ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ಅಕ್ರಮ ಫಿಲ್ಟರ್‌ ದಂಧೆ ಅವ್ಯಾಹತ

ಕೆರೆಯಂಗಳ ಅತಿಕ್ರಮಣ; ಸರ್ಕಾರಿ ಜಮೀನುಗಳಲ್ಲೇ ಚಟುವಟಿಕೆ ಹೆಚ್ಚು
Last Updated 3 ಮಾರ್ಚ್ 2017, 8:49 IST
ಅಕ್ಷರ ಗಾತ್ರ

ರಾಮನಗರ: ಮಣ್ಣನ್ನು ತೊಳೆದು ಮರಳಾಗಿಸಿ ಮಾರುವ ದಂಧೆಯು ಜಿಲ್ಲೆಯಾದ್ಯಂತ ನಿರಂತರವಾಗಿ ನಡೆಯುತ್ತಾ ಬಂದಿದೆ. ಬಹುತೇಕ ಕೆರೆಗಳು ಇವುಗಳ ಹಾವಳಿಗೆ ತುತ್ತಾಗಿದ್ದು, ಜಲಮೂಲಗಳ ಸ್ವರೂಪವೇ ಬದಲಾಗುವ ಮಟ್ಟಿಗೆ ಈ ಕಾರ್ಯ ಸಕ್ರಿಯವಾಗಿದೆ.

ಮಣ್ಣಿನ ರಾಶಿಗೆ ವೇಗದಿಂದ ನೀರು ಹರಿಸಿ, ಅದನ್ನು ಜಾಲಿಸುತ್ತಾ ಕಡೆಗೆ ಉಳಿಯುವ ಮಣ್ಣಿನ ಕಣಗಳನ್ನು ಜಾಲರಿ ಮೂಲಕ ಜರಡಿ ಹಿಡಿದು ಮರಳನ್ನು ಸೃಷ್ಟಿಸಲಾಗುತ್ತಿದೆ. ಹೀಗೆ ಸೃಜಿಸಲಾದ ಮರಳಿನ ಗುಣಮಟ್ಟ ಅಷ್ಟಕ್ಕಷ್ಟೇ ಎಂಬಂತೆ ಇದ್ದರೂ ಮಾರುಕಟ್ಟೆಯಲ್ಲಿ ನದಿಯ ಮರಳಿನಷ್ಟೇ ದರ ಕುದುರಿಸಿಕೊಂಡಿದೆ. ಹೀಗಾಗಿ ಈ ಅಕ್ರಮ ಫಿಲ್ಟರ್ ಕಾರ್ಯ ಇನ್ನಷ್ಟು ಚುರುಕಾಗಿದೆ.

ಜಿಲ್ಲೆಯ ನಾಲ್ಕೂ ತಾಲ್ಲೂಕುಗಳಲ್ಲಿಯೂ ಈ ಕಾರ್ಯ ನಡೆಯುತ್ತಿದೆ. ಅದರಲ್ಲೂ ರಾಮನಗರ, ಮಾಗಡಿ ಹಾಗೂ ಕನಕಪುರ ತಾಲ್ಲೂಕುಗಳಲ್ಲಿ ವಿಪರೀತ ಎಂಬ ಮಟ್ಟಕ್ಕೆ ಮರಳು ಫಿಲ್ಟರ್‌ ಮಾಡಲಾಗುತ್ತಿದೆ ಎಂದು ಸರ್ಕಾರಿ ಅಧಿಕಾರಿಗಳೇ ಹೇಳುತ್ತಾರೆ.

ಕೆರೆಗಳೇ ಟಾರ್ಗೆಟ್‌: ಸತತ ಬರಗಾಲದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ಬಹುತೇಕ ಕೆರೆಗಳು ಬತ್ತಿದ್ದು, ಇವೇ ಮರಳು ಫಿಲ್ಟರ್‌ ತಾಣವಾಗಿ ಮಾರ್ಪಟ್ಟಿವೆ. ಇದಲ್ಲದೆ ಖಾಸಗಿ ಜಮೀನುಗಳಲ್ಲಿಯೂ ಈ ಕಾರ್ಯ ನಡೆಸುತ್ತಾ ಬರಲಾಗಿದೆ. ಕೆರೆಗಳಲ್ಲಿ ಇರುವ ಅಲ್ಪ ಪ್ರಮಾಣದ ನೀರನ್ನು ಫಿಲ್ಟರ್‌ ಕಾರ್ಯಕ್ಕೆ ಉಪಯೋಗಿಸಲಾಗುತ್ತಿದೆ.

ಹೊಸ ಮರಳು ನೀತಿ ಜಾರಿಯಾದ ಬಳಿಕ ನದಿ ಪಾತ್ರದಲ್ಲಿ ಮರಳು ಸಂಗ್ರಹ ಮತ್ತು ಸಾಗಣೆಗೆ ಸಾಕಷ್ಟು ನಿರ್ಬಂಧ ಹೇರಲಾಗಿದೆ. ಇದು ಅಕ್ರಮ ಚಟುವಟಿಕೆಗಳಿಗೆ ಇನ್ನಷ್ಟು ದಾರಿ ಮಾಡಿಕೊಟ್ಟಿದೆ. ನೆರೆಯ ಬೆಂಗಳೂರು ನಗರದ ಬೆಳವಣಿಗೆಗೆ ತಕ್ಕಂತೆ ಮರಳಿನ ಅಭಾವ ಇದ್ದು, ಬೆಲೆ ಗಗನಕ್ಕೆ ಏರಿರುವ ಕಾರಣ ಫಿಲ್ಟರ್‌ ದಂಧೆಯು ಕುದುರಿಕೊಂಡಿದೆ.

ಸದ್ಯ ಒಂದು ಟ್ರ್ಯಾಕ್ಟರ್ ಫಿಲ್ಟರ್‌ ಮರಳಿಗೆ ಸ್ಥಳೀಯವಾಗಿ ₹ 4ರಿಂದ ₹5 ಸಾವಿರದವರೆಗೆ ಮಾರಾಟವಾಗುತ್ತಿದೆ. ಬೆಂಗಳೂರಿಗೆ ಸಾಗಣೆಯಾಗುವ ಒಂದು ಟ್ರಕ್‌ ಮರಳಿಗೆ ₹ 40–50 ಸಾವಿರದರೆಗೂ ದರವಿದೆ. ಸಾಗಣೆಯ ದೂರದ ಮೇಲೆ ಬೆಲೆ ನಿರ್ಧಾರವಾಗುತ್ತಿದೆ.

ಬೆರಳೆಣಿಕೆಯ ದಾಳಿ: ಫಿಲ್ಟರ್‌ ಕಾರ್ಯದಲ್ಲಿ ತೊಡಗಿರುವ ಗುಂಪುಗಳು ಆಯಾಕಟ್ಟಿನ ಸ್ಥಳಗಳನ್ನು ಗುರುತಿಸಿಕೊಂಡಿವೆ. ಅಲ್ಲಿಯೇ ಈ ಕಾರ್ಯವು ನಿರಂತರವಾಗಿ ನಡೆಯುತ್ತಾ ಬಂದಿದೆ. ಲಾರಿ, ಟ್ರ್ಯಾಕ್ಟರ್‌ಗಳ ಓಡಾಟಕ್ಕೆ ಅನುವಾಗುವಂತೆ ಕೆಲವು ಕಡೆ ಖಾಸಗಿಯಾಗಿ ಕಚ್ಚಾ ರಸ್ತೆಗಳನ್ನು ನಿರ್ಮಾಣ ಮಾಡಿಕೊಳ್ಳಲಾಗಿದೆ.

ಮರಳು ಫಿಲ್ಟರ್‌ ದಂಧೆ ನಿಯಂತ್ರಿಸುವ ಕಾರ್ಯವು ಲೋಕೋಪಯೋಗಿ, ಕಂದಾಯ, ಗಣಿ ಮತ್ತು ಭೂವಿಜ್ಞಾನ ಇಲಾಖೆಗಳು ಹಾಗೂ ಪೊಲೀಸರ ಜವಾಬ್ದಾರಿಯಾಗಿರುತ್ತದೆ. ಆಗಾಗ್ಗೆ ಅಲ್ಲೊಂದು ಇಲ್ಲೊಂದು ದಾಳಿ ನಡೆಸಲಾಗುತ್ತಿದೆ. ಪ್ರಾಮಾಣಿಕವಾಗಿ ಕ್ರಮ ಕೈಗೊಳ್ಳುವ ಅಧಿಕಾರಿಗಳಿಗೆ ಹಣದ ಆಮಿಷ, ಹಲ್ಲೆ ಇಲ್ಲವೇ ರಾಜಕೀಯ ಒತ್ತಡ ಸಾಮಾನ್ಯ ಎಂಬಂತೆ ಆಗಿದೆ. ಇಡೀ ಅಕ್ರಮ ಚಟುವಟಿಕೆಯನ್ನು ನಿಯಂತ್ರಿಸುವ ಪ್ರಯತ್ನ ಇನ್ನಷ್ಟೇ ಆಗಬೇಕಿದೆ ಎನ್ನುತ್ತಾರೆ ಸ್ಥಳೀಯರು.

ಚೆಕ್‌ಪೋಸ್ಟ್‌ಗಳು ನಿಷ್ಕ್ರಿಯ: ಮರಳು ಅಕ್ರಮ ಸಾಗಣೆ ತಡೆಗಟ್ಟುವ ಸಲುವಾಗಿ ಆಯಾಕಟ್ಟಿನ ಸ್ಥಳಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಹಾಕಲಾಗಿದೆ. ರಾತ್ರಿಯಿಡೀ ಪೊಲೀಸ್ ಸಿಬ್ಬಂದಿಯನ್ನು ಕಾವಲಿಗೆ ನಿಯೋಜಿಸಿದ್ದರೂ ಮರಳು ಸಾಗಣೆ ನಿಂತಿಲ್ಲ.

‘ಪೊಲೀಸ್‌ ಇಲಾಖೆಯಿಂದಲೂ ತಕ್ಕಮಟ್ಟಿಗೆ ದಾಳಿಯನ್ನು ಸಂಘಟಿಸುತ್ತಲೇ ಇದ್ದೇವೆ. ಇದು ಎಲ್ಲ ಇಲಾಖೆಗಳು ಕೂಡಿ ಮಾಡಬೇಕಾದ ಕಾರ್ಯ. ಇದರ ಬಗ್ಗೆ ಗಮನ ಹರಿಸಲಾಗುವುದು’ ಎನ್ನುತ್ತಾರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ. ರಮೇಶ್‌.

ಅಂತರ್ಜಲಕ್ಕೆ ಮಾರಕ: ರಾಮನಗರ ಜಿಲ್ಲೆಯ ಅಂತರ್ಜಲ ಮಟ್ಟವು ಸರಾಸರಿ ಒಂದು ಸಾವಿರ ಅಡಿಗಳಿಗೆ ಕುಸಿಯುತ್ತಿದೆ. ನದಿ ಪಾತ್ರ ಹಾಗೂ ಕೆರೆಗಳಲ್ಲಿ ಮರಳು ಗಣಿಗಾರಿಕೆಯಿಂದಾಗಿ ಅಂತರ್ಜಲ ಪಾತಾಳಕ್ಕೆ ಇಳಿದಿದೆ ಎನ್ನುತ್ತಾರೆ ಪರಿಸರ ಪ್ರಿಯರು.

ಹಳ್ಳಿಗಳ ಮುಂದೆ ಸಾಲು ಸಾಲು ಯಂತ್ರಗಳು
ಮರಳು ದಂಧೆಯು ಸಕ್ರಿಯವಾಗಿರುವ ಕೆಲವು ಹಳ್ಳಿಗಳಲ್ಲಿ ಜೆಸಿಬಿ ಯಂತ್ರಗಳು, ಟ್ರಕ್‌ಗಳು ಸಾಲಾಗಿ ನಿಲ್ಲುತ್ತಿವೆ. ಹಗಲು ಹೊತ್ತಿಗಿಂತ ರಾತ್ರಿ ಹೊತ್ತಿನಲ್ಲಿಯೇ ಇವುಗಳ ಕಾರ್ಯಾಚರಣೆ ಹೆಚ್ಚು. ಮರಳು ಮಾರಿ ಹಣ ಸಂಪಾದಿಸುವ ಕನಸಿನೊಂದಿಗೆ ಬ್ಯಾಂಕಿನಿಂದ ಸಾಲ ಪಡೆದು ಈ ಯಂತ್ರಗಳನ್ನು ಖರೀದಿ ಮಾಡಿರುವ ಉದಾಹರಣೆಗಳೂ ಸಾಕಷ್ಟಿವೆ.

*
ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ವಿವಿಧ ಇಲಾಖೆಯ ಅಧಿಕಾರಿಗಳು ದಾಳಿ ನಡೆಸುತ್ತಲೇ ಬಂದಿದ್ದಾರೆ. ದೊಡ್ಡ ಮಟ್ಟದಲ್ಲಿ ಸಂಘಟಿತ ದಾಳಿಗೆ ಯೋಜಿಸಲಾಗುತ್ತಿದೆ.
-ಬಿ.ಆರ್. ಮಮತಾ,
ಜಿಲ್ಲಾಧಿಕಾರಿ, ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT