ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಚಟುವಟಿಕೆಗೂ ನೀರಿನ ಸಮಸ್ಯೆ

ಸಣ್ಣಪುಟ್ಟ ಕೆರೆಗಳಲ್ಲೂ ನೀರಿಲ್ಲ ಬತ್ತುತ್ತಿರುವ ಹರದೂರು ಹೊಳೆ
Last Updated 3 ಮಾರ್ಚ್ 2017, 6:43 IST
ಅಕ್ಷರ ಗಾತ್ರ

ಸುಂಟಿಕೊಪ್ಪ:  ಹೋಬಳಿ ವ್ಯಾಪ್ತಿಯಲ್ಲಿರುವ ಸಣ್ಣಪುಟ್ಟ ಕೆರೆಗಳು, ಹೊಳೆಗಳು ನಿಧಾನವಾಗಿ ಬತ್ತಿ ಹೋಗುತ್ತಿದ್ದು, ಕಾಫಿ ಬೆಳೆಗಾರರಿಗೆ ಆತಂಕವಾಗಿದೆ.
ಹೊಳೆಯಲ್ಲಿ ನಿಧಾನವಾಗಿ ನೀರು ಕ್ಷೀಣಿಸುತ್ತಿದೆ. ಕಾರಣ ಕೃಷಿಗೆ ಸಮಸ್ಯೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ.

ಅಲ್ಲಲ್ಲಿ ಅಲ್ಪಸ್ವಲ್ಪ ನೀರಿದೆ. ಪಂಪ್‌ಸೆಟ್‌ ಜೋಡಿಸಿ ಕಾಫಿ ತೋಟಗಳಿಗೆ ಹಾಯಿಸಲು ಅಧಿಕಾರಿಗಳು ಬಿಡುತ್ತಿಲ್ಲ. ಹೀಗಾಗಿ ಬೇಸಿಗೆಯಲ್ಲಿ ಕಾಫಿ ಗಿಡ, ಕಾಳು ಮೆಣಸಿನ ಬಳ್ಳಿಗಳನ್ನು ಉಳಿಸಿಕೊಳ್ಳುವುದು ಹೇಗೆ  ಎಂಬುದೇ ಕೃಷಿಕರ ಆತಂಕ.

ಸದ್ಯಕ್ಕೆ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿಲ್ಲ. ಆದರೆ, ಮಾರ್ಚ್‌ ಕೊನೆಯ ವೇಳೆಗೆ ನೀರಿನ ಸಮಸ್ಯೆ ಕಾಡುವ ಆತಂಕವು ಇದೆ. 

ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಕುಡಿಯುವ ನೀರಿಗೆ ಕೊರತೆ ಕಂಡುಬರುತ್ತಿಲ್ಲ. ಆದರೆ, ಮುಂಜಾಗ್ರತೆಯಾಗಿ 2 ದಿನಕ್ಕೊಮ್ಮೆ ನೀರು ಬಿಡುವ ಮೂಲಕ ಪರಿಹಾರ ಕಂಡುಕೊಳ್ಳಲಾಗುತ್ತಿದೆ. ಈ ಎಲ್ಲ ಬಡಾವಣೆಗಳಿಗೆ ತೊಂದರೆಯಾಗದ ರೀತಿ ಕೊಳವೆಬಾವಿ ಕೊರೆಯಿಸಿ ನೀರು ಪೂರೈಕೆ ಆಗುತ್ತಿದೆ.

1ನೇ ಬಡಾವಣೆ ಮತ್ತು ನಾರ್ಗಾಣೆ ಭಾಗದಲ್ಲಿ ಸ್ವಲ್ಪ ಮಟ್ಟಿಗೆ ನೀರಿಗೆ ಸಮಸ್ಯೆ ಕಂಡುಬಂದಿರುವ ಕಾರಣ ಕೊಳವೆಬಾವಿ ಕೊರೆಯಿಸಲು ಜಿಲ್ಲಾ ಪಂಚಾಯಿತಿಗೆ ಮನವಿ ಮಾಡಲಾಗಿದೆ.

‘ಇನ್ನು ಯಾವುದೇ, ಸೂಕ್ತ ಕ್ರಮ ಕೈಗೊಂಡಿಲ್ಲ. ಬೋರ್‌ವೆಲ್ ಕೊರೆಯಿಸಲು ಅನುಮತಿ ನೀಡಿದರೆ ಆ ಭಾಗದಲ್ಲಿ ನೀರಿನ ಸಂಕಷ್ಟ ಕಡಿಮೆ ಆಗಬಹುದು’ ಎನ್ನುತ್ತಾರೆ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಸ್ ಮೇರಿ ರಾಡ್ರಿಗಸ್.

ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಮೊದಲು ಇದ್ದಷ್ಟು ಸಮಸ್ಯೆ ಕಂಡುಬರುತ್ತಿಲ್ಲ. ಆದರೆ, ಮಾರ್ಚ್‌ನಲ್ಲಿ ನೀರಿನ ಸಮಸ್ಯೆ ಉಂಟಾಗಬಹುದು. ಇದಕ್ಕೆ ಕಾರಣ, ತೋಟದ ಮಾಲೀಕರು ತಮ್ಮ ಭೂಮಿಯಲ್ಲಿ ಗ್ರಾಮ ಪಂಚಾಯಿತಿಯ ಅನುಮತಿ ಪಡೆಯದೇ ತಮಗೆ ಇಷ್ಟ ಬಂದಷ್ಟು ಬೋರ್‌ವೆಲ್ ಕೊರೆಸಿರುವುದು.

ಸದ್ಯ, ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ಬಾಸ್ ಆಗ್ರಹಿಸಿದರು.

ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಕಂಡುಬಂದಿದೆ. ಇಲ್ಲಿನ ಹರದೂರು ಹೊಳೆಯ ನೀರಿನ ಪ್ರಮಾಣ ಸಂಪೂರ್ಣ ಬಹುತೇಕ ಕ್ಷೀಣಿಸಿದೆ.

ಬರಗಾಲದ ನೆನಪು ಹುಟ್ಟುಹಾಕಿದಂತಿದೆ. ಇಲ್ಲಿನ ಜನರಿಗೆ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗುತ್ತಿರುವುದು ಕಂಡುಬಂದಿದೆ. 3ರಿಂದ 4 ದಿನಕ್ಕೊಮ್ಮೆ ನೀರು ಸರಬರಾಜು ಮಾಡುತ್ತಿದ್ದಾರೆ ಎಂದು ಇಲ್ಲಿನ ಗ್ರಾಮಸ್ಥರು ದೂರಿದರು.
-ಎಂ.ಎಸ್‌. ಸುನಿಲ್‌

*
ಹಿಂದೆ ಸುರಿದ ಮಳೆಗೆ ಕಾಫಿ ಗಿಡಗಳಲ್ಲಿ ಹೂವು ಅರಳಿವೆ. ಇದು ಸಾಮಾನ್ಯವಾಗಿ ಏಪ್ರಿಲ್ ನಂತರ ಅರಳು ಹೂವು, ಈಗಲೇ ಅರಳಿದ್ದು,  ಪ್ರಸ್ತುತ ಮಳೆ ಅವಶ್ಯವಾಗಿದೆ.
-ಬಾಲಕೃಷ್ಣ ರೈ,
ಅಧ್ಯಕ್ಷ, ಗ್ರಾಮ ಪಂಚಾಯಿತಿ, ಕೆದಕಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT