ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡಾಂತರದ ಗಳಿಗೆಗಳು

ಸಿಸೇರಿಯನ್‌ ಎಷ್ಟು ಅಗತ್ಯ?
Last Updated 3 ಮಾರ್ಚ್ 2017, 19:29 IST
ಅಕ್ಷರ ಗಾತ್ರ

ಪ್ರಸವ ಶಾಸ್ತ್ರದಲ್ಲಿ ಹೀಗೆ ಹೇಳುತ್ತಾರೆ– ‘ಮಹಿಳೆಯರಲ್ಲಿ ಪ್ರಸವದ ಹಾದಿ ಚಿಕ್ಕದಾಗಿದ್ದರೂ ಅಪಘಾತ ಹೆಚ್ಚು. ಪುರುಷರು ರಸ್ತೆ ಅಪಘಾತದಲ್ಲಿ ಮಡಿದರೆ, ಮಹಿಳೆ  ಪ್ರಸವದ ಹಂತದಲ್ಲಿನ ದಾರಿ ಕ್ರಮಿಸುವಾಗ ಸಾವನ್ನಪ್ಪಬಹುದು.’

ಸಿಸೇರಿಯನ್‌ ಶಸ್ತ್ರಕ್ರಿಯೆ ತಾಯಿ ಮತ್ತು ಮಗುವಿನ ರಕ್ಷಣೆಗಾಗಿ. ಗರ್ಭಿಣಿಯರಿಗೆ ಒದಗುವ ಗಂಡಾಂತರಗಳಿಗೆ ಹತ್ತಾರು ಕಾರಣಗಳಿವೆ. ಅವು ಹಿಂದಿನ ಕಾಲದಲ್ಲೂ ಇದ್ದವು ಈಗಲೂ ಇವೆ. ಚಿಕಿತ್ಸಾ ಹಂತಗಳು ಮಾತ್ರ ಬದಲಾಗಿರಬಹುದಷ್ಟೆ. ಮನೆಯಲ್ಲಿಯೇ ಹೆರಿಗೆ ಮಾಡಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ತಾಯಿ–ಮಗು ಸೋಂಕಿನಿಂದ ಅವಘಡಗಳಿಗೆ ಈಡಾಗುತ್ತಿದ್ದರು. ಈಗ ಆಸ್ಪತ್ರೆಯಲ್ಲಿ ಹೆರಿಗೆ ಆಗುವುದರಿಂದ ಮಾತೃ ಮರಣ, ಶಿಶು ಮರಣದ ಸಂಖ್ಯೆಯನ್ನು ತಪ್ಪಿಸುವುದಕ್ಕಾಗಿ, ಪ್ರಸವ ನಂತರದ ಸೂಕ್ತ ಚಿಕಿತ್ಸೆಯೂ ಅಷ್ಟೇ ಮುಖ್ಯವಾಗಿರುತ್ತದೆ.

ಹೊಸ ಹುಟ್ಟು, ಪ್ರಸವದಂತಹ ಪ್ರಕ್ರಿಯೆಗಳು ಪ್ರಕೃತಿಯ ವಿಶಿಷ್ಟ, ವಿಸ್ಮಯ ಕ್ರಿಯೆಗಳು.  ಕೆಲ ವೈದ್ಯರು ಗರ್ಭಿಣಿಯರನ್ನು ಗಂಡಾಂತರದ ಗಳಿಗೆಯಿಂದ ರಕ್ಷಿಸಲು ತುರ್ತಾಗಿ ಸಿಸೇರಿಯನ್‌ ಶಸ್ತ್ರಕ್ರಿಯೆಯನ್ನು ಮಾಡಿ ತಾಯಿ ಮತ್ತು ನವಜಾತ ಮಗುವಿನ ಜೀವ ಉಳಿಸಲು ಪ್ರಯತ್ನಿಸಿದರೆ, ಮತ್ತೆ ಕೆಲವು ವೈದ್ಯರು ತಮಗೆ ಬಂದು ಅಪ್ಪಳಿಸಬಹುದಾದ ಗಂಡಾಂತರದ ಗಳಿಗೆಗಳಿಂದ ಪಾರಾಗಲು ಶಸ್ತ್ರಕ್ರಿಯೆ ನಡೆಸುತ್ತಾರೆ.

ಅವುಗಳೆಂದರೆ:
* ಪ್ರಸವದ ಸಂದರ್ಭದಲ್ಲಿ ಅಪ್ಪಿತಪ್ಪಿ ತಾಯಿ ಅಥವಾ ಮಗು ಸಾವಿಗೀಡಾದಲ್ಲಿ, ಜನ ಕೋಪಾವೇಶದಿಂದ ವೈದ್ಯರ ಮೇಲೆ ಹಲ್ಲೆ ನಡೆಸುವುದು, ಆಸ್ಪತ್ರೆಯ ಅಥವಾ ಖಾಸಗಿ ನರ್ಸಿಂಗ್‌ ಹೋಮ್‌ಗಳ ಮೇಲೆ ಕಲ್ಲು ತೂರಿ ಗಾಜುಗಳನ್ನು ಒಡೆದು ಚೂರು ಚೂರು ಮಾಡಿ ಕೋಪ ತೀರಿಸಿಕೊಳ್ಳುವುದು.

* ಆಸ್ಪತ್ರೆಯ ಒಳಗೆ ನುಗ್ಗಿ ಮಂಚದಂತಹ ವಸ್ತುಗಳಿಗೆ ಧಕ್ಕೆ ಉಂಟು ಮಾಡುವುದು.

* ಇಲ್ಲವಾದಲ್ಲಿ, ಪರಿಹಾರ ಕೋರಿ ಆ ವೈದ್ಯರ ವಿರುದ್ಧ ಕೋರ್ಟಿಗೆ ಹೋಗುವುದು.

ಈ ಕಾರಣಗಳು ವೈದ್ಯರಿಗೆ ಸಂಕಟ ತಂದೊಡ್ಡಬಹುದಾದ ಗಳಿಗೆಗಳು. ಒಮ್ಮೊಮ್ಮೆ ಗರ್ಭಿಣಿಯರನ್ನು ಕಾಡುವ ಗಂಡಾಂತರದ ಗಳಿಗೆಗಿಂತಲೂ ತೀವ್ರ ತೆರನಾದ ನಷ್ಟವನ್ನುಂಟು ಮಾಡಬಹುದು. ಇದಕ್ಕೆ ಹೊಣೆ ಯಾರು? ಮನಸ್ಸು ಶಾಂತವಾದಾಗ ಎಲ್ಲರೂ ಯೋಚಿಸಿದಲ್ಲಿ ಉತ್ತರ ಸಿಗಬಹುದು.

*
ಎಲ್ಲ ನೋವಿಗಿಂತ ಭಿನ್ನವಾಗಿರುವ ಹೆರಿಗೆ ನೋವಿನ ಕಾರಣಗಳು ಇನ್ನೂ ಸಂಶೋಧನೆಯ ವಿಷಯವಾಗಿ ಉಳಿದಿವೆ. ಗರ್ಭಕೋಶದ ನಿಯಮಿತ ಸಂಕುಚನದಿಂದ ಉಂಟಾಗುವ ಹೆರಿಗೆ ನೋವು ಸರಿಯಾದ ಮಾಹಿತಿ, ಕಷ್ಟ ಸಹಿಷ್ಣುತೆ ಗುಣ ಇದ್ದರೆ ಧೈರ್ಯವಾಗಿ ಎದುರಿಸಬಹು­ದಾ­ದ ಪ್ರಕ್ರಿಯೆ. ಆದರೆ, ಸಮಾಜದಲ್ಲಿ ಆ ಗುಣವೇ ಕಡಿಮೆಯಾಗಿದೆ.
ಸಹಜ ಹೆರಿಗೆಗಾಗಿ ಹೆಚ್ಚು ಹೊತ್ತು ಕಾದು ತಾಯಿಗೋ ಅಥವಾ ಮಗುವಿಗೋ ಆಗಬಹುದಾದ ಕೆಲವು ಅನಿವಾರ್ಯ ವೈದ್ಯಕೀಯ ಅವ­ಘಡಗಳನ್ನು ವೈಭವೀಕರಿಸುವ ಬಂಧು­ಬಾಂಧವರು, ಮಾಧ್ಯಮಗಳು, ಇಂತಹ ಸಂದ­ರ್ಭ­ಗಳಲ್ಲಿ ಸಾರ್ವಜನಿಕರಿಂದ ಎದುರಿಸಬೇಕಾದ ಆಕ್ರೋಶವು ವೈದ್ಯರು ಸಿಸೇರಿಯನ್‌ ಕಡೆಗೆ ಒಲವು ತೋರುವಂತೆ ಮಾಡುತ್ತವೆ.
ಹೃದಯದಲ್ಲಿ ಸ್ಟೆಂಟ್‌ ಅಳವಡಿಸುವ ಪ್ರಮಾಣ ಕಳೆದ ಹತ್ತು ವರ್ಷಗಳಲ್ಲಿ ನಾಲ್ಕು ಪಟ್ಟು ಹೆಚ್ಚಾಗಿದೆ. ಮಂಡಿ ಚಿಪ್ಪು ಬದಲಾಯಿಸುವ ಶಸ್ತ್ರಚಿಕಿತ್ಸೆಗಳಿಗೂ ಲೆಕ್ಕವಿಲ್ಲ. ಆ ಕುರಿತು ಯಾರೂ ಮಾತನಾಡುವುದಿಲ್ಲ. ತಾಯಿ–ಮಗುವಿನ ಜೀವ ಉಳಿಸುವ ಸಿಸೇರಿಯನ್‌ ಹೆರಿಗೆ ಮೇಲಷ್ಟೇ ಯಾಕೆ ಈ ಗದಾಪ್ರಹಾರ?
ಡಾ. ವೀಣಾ ಭಟ್‌,
ಸ್ತ್ರೀರೋಗ ತಜ್ಞೆ
*

ಸಿಸೇರಿಯನ್‌ಗಿಂತ ಸಹಜ ಹೆರಿಗೆಯೇ ಶ್ರೇಷ್ಠ. ನಮ್ಮ ಆಸ್ಪತ್ರೆಯಲ್ಲಿ ಈ ಕುರಿತು ಗರ್ಭಿಣಿಯರು ಹಾಗೂ ಅವರ ಕುಟುಂಬದವರಿಗೆ ಕಾರ್ಯಾಗಾರ ನಡೆಸಿ ಜಾಗೃತಿ ಮೂಡಿಸಲಾಗುತ್ತದೆ. ಎಷ್ಟೇ ತಿಳಿವಳಿಕೆ ಕೊಟ್ಟರೂ ಕೆಲವರು ಹೆರಿಗೆ ನೋವಿಗೆ ಹೆದರಿ ಸಿಸೇರಿಯನ್‌ ಹೆರಿಗೆಯನ್ನೇ ಮಾಡಿಸುವಂತೆ ಹಟ ಹಿಡಿಯುತ್ತಾರೆ. ಅಂಥವರಿಗೂ ಮನಪರಿವರ್ತನೆ ಮಾಡಿಸುವ ಕೆಲಸವನ್ನು ನಮ್ಮ ಆಸ್ಪತ್ರೆ ಮಾಡುತ್ತಿದೆ.
ಸಹಜ ಮತ್ತು ಸಿಸೇರಿಯನ್‌ ಹೆರಿಗೆ ಶುಲ್ಕದಲ್ಲಿ ಐದು ಸಾವಿರ ರೂಪಾಯಿಗಳಷ್ಟು ವ್ಯತ್ಯಾಸ ಇರಬಹುದಷ್ಟೆ. ಅದೂ ಅರಿವಳಿಕೆ ಕೊಡುವುದು ಸೇರಿದಂತೆ ಶಸ್ತ್ರಚಿಕಿತ್ಸಾ ಕ್ರಿಯೆಗಳಿಗೆ ಮಾಡುವ ವೆಚ್ಚ. ಹೆರಿಗೆ ಯಾವುದೇ ರೂಪದಲ್ಲಿದ್ದರೂ ವೈದ್ಯರು ಪಡೆಯುವ ಶುಲ್ಕ ಏಕರೂಪದಲ್ಲಿರುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಅತ್ಯಂತ ಕಡಿಮೆ ಸಿಸೇರಿಯನ್‌ ಹೆರಿಗೆ ಮಾಡುವ ಆಸ್ಪತ್ರೆ ನಮ್ಮದು. ಮೆಡಿಕೋ ಲೀಗಲ್‌ನಂತಹ ಸಂಕೀರ್ಣ ಸನ್ನಿವೇಶಗಳಲ್ಲಿ ಮಾತ್ರ ಸಿಸೇರಿಯನ್‌ಗೆ ಸಲಹೆ ಮಾಡಲಾಗುತ್ತದೆ. 
ಡಾ. ಆರ್‌.ಕಿಶೋರ್‌ ಕುಮಾರ್‌
ಸಂಸ್ಥಾಪಕ ಅಧ್ಯಕ್ಷ, ಕ್ಲೌಡ್‌ನೈನ್‌ ಆಸ್ಪತ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT