ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ

ಇನ್ನೊಂದು ತಿಂಗಳಲ್ಲಿ ವಿತರಣೆ: ಶಾಸಕ ಬಾಲಕೃಷ್ಣ ಭರವಸೆ
Last Updated 3 ಮಾರ್ಚ್ 2017, 8:45 IST
ಅಕ್ಷರ ಗಾತ್ರ

ರಾಮನಗರ: ‘ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಮೂನೆ 50, 53 ರಡಿಯಲ್ಲಿ ಅರ್ಜಿ ಹಾಕಿಕೊಂಡಿರುವ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ಇನ್ನೊಂದು ತಿಂಗಳಲ್ಲಿ ವಿತರಿಸಲು ಕ್ರಮಕೈಗೊಳ್ಳಲಾಗಿದೆ’ ಎಂದು  ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.

ನಗರದ ಮಿನಿ ವಿಧಾನಸೌಧದಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ‘ಗೋಮಾಳ ಸೇರಿದಂತೆ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ನಡೆಸುತ್ತಿರುವ ಕುಟುಂಬಗಳು ಈಗಾಗಲೇ ಹಕ್ಕುಪತ್ರಗಳಿಗಾಗಿ ನಮೂನೆ ಸಂಖ್ಯೆ 50, 53ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 4 ಸಾವಿರ ಅರ್ಜಿಗಳು ಸ್ವೀಕೃತವಾಗಿವೆ. ಬಿಡದಿ ಮತ್ತು ಕೂಟಗಲ್ ಹೋಬಳಿಗಳಲ್ಲಿ ಸುಮಾರು 1200 ಅರ್ಜಿಗಳಿವೆ. ಇವೆಲ್ಲ ಅರ್ಜಿಗಳನ್ನು ಪರಿಶೀಲಿಸಿ ಅರ್ಹರಿಗೆ ಹಕ್ಕುಪತ್ರಗಳನ್ನು ವಿತರಿಸಲಾಗುವುದು’ ಎಂದರು.

‘ತಹಶೀಲ್ದಾರರು ಮತ್ತು ಇತರ ಅಧಿಕಾರಿಗಳಿಗೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು ತಿಂಗಳೊಳಗಾಗಿ ಪರಿಶೀಲನೆ ಮಾಡಿ ವರದಿ ಮತ್ತು ಹಕ್ಕುಪತ್ರಗಳನ್ನು ಸಿದ್ದಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ತದನಂತರ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಕರೆದು ಹಕ್ಕುಪತ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಹೇಳಿದರು.

‘ಹಕ್ಕುಪತ್ರಕ್ಕಾಗಿ ನಮೂನೆ ಸಂಖ್ಯೆ 50, 53ರಲ್ಲಿ ಅರ್ಜಿ ಸಲ್ಲಿಸಿರುವ ಕುಟುಂಬಗಳು ತಕ್ಷಣ ಸದರಿ ಮಾಹಿತಿಯನ್ನು ತಮ್ಮ ವ್ಯಾಪ್ತಿ ಕಂದಾಯ ನಿರೀಕ್ಷಕರು, ಉಪ ತಹಶೀಲ್ದಾರರಿಗೆ ಸಲ್ಲಿಸಬೇಕಾಗಿದೆ. ಹಣ ಪಾವತಿ ಮಾಡಿ ಹಕ್ಕುಪತ್ರ ದೊರಕದಿದ್ದವರೂ ಸಹ ಹಣ ಪಾವತಿಸಿರುವ ಬಗ್ಗೆ ಮಾಹಿತಿ ನೀಡಬೇಕಾಗಿದೆ.

ಹಕ್ಕು ಪತ್ರ ದೊರೆತು ಖಾತೆಯಾಗದಿರುವ ಕುಟುಂಬಗಳು ಸಹ ಖಾತೆಗಾಗಿ ಅರ್ಜಿ ಸಲ್ಲಿಸಬೇಕಾಗಿದೆ. ಒಂದು ವಾರದಲ್ಲಿ ರೈತರು, ಸದರಿ ಮಾಹಿತಿ ಅಧಿಕಾರಿಗಳಿಗೆ ಕೊಡಬೇಕು’ ಎಂದು ತಿಳಿಸಿದರು.

‘ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಗೋಮಾಳವನ್ನು ರಕ್ಷಿಸಿಬೇಕು ಎಂಬ ಕಾನೂನು ಬಗ್ಗೆ ಸುದ್ದಿಗಾರರ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಸದರಿ ಕಾನೂನಿನಿಂದಾಗಿಯೇ ಗೋಮಾಳದಲ್ಲಿ ಅನುಮತಿ ಇಲ್ಲದೆ ಸಾಗುವಳಿ ನಡೆಸುತ್ತಿದ್ದ ರೈತರಿಗೆ ಹಕ್ಕಪತ್ರ ಕೊಡಲು ತೊಡಕಾಗಿತ್ತು. ಆದರೆ ಇದೀಗ ಸರ್ಕಾರ ತಿದ್ದುಪಡಿ ಮಾಡಿದೆ. ‘ಒನ್ ಟೈಂ ಸೆಟಲ್‍ಮೆಂಟ್’ ಎಂಬ ಆಧಾರದಲ್ಲಿ ಸರ್ಕಾರ ತಿದ್ದುಪಡಿ ತಂದಿದ್ದು, ಸರ್ಕಾರದ ಸೂಚನೆಗಳನ್ವಯವೇ ಹಕ್ಕುಪತ್ರ  ವಿತರಿಸಲಾಗುವುದು’ ಎಂದು ತಿಳಿಸಿದರು.

ಗೋಶಾಲೆ: ಮಾಗಡಿ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಮೂರು ಗೋಶಾಲೆ ತೆರೆಯುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಾಮನಗರ ತಾಲ್ಲೂಕು ಕಣ್ವ ಜಲಾಶಯದ ಹಿನ್ನೀರಿನ ಹತ್ತಿರ ಸೂಕ್ತ ಸ್ಥಳ ಗುರುತಿಸುವಂತೆ ತಿಳಿಸಲಾಗಿದೆ. ಮಾಗಡಿ ತಾಲೂಕಿನ ವೈ.ಜಿ.ಗುಡ್ಡ ಜಲಾಶಯ ಮತ್ತು ಕೆಂಚನಪುರ ಕೆರೆ ಬಳಿಯಲ್ಲಿ ಗೋಶಾಲೆಗಳನ್ನು ನಿರ್ಮಿಸುವಂತೆ ಸಲಹೆ ನೀಡಲಾಗಿದೆ ಎಂದರು.

 ಮೇವಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಮೇವು ಸಿಗದ ರೈತರು ತಮ್ಮ ಜಾನುವಾರು ಗೋಶಾಲೆಯಲ್ಲಿ ಬಿಡುವಂತೆ ಅವರು ಸಲಹೆ ನೀಡಿದರು. ತಹಶೀಲ್ದಾರ್‌ ಎನ್‌. ರಘುಮೂರ್ತಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT