ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಿಹರೆಯದ ತಾಯ್ತನದ ಸವಾಲುಗಳು

Last Updated 3 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಹದಿಹರೆಯದಲ್ಲಿಯೇ ಹೆಣ್ಣುಮಕ್ಕಳು ತಾಯಿಯಾಗುತ್ತಿರುವುದು ಕೇವಲ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಷ್ಟೇ ಅಲ್ಲ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿಯೂ ವ್ಯಾಪಕವಾಗಿ ಹರಡುತ್ತಿದೆ. ನೆರೆಯ ಬಾಂಗ್ಲಾದೇಶ, ಪಾಕಿಸ್ತಾನಕ್ಕಿಂತ ಹೆಚ್ಚು ಭಾರತದ ಹದಿಹರೆಯದವರಲ್ಲಿ ಗರ್ಭಧಾರಣೆ ಹೆಚ್ಚುತ್ತಿದೆ (40 ಲಕ್ಷಕ್ಕೂ ಹೆಚ್ಚು). ಕುಗ್ರಾಮ, ಬುಡಗಟ್ಟು ಜನಾಂಗ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಹೆಣ್ಣುಮಕ್ಕಳಿಗಂತೂ ಮದುವೆ ಒಂದು ಶಾಪ ಎಂಬಂತಾಗಿದೆ. ತಮ್ಮ ಜವಾಬ್ದಾರಿ ಕಳೆಯಲೆಂದು, ಮೌಢ್ಯದಿಂದಲೂ ಹೆಣ್ಣುಮಕ್ಕಳು 12 –13 ವರ್ಷಕ್ಕೆ ಕಾಲಿರಿಸುತ್ತಿದ್ದಂತೆ ಮದುವೆ ಮಾಡಿಬಿಡುತ್ತಾರೆ.  ಈ ಹೆಣ್ಣುಮಕ್ಕಳೆಲ್ಲರೂ ಹೆಚ್ಚಾಗಿ ಮದುವೆಯಾಗುವುದು ತಮಗಿಂತ ಎರಡು ಪಟ್ಟು ಹೆಚ್ಚಿನ ವಯಸ್ಸಿನವರನ್ನು. ಹೀಗೆ ಹದಿವಯಸ್ಸಿನಲ್ಲಿ ಮದುವೆಯಾದವರು 15ವರ್ಷದೊಳಗೆ ತಾಯಿಯಾಗಿ ಜೀವಕ್ಕೆ ಹಾನಿಯಾಗುವಂತಹ ಘಟನೆಗಳು ನಡೆಯುತ್ತದೆ.

ಆಡುವ ಬಾಲೆ ಅತ್ಯಾಚಾರಕೊಳ್ಳಗಾಗಿ ಗರ್ಭ ಧರಿಸಿ ಸಮಾಜದ ದೃಷ್ಟಿಯಲ್ಲಿ ‘ಕೆಟ್ಟ ಹುಡುಗಿ’ ಎಂಬ ಪಟ್ಟ ಕಟ್ಟಿಕೊಂಡು ಬದುಕುತ್ತಿರುವುದನ್ನು ಮಾಧ್ಯಮಗಳಲ್ಲಿ ನೋಡಬಹುದು. ಸುದ್ದಿವಾಹಿನಿಗಳಲ್ಲಿ ಈ ಸುದ್ದಿ ದಿನದ ಮಟ್ಟಿಗೆ ದೊಡ್ಡ ಚರ್ಚೆಯಾಗಿ ಅಷ್ಟೇ ಬೇಗ ತಣ್ಣಗಾಗುತ್ತದೆ.

ಹದಿಹರೆಯದ ಗರ್ಭಧಾರಣೆ ಎಲ್ಲ ದೇಶದಲ್ಲೂ ಇದೆ. ಹದಿಹರೆಯದಲ್ಲಿ ಗರ್ಭ ಧರಿಸುವವರ ಸಂಖ್ಯೆಯಲ್ಲಿ ಭಾರತ 10 ದೇಶಗಳಲ್ಲಿ ಅಗ್ರಸ್ಥಾನದಲ್ಲಿದೆ. ಹೊರದೇಶಗಳಲ್ಲಿ ಅಸುರಕ್ಷಿತ ಲೈಂಗಿಕತೆಯಿಂದ ಹೆಚ್ಚು ಹದಿಹರೆಯದ ಗರ್ಭಧಾರಣೆಯಾದರೆ, ಭಾರತದಂತಹ ದೇಶದಲ್ಲಿ ಅಸಮರ್ಪಕ ಲೈಂಗಿಕ ಮಾಹಿತಿ ಹಾಗೂ ಅಜ್ಞಾನ, ಅತಿಯಾದ ಲೈಂಗಿಕ ನಿಯಂತ್ರಣ, ಗರ್ಭನಿರೋಧಕಗಳ ಸರಿಯಾದ ಬಳಕೆ ಇಲ್ಲದಿರುವುದು, ಬಾಲ್ಯವಿವಾಹ ಇತ್ಯಾದಿ ಕಾರಣದಿಂದಾಗಿ ಹದಿಹರೆಯದ ಗರ್ಭಧಾರಣೆಯಾಗುತ್ತಿದೆ.

ಆರೋಗ್ಯ ಹಾಗೂ ಕುಟುಂಬಕಲ್ಯಾಣ ಇಲಾಖೆ ಮಾಹಿತಿ ಪ್ರಕಾರ 2016-2017ರಲ್ಲಿ ಬಾಲಕಿಯರು ಗರ್ಭ ಧರಿಸಿದ ಪ್ರಮಾಣದಲ್ಲಿ ಶೇ.4.86 ರಿಂದ 7.01ಕ್ಕೆ ಏರಿಕೆಯಾಗಿರುವುದು ಧೃಢಪಟ್ಟಿರುವುದು ಕಳವಳಕಾರಿ  ಸಂಗತಿಯಾಗಿದೆ. ಕಳೆದ 22 ತಿಂಗಳಲ್ಲಿ ಕರ್ನಾಟಕ ರಾಜ್ಯದಲ್ಲಿ 1,14,575 ಹೆಣ್ಣುಮಕ್ಕಳು ತಮಗೆ ಹದಿನೆಂಟು ವರ್ಷ ತುಂಬವ ಮೊದಲೇ ಗರ್ಭ ಧರಿಸಿದ್ದಾರೆ ಎನ್ನುವುದು ಸಾಬೀತಾಗಿದೆ. ಬಾಲ್ಯವಿವಾಹ ತಡೆಗಟ್ಟಲು ಕಠಿಣ ಕಾನೂನುಗಳಿದ್ದರೂ  ಬೆಳಗಾವಿಯಂತಹ ಗಡಿಜಿಲ್ಲೆಗಳಲ್ಲಿ ಬಾಲ್ಯವಿವಾಹ ಇನ್ನೂ ಹೆಚ್ಚಾಗುತ್ತಿದೆ. ಹದಿಹರೆಯದಲ್ಲಿನ ಗರ್ಭಪಾತ ಪ್ರಮಾಣವು ಹೆಚ್ಚಿದೆ. ಯಾಕೆ ಹೀಗೆ? ಕಾನೂನು ಪಾಲನೆಯಲ್ಲಿನ ತೊಡಕೇನು? ಸಂಬಂಧ ಪಟ್ಟ ಇಲಾಖೆಗಳ ಕಾರ್ಯವೈಖರಿಯೇ ಸರಿಯಿಲ್ಲವೇ ಅಥವಾ ಈ ಬಗ್ಗೆ ಸಂಬಂಧಪಟ್ಟವರ ದಿವ್ಯನಿರ್ಲಕ್ಷತೆಯೇ?

ಕೌಟುಂಬಿಕ ಮೌಢ್ಯಗಳಿಗೆ ಜೋತುಬಿದ್ದು, ಬೇಗ ಮದುವೆ ಮಾಡಿ ಜವಾಬ್ದಾರಿ ಕಳೆದುಕೊಳ್ಳುವ ಸಲುವಾಗಿ, ಆರ್ಥಿಕ ಸಂಕಷ್ಟದಿಂದ ಪಾರಾಗುವ ಸಲುವಾಗಿ, ಬೇಗನೇ ಮಕ್ಕಳು, ಮೊಮ್ಮಕ್ಕಳ ಮದುವೆ ಮಾಡುವ ಆಸೆಯಿಂದಲೋ ಹದಿಹರೆಯದಲ್ಲೇ ಮದುವೆ ಮಾಡಿಸುತ್ತಾರೆ.  ಈ ಕಾರಣಗಳಿಂದಾಗಿಯೂ ಕೂಡ ಹದಿಹರೆಯದ ಗರ್ಭಧಾರಣೆ ಭಾರತದಲ್ಲಿ ಹೆಚ್ಚುತ್ತಿದೆ.

ಭಾರತದಂತಹ ಪಿತೃಪ್ರಧಾನ ಸಮಾಜದಲ್ಲಿ ಹೆಣ್ಣು ಎರಡನೇ ದರ್ಜೆಯ ಪ್ರಜೆಯಾಗಿರುವುದರ ಜೊತೆಗೆ, ಬಡತನದ ಶಾಪವೂ ಜೊತೆಗೂಡಿ ಶೈಕ್ಷಣಿಕವಾಗಿ  ಬಾಲಕಿಯರು ಹಿಂದುಳಿಯುವಂತಾಗಿದೆ. ತಮ್ಮ-ತಂಗಿಯರನ್ನು ನೋಡಿಕೊಳ್ಳಲೆಂದು, ಶಾಲೆಗಳಲ್ಲಿ ಶೌಚಾಲಯವಿಲ್ಲವೆಂದು ಅಥವಾ ಇದ್ದರೂ ನೀರಿನ ತೊಂದರೆಯಿದೆಯೆಂದೂ, ಋತುಚಕ್ರದಲ್ಲಿ ತನ್ನನ್ನು ತಾನು ನಿರ್ವಹಣೆ ಮಾಡಿಕೊಳ್ಳಲು ಸಾಧ್ಯವಿಲ್ಲವೆನ್ನುವವರೆಗೂ ಹಲವು ಕಾರಣಗಳನ್ನು ಇದಕ್ಕಾಗಿ ಕೊಡುತ್ತಾರೆ. ಇದರ ಜೊತೆಗೆ ಸಂತಾನೋತ್ಪತ್ತಿ ಹಕ್ಕುಗಳ ಬಗ್ಗೆ ನಿಯಂತ್ರಣವಿಲ್ಲದಿರುವುದು (ಅಂದರೆ ತಾನು ಯಾವಾಗ ಎಷ್ಟು ಮಕ್ಕಳನ್ನ ಹಡೆಯಬೇಕೆಂದೇ ಗೊತ್ತಿಲ್ಲದಂತಹ ಸ್ಥಿತಿ). ಲಿಂಗ ಸಮಾನತೆಯ ಸೂಚ್ಯಂಕದಲ್ಲಿ ನಾವು ಕಳಪೆ ಸ್ಥಾನದಲ್ಲಿರುವುದು (130/150) ಎಲ್ಲವೂ ಕೂಡ ಹದಿಹರೆಯದ ಗರ್ಭಧಾರಣೆಗೆ ಪರಸ್ಪರ ಪೂರಕವಾದ ಅಂಶಗಳೇ.

ಅದೇನೇ ಇರಲಿ ಹದಿಹರೆಯದಲ್ಲಿ ಗರ್ಭಧಾರಣೆಯಾದರೆ ಹಲವಾರು ಸಮಸ್ಯೆಗಳನ್ನು ಮಹಿಳೆ ಎದುರಿಸಬೇಕಾಗಿರುವುದಂತೂ ಸತ್ಯ. ಬಾಲೆಯ ಶಿಕ್ಷಣ ಮೊಟಕುಗೊಳ್ಳುವುದರ ಜೊತೆಗೆ ಸಾಮಾಜಿಕ, ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೇ ವೈದ್ಯಕೀಯವಾಗಿಯೂ, ಮಾನಸಿಕವಾಗಿಯೂ ಸಂಕೀರ್ಣ ಸಮಸ್ಯೆಗಳನ್ನು ಎದುರಾಗುತ್ತದೆ.

ಹದಿಹರೆಯದ ತಾಯ್ತನಕ್ಕೆ ಹಲವಾರು ಸಂಗತಿಗಳು ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಮೊದಲನೆಯದಾಗಿ ಹದಿವಯಸ್ಸಿನಲ್ಲಿ ಸ್ತ್ರೀತ್ವದ ಬೆಳವಣಿಗೆ ಅಸಮರ್ಪಕ ಹಾಗೂ ಅಪಕ್ವವಾಗಿರುತ್ತದೆ. ಸ್ವತಃ ತಾಯಿಯಾಗಲಿರುವವಳೇ ಬೆಳವಣಿಗೆಯ ತೀವ್ರತರವಾದ ಹಂತದಲ್ಲಿರುವುದರಿಂದ ಹೆಚ್ಚು ಪೌಷ್ಟಿಕಾಂಶಗಳ ಅಗತ್ಯವಿರುತ್ತದೆ. ಈ ಮಧ್ಯೆ ಗರ್ಭ ಧರಿಸಿದರೆ ಶಿಶುವಿಗೂ ಕೂಡ ಹೆಚ್ಚು ಪೋಷಕಾಂಶಗಳ ಅಗತ್ಯವಿರುತ್ತದೆ. ಹೀಗಾಗಿ ಅಗತ್ಯ ಪೋಷಕಾಂಶಗಳ ಹೊಂದಾಣಿಕೆಯಲ್ಲಿ ತಾಯಿ-ಮಗುವಿಗೆ ಸ್ಪರ್ಧೆ ಏರ್ಪಟ್ಟು ಪರಸ್ಪರ ತಾಯಿ ಹಾಗೂ ಮಗು ಇಬ್ಬರಿಗೂ ಪೋಷಕಾಂಶಗಳ ಕೊರತೆ ಉಂಟಾಗಿ ಜೈವಿಕವಾಗಿ ಸ್ಪರ್ಧಾತ್ಮಕ ವಾತಾವರಣ ಉಂಟಾಗುತ್ತದೆ.  ಇದರೊಂದಿಗೆ ಮಧ್ಯಪಾನ, ಧೂಮಪಾನದಂತಹ ದುರಭ್ಯಾಸಗಳಿಂದ ದೇಹದಲ್ಲಿ ಅಪೌಷ್ಟಿಕತೆ, ರಕ್ತಹೀನತೆಯಂತಹ ತೊಂದರೆಗಳನ್ನು ಉಂಟುಮಾಡುತ್ತದೆ.  ಇದರಿಂದ ತಾಯಿ ಹಾಗೂ ಮಗು ಇಬ್ಬರಿಗೂ ತೊಂದರೆಯಾಗುವುದು ಖಚಿತ.

ನಮ್ಮ ದೇಶದಲ್ಲಿ 5 ಪ್ರಕಾರ ಶೇ.70ರಷ್ಟು ಹದಿಹರೆಯದ ಹೆಣ್ಣುಮಕ್ಕಳಲ್ಲಿ ರಕ್ತಹೀನತೆಯ  ತೊಂದರೆಯಿರುವುದನ್ನು ಅಧ್ಯಯನಗಳು ಹೇಳುತ್ತವೆ. ಅಂದರೆ ರಕ್ತದಲ್ಲಿನ ಹಿಮೋಗ್ಲೋಬಿನ್ ಪ್ರಮಾಣ 11ಗ್ರಾಂಗಿಂತ ಕಡಿಮೆ ಇರುವುದು. (ಅಖಿಲ ಭಾರತ ಸ್ತ್ರೀರೋಗ ತಜ್ಞರ ಸಂಘದ ಪ್ರಕಾರ ಭಾರತದಲ್ಲಿ ರಕ್ತಹೀನತೆ ಹಿಮೋಗ್ಲೋಬಿನ್ 10ಗ್ರಾಂಗಿಂತ ಕಡಿಮೆ ಇರುವುದು). ಅವೈಜ್ಞಾನಿಕ ಆಹಾರಪದ್ಧತಿ ಕೂಡ ಹದಿಹರೆಯದ ಗರ್ಭಧಾರಣೆ ಸಂದರ್ಭದಲ್ಲಿ ತೊಂದರೆ ಉಂಟುಮಾಡಬಹುದು. ಅತಿಯಾದ ಜಂಕ್‌ ಪುಡ್‌ ಸೇವನೆಯಿಂದ ಕಬ್ಬಿಣಾಂಶ ಹಾಗೂ ಪಾಲಿಕ್‌ ಆ್ಯಸಿಡ್‌ ಕೊರತೆ ಉಂಟಾಗಿ ಗರ್ಭಧಾರಣೆಯ ಸಮಯದಲ್ಲಿ ತೊಂದರೆ ಉಂಟಾಗುವ ಪ್ರಮಾಣ ಹೆಚ್ಚಬಹುದು. ಅಲ್ಲದೇ ಕಬ್ಬಿಣಾಂಶದ ಕೊರತೆಯಿಂದ ರೋಗನಿರೋಧಕ ಶಕ್ತಿಯೂ ಕಡಿಮೆಯಾಗಬಹುದು.

ಹದಿಹರೆಯದ ಗರ್ಭಧಾರಣೆಯಿಂದ ಲೈಂಗಿಕ ಸೋಂಕು ಉಂಟಾಗುವ ಸಾಧ್ಯತೆ ಕೂಡ ಇದೆ. ಅಲ್ಲದೇ ಹೆರಿಗೆಯೂ ಕೂಡ ಕಷ್ಟಕರವಾಗಿ, ಪ್ರಸವ ನಂತರ ಅಧಿಕ ರಕ್ತಸ್ರಾವ ಉಂಟಾಗಬಹುದು. ಪ್ರಸವ ನಂತರದ ಖಿನ್ನತೆ, ಎದೆಹಾಲುಣಿಸುವಿಕೆಯ ಸಮಸ್ಯೆ, ಪದೇಪದೇ ಗರ್ಭಧಾರಣೆಯಂತಹ ಸಮಸ್ಯೆಯೂ ಬರಬಹುದು. ಗರ್ಭವಿಷಭಾದೆ (ಪ್ರೀಎಕ್ಲಾಂಪ್ಸಿಯಾ), ಗರ್ಭದೊಳಗೆ ಮಗುವಿನ ತೂಕ ಕಡಿಮೆಯಾಗುವುದು (ಐ.ಯು.ಜಿ.ಆರ್.), ಅಕಾಲಿಕ ಹೆರಿಗೆ, ಪ್ರಸವಾನಂತರದ ಸೋಂಕು ಎಲ್ಲವೂ ಹೆಚ್ಚಾಗಿ ಮಾತೃಮರಣ  (ಎಂ.ಎಂ.ಆರ್.) ಹಾಗೂ ಶಿಶುಮರಣದ  (ಐ.ಎಂ.ಆರ್.) ಸಂಭವವೂ ಹೆಚ್ಚು. ತಾಯಿಯ ಗರ್ಭದಿಂದಲೇ ಉಂಟಾಗುವ ರಕ್ತಹೀನತೆ ಹಾಗೂ ಅಪೌಷ್ಟಿಕತೆ ಮಗುವಿನಲ್ಲಿ ಹಾಗೆಯೇ ಮುಂದುವರೆಯುವ ಸಾಧ್ಯತೆಯೂ ಇದೆ.

ಒಟ್ಟಾರೆ ಬಾಲ್ಯವಿವಾಹವನ್ನು ತಡೆಗಟ್ಟುವುದರಿಂದ ಹಿಡಿದು, ಎಲ್ಲ ಹಂತಗಳಲ್ಲಿ ಸಾಮಾಜಿಕ ಜಾಗ್ರತಿ ಮೂಡಿಸಿ, ವೈದ್ಯಕೀಯ ಅರಿವನ್ನು ಹೆಚ್ಚಿಸಿಕೊಂಡು ಪರಸ್ಪರ ಕುಟುಂಬದ, ಸಾಮಾಜಿಕ ಕಾರ್ಯಕರ್ತರ, ಆರೋಗ್ಯ ಕಾರ್ಯಕರ್ತರ ಹಾಗೂ ವೈದ್ಯರ ಪರಸ್ಪರ ಬೆಂಬಲದಿಂದ ಹದಿಹರೆಯದ ತಾಯ್ತನದ ಸವಾಲುಗಳನ್ನು ಎದುರಿಸಬೇಕಾಗಿದೆ.

**

ನಾವೇನು ಮಾಡಬಹುದು?

* ಹೆಚ್ಚಿನ ಹದಿಹರೆಯದ ಹೆಣ್ಣು ತಾನು ತಾಯಿಯಾಗುತ್ತಿದ್ದೇನೆ ಎಂದು ತಿಳಿದ ಮೇಲೂ ಸೂಕ್ತ ವೈದ್ಯಕೀಯ ತಪಾಸಣೆಗೆ ಒಳಗಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಆರೋಗ್ಯ ಕಾರ್ಯಕರ್ತರು, ದಾದಿಯರು, ವೈದ್ಯರು ಜೊತೆಗೆ ಎಲ್ಲಾ ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿಗಳು ಇವರ ಮನವೊಲಿಸಿ  ವೈದ್ಯಕೀಯ ತಪಾಸಣೆಗೆ ಒಳಪಡುವಂತೆ ಮಾಡಬೇಕು.

* ಒಬ್ಬ ಬಾಲೆ 12 ವರ್ಷ ತುಂಬುವುದರೊಳಗೆ ರಕ್ತದಲ್ಲಿನ ಹಿಮೋಗ್ಲೋಬಿನ್ ಅಂಶ 12ಗ್ರಾಂ ಇರುವ ಹಾಗೆ ನೋಡಿಕೊಳ್ಳಬೇಕು.

* ಸರಿಯಾದ ಸಂತಾನ ನಿಯಂತ್ರಣ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಲೈಂಗಿಕ ರೋಗಗಳ ವಿರುದ್ಧ ರಕ್ಷಣೆಯಲ್ಲಿ ಕಾಳಜಿ ವಹಿಸಬೇಕು.

* ಒಮ್ಮೆ ಗರ್ಭಧಾರಣೆಯಾಗಿದ್ದಲ್ಲಿ ಕಾಲಕಾಲಕ್ಕೆ ಸೂಕ್ತ ತಪಾಸಣೆ ಮಾಡಿ ಫಾಲಿಕ್ ಆಸಿಡ್ ಮಾತ್ರೆಗಳನ್ನು ಮೊದಲ ಮೂರು ತಿಂಗಳು ತೆಗೆದುಕೊಳ್ಳಲು ತಿಳಿಸಬೇಕು.

* ಮೊದಲ ಭೇಟಿಯಲ್ಲಿಯೇ ವೈದ್ಯರು ಪೌಷ್ಟಿಕ ಆಹಾರ ಸೇವನೆ, ರಕ್ತಹೀನತೆ ಬಗ್ಗೆ ತಿಳಿಸಿ ಸೂಕ್ತ ಚಿಕಿತ್ಸೆ ಕೊಡಬೇಕು.

* ಧೂಮಪಾನ, ತಂಬಾಕುಸೇವನೆ ಮುಂತಾದ ಚಟಗಳನ್ನು ದೂರವಿಟ್ಟು ಸೂಕ್ತ ಪ್ರಸವಪೂರ್ವ ತಪಾಸಣೆಯಿಂದ ಹಿಡಿದು ಹೆರಿಗೆಯಾಗುವ ಸ್ಥಳದವರೆಗೂ ಸಮಾಲೋಚನೆ ನಡೆಸಬೇಕು.

* ಕೌಟುಂಬಿಕ ಸಹಾಯ ಹಾಗೂ ಬೆಂಬಲ ನೀಡಬೇಕು.

* ರಕ್ತಹೀನತೆ, ಅಕಾಲಿಕ ಹೆರಿಗೆ, ಗರ್ಭವಿಷಭಾದೆ ಇತ್ಯಾದಿ ರೋಗಲಕ್ಷಣಗಳ ಬಗ್ಗೆ ಮುನ್ನೆಚ್ಚರಿಕೆವಹಿಸಬೇಕು. ಉದಾ: ಎರಡೂ ಪಾದ ಊದುವಿಕೆ, ಜೊತೆಗೆ ಏರುರಕ್ತದೊತ್ತಡ, ಸುಸ್ತು, ಏದುಸಿರು, ಅಕಾಲಿಕ ನೋವು, ಪ್ರಸವಪೂರ್ವ ರಕ್ತಸ್ರಾವ ಇವೆಲ್ಲದರ ಬಗ್ಗೆ ಮುನ್ನೆಚ್ಚರಿಕೆ ಚಿಹ್ನೆಗಳನ್ನು ತಿಳಿಸಿ, ಅರಿವು ಮೂಡಿಸಿ ಬೇಗನೆ ವೈದ್ಯಕೀಯ ಸಹಾಯ ತೆಗೆದುಕೊಳ್ಳಲು ತಿಳಿಸಬೇಕು.

* ಅಪೌಷ್ಟಿಕತೆ ರಕ್ತಹೀನತೆಗಳನ್ನು ಗುರುತಿಸಿ ಸೂಕ್ತಚಿಕಿತ್ಸೆ ಕೊಡಬೇಕು.

**
ಲೇಖಕರು ಸ್ತ್ರೀರೋಗ ತಜ್ಞೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT