ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕದಾಸರ ಕೃತಿಯಲ್ಲಿ ತಳ ಸಮುದಾಯದ ಸಂಸ್ಕೃತಿ

ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ‘ಕನಕ ಓದು’ ಅರಿವಿನ ಶಿಬಿರದಲ್ಲಿ ಪ್ರಾಚಾರ್ಯ ಶಿವಶಂಕರ ಟೋಕರೆ ಅಭಿಮತ
Last Updated 3 ಮಾರ್ಚ್ 2017, 9:23 IST
ಅಕ್ಷರ ಗಾತ್ರ

ಬೀದರ್: ಕನಕದಾಸರು ರಚಿಸಿರುವ ಕೃತಿ ಹಾಗೂ ಕೀರ್ತನೆಗಳ ಅಧ್ಯಯನದಿಂದ ತಳ ಸಮುದಾಯದ ಸಂಸ್ಕೃತಿಯ  ಪರಿಚಯವಾಗುತ್ತದೆ ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಶಿವಶಂಕರ ಟೋಕರೆ ಅಭಿಪ್ರಾಯಪಟ್ಟರು.

ಬೆಂಗಳೂರಿನ ರಾಷ್ಟ್ರೀಯ ಸಂತ, ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಎರಡು ದಿನಗಳ ‘ಕನಕ ಓದು’ ಅರಿವಿನ ಶಿಬಿರವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕನಕದಾಸರು ಏಕಕಾಲಕ್ಕೆ ಕವಿಯೂ ಹೌದು, ದಾರ್ಶನಿಕರು ಹೌದು. ಅಷ್ಟೇ ಅಲ್ಲ ಅವರು ಮಾನವೀಯ ಮೌಲ್ಯಗಳ ಹರಿಕಾರರೂ ಆಗಿದ್ದಾರೆ ಎಂದು ಬಣ್ಣಿಸಿದರು.

ಪರಿಸರ ಪರಂಪರೆ ಮತ್ತು ದಿನನಿತ್ಯದ ವ್ಯವಹಾರಗಳನ್ನು ಒಂದಾಗಿಸಿಕೊಂಡು ಬಹುತ್ವದಿಂದ ಜಂಗಮತ್ವದ ಕಡೆಗೆ ನಡೆದಿರುವ ಕನಕದಾಸರು ಕನ್ನಡ ಸಾಹಿತ್ಯದ ಪ್ರಮುಖ ಕವಿಗಳಲ್ಲಿ ಒಬ್ಬರು ಎಂದು ತಿಳಿಸಿದರು.

ಕನಕದಾಸರು ಪ್ರತಿಪಾದಿಸಿದ ಸಂದೇಶಗಳು ಉತ್ತಮ ಬದುಕು ರೂಪಿಸಿಕೊಳ್ಳುವುದಕ್ಕೆ ಮಾರ್ಗದರ್ಶಿಯಾಗಿವೆ. ಯುವಜನರು ಅವರ ಕೃತಿಗಳನ್ನು ಹೆಚ್ಚೆಚ್ಚು ಓದುವ ಮೂಲಕ ಅವರ ತಾತ್ವಿಕ ವಿಚಾರಗಳನ್ನು ಅರಿತುಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಒಳ್ಳೆಯ  ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಯುವ ಸಮುದಾಯವು ಕನಕದಾಸರನ್ನು ಹೊಸ ರೀತಿಯಲ್ಲಿ ಓದಿ ಅರ್ಥೈಸಿಕೊಳ್ಳುವ ಹೊಸ ಆಲೋಚನೆಗಳಿಗೆ ತಮ್ಮನ್ನು ಒಡ್ಡಿಕೊಳ್ಳುವ ಆಶಯದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ರಾಷ್ಟ್ರೀಯ ಸಂತ,ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾ.ತ. ಚಿಕ್ಕಣ್ಣ ಹೇಳಿದರು.

ಈ ಶಿಬಿರದ ಮೂಲಕ ಕನಕದಾಸರ ಜೀವನ ಮತ್ತು ಕೀರ್ತನೆಗಳನ್ನು ಇಂದಿನ ಯುವಪೀಳಿಗೆಗೆ ತಿಳಿಸಿಕೊಟ್ಟು ಅವರ ಕಾವ್ಯಗಳನ್ನು ಓದುವುದು ಹೇಗೆ, ಓದಿಸುವುದು ಹೇಗೆ ಎನ್ನುವುದರ ಬಗೆಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಶಿಬಿರದ ನಿರ್ದೇಶಕ ಡಾ. ಬಿದರಿ ಚಂದ್ರಪ್ರಭಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಬಿರದ ಮುಖ್ಯ ಸಂವಾದಕರಾಗಿ ಎಂ.ಜಿ. ಗಂಗನಪಳ್ಳಿ, ಡಾ.ಶರಣಪ್ಪ ಮಲಗೊಂಡ, ಪ್ರೊ.ಜಯದೇವಿ ಗಾಯಕವಾಡ, ಪ್ರೊ.ನಾಗಮ್ಮ ಎಚ್.ಬಿ. ಉಪಸ್ಥಿತರಿದ್ದರು.

ಗಾಯಕಿ ಗೌರಮ್ಮ ದಪ್ಪಗೊಂಡ ಅವರು ಜಾನಪದ ಹಾಡುಗಳನ್ನು ಹಾಡುವ ಮೂಲಕ ವಿದ್ಯಾರ್ಥಿಗಳ ಮನ ರಂಜಿಸಿದರು. ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯ, ಬಿ.ವಿ. ಭೂಮರೆಡ್ಡಿ ಕಾಲೇಜು, ಕವಿರತ್ನ ಕಾಳಿದಾಸ ಕಾಲೇಜು, ಹಾಲಹಳ್ಳಿ ಸ್ನಾತಕೋತ್ತರ ಪದವಿ ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳ ಸುಮಾರು 100 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದಾರೆ. ರಮೇಶ ಪೂಜಾರಿ ಸ್ವಾಗತಿಸಿದರು. ಸಂಜೀವಕುಮಾರ ಅತಿವಾಳೆ ನಿರೂಪಿಸಿದರು. ಡಾ. ಗವಿಸಿದ್ದಪ್ಪ ಪಾಟೀಲ ವಂದಿಸಿದರು.

*
ಕಾವ್ಯ ದರ್ಶನ, ಜೀವನ ಸಂದೇಶ, ಸಮಾಜಮುಖಿ ಚಿಂತನೆ, ಆಧ್ಯಾತ್ಮಿಕ ಆಲೋಚನೆಗಳನ್ನು ಎಲ್ಲರೂ ಭಿನ್ನ ನೆಲೆಯಲ್ಲಿ ಓದುವ ಮೂಲಕ ಪುನರಾವಲೋಕನಕ್ಕೆ ಒಡ್ಡಿಕೊಳ್ಳಬೇಕಾಗಿದೆ.
-ಕಾ.ತ. ಚಿಕ್ಕಣ್ಣ,
ಸಮನ್ವಯಾಧಿಕಾರಿ, ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT