ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂದ್ಯಾಳದಲ್ಲಿ ಕುಡಿಯುವ ನೀರಿಗೆ ಹಾಹಾಕಾರ

ಔರಾದ್‌ ತಾಲ್ಲೂಕಿನಲ್ಲಿ ಒಡೆದ ಕೆರೆ–ಕಟ್ಟೆಗಳು, ಬತ್ತಿದ ಜಲಮೂಲ, ಆರಂಭವಾಗದ ಕೆರೆ ದುರಸ್ತಿ ಕಾರ್ಯ
Last Updated 3 ಮಾರ್ಚ್ 2017, 9:27 IST
ಅಕ್ಷರ ಗಾತ್ರ

ಔರಾದ್: ಬೇಸಿಗೆ ಆರಂಭವಾಗಿದೆ. ಬಿಸಿಲಿನ ತೀವ್ರತೆ ಹೆಚ್ಚುವ ಮುನ್ನವೇ ತಾಲ್ಲೂಕಿನ ವಿವಿಧೆಡೆ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ.

ಶೆಂಬೆಳ್ಳಿ ಸಮೀಪದ ಆಲೂರು–ಬೇಲೂರು ಕೆರೆಯಿಂದಾಗಿ ಕಳೆದ ವರ್ಷ ಬೇಸಿಗೆಯಲ್ಲೂ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರಲಿಲ್ಲ. ಆದರೆ ಕಳೆದ ಸೆಪ್ಟೆಂಬರ್‌ನಲ್ಲಿ ಸುರಿದ ಭಾರಿ ಮಳೆಗೆ ಈ ಕೆರೆ ಒಡೆದು ನೂರಾರು ಎಕರೆ ಜಮೀನು ಹಾಳಾಗಿದೆ. ಕೆರೆಯಲ್ಲಿ ಒಂದು ಹನಿಯೂ ನೀರಿಲ್ಲ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.

ಶೆಂಬಳ್ಳಿ ಗ್ರಾಮದಲ್ಲಿ ಈಗಲೇ ಎರಡು ಕೊಳವೆ ಬಾವಿಗಳಲ್ಲಿ ಕುಡಿಯುವ ನೀರು ಸಂಪೂರ್ಣ ಕಡಿಮೆಯಾಗಿದೆ.  ತೆರೆದ ಬಾವಿಗಳಲ್ಲಿ ನೀರು ನಿಧಾನವಾಗಿ ಕೆಳಗೆ ಇಳಿಯುತ್ತಿದೆ. ಮಾರ್ಚ್‌ ಕೊನೆಯ ವಾರದಿಂದ ನೀರಿನ ಸಮಸ್ಯೆ ಉಲ್ಬಣಿಸುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ ತಾಲ್ಲೂಕು ಪಂಚಾಯಿತಿ ಸದಸ್ಯ ಶೆಂಬಳ್ಳಿಯ ನಾಗಶೆಟ್ಟಿ ಗಾದಗೆ.

ತಾಲ್ಲೂಕಿನ ಚಿಂತಾಕಿ, ದಾಬಕಾ, ಕಮಲನಗರ, ಠಾಣಾಕುಶನೂರಿನ ಚೆಕ್‌ಡ್ಯಾಂಗಳ ದುರಸ್ತಿ ಕಾರ್ಯ ಆರಂಭವಾಗಿಲ್ಲ. ಅತಿವೃಷ್ಟಿಯಿಂದ ಕೆಲ ಚೆಕ್‌ಡ್ಯಾಂ ಮತ್ತು ಕೆರೆಗಳು ಒಡೆದು ಆರು ತಿಂಗಳು ಕಳೆದರೂ ಅಧಿಕಾರಿಗಳು ದುರಸ್ತಿ ಕಾರ್ಯ ಕೈಗೆತ್ತಿಕೊಂಡಿಲ್ಲ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಶ್ರೀಮಂತ ಬಿರಾದಾರ ದೂರುತ್ತಾರೆ.

ಕೆರೆ ಕಟ್ಟೆಗಳು ಒಡೆದಿರುವ ಮಾಹಿತಿ ಇದ್ದರೂ ಅಧಿಕಾರಿಗಳು ನೀರಿನ ಸಮಸ್ಯೆ ನಿವಾರಣೆಗೆ ಪೂರ್ವ ಸಿದ್ಧತಾ ಸಭೆ ನಡೆಸಿಲ್ಲ. ನೀರಿನ ಸಮಸ್ಯೆ ಉದ್ಘವಿಸಬಹುದಾದ ಗ್ರಾಮಗಳ ಪಟ್ಟಿಯನ್ನೂ ತಯಾರಿಸಿಲ್ಲ.

ಈ ಸಲ ಅಷ್ಟೊಂದು ತಲೆ ಕಡೆಸಿಕೊಳ್ಳುವಷ್ಟು ಗಂಭೀರ ಸಮಸ್ಯೆ ಇಲ್ಲ. ನಂದ್ಯಾಳದಲ್ಲಿ ಮಾತ್ರ ನೀರಿನ ಸಮಸ್ಯೆ  ಇದೆ. ಈ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಉಪವಿಭಾಗದ ಎಂಜಿನಿಯರ್ ಮಲ್ಲಿಕಾರ್ಜುನ ಕರಂಜೆ ಹೇಳುತ್ತಾರೆ.

ಚಿಂತಾಕಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ನಂದ್ಯಾಳ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಮೂರು ತಿಂಗಳ ಹಿಂದೆಯೇ ನೀರಿನ ಸಮಸ್ಯೆ ಕಾಣಿಸಿಕೊಂಡರೂ ಶಾಶ್ವತ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳು ಪ್ರಯತ್ನಿಸುತ್ತಿಲ್ಲ ಎಂದು ನಂದ್ಯಾಳ ಗ್ರಾಮದ ಗ್ರಾಪಂ ಮಾಜಿ ಸದಸ್ಯ ರಾಜಗೊಂಡ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಗ್ರಾಮದ  ಎರಡು ಕೊಳವೆ ಬಾವಿಗಳು ಬತ್ತಿ ಹೋಗಿವೆ. ಐದಾರು ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲೂ ನೀರಿನ ಮೂಲ ಇಲ್ಲ. ಹೀಗಾಗಿ ನಾವು ಕಳೆದ ಎರಡು ತಿಂಗಳಿನಿಂದ ಕೊಡ ನೀರಿಗಾಗಿ ಪರದಾಡಬೇಕಿದೆ ಎನ್ನುತ್ತಾರೆ ಅವರು.

ಇಷ್ಟು ದಿನ ಪಕ್ಕದ ಹಳ್ಳದ ನೀರನ್ನು ಬಳಸಿಕೊಂಡಿದ್ದೇವೆ. ಆದರೆ ಈಗ ಅಲ್ಲಿಯೂ ನೀರು ಖಾಲಿ ಆಗಿದೆ. ಇನ್ನು ಊರು ಬಿಟ್ಟು ಹೋಗುವುದು ಅನಿವಾರ್ಯವಾಗಲಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಗ್ರಾಮದ ಮಹಿಳೆಯರು.

ಕಳೆದ ತಿಂಗಳು ಒಂದೆರಡು ಸಲ ಟ್ಯಾಂಕರ್ ನೀರು ಪೂರೈಸಿದ್ದರು. ಈಗ 15 ದಿನಗಳಿಂದ ಟ್ಯಾಂಕರ್‌ ನೀರು ಕೊಡುವುದನ್ನು ನಿಲ್ಲಿಸಿದ್ದಾರೆ. ನಮ್ಮ ಮಕ್ಕಳು ಶಾಲೆ ತಪ್ಪಿಸಿ ಪಕ್ಕದ ಊರಿನಿಂದ ಸೈಕಲ್ ಮೇಲೆ ನೀರು ತರುತ್ತಿದ್ದಾರೆ. ಮಹಿಳೆಯರು ತಲೆಯ ಮೇಲೆ ಹೊತ್ತು ಕುಡಿಯುವ ನೀರು ತರುತ್ತಿದ್ದಾರೆ.

‘ನಂದ್ಯಾಳದಲ್ಲಿ ಟ್ಯಾಂಕರ್ ನೀರು ಪೂರೈಸಲು ಸೂಚಿಸಲಾಗಿದೆ. ಆದರೆ ಪೂರೈಕೆ ನಿಂತು ಹೋಗಿರುವುದು ಗೊತ್ತಾಗಿಲ್ಲ. ಪಿಡಿಒ ಅವರೊಂದಿಗೆ ಸಮಾಲೋಚನೆ ನಡೆಸಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಪ್ರಯತ್ನಿಸಲಾಗುವುದು ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿ ಮುಖ್ಯಾಧಿಕಾರಿ ಜಗನ್ನಾಥ ಮೂರ್ತಿ ತಿಳಿಸಿದ್ದಾರೆ.
-ಮನ್ಮಥಪ್ಪ ಸ್ವಾಮಿ

*
ಔರಾದ್‌ ತಾಲ್ಲೂಕಿನಲ್ಲಿ ಕಳೆದ ವರ್ಷದಷ್ಟು ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ. ನಂದ್ಯಾಳದಲ್ಲಿ ಮಾತ್ರ ತಾಂತ್ರಿಕ ಕಾರಣದಿಂದಾಗಿ ನೀರಿನ ಸಮಸ್ಯೆ ಉಂಟಾಗಿದೆ.
-ಮಲ್ಲಿಕಾರ್ಜುನ ಕರಂಜೆ,
ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT