ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಜಿಡಿ ಕಾಮಗಾರಿಗೆ ನಗರೋತ್ಥಾನ ಅನುದಾನ ಬಳಕೆಗೆ ಸದಸ್ಯರ ವಿರೋಧ

Last Updated 3 ಮಾರ್ಚ್ 2017, 5:33 IST
ಅಕ್ಷರ ಗಾತ್ರ

ಕುಂದಾಪುರ: ನಗರೋತ್ಥಾನ ಅನುದಾನದ ವಿಂಗಡಣೆಯ ಕುರಿತು ವಾಕ್ಸಮರ, ಪುರಸಭೆಗೆ ಶಾಸಕರ ಹಾಗೂ ಸರ್ಕಾರದ ಕೊಡುಗೆ ಏನು ಎನ್ನುವ ಕುರಿತು ಪರಸ್ಪರ ಆರೋಪ, ಪುರಸಭೆಗೆ ಕಾಯಂ ಎಂಜಿನಿಯರ್‌ ನೇಮಕಾತಿಗೆ ಆಗ್ರಹ ಸೇರಿದಂತೆ ಹಲವು ವಿಚಾರಗಳ ಚರ್ಚೆಗೆ ಮಂಗಳವಾರ ನಡೆದ ಇಲ್ಲಿನ ಪುರಸಭೆಯ ಸಾಮಾನ್ಯ ಸಭೆ ಸಾಕ್ಷಿಯಾಯಿತು.

ಪುರಸಭೆಗೆ ಸರ್ಕಾರದಿಂದ ಬಂದಿ ರುವ ನಗರೋತ್ಥಾನ ಅನುದಾನವನ್ನು ಒಳಚರಂಡಿ ಯೋಜನೆಯ ಅಪೂರ್ಣ ಕಾಮಗಾರಿಗಾಗಿ ಬಳಕೆ ಮಾಡುವುದಕ್ಕೆ ವಿರೋಧ ವ್ಯಕ್ತ ಪಡಿಸಿದ ಕೋಡಿ ಭಾಗದ ಸದಸ್ಯರು, ಕೋಡಿಯ ನಿವಾಸಿಗಳಿಗೆ ಅಗತ್ಯವಾಗಿರುವ ಕುಡಿಯುವ ನೀರಿಗಾಗಿ ನಗರೋತ್ಥಾನ ಅನುದಾನದಲ್ಲಿ ಒಂದಷ್ಟು ಹಣವನ್ನು ಬಳಕೆ ಮಾಡುವಂತೆ ಆಗ್ರಹಿಸಿದರು.

₹ 7.50 ಕೋಟಿ ಅನುದಾನದಲ್ಲಿ ₹ 1 ಕೋಟಿ ಕುಡಿಯುವ ನೀರಿಗೆ ಮೀಸಲಿಟ್ಟು ಉಳಿದ ಹಣ ಬೇಕಾದರೆ ಯುಜಿಡಿಗೆ ಬಳಸಿಕೊಳ್ಳುವಂತೆ ಪ್ರಭಾಕರ ಕೋಡಿ, ಸಂದೀಪ್‌ ಪೂಜಾರಿ ಕೋಡಿ ಹಾಗೂ  ಜ್ಯೋತಿ ಮೊಗವೀರ ಅವರು ಸಲಹೆ ಮಾಡಿದರು.

ಪುಷ್ಟಾ ಶೇಟ್, ಶಕುಂತಲಾ ಗುಲ್ವಾಡಿ, ಗುಣರತ್ನಾ, ಶ್ರೀಧರ ಶೇರುಗಾರ್ ಮುಂತಾದವರು ಅನುದಾ ನವನ್ನು ಪೂರ್ತಿಯಾಗಿ ಯುಜಿಡಿಗೆ ಬಳಕೆ ಮಾಡಿಕೊಂಡರೆ ನಮ್ಮ ವಾರ್ಡ್‌ಗಳ ಅಭಿವೃದ್ಧಿಯ ಕನಸು ಕನಸಾಗಿಯೇ ಉಳಿಯುತ್ತದೆ ಎಂದರು. 

ಇದಕ್ಕೆ ಆಕ್ಷೇಪಿಸಿದ ರವಿರಾಜ್‌ ಖಾರ್ವಿ ಹಾಗೂ ಇತರರು, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ನಗರೋತ್ಥಾನ ಅನುದಾನವನ್ನು ಯುಜಿಡಿ ಕಾಮಗಾರಿಗೆ ಬಳಸಿಕೊಳ್ಳುವ ತೀರ್ಮಾನವಾದಾಗ ಆಕ್ಷೇಪ ವ್ಯಕ್ತ ಪಡಿಸದವರು ಅನಗತ್ಯವಾಗಿ ಸಭೆಯ ಕಾರ್ಯ ಕಲಾಪ ಕಳೆಯಲು ಪ್ರಯತ್ನಿಸು ತ್ತಿರುವುದು ಸರಿಯಲ್ಲ, ಕಾರ್ಯಸೂಚಿ ಯಂತೆ ಸಭೆ ನಡೆಸುವಂತೆ ಆಗ್ರಹಿಸಿದರು.

ಪರ ಹಾಗೂ ವಿರೋಧ ಅಭಿಪ್ರಾಯ ದವರಿಂದ ಆರೋಪ ಪ್ರತ್ಯಾರೋಪಗಳು ನಡೆದು, ಒಂದು ಹಂತದಲ್ಲಿ ಕುಂದಾಪುರ ಪುರಸಭೆಯ ಅಭಿವೃದ್ಧಿಗೆ ಶಾಸಕರ ಕೊಡುಗೆ ಏನು? ಎನ್ನುವ ಪ್ರಶ್ನೆಗಳು ಬಂತು. ಇದಕ್ಕೆ ಪ್ರತ್ಯುತ್ತರವಾಗಿ ನಿಮ್ಮ ಸರ್ಕಾರ ಏನು ನೀಡಿದೆ? ಎನ್ನುವ ಮಾತುಗಳು ಕೇಳಿ ಬಂದವು.

ಸದಸ್ಯರ ನಡುವೆ ವಾಕ್ಸಮರ ಮುಂದುವರೆಯು ತ್ತಿರುವುದನ್ನು ಗಮನಿಸಿ ಮಧ್ಯ ಪ್ರವೇಶಿಸಿದ ಅಧ್ಯಕ್ಷೆ ವಸಂತಿ ಸಾರಂಗ, ಅನಗತ್ಯ ಚರ್ಚೆ ನಿಲ್ಲಿಸುವಂತೆ ಏರಿದ ಧ್ವನಿಯಲ್ಲಿ ಹೇಳಿದರಲ್ಲದೆ, ಮುಂದೆ ಬರುವ ಅನುದಾನದಲ್ಲಿ ಕೋಡಿಯ ಕುಡಿಯುವ ನೀರಿನ ಯೋಜನೆಗಾಗಿ ಅನುದಾನ ಮೀಸಲಿಡುವ ಕುರಿತು ಭರವಸೆ ವ್ಯಕ್ತಪಡಿಸಿ ಚರ್ಚೆಗೆ ತಾತ್ವಿಕ ಅಂತ್ಯ ಕಾಣಿಸಲು ಪ್ರಯತ್ನಿಸಿದರು.

ಅಧಿಕಾರಿಗಳು ಬಂದಿಲ್ಲ ಎನ್ನುವುದಕ್ಕಾಗಿ ನಿಗದಿತ ಸಮಯವನ್ನು ಮೀರಿ ಸಭೆ ಆರಂಭಿಸಲಾಯಿತು. ಅಧಿಕಾರಿಗಳ ಗೈರು ಹಾಜರಿ ಕುರಿತು ಮಾತನಾಡಿದ ಚಂದ್ರಶೇಖರ ಖಾರ್ವಿ, ಅಧಿಕಾರಿಗಳನ್ನು ಸಭೆಗೆ ಕರೆಸುವ ಹೊಣೆ ಅಧ್ಯಕ್ಷರದ್ದಾಗಿದೆ, ನಾವೇನು ಇಲ್ಲಿ ಕಾಫಿ ಕುಡಿದು ಹೋಗಲು ಬಂದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಸಭೆಯಲ್ಲಿ ಕಾಮಗಾರಿಗಳ ಕುರಿತು ಮಾಹಿತಿ ನೀಡಬೇಕಾದ ಎಂಜಿನಿಯರ್‌ ಇನ್ನೂ ಸಭೆಗೆ ಬಂದಿಲ್ಲ, ಈ ಅಧಿಕಾರಿಗೆ ಇನ್ನೊಂದು ಹೊಣೆ ಇರೋದರಿಂದ ಅದನ್ನು ಮುಗಿಸಿ ಇಲ್ಲಿಗೆ ಬರಬೇಕು, ಅವರು ಬರುವರೆಗೂ ನಾವು ಉತ್ತರಕ್ಕಾಗಿ ಕಾದು ಕುಳಿತುಕೊಳ್ಳಬೇಕು ಎಂದು ಸದಸ್ಯರು ಬೇಸರ ವ್ಯಕ್ತ ಪಡಿಸಿದರು.

ಇದಕ್ಕೆ ಸ್ಪಂದಿಸಿದ ಉಪಾಧ್ಯಕ್ಷ ರಾಜೇಶ್‌ ಕಾವೇರಿ ಪುರಸಭೆಗಾಗಿ ಕಾಯಂ ಎಂಜಿನಿಯರ್‌ ನೇಮಕಾತಿ ಹಾಗೂ ಅಧಿಕಾರಿಗಳ ಕೊರತೆ ನೀಗಿಸುವಂತೆ ಸಂಬಂಧಿಸಿದವರನ್ನು ಒತ್ತಾಯಿಸಲಾಗಿದೆ ಎಂದರು. 

ಅಧ್ಯಕ್ಷೆ ವಸಂತಿ ಮೋಹನ್ ಸಾರಂಗ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಾಜೇಶ್ ಕಾವೇರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೀತಾ, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT