ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಜನೆಯ ಪೊಟ್ಟಣದಲ್ಲಿ ಭಾವುಕ ಗುಳಿಗೆ

Last Updated 3 ಮಾರ್ಚ್ 2017, 13:32 IST
ಅಕ್ಷರ ಗಾತ್ರ

ಚಿತ್ರ: ಎರಡನೇ ಸಲ

ನಿರ್ಮಾಪಕ: ಯೋಗೇಶ್ ನಾರಾಯಣ್
ನಿರ್ದೇಶಕ: ಗುರುಪ್ರಸಾದ್‌
ತಾರಾಗಣ: ಲಕ್ಷ್ಮೀ, ಧನಂಜಯ್‌, ಸಂಗೀತಾ ಭಟ್‌


ಎಲ್ಲ ಕಲಾಪ್ರಕಾರಗಳಲ್ಲಿಯೂ ಕೆಲವು ಸಿದ್ಧ ಮಾದರಿಗಳು ರೂಪುಗೊಂಡಿರುತ್ತವೆ. ಅವು ಸವಕಲಾಗಿರುವುದರಿಂದಲೇ ಅನುಕರಣೆಗೆ ಸುಲಭವೂ ತಕ್ಕಮಟ್ಟಿಗೆ ಸುರಕ್ಷಿತವೂ ಆಗಿರುತ್ತದೆ. ಆದರೆ ಒಬ್ಬ ಸೃಜನಶೀಲ ಕೃತಿಕಾರನಿಗೆ ಈ ಸಿದ್ಧ ಮಾದರಿಗಳ ಬಗ್ಗೆ ಒಂದು ಅಸಡ್ಡೆ ಇರುತ್ತದೆ. ಅವವೇ ಸೂತ್ರಗಳಿಗೆ ಜೋತು ಬೀಳುವುದರ ಬಗ್ಗೆ ಅಸಹನೆಯೂ ಇರುತ್ತದೆ. ಅವುಗಳ ಜತೆಗೆ ಅಭಿವ್ಯಕ್ತಿಯ ದಾರಿಗಳನ್ನು ಹುಡುಕಿಕೊಳ್ಳುವುದು ಹೇಗೆ? ಎಲ್ಲರೂ ಹೇಳಿದ ಅವವೇ ಸಂಗತಿಗಳನ್ನು ಹೊಸದೆನಿಸುವ ಹಾಗೆ, ಜಡ್ಡುಗಟ್ಟಿದ ಮನಸ್ಸುಗಳಿಗೂ ನಾಟುವ ಹಾಗೆ ದಾಟಿಸುವುದು ಹೇಗೆ ಎಂಬ ಚಡಪಡಿಕೆ, ಗೊಂದಲ, ಎಷ್ಟೇ ಸೂತ್ರಗಳನ್ನೂ ಮೀರುವ ಹಂಬಲಿಕೆ ಇದ್ದರೂ ಕೊನೆಗೂ ಅದೇ ಚೌಕಟ್ಟಿನೊಳಗೇ ಮರಳಬೇಕಾದ ಅನಿವಾರ್ಯತೆ ಇವೆಲ್ಲವೂ ಕೃತಿಕಾರನನ್ನು ಸದಾ ಕಾಡುತ್ತಲೇ ಇರುತ್ತದೆ. ಇವೇ ಸಂಗತಿಗಳು ಅವನನ್ನು ಇನ್ನಷ್ಟು ಕ್ರಿಯಾಶೀಲಗೊಳಿಸುವ ಚೋದಕಗಳೂ ಹೌದು.

ಈ ಎಲ್ಲ ಸೃಜನಶೀಲ ಸಂಕಟಗಳನ್ನು ಇಟ್ಟುಕೊಂಡೇ ನಿರ್ದೇಶಕ ಗುರುಪ್ರಸಾದ್‌ ‘ಎರಡನೇ ಸಲ’ ಸಿನಿಮಾವನ್ನು ಕಟ್ಟಿದ್ದಾರೆ.  ಇದು ತಮ್ಮ ಹಿಂದಿನ ಸಿನಿಮಾಗಳಲ್ಲಿ ಗುರುಪ್ರಸಾದ್‌ ತುಳಿದಿದ್ದ ‘ಬದಿಯ ದಾರಿ’ಯ ವಿಸ್ತರಣೆಯಾಗಿಯೂ ಕಾಣುತ್ತದೆ.

ತಾಯಿ ಮತ್ತು ಗೆಳತಿ ಇಬ್ಬರಲ್ಲಿ ಒಬ್ಬರನ್ನು ಆಯ್ದುಕೊಳ್ಳಬೇಕಾದ ಸಂಕಟದಲ್ಲಿರುವ ಹುಡುಗನೊಬ್ಬ ಯಾವುದೋ ಅಪರಿಚಿತರಿಗೆ ತನ್ನ ಬದುಕಿನ ಕಥೆಯನ್ನು ಹೇಳುತ್ತಿದ್ದಾನೆ. ಇಡೀ ಸಿನಿಮಾವೂ ಆ ಪಾತ್ರದ ಮೂಲಕವೇ ನಿರೂಪಿತವಾಗುತ್ತದೆ.

ಕೊನೆಯ ಘಟ್ಟದವರೆಗೆ ಯಾವುದೇ ಸಂದರ್ಭದಲ್ಲಿಯೂ ಪ್ರೇಕ್ಷಕ ಪೂರ್ತಿ ಮುಳುಗಿ ಮೈಮರೆಯದ ಹಾಗೆ ಒಂದು ಅಂತರವಿಟ್ಟುಕೊಂಡು ‘ನಾನ್‌ ಲೀನಿಯರ್‌’ ನಿರೂಪಣಾ ತಂತ್ರದ ಮೂಲಕ ಸಿನಿಮಾ ಸಾಗುತ್ತದೆ.

ಮಧ್ಯಮವರ್ಗದ ಹುಡುಗ, ಅವನ ಅಮ್ಮ ಮತ್ತು ಅವನ ಮನೆಗೆ ಕಾಲೇಜು ಕಲಿಯಲೆಂದು ಬಂದು ಸೇರಿಕೊಳ್ಳುವ ಹುಡುಗಿ – ಈ ಮೂವರ ಸುತ್ತಲೇ ಸುತ್ತುವ ಸಿನಿಮಾ, ಚರ್ವಿತ ಚರ್ವಣ ತಾಯಿ–ಮಗುವಿನ ಭಾವುಕ ಕಥೆ, ಹರೆಯದ ಜೋಡಿಗಳ ಪ್ರೇಮಕಥೆಯ ಆಚೆಯೂ ಹಲವು ಸಂಗತಿಗಳನ್ನು ತೋರಿಸುತ್ತದೆ.

ಇಂದಿನ ಜನಪ್ರಿಯ ಸಿನಿಮಾಗಳಲ್ಲಿ ಕಾಣುವ ಹಲವು ‘ಟ್ವಿಸ್ಟ್‌ಗಳು ಇರುವ ಕಥೆ’ ಇಲ್ಲಿಲ್ಲ. ಜೊತೆಗೆ ತಾರಾನಟ ಪ್ರಧಾನ ಸಿನಿಮಾಗಳ ಇಂಟ್ರೊಡೊಕ್ಷನ್‌ ಫೈಟ್‌, ತಾಯಿ ಸೆಂಟಿಮೆಂಟ್‌ಗಳ ಸಿದ್ಧ ಸೂತ್ರಗಳ ಮೇಲೂ ಅವರು ತಮ್ಮ ವ್ಯಂಗ್ಯದ ಹರಿತ ಕತ್ತಿಯನ್ನು ಝಳಪಿಸಿದ್ದಾರೆ. ಆದರೆ ಕೊನೆಗೂ ಅದೇ ಭಾವುಕ ದರ್ಶನವೇ ಅವರಿಗೆ ಒದಗಿಬಂದಿದ್ದು. ಆದರೆ ಅದು ಕೃತಕವೆನ್ನಿಸದ ಹಾಗೆ, ಮನಸ್ಸಿನಲ್ಲಿ ಉಳಿಯುವಂತೆ ಕಟ್ಟಿರುವುದು ಹೆಚ್ಚುಗಾರಿಕೆ.

ಬಿಡಿ ಬಿಡಿ ಸನ್ನಿವೇಶಗಳ ಮೂಲಕವೇ ಒಂದು ಇಡೀ ಅನುಭವವನ್ನು ದಾಟಿಸುವ ಪ್ರಯತ್ನವಿದು. ಕೊನೆಯಲ್ಲಿ ಆ ಎಲ್ಲ ಬಿಡಿ ಸನ್ನಿವೇಶಗಳೂ ಮನಸಲ್ಲಿ ಸೇರಿಕೊಂಡು ಒಂದು ಭಾವುಕ ಅನುಭವಚಿತ್ರ ರೂಪುಗೊಳ್ಳುತ್ತದೆ.

ಜನಪ್ರಿಯ ದಾಟಿಯ ‘ಕಥೆ’ಯನ್ನು ನಿರಾಕರಿಸಿದ ಹಾಗೆಯೇ ‘ನಾಯಕ’ – ‘ನಾಯಕಿ’ ಎಂಬ ಸಿನಿಮೀಯ ಪ್ರಭಾವಳಿಯನ್ನೂ ನಿರಾಕರಿಸಿ ಗಟ್ಟಿ ಪಾತ್ರಗಳನ್ನು ನಿರ್ದೇಶಕರು  ಕಟ್ಟಿದ್ದಾರೆ. ಆದ್ದರಿಂದಲೇ ಸಂಗೀತಾ ಭಟ್‌, ಧನಂಜಯ್‌, ಲಕ್ಷ್ಮೀ – ಈ ಮೂವರ ಜೊತೆಗೆ ಸಂಗೀತ ನಿರ್ದೇಶಕ ಅನೂಪ್‌ ಸೀಳಿನ್‌ ಕೂಡ ಈ ಸಿನಿಮಾದ ನಾಯಕರೇ! ಹಾಗೆಯೇ ಹಾಗೆ ಬಂದು ಹೀಗೆ ಹೋಗುವ ಅನಾಥಾಶ್ರಮದಲ್ಲಿನ ಭಾರ್ಗವಿ ನಾರಾಯಣ್‌ ಪಾತ್ರವೂ ಮನಸಲ್ಲಿ ಅಚ್ಚೊತ್ತಿಬಿಡುತ್ತವೆ.

ಧನಂಜಯ್‌ ಶಕ್ತಿ ಮಿತಿಗಳೆರಡನ್ನೂ ಚೆನ್ನಾಗಿ ಬಲ್ಲ ಗುರುಪ್ರಸಾದ್‌, ಅವರ ಪತಿಭೆಯನ್ನು ಸಶಕ್ತವಾಗಿ ಬಳಸಿಕೊಂಡಿದ್ದಾರೆ. ತುಂಟ ಹುಡುಗಿಯಾಗಿ ಸಂಗೀತಾ ಭಟ್‌ ಇಷ್ಟವಾಗುತ್ತಾರೆ. ಮುಗ್ಧತೆಯಲ್ಲೂ ಮುದ್ದಾಟದಲ್ಲಿಯೂ ಅವರೂ ಸೈ ಎನಿಸಿಕೊಳ್ಳುತ್ತಾರೆ. ಅಶ್ಲೀಲತೆಯ ಗಡಿ ಮುಟ್ಟದಂತೆಯೇ ಶೃಂಗಾರರಸದ ಪಾಕವನ್ನು ತುಳುಕಿಸುವುದು ಹೇಗೆ ಎನ್ನುವುದಕ್ಕೂ ಈ ಸಿನಿಮಾ ಮಾದರಿ ಆಗಬಲ್ಲದು. ಲಕ್ಷ್ಮಿ ತಮ್ಮ ಪಕ್ವ ಅಭಿನಯದ ಮೂಲಕ ಸಿನಿಮಾದ ಆಚೆಗೂ ಮನಸ್ಸಿನಲ್ಲಿ ಉಳಿಯುತ್ತಾರೆ.

ಮೇಲು ಮಟ್ಟದಲ್ಲಿ ಚುರುಕು ಸಂಭಾಷಣೆ (ಕೆಲವು ಕಡೆ ದ್ವಂದ್ವಾರ್ಥದ), ವಿಶಿಷ್ಟ ಸನ್ನಿವೇಶಗಳ ಮೂಲಕ ಭರಪೂರ ಮನರಂಜನೆ ನೀಡುತ್ತಲೇ, ಒಳ್ಳೆಯ ಅನುಭವಚಿತ್ರವನ್ನೂ ದಾಟಿಸುವ ಶಕ್ತಿ ‘ಎರಡನೇ ಸಲ’ ಸಿನಿಮಾಕ್ಕಿದೆ.

ಕೊನೆಯ ದೃಶ್ಯದಲ್ಲಿ ನಾಯಕ ಹೇಳುವ ‘ನಾನು ತುಂಟ ಇರಬಹುದು, ಆದರೆ ಕೆಟ್ಟವನಲ್ಲ’ ಎಂಬ ಮಾತು, ನಿರ್ದೇಶಕ ಗುರುಪ್ರಸಾದ್‌ ಅವರಿಗೂ ಅನ್ವಯಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT