ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳಿ ಅರಳುವ ತವಕದಲ್ಲಿ ಕೊಹ್ಲಿ ಪಡೆ

ಭಾರತ– ಆಸ್ಟ್ರೇಲಿಯಾ ಎರಡನೇ ಟೆಸ್ಟ್
Last Updated 3 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯಾನನಗರಿಯ ಕ್ರಿಕೆಟ್‌ ಅಭಿಮಾನಿಗಳ ಕಣ್ಮಣಿ ವಿರಾಟ್ ಕೊಹ್ಲಿ ನೇತೃತ್ವದ ಬಳಗಕ್ಕೆ ಈಗ ಮರಳಿ ಅರಳುವ ತವಕ. 
ಸತತ 19 ಟೆಸ್ಟ್‌ಗಳಲ್ಲಿ ಸೋಲನ್ನೇ ಕಾಣದ ಭಾರತ ತಂಡಕ್ಕೆ ಸ್ಟೀವನ್ ಸ್ಮಿತ್ ನಾಯಕತ್ವದ ಆಸ್ಟ್ರೇಲಿಯಾ ಬಳಗವು ಈಚೆಗೆ ಪುಣೆಯಲ್ಲಿ ಬಲವಾದ ಪೆಟ್ಟು ನೀಡಿತ್ತು.

ಕೊಹ್ಲಿ ಪಡೆಯ ಗೆಲುವಿನ ಓಟಕ್ಕೆ ತಡೆಯೊಡ್ಡಿ 333 ರನ್‌ಗಳ ಗೆಲುವು ಸಾಧಿಸಿತ್ತು. ಅದರೊಂದಿಗೆ ಸರಣಿಯಲ್ಲಿ 1–0 ಮುನ್ನಡೆ ಗಳಿಸಿದ್ದ ಪ್ರವಾಸಿ ಬಳಗವು ಶನಿವಾರ ಆರಂಭ ವಾಗುವ ಎರಡನೇ ಪಂದ್ಯದಲ್ಲಿಯೂ ಮೇಲುಗೈ ಸಾಧಿಸುವ ಛಲದಲ್ಲಿದೆ.  ಆದರೆ, ಪೆಟ್ಟು ತಿಂದ ಹುಲಿ ಯಂತಾಗಿರುವ ಆತಿಥೇಯ ತಂಡವು ತಿರುಗೇಟು ನೀಡಿ ಸರಣಿಯನ್ನು 1–1 ರಿಂದ ಸರಣಿ ಜಯದ ಕನಸಿಗೆ ಜೀವ ತುಂಬುವ ಯೋಜನೆ ರೂಪಿಸಿದೆ. ಅದ ಕ್ಕಾಗಿ ಕಳೆದ ಮೂರು ದಿನಗಳಿಂದ ಚಿನ್ನ ಸ್ವಾಮಿ ಕ್ರೀಡಾಂಗಣದಲ್ಲಿ ಕಠಿಣ ತಾಲೀಮು ನಡೆಸಿದೆ. ಪುಣೆಯ ಅಂಗಳ ದಲ್ಲಿ ಆದ ಲೋಪಗಳನ್ನು ತಿದ್ದಿಕೊಂಡು ಹೋರಾಟಕ್ಕಿಳಿಯಲು ಸಜ್ಜಾಗಿದೆ. 

ಜಯದ ಲಯಕ್ಕೆ ಮರಳುವ ವಿಶ್ವಾಸ: ಕೊಹ್ಲಿ ನಾಯಕತ್ವ ವಹಿಸಿಕೊಂಡ ನಂತರ ಸರಣಿಯಲ್ಲಿ ಸೋಲಿನ ಆರಂಭ ಕಂಡಿದ್ದು ಇದೇ ಮೊದಲೇನಲ್ಲ. 2015ರಲ್ಲಿ ಶ್ರೀಲಂಕಾದಲ್ಲಿಯೂ ಇಂತಹದ್ದೇ ಸ್ಥಿತಿ ಯಲ್ಲಿತ್ತು. ಆ ಸರಣಿಯ ಮೊದಲ ಪಂದ್ಯ ದಲ್ಲಿ (ಗಾಲ್‌ ಕ್ರೀಡಾಂಗಣ) 63 ರನ್‌ಗಳಿಂದ ಸೋಲನುಭವಿಸಿತ್ತು.

ಆದರೆ ಕೊಲಂಬೊದಲ್ಲಿ ನಡೆದಿದ್ದ ಸರಣಿಯ ಎರಡನೇ ಪಂದ್ಯದಲ್ಲಿ  ತಿರು ಗೇಟು ನೀಡಿತ್ತು.  278 ರನ್‌ಗಳಿಂದ ಗೆದ್ದಿತ್ತು.  ಮೂರನೇ ಪಂದ್ಯದಲ್ಲಿಯೂ 117 ರನ್‌ಗಳಿಂದ ಗೆದ್ದಿತ್ತು. ಕೊಲಂಬೊ ದಿಂದ  ಆರಂಭವಾದ ಜಯದ ಓಟ ಇಂಗ್ಲೆಂಡ್‌ ವಿರುದ್ಧದ ಸರಣಿಯ ಚೆನ್ನೈ ಪಂದ್ಯದವರೆಗೂ ಸಾಗಿ ಬಂದಿತ್ತು. ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿಯೂ ಆಗ್ರ ಸ್ಥಾನಕ್ಕೇರಿ ವಿಜೃಂಭಿಸಿದೆ.  ಆದರೆ  ಪುಣೆಯಲ್ಲಿ ಆಸ್ಟ್ರೇಲಿಯಾ ಎಡಗೈ ಸ್ಪಿನ್ನರ್ ಸ್ಟೀವ್ ಓಕೀಫ್ ಅವರು ಭಾರತದ ಓಟಕ್ಕೆ ತಡೆಯೊಡ್ಡಿದ್ದರು.

ಕಳೆದ ಒಂದೂವರೆ ವರ್ಷದಲ್ಲಿ ವಿರಾಟ್ ಮತ್ತು ಅವರ ತಂಡದ ಆಟ ಗಾರರು ತಮ್ಮ ಕೌಶಲಗಳಲ್ಲಿ ಸಾಕಷ್ಟು ಪರಿಪಕ್ವಗೊಂಡಿದ್ದಾರೆ. ಹೊಸ ಸಾಧನೆ ಗಳನ್ನು ಬರೆದಿದ್ದಾರೆ. ಸ್ವತಃ ವಿರಾಟ್ ಅವರ ಬ್ಯಾಟಿಂಗ್ ಉತ್ತುಂಗದಲ್ಲಿದೆ. ಸತತ ನಾಲ್ಕು ಸರಣಿಗಳಲ್ಲಿ ದ್ವಿಶತಕ ಗಳಿಸಿದ ವಿಶ್ವದಾಖಲೆ ಬರೆದಿದ್ದಾರೆ. ಚೇತೇಶ್ವರ್ ಪೂಜಾರ ನಾಲ್ಕು ಶತಕಗ ಳನ್ನು ಹೊಡೆದಿದ್ದಾರೆ.  ಮುರಳಿ ವಿಜಯ್ ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ.

ಕನ್ನಡಿಗ ಕೆ.ಎಲ್. ರಾಹುಲ್ ತಮ್ಮ ಸ್ಥಾನ ಗಟ್ಟಿಗೊಳಿಸಿಕೊಂಡಿದ್ದಾರೆ. ಆದರೆ, ಮುರಳಿ ಮತ್ತು ರಾಹುಲ್ ಅವರು ಆರಂ ಭಿಕ ಜೋಡಿಯಾಗಿ ಇನ್ನೂ ಯಶಸ್ವಿ ಯಾಗಬೇಕಿದೆ. ಪುಣೆ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ರಾಹುಲ್ ಅರ್ಧಶತಕ ಹೊಡೆದಿದ್ದರು. ಉಳಿದವರೆಲ್ಲರೂ ವೈಫಲ್ಯ ಅನುಭವಿಸಿದ್ದರು.  ಅಜಿಂಕ್ಯ ರಹಾನೆ ಮಧ್ಯಮಕ್ರಮಾಂಕದಲ್ಲಿ ವಿಶ್ವಾಸ ಉಳಿಸಿಕೊಂಡಿರುವ  ಆಟಗಾರ. ಐಸಿಸಿ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿರುವ ರವಿಚಂದ್ರನ್ ಅಶ್ವಿನ್ ಬ್ಯಾಟ್ ಮತ್ತು ಚೆಂಡು ಎರಡರಲ್ಲೂ  ಸತತವಾಗಿ ಮಿಂಚುತ್ತಿದ್ದಾರೆ. ಅವರಿಗೆ ತಕ್ಕ ಜೊತೆ ನೀಡುತ್ತಿರುವ ರವೀಂದ್ರ ಜಡೇಜ ಕೂಡ  ತಂಡದ ಬಲ ಹೆಚ್ಚಿಸುವ ಆಟಗಾರ.

ಇಂಗ್ಲೆಂಡ್ ಎದುರಿನ ಸರಣಿಯಲ್ಲಿ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಆಫ್‌ಸ್ಪಿನ್ನರ್  ಜಯಂತ್ ಯಾದವ್  ಕೂಡ ತಂಡಕ್ಕೆ ಆಸರೆ ಯಾಗಬಲ್ಲರು. ಉಮೇಶ್ ಯಾದವ್, ಭುವನೇ ಶ್ವರ್ ಕುಮಾರ್ ಅವರು ಹೊಸ ಮತ್ತು ಹಳೆಯ ಚೆಂಡಿನಲ್ಲಿ ಪರಿಣಾಮಕಾರಿ ಬೌಲಿಂಗ್ ಮಾಡಬಲ್ಲರು.  ಪುಣೆ ಪಂದ್ಯ ದಲ್ಲಿ ಉಮೇಶ್ ಉತ್ತಮವಾಗಿ ಬೌಲಿಂಗ್ ಮಾಡಿದ್ದರು. ಆದರೆ ಬ್ಯಾಟಿಂಗ್‌ ವೈಫಲ್ಯ ತಂಡವನ್ನು ಕಾಡಿತ್ತು. 

ತಂಡದಲ್ಲಿ ಬದಲಾವಣೆ ಮಾಡುವ ಸಾಧ್ಯತೆಯೂ ಕಡಿಮೆ ಎಂಬುದನ್ನು ಕೋಚ್ ಅನಿಲ್ ಕುಂಬ್ಳೆ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದರೆ ‘ಚೈನಾಮೆನ್ ಬೌಲರ್’  ಕುಲದೀಪ್ ಯಾದವ್ ಅವರು ಕಳೆದ ಮೂರು ದಿನಗಳಿಂದ ನೆಟ್ಸ್‌ನಲ್ಲಿ ಹೆಚ್ಚು ತಾಲೀಮು ಮಾಡಿರುವುದು ಅಂತಿಮ ಹನ್ನೊಂದರಲ್ಲಿ ಸ್ಥಾನ ಪಡೆ ಯುವ ಸಾಧ್ಯತೆಯಿದೆ.  ಆದರೆ. ಕರ್ನಾ ಟಕದ ಆಟಗಾರ ಕರುಣ್ ನಾಯರ್ ಅವರಿಗೆ ಅವಕಾಶ ಸಿಗುವ ಸಾಧ್ಯತೆ ತೀರಾ ಕಡಿಮೆ.

ಕ್ಷೇತ್ರರಕ್ಷಣೆಯ ಲೋಪ ತಿದ್ದಿಕೊಳ್ಳುವತ್ತ
ಪುಣೆ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ  ಭಾರತದ ಆಟಗಾರರು ಐದು ಕ್ಯಾಚ್‌ಗಳನ್ನು ನೆಲಕ್ಕೆ ಚೆಲ್ಲಿದ್ದರು. ಅದರಲ್ಲಿ ಮೂರು ಜೀವದಾನ ಪಡೆದಿದ್ದ ಸ್ಮಿತ್ ಶತಕ ಬಾರಿಸಿ ಆತಿಥೇಯರಿಗೆ ಕಠಿಣ ಸವಾಲು ಒಡ್ಡಿದ್ದರು.  ಮಾರ್ಚ್‌ 1ರಿಂದ ಫೀಲ್ಡಿಂಗ್ ತಂತ್ರ ಗಳನ್ನು ಕರಗತಗೊಳಿಸುವತ್ತ ಆಟಗಾ ರರು ಹೆಚ್ಚು ಚಿತ್ತ ನೆಟ್ಟಿದ್ದರು. ಅದರಲ್ಲೂ ಸ್ಲಿಪ್, ಗಲ್ಲಿ, ಲೆಗ್‌ ಸ್ಲಿಪ್ ಮತ್ತು ಶಾರ್ಟ್‌ಲೆಗ್‌ನ  ಕ್ಯಾಚ್‌ ಅಭ್ಯಾಸಕ್ಕೆ ಹೆಚ್ಚು ಆದ್ಯತೆ ನೀಡಿದ್ದರು.  ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಅವರು ಕಠಿಣ ತರಬೇತಿ ನೀಡಿದ್ದಾರೆ.

ಸ್ಮಿತ್ ಬಳಗವೂ ಸಿದ್ಧ?: ‘ಮೊದಲ ಪಂದ್ಯದಲ್ಲಿ ಸೋತಿರುವ ಭಾರತ ತಂಡವು ದಿಟ್ಟ ಪ್ರತಿಕ್ರಿಯೆ ನೀಡಲಿದೆ ಎಂಬ ಅರಿವು ನಮಗಿದೆ. ಆ ಸವಾಲು ಎದುರಿಸಲು ಸಿದ್ಧರಾಗಿದ್ದೇವೆ. ನಮ್ಮ ತಂಡದ ಆಟಗಾರರಲ್ಲಿ ವಿಶ್ವಾಸ ಹೆಚ್ಚಿದೆ’ ಎಂದು ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ಹೇಳಿದ್ದಾರೆ.
ಪ್ರವಾಸಿ ತಂಡವು ಸರಣಿಯಲ್ಲಿ 2–0 ಮುನ್ನಡೆಯನ್ನು ಸಾಧಿಸುವ ಛಲವನ್ನು ಈ ಮಾತುಗಳು ಪ್ರತಿಫಲಿಸುತ್ತವೆ. ಸ್ಪಿನ್ ಭಯದಿಂದ ಹೊರಬಂದಿರುವ ತಂಡದ ಆರಂಭಿಕ ಆಟಗಾರ ರೆನ್‌ಷಾ ಮೊದಲ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದರು.

ಡೇವಿಡ್ ವಾರ್ನರ್‌ ಇನ್ನೂ ಲಯ ಕಾಣಬೇಕಿದೆ. ಗ್ಲೆನ್ ಮ್ಯಾಕ್ಸ್‌ವೆಲ್, ಶಾನ್ ಮಾರ್ಷ್, ಸ್ಮಿತ್ ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಎಲ್ಲಕ್ಕಿಂತ ಮುಖ್ಯ ವಾಗಿ ಪುಣೆ ಹೀರೊ ಓಕೀಫ್ ಬೆಂಗ ಳೂರಿನಲ್ಲಿಯೂ ತಮ್ಮ ಕೈಚಳಕ ತೋರಿ ಸಲು ಉತ್ಸುಕತೆಯಿಂದಿದ್ದಾರೆ. ಅದ ಕ್ಕಾಗಿಯೇ ಶುಕ್ರವಾರ ಮಧ್ಯಾಹ್ನ ಚಿನ್ನ ಸ್ವಾಮಿ ಅಂಗಳದ ಪಿಚ್‌ ಅನ್ನು ಬಹಳ ಹೊತ್ತು ಪರಿಶೀಲಿಸಿದರು.

ಪಿಚ್‌ ಹೇಗಿದೆ?
ಬ್ಯಾಟ್ಸ್‌ಮನ್‌ಗಳಿಗೆ ನೆರವು ನೀಡುವ ಪಿಚ್ ಎಂಬ ಹೆಗ್ಗಳಿಕೆಯಿರುವ ಬೆಂಗಳೂರಿನ ಪಿಚ್ ಈ ಪಂದ್ಯದಲ್ಲಿಯೂ  ಸ್ಪರ್ಧಾತ್ಮಕವಾಗಿರಲಿದೆ ಎಂದು ಕೆಎಸ್‌ಸಿಎ ಮೂಲಗಳು ಹೇಳಿವೆ. ಆದರೆ, ಮೊದಲ ದಿನ ಮಾತ್ರ ಬ್ಯಾಟಿಂಗ್‌ಗೆ ನೆರವು ನೀಡುವ ನಿರೀಕ್ಷೆ ಇದೆ. ಈಗಾಗಲೇ ಒಣಗಿದಂತೆ ಕಾಣುತ್ತಿರುವ ಪಿಚ್‌ ಸ್ಪಿನ್ನರ್‌ಗಳಿಗೆ ಹೆಚ್ಚು ಒಲಿಯುವ ನಿರೀಕ್ಷೆ ಇದೆ. ಮೊದಲ ದಿನದಿಂದಲೇ  ಚೆಂಡು ತಿರುವು ಪಡೆಯಲು ಆರಂಭಿಸಿದ್ದ ಪುಣೆ ಪಿಚ್ ಐಸಿಸಿ ರೆಫರಿ ಕೆಂಗಣ್ಣಿಗೆ ಬಿದ್ದಿದೆ. ಆದ್ದರಿಂದ ಬೆಂಗಳೂರು ಪಿಚ್ ಕೂಡ ಈಗ ಕುತೂಹಲ ಕೆರಳಿಸಿದೆ.

ತಂಡಗಳು ಇಂತಿವೆ
ಭಾರತ: ವಿರಾಟ್ ಕೊಹ್ಲಿ (ನಾಯಕ), ಕೆ.ಎಲ್. ರಾಹುಲ್, ಮುರಳಿ ವಿಜಯ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ವೃದ್ಧಿಮಾನ್ ಸಹಾ (ವಿಕೆಟ್‌ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಜಯಂತ್ ಯಾದವ್, ಉಮೇಶ್ ಯಾದವ್, ಇಶಾಂತ್ ಶರ್ಮಾ, ಅಭಿನವ್ ಮುಕುಂದ, ಕರುಣ್ ನಾಯರ್, ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್. ಮುಖ್ಯ ಕೋಚ್: ಅನಿಲ್ ಕುಂಬ್ಳೆ.
ಆಸ್ಟ್ರೇಲಿಯಾ: ಸ್ಟೀವನ್ ಸ್ಮಿತ್ (ನಾಯಕ), ಮ್ಯಾಟ್ ರೆನ್‌ಷಾ, ಡೇವಿಡ್ ವಾರ್ನರ್, ಶಾನ್ ಮಾರ್ಷ್, ಪೀಟರ್ ಹ್ಯಾಂಡ್ಸ್‌ಕಂಬ್, ಮಿಚೆಲ್ ಮಾರ್ಷ್, ಮ್ಯಾಥ್ಯೂ ವೇಡ್ (ವಿಕೆಟ್‌ಕೀಪರ್), ಮಿಚೆಲ್ ಸ್ಟಾರ್ಕ್, ನಥಾನ್ ಲಿಯಾನ್, ಜೋಶ್ ಹ್ಯಾಜಲ್‌ವುಡ್, ಸ್ಟೀವ್ ಓಕೀಫ್, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಸ್ವಿಪ್‌ಸನ್, ಉಸ್ಮಾನ್ ಖ್ವಾಜಾ, ಜ್ಯಾಕ್ಸನ್ ಬರ್ಡ್, ಆಷ್ಟನ್ ಆಗರ, ಮುಖ್ಯ ಕೋಚ್: ಡರೆನ್ ಲೇಹ್ಮನ್.

ಪಂದ್ಯ ಆರಂಭ: ಬೆಳಿಗ್ಗೆ 9.30
ನೇರಪ್ರಸಾರ: ಸ್ಟಾರ್ ಸ್ಟೋರ್ಟ್ಸ್

ಆಹ್ವಾನ
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯ ವೀಕ್ಷಿಸಲು ಸೇನಾಪಡೆಯ ಐದು ಸಾವಿರ ಸೈನಿ ಕರಿಗೆ  ಉಚಿತ ಪ್ರವೇಶ ನೀಡ ಲಾಗುತ್ತಿದೆ. ಪಂದ್ಯದ ಮೂರು, ನಾಲ್ಕು ಮತ್ತು ಐದನೇ ದಿನಗ ಳಂದು ಸೇನಾಪಡೆಯ ಯೋಧ ರಿಗೆ ಅವಕಾಶ ನೀಡಲಾಗುತ್ತಿದೆ. ಒಟ್ಟು ಐದು ಸಾವಿರ ಯೋಧರಿಗೆ ಸ್ಥಳಾವಕಾಶ ಕಲ್ಪಿಸಲಾಗುತ್ತಿದೆ.  ಅಲ್ಲದೇ ಒಟ್ಟು 15 ಸಾವಿರ ಶಾಲಾ ವಿದ್ಯಾರ್ಥಿಗಳಿಗೂ ಉಚಿತ ಪ್ರವೇಶ ನೀಡಲಾಗುತ್ತಿದೆ ಎಂದು ಕೆಎಸ್‌ಸಿಎ ತಿಳಿಸಿದೆ.

ಕೆಟ್ಟ ಆಟ ಮರುಕಳಿಸಲ್ಲ: ಕೊಹ್ಲಿ ಆಶ್ವಾಸನೆ
 ‘ಪುಣೆಯಲ್ಲಿ ನಮ್ಮ ಕೆಲವು ಲೋಪಗಳಿಂದ ಸೋತಿದ್ದೇವೆ. ಆದರೆ ಇಲ್ಲಿ ಅಂತಹ ಕಳಪೆ ಆಟ ಮರುಕಳಿಸುವುದಿಲ್ಲ ಎಂಬುದು ದಿಟ’ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಆಶ್ವಾಸನೆ ನೀಡಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸೋಲಿನ ಕಹಿ ಮರೆತಿದ್ದೇವೆ. ಆದರೆ ಸಾಕಷ್ಟು ಪಾಠಗಳನ್ನು ಕಲಿತಿದ್ದೇವೆ. ಲೋಪಗಳನ್ನು ತಿದ್ದಿಕೊಂಡು ಮುನ್ನುಗ್ಗುತ್ತೇವೆ. ನಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಪಣಕ್ಕೊಡ್ಡುತ್ತೇವೆ’ ಎಂದರು.

‘ತಂಡದ ಅಂತಿಮ ಹನ್ನೊಂದರ ಪಟ್ಟಿ ಪಂದ್ಯಕ್ಕೆ ಮುನ್ನವೇ ತಿಳಿಯಲಿದೆ. ಅದನ್ನು ತಂಡದ ವ್ಯವಸ್ಥಾಪಕ ಮಂಡಳಿ ನಿರ್ಧರಿಸುತ್ತದೆ. ಈಗ ನಾನು ತಂಡದ ಕುರಿತು ಹೇಳಿ, ನಾಳೆ ಬೇರೆ ಆಟಗಾರರು ಸ್ಥಾನ ಪಡೆದರೆ ನಿಮ್ಮಿಂದ (ಪತ್ರಕರ್ತರಿಂದ) ಟೀಕೆ ಎದುರಿಸಬೇಕಾಗುತ್ತದೆ. ಆದ್ದರಿಂದ ನಿಮಗೆ ಅಂತಹ ಅವಕಾಶ ಕೊಡುವುದಿಲ್ಲ’ ಎಂದು ಕೊಹ್ಲಿ ಹೇಳಿದಾಗ ಸುದ್ದಿಗೋಷ್ಠಿಯಲ್ಲಿ ನಗೆ ಅಲೆ ಯಾಯಿತು.

ಭಾರತ ತಂಡವು ಪುಟಿದೆದ್ದ  ಪ್ರಮುಖ ಸರಣಿಗಳು
l 1999ರಲ್ಲಿ ಪಾಕಿಸ್ತಾನ ವಿರುದ್ಧದ ಎರಡು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಸೋತಿತ್ತು. ನಂತರ ಎರಡನೇ ಪಂದ್ಯ ಗೆದ್ದು  1–1ರಿಂದ ಸರಣಿ ಉಳಿಸಿಕೊಂಡಿತ್ತು.
l 2000–01ರಲ್ಲಿ ಆಸ್ಟ್ರೇಲಿಯಾ ತಂಡದ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಸೋತಿತ್ತು. ಆದರೆ ನಂತರ ಪುಟಿದೆದ್ದು ಎರಡೂ ಪಂದ್ಯಗಳಲ್ಲಿ ಗೆದ್ದಿತ್ತು. 2–1 ರಿಂದ ಸರಣಿ ತನ್ನದಾಗಿಸಿಕೊಂಡಿತ್ತು. 
l 2008ರಲ್ಲಿ ದಕ್ಷಿಣ ಆಫ್ರಿಕಾ ಎದುರಿನ ಸರಣಿಯಲ್ಲಿಯೂ ಮೊದಲ  ಪಂದ್ಯ ಡ್ರಾ ಮಾಡಿಕೊಂಡಿತ್ತು.  ಆದರೆ ಅಹಮದಾಬಾದಿನಲ್ಲಿ ನಡೆದಿದ್ದ ಎರಡನೇ ಪಂದ್ಯದಲ್ಲಿ ಅನಿಲ್ ಕುಂಬ್ಳೆ ನಾಯಕತ್ವದ ತಂಡವು ಹೀನಾಯ ಸೋಲನುಭವಿಸಿತ್ತು. ಆದರೆ, ಕಾನ್ಪುರದಲ್ಲಿ ನಡೆದಿದ್ದ ಮೂರನೇ ಪಂದ್ಯದಲ್ಲಿ ಅಮೋಘ ಜಯ ಸಾಧಿಸಿ ಸರಣಿಯನ್ನು 1–1ರಿಂದ ಸಮ ಮಾಡಿಕೊಂಡಿತ್ತು.

ಮಳೆ ಬಂದರೂ ಚಿಂತೆಯಿಲ್ಲ!
2015ರಲ್ಲಿ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಪಂದ್ಯವು ಮಳೆಗೆ ಆಹುತಿಯಾಗಿತ್ತು. ಸತತ ನಾಲ್ಕು ದಿನಗಳ ಪಂದ್ಯ ನಡೆಯಲಿಲ್ಲ. ಆದರೆ ಈ ಬಾರಿ ಮಳೆ ಸುರಿದರೂ ಚಿಂತೆಯಿಲ್ಲ. ಪಂದ್ಯದ ಅಲ್ಪ ಅವಧಿ ಮಾತ್ರ ನಷ್ಟವಾಗಲಿದೆ. ಆದರೆ ಆಟ ಮುಂದುವರಿಯಲಿದೆ. ಏಕೆಂದರೆ ಕೆಎಸ್‌ಸಿಎ ಕ್ರೀಡಾಂಗಣವು ಸಬ್‌ ಏರ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಅದರಿಂದಾಗಿ ಮಳೆ ಸುರಿದ ಸ್ವಲ್ಪ ಹೊತ್ತಿನಲ್ಲಿಯೇ ಮೈದಾನವು ಒಣಗುವುದರಿಂದ ಪಂದ್ಯ ಮುಂದುವರೆಯಲಿದೆ.  ಈ ವ್ಯವಸ್ಥೆಯನ್ನು ಅಳವಡಿಸಿದ ನಂತರ ನಡೆಯುತ್ತಿರುವ ಮೊದಲ ಟೆಸ್ಟ್ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT