುವಂತಹುದು ಅಲ್ಲ.
ಅರುಂಧತಿ ನಾಗ್‌,
ರಂಗಕರ್ಮಿ

ಆರು ಕಿ.ಮೀ. ಉದ್ದದ ಉಕ್ಕಿನ ಸೇತುವೆಗೆ ₹1,800 ಕೋಟಿ ವೆಚ್ಚ ಮಾಡಿದರೂ ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆ ಆಗದು. ಪರ್ಯಾಯ ಮಾರ್ಗಗಳ ಅಭಿವೃದ್ಧಿಯೇ ಈ ಸಮಸ್ಯೆಗೆ ಪರಿಹಾರ.
ಎನ್‌. ಸಂತೋಷ್‌ ಹೆಗ್ಡೆ,
ನಿವೃತ್ತ ಲೋಕಾಯುಕ್ತ

ಗಿಡಗಳೆಂದರೆ ಮ್ಯಾಜಿಕ್‌ ಅಲ್ಲ. ಒಂದು ಮರವನ್ನು ಅವಲಂಬಿಸಿರುವ ಜೀವಿಗಳ ಬಗ್ಗೆ ನಮ್ಮ ಸಚಿವರಿಗೆ ಪರಿಜ್ಞಾನ ಇಲ್ಲ. ಮುಖ್ಯಮಂತ್ರಿ ಅವರಿಗೇ ಈ ಯೋಜನೆಯ ಪೂರ್ಣ ಅಂದಾಜಿಲ್ಲ.
ಪ್ರೊ.ಜಿ.ಎಸ್‌. ಸಿದ್ದಲಿಂಗಯ್ಯ,
ಹಿರಿಯ ಕವಿ

ಈಗಿನ ವಿನ್ಯಾಸದಂತೆ ಉಕ್ಕಿನ ಸೇತುವೆ ನಿರ್ಮಿಸಿದರೆ ತಾರಾಲಯ, ನಕ್ಷತ್ರ ವೀಕ್ಷಣೆ ಹಾಗೂ ಸಂದೇಶ ರವಾನೆಗೆ ತೊಂದರೆಯಾಗಲಿದೆ.
ಪ್ರೊ. ಯು.ಆರ್‌. ರಾವ್‌,
ಬಾಹ್ಯಾಕಾಶ ವಿಜ್ಞಾನಿ

* * *
ಸೇತುವೆ ಯೋಜನೆ ಅನುಷ್ಠಾನಗೊಂಡಿದ್ದರೆ...
ಒಟ್ಟು 2 ಎಕರೆ 28 ಗುಂಟೆ (ಸರ್ಕಾರಿ ಭೂಮಿ 3 ಎಕರೆ 28 ಗುಂಟೆ)  ಭೂಸ್ವಾಧೀನ ಮಾಡಬೇಕಿತ್ತು.

812 ಮರಗಳು ಬಲಿಯಾಗುತ್ತಿದ್ದವು.

ಸೇತುವೆಯಿಂದಾಗಿ ಬಾಲಬ್ರೂಯಿ ಅತಿಥಿಗೃಹ 3,171 ಚದರ ಮೀಟರ್‌ ಪ್ರದೇಶವನ್ನು ಕಳೆದುಕೊಳ್ಳುತ್ತಿತ್ತು.

ಕಾರ್ಲ್‌ಟನ್‌ ಹೌಸ್‌ನ 380 ಚದರ ಮೀಟರ್‌ ಪ್ರದೇಶ ಹೋಗುತ್ತಿತ್ತು. ಈ ಕಟ್ಟಡಗಳ ಪಾರಂಪರಿಕ ಮೌಲ್ಯಕ್ಕೂ ಧಕ್ಕೆ ಉಂಟಾಗುತ್ತಿತ್ತು.

ಜವಾಹರ್‌ಲಾಲ್‌ ನೆಹರೂ ತಾರಾಲಯಕ್ಕೂ ಧಕ್ಕೆ ಉಂಟಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT