ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಬಾರಿಯೂ ಸಿಸಿಟಿವಿ ಕ್ಯಾಮೆರಾ ನೋಟವಿಲ್ಲ!

ಪಿಯು ಪರೀಕ್ಷೆ ಸಮೀಪಿಸುತ್ತಿದ್ದರೂ ಜಿಲ್ಲೆಯ ಬಹಳಷ್ಟು ಕಡೆ ಇನ್ನೂ ಅಳವಡಿಕೆಯಾಗಿಲ್ಲ
Last Updated 3 ಮಾರ್ಚ್ 2017, 7:44 IST
ಅಕ್ಷರ ಗಾತ್ರ

ಕಾರವಾರ: ಈಗಾಗಲೇ ಸುತ್ತೋಲೆ ಹೊರಡಿಸಿದಂತೆ ಪಿಯು ಪರೀಕ್ಷಾ ಕೇಂದ್ರಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಕೆಲಸ ಮಾತ್ರ ಈವರೆಗೂ ಬಹುತೇಕ ಕಡೆ ನಡೆದೇ ಇಲ್ಲ.

ಕಳೆದ ವರ್ಷ ನಡೆದ ದ್ವಿತೀಯ ಪಿ.ಯು.ಸಿ. ಪರೀಕ್ಷೆಯ ಪ್ರಶ್ನೆಪತ್ರಿಕೆ ಸರಣಿ ಸೋರಿಕೆ ಪ್ರಕರಣಗಳಿಂದ ಮುಜುಗರಕ್ಕೀಡಾಗಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆ ಪರೀಕ್ಷೆ ಕೊಠಡಿಯಲ್ಲಿ ಆಗಬಹುದಾದ ನಕಲು ಹಾಗೂ ಇನ್ನಿತರ ಸುರಕ್ಷತೆ ದೃಷ್ಟಿಯಿಂದ ಪರೀಕ್ಷಾ ಕೇಂದ್ರಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಕೆಯನ್ನು ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸಿತ್ತು.

ಆದರೆ ಪರೀಕ್ಷೆ ಸಮೀಪಿಸುತ್ತಿದ್ದರೂ ಜಿಲ್ಲೆಯ ಒಟ್ಟು 29 ಪರೀಕ್ಷಾ ಕೇಂದ್ರಗಳಲ್ಲಿ ಬಹುತೇಕ ಸರ್ಕಾರಿ ಪರೀಕ್ಷಾ ಕೇಂದ್ರಗಳಲ್ಲಿಯೇ ಸಿಸಿ ಕ್ಯಾಮರಾ ಅಳವಡಿಕೆಯಾಗಿಲ್ಲ. ಜಿಲ್ಲೆಯ ಖಾಸಗಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಸಿಸಿಟಿವಿ ಕ್ಯಾಮರಾಗಳು ಅಳವಡಿಕೆ ಯಾಗಿದ್ದು, ಸಿಸಿಟಿವಿ ಕ್ಯಾಮೆರಾ ಬರುವಿಕೆಗೆ ಸರ್ಕಾರಿ ಕಾಲೇಜುಗಳ ಪ್ರಾಂಶುಪಾಲರೇ ಕಾದು ಕುಳಿತಿದ್ದಾರೆ.

ರಾಜ್ಯದ ಹಲವೆಡೆ ಸಾಕಷ್ಟು ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಬಳಿಕ ಎಚ್ಚೆತ್ತುಕೊಂಡ ಸರ್ಕಾರ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಪರೀಕ್ಷಾ ಕೇಂದ್ರಗಳನ್ನು ಹೊಂದಿರುವ ಎಲ್ಲ ಸರ್ಕಾರಿ ಹಾಗೂ ಖಾಸಗಿ ಪದವಿ ಪೂರ್ವ ಕಾಲೇಜುಗಳಿಗೆ ಸಿಸಿಟಿವಿ  ಕ್ಯಾಮೆರಾ ಅಳವಡಿಕೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿತ್ತು.

ಪರೀಕ್ಷಾ ಕೇಂದ್ರಗಳನ್ನು ಹೊಂದಿರುವ ಎಲ್ಲ ಸರ್ಕಾರಿ ಹಾಗೂ ಖಾಸಗಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ತಮ್ಮ ಕಾಲೇಜಿನ ಸಂಚಿತ ನಿಧಿಯಿಂದ ಕೆಟಿಟಿಪಿ ನಿಯಮದಂತೆ ಸಿಸಿ ಕ್ಯಾಮರಾ ಅಳವಡಿಸುವುದಕ್ಕೆ ತಗಲುವ ವೆಚ್ಚ ಭರಿಸಲು ಶಿಕ್ಷಣ ಇಲಾಖೆ ತಿಳಿಸಿತ್ತು. ಆದರೆ ಸರ್ಕಾರಿ ಕಾಲೇಜುಗಳಲ್ಲಿ ಹಣವಿಲ್ಲದೇ ಇದ್ದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಿಗೆ ಮಂಜೂರು ಪ್ರಸ್ತಾವನೆಗೆ ಸಲ್ಲಿಸುವಂತೆ ತಿಳಿಸಲಾಗಿತ್ತು.

ಖಾಸಗಿ ಕಾಲೇಜುಗಳಿಗೆ ಸ್ವಂತ ಖರ್ಚಿನಲ್ಲಿಯೇ ಅಳವಡಿಸಬೇಕು ಎಂದು ಆದೇಶಿಸಿದ್ದರಿಂದ ಬಹುತೇಕ ಕಾಲೇಜುಗಳು ಸಿಸಿ ಕ್ಯಾಮೆರಾ ಅಳವಡಿಸಿಕೊಂಡಿವೆ. ಕ್ಯಾಮೆರಾ ಅಳವಡಿಸಿಕೊಳ್ಳದ ಕಾಲೇಜುಗಳಿಗೆ ಪಿಯುಸಿ ಪರೀಕ್ಷೆ ಆರಂಭಕ್ಕೂ ಪೂರ್ವದಲ್ಲೇ ಅಳವಡಿಕೆಯಾಗುವಂತೆ ನೋಡಿಕೊಳ್ಳಲು ಆಯಾ ಜಿಲ್ಲಾ ಉಪನಿರ್ದೇಶಕರುಗಳಿಗೆ ಸೂಚಿಸಲಾಗಿದೆ.

ರಾಜ್ಯದಲ್ಲಿ ಒಟ್ಟು 1,202 ಸರ್ಕಾರಿ, 637 ಖಾಸಗಿ ಅನುದಾನಿತ ಹಾಗೂ 1,936 ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಿವೆ. ಪ್ರಸಕ್ತ ವರ್ಷದಲ್ಲಿ ಒಟ್ಟು 6,84,247 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, 5,48,903 ಹೊಸಬರು, 30,252 ಪುನರಾವರ್ತಿತ ವಿದ್ಯಾರ್ಥಿಗಳು ಸೇರಿದ್ದಾರೆ. ಅದರಲ್ಲಿ ಕಲಾ ವಿಭಾಗದ 2,17,075 ವಾಣಿಜ್ಯ 2,48423 ಹಾಗೂ ವಿಜ್ಞಾನ 2,18749 ವಿದ್ಯಾರ್ಥಿಗಳು ಒಟ್ಟು 998 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ.

ಜಿಲ್ಲೆಯ ಮಟ್ಟಿಗೆ ಒಟ್ಟು 29ರಲ್ಲಿ ಕೇವಲ 18 ಪರೀಕ್ಷಾ ಕೇಂದ್ರಗಳಿಗೆ ಮಾತ್ರ ಸಿಸಿ ಕ್ಯಾಮರಾಗಳು ಅವಳವಡಿಕೆಯಾಗಿದೆ. ಉಳಿದ 11 ಪರೀಕ್ಷಾ ಕೇಂದ್ರದಲ್ಲಿ ಸಿಸಿ ಕ್ಯಾಮರಾ ಅಳವಡಿಕೆಯಾಗಬೇಕಾಗಿದೆ. ಇವುಗಳಲ್ಲಿ ಬಹುತೇಕ ಕೇಂದ್ರಗಳು ಸರ್ಕಾರಿ ಕಾಲೇಜುಗಳಾಗಿವೆ.

ಇದೇ 9 ರಿಂದ ಪರೀಕ್ಷೆಗಳು ಆರಂಭವಾಗಲಿದ್ದು, ಜಿಲ್ಲೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಯಾಗದೆ ಇರುವ ಕಾಲೇಜುಗಳಿಗೆ ಈ ವರ್ಷವಾದರೂ ಸಿಸಿ ಕ್ಯಾಮರಾ ಭಾಗ್ಯ ಲಭಿಸುವುದೇ ಎಂದು ಶಿಕ್ಷಣ ಪ್ರೇಮಿಗಳು ಕಾದು ನೋಡುತ್ತಿದ್ದಾರೆ.
–ದೇವರಾಜ ಭಟ್ಕಳ

ಸಿಸಿ ಕ್ಯಾಮರಾ ಅಳವಡಿಕೆಯಾಗದ ಜಿಲ್ಲೆಯ ಪರೀಕ್ಷಾ ಕೇಂದ್ರಗಳು
ಕಾರವಾರದ ಸರ್ಕಾರಿ ಪದವಿ ಪೂರ್ವ ಕಾಲೇಜು, ಅಂಕೋಲಾದ ಗೋಖಲೆ ಸೆಂಟಿನರಿ ಪದವಿ ಪೂರ್ವ ಕಾಲೇಜು, ಅಂಕೋಲಾ ಸರ್ಕಾರಿ ಪದವಿ ಪೂರ್ವ ಕಾಲೇಜು, ಕುಮಟಾದ ನೆಲ್ಲಿಕೇರಿಯ ಹನುಮಂತ ಬೆಣ್ಣೆ ಸರ್ಕಾರಿ ಪದವಿಪೂರ್ವ ಕಾಲೇಜು, ಭಟ್ಕಳ ಶಿರಾಲಿಯ ಜನತಾ ವಿದ್ಯಾಲಯ ಪದವಿ ಪೂರ್ವ ಕಾಲೇಜು, ಹಳಿಯಾಳದ ಸರ್ಕಾರಿ ಶಿವಾಜಿ ಪದವಿ ಪೂರ್ವ ಕಾಲೇಜು, ಮುಂಡಗೋಡದ ಸರ್ಕಾರಿ ಪದವಿ ಪೂರ್ವ ಕಾಲೇಜು,

ಶಿರಸಿಯ ಸರ್ಕಾರಿ ಮಾರಿಕಾಂಬಾ ಪದವಿ ಪೂರ್ವ ಕಾಲೇಜು, ನೀಲೇಕಣಿಯ ಸರ್ಕಾರಿ ಪದವಿ ಪೂರ್ವ ಕಾಲೇಜು, ಸಿದ್ದಾಪುರದ ಎಮ್.ಜಿ.ಸಿ ಪದವಿ ಪೂರ್ವ ಕಾಲೇಜು, ಸಿದ್ಧಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಿಸಿ ಕ್ಯಾಮರಾಗಳು ಇದುವರೆಗೆ ಅಳವಡಿಕೆಯಾಗಿಲ್ಲ.

*
ಕ್ಯಾಮೆರಾ ಅಳವಡಿಕೆ ಕಾರ್ಯ ಜಿಲ್ಲೆಯಲ್ಲಿ ಪ್ರಗತಿಯಲ್ಲಿದ್ದು, ಈ ಬಾರಿಯ ಪರೀಕ್ಷೆಗೆ ಅಳವಡಿಕೆ ಆಗುತ್ತದೆ ಎನ್ನಲಾಗುವುದಿಲ್ಲ.
–ಕೆ.ಟಿ. ಭಟ್,
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಉ.ಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT