ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಂಗಳದ ಸಿದ್ಧೌಷಧ: ಹಿಪ್ಪಲಿ

Last Updated 3 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ನಮ್ಮ ಮನೆಯ ಹಿತ್ತಲಿನಲ್ಲಿ ಸುಲಭವಾಗಿ ಬೆಳೆಯಬಲ್ಲ ಹಿಪ್ಪಲಿಗೆ ಉದ್ದ ಮೆಣಸು ಎಂಬ ಹೆಸರೂ ಇದೆ. ಒಣಗಿಸಿ ಮತ್ತು ಹಸಿಯಾಗಿ ಇದನ್ನು ಅಡುಗೆಗೆ ಮಸಾಲೆಯಂತೆ ಉಪಯೋಗಿಸಲಾಗುತ್ತದೆ. ವಿದೇಶಗಳಲ್ಲಿ ಇದರಿಂದ ಉಪ್ಪಿನಕಾಯಿ ಮಾಡುತ್ತಾರೆ. ಪೈಪರೇಸಿಯಾ ಕುಟುಂಬಕ್ಕೆ ಸೇರಿದ ಹಿಪ್ಪಲಿಗೆ ಹಲವು ಔಷಧಗುಣಗಳಿವೆ. ಅನೇಕ ಕಾಯಿಲೆಗಳಿಗೆ ಇದರಿಂದ ಮನೆಯಲ್ಲೇ ಮದ್ದನ್ನು ತಯಾರಿಸಬಹುದು.
 
* ಹಿಪ್ಪಲಿಯ ಚೂರ್ಣದ ಕಷಾಯ ತಯಾರಿಸಿ ಕುದಿಸಿದ ಎಮ್ಮೆಹಾಲು ಮತ್ತು ಕಲ್ಲುಸಕ್ಕರೆ ಬೆರೆಸಿ ಕುಡಿದರೆ ಬಾಣಂತಿಯರಿಗೆ ಎದೆಹಾಲು ಹೆಚ್ಚುತ್ತದೆ. ರಕ್ತಹೀನತೆ ಇರುವವರಿಗೂ ಇದು ರಕ್ತವರ್ಧಕವೆನಿಸಿದೆ. ಹೆರಿಗೆಯ ಬಳಿಕ ಶರೀರ ಮೊದಲಿನ ಸ್ಥಿತಿಗೆ ಶೀಘ್ರವಾಗಿ ಮರಳಲು ಹಿಪ್ಪಲಿ ನೆರವಾಗುತ್ತದೆ.
 
* ಹುರಿದ ಹಿಪ್ಪಲಿಯ ಚೂರ್ಣ, ಸಕ್ಕರೆ, ಜೇನುಗಳನ್ನು ಸಮಪ್ರಮಾಣದಲ್ಲಿ ಬೆರೆಸಿ ಆಕಳ ಹಾಲನ್ನು ಕೆಚ್ಚಲಿನಿಂದ ಅದರ ಮೇಲೆ ಹಿಂಡಿ ಸೇವಿಸುವುದರಿಂದ ಲೈಂಗಿಕ ದೌರ್ಬಲ್ಯ ನೀಗುತ್ತದೆ, ಪಥ್ಯವಾಗಿ ಹಾಲು ಮತ್ತು ಕೆಂಪಕ್ಕಿಯ ಅನ್ನ ಸೇವಿಸಬೇಕು ಎಂದು ವೈದ್ಯಕೀಯ ಮೂಲಗಳು ಹೇಳುತ್ತವೆ. ಇದು ಸ್ತ್ರೀಯರ ಬಂಜೆತನ, ಮುಟ್ಟಿನ ಸೆಳೆತ, ಋತುಚಕ್ರದ ದೋಷಗಳನ್ನೂ ನಿವಾರಿಸಿ ಲೈಂಗಿಕ ಆಸಕ್ತಿಯನ್ನೂ ವರ್ಧಿಸಬಲ್ಲದು. ಹಿಪ್ಪಲಿ, ಬೆಲ್ಲದ ಹುಡಿ ಮತ್ತು ನೆಲ್ಲಿರಸದ ಸೇವನೆ ರಕ್ತಹೀನತೆಗೆ ಪರಿಹಾರ ನೀಡುತ್ತದೆ.
 
* ಆಹಾರದೋಷದಿಂದ ಹೊಟ್ಟೆಯುಬ್ಬರ ಉಂಟಾದರೆ ಬಾರ್ಲಿಯನ್ನು ಕುದಿಸಿದ ನೀರಿನಲ್ಲಿ ತುಪ್ಪ ಮತ್ತು ಹಿಪ್ಪಲಿ ಚೂರ್ಣವನ್ನು ಕದಡಿ ಕುಡಿದರೆ ಗುಣವಾಗುವುದು. ಒಣಶುಂಠಿ, ಕಾಳುಮೆಣಸು, ಹಿಪ್ಪಲಿಗಳನ್ನು ಹುಡಿ ಮಾಡಿ ತಯಾರಿಸಿದ ಕಷಾಯಕ್ಕೆ ಇಂಗು ಬೆರೆಸಿ ಸೇವಿಸಿದರೆ ಅಜೀರ್ಣದಿಂದ ಹಸಿವಾಗದಿರುವ ತೊಂದರೆ ಶಮನವಾಗುವುದು. ಹಿಪ್ಪಲಿಯ ಹುಡಿಯನ್ನು ಬಾಳೆಹಣ್ಣಿನೊಂದಿಗೆ ಮಥಿಸಿ ತಿಂದರೆ ಮಲಬದ್ಧತೆ ನೀಗುತ್ತದೆ. ಜೇನಿನೊಂದಿಗೆ ಸೇವಿಸಿದರೆ ಅತಿಸಾರ ಶಮನಗೊಳ್ಳುತ್ತದೆ.
 
* ಕೂದಲು ಉದುರುತ್ತಿದ್ದರೆ ಹಿಪ್ಪಲಿಯ ಚೂರ್ಣವನ್ನು ಬೇವಿನ ಎಲೆಯೊಂದಿಗೆ ಹಾಲಿನಲ್ಲಿ ಅರೆದು ಕೂದಲಿಗೆ ಲೇಪಿಸಿ ಒಣಗಿದ ಬಳಿಕ ಸ್ನಾನ ಮಾಡುವುದರಿಂದ ಅದನ್ನು ತಡೆಯುತ್ತದೆ.
 
 
* ಹಿಪ್ಪಲಿಯ ಕಷಾಯಕ್ಕೆ ಕಲ್ಲುಪ್ಪು ಬೆರೆಸಿ ಕುಡಿದರೆ ಮೂಗು ಕಟ್ಟುವುದು, ಕೆಮ್ಮು ಶಮನವಾಗುವುದು. ತುಲಸಿ, ಲವಂಗ, ಒಣಶುಂಠಿ, ಜೇನಿನೊಂದಿಗೆ ಅದರಿಂದ ತಯಾರಿಸಿದ ಕಷಾಯವು ಹಲವು ಬಗೆಯ ಕೆಮ್ಮುಗಳಿಗೆ ರಾಮಬಾಣವೂ ಹೌದು. ಬದನೆ ಎಲೆಯ ರಸ ಮತ್ತು ಜೇನಿನೊಂದಿಗೆ ಹಿಪ್ಪಲಿಯ ಹುಡಿ ಬೆರೆಸಿ ಕುಡಿದರೆ ದೀರ್ಘಕಾಲದ ಕೆಮ್ಮು ಪರಿಹಾರವಾಗುವುದು. ಹಿಪ್ಪಲಿಯ ಹುಡಿ, ಸೈಂದುಪ್ಪು, ತುಪ್ಪಗಳ ಮಿಶ್ರಣವೂ ಕೆಮ್ಮಿಗೆ ಮದ್ದೆನಿಸಿದೆ. ಬಿಳಿಗಾರದ ಅರಳಿನ ಹುಡಿ ಮತ್ತು ಹಿಪ್ಪಲಿಯ ಹುಡಿಯನ್ನು ಜೇನಿನಲ್ಲಿ ಕಲಸಿ ನೆಕ್ಕಿದರೆ ಕೆಮ್ಮು ಗುಣವಾಗುತ್ತದೆ. ಬೆಲ್ಲ ಮತ್ತು ಹುರಿದ ಹಿಪ್ಪಲಿಯ ಹುಡಿಯ ಸೇವನೆ ಅಸ್ತಮಾ, ಹೃದಯದ ತೊಂದರೆಗಳು, ಕರುಳಿನ ಹುಳಗಳಿಗೂ ಮದ್ದಾಗುತ್ತದೆ. 
 
* ಗಂಟಲಿನಲ್ಲಿ ಕಫ ಕಟ್ಟಿದ್ದರೆ ಅಣಿಲೆಕಾಯಿ, ಹಿಪ್ಪಲಿ, ಕಾಳುಮೆಣಸುಗಳ ಸಮಾಂಶ ಚೂರ್ಣವನ್ನು ಜೇನಿನಲ್ಲಿ ಕಲಸಿ ನೆಕ್ಕಬೇಕು. ಹಿಪ್ಪಲಿ, ಜೀರಿಗೆ, ಯಾಲಕ್ಕಿ, ಒಣಶುಂಠಿ, ಕಾಳುಮೆಣಸುಗಳ ಸಮಾಂಶ ಚೂರ್ಣದಲ್ಲಿ ಸಕ್ಕರೆ ಸೇರಿಸಿ ಸೇವಿಸುವುದು ಉಬ್ಬಸವನ್ನು ತಡೆಯುತ್ತದೆ. ಮಲೇರಿಯ, ಟೈಫಾಯಿಡ್, ಬಿಟ್ಟು ಬರುವ ಜ್ವರಗಳಿಗೂ ಹಿಪ್ಪಲಿಯ ಕಷಾಯ ಚಿಕಿತ್ಸೆಯಾಗುತ್ತದೆ. ಕಾಮಾಲೆ, ಥೈರಾಯ್ಡ್ ನೋವು, ಅಗ್ನಿಮಾಂದ್ಯ, ಗ್ಯಾಸ್ಟ್ರಿಕ್ ಕೂಡ ಅದರ ಮುಂದೆ ಮಣಿಯುತ್ತದೆ. ಹಿಪ್ಪಲಿಯ ಗಿಡದ ಬೇರಿನ ಕಷಾಯ ಮಾಡಿ ಅದಕ್ಕೆ ಹಿಪ್ಪಲಿ ಹುಡಿ ಬೆರೆಸಿ ಕುಡಿದರೆ ಗುಲ್ಮ, ಯಕೃತ್ ರೋಗಗಳು, ಕಟಿವಾಯು, ನಾನಾ ಬಗೆಯ ಸೋಂಕುಗಳಿಗೂ ಪರಿಣಾಮಕರವಾಗಿದೆ.
 
* ಅಪಸ್ಮಾರ ರೋಗಿಗಳು ಮತ್ತು ನಿದ್ರಾಹೀನತೆಯಿರುವವರು ಮಲಗುವ ಮೊದಲು ಬಿಸಿ ಹಾಲಿನಲ್ಲಿ ಹಿಪ್ಪಲಿಯ ಚೂರ್ಣವನ್ನು ಕದಡಿ ಕುಡಿದರೆ ಚೆನ್ನಾಗಿ ನಿದ್ರೆ ಬರುತ್ತದೆ. ಜ್ಞಾಪಕಶಕ್ತಿಯನ್ನು ವರ್ಧಿಸಿ ಮೆದುಳಿಗೆ ಬಲದಾಯಕವೂ ಹೌದು.
 
* ಲಿಂಬೆರಸ ಮತ್ತು ಗಂಧದೆಣ್ಣೆಯೊಂದಿಗೆ ಹಿಪ್ಪಲಿಯ ಹುಡಿಯನ್ನು ಬೆರೆಸಿ ಹಚ್ಚಿದರೆ ಸೋರಿಯಾಸಿಸ್, ಚರ್ಮದ ಉರಿಯೂತ, ನೋವುಗಳು ಶಮನವಾಗುತ್ತವೆ. 
 
ಯಾವ ಬಗೆಯ ರೋಗದ ಸಮಸ್ಯೆ ಉಲ್ಬಣಗೊಳ್ಳುವ ಮೊದಲೇ ವೈದ್ಯರನ್ನು ಕಾಣಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT