ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರಕ್ಕೆ ಕೃಷ್ಣಾ ನೀರು: ಖಂಡನೆ

ಭೀಮಾ ನದಿ ನೀರು ರಕ್ಷಣಾ ಸಮಿತಿ ಹಾಗೂ ಬಿಜೆಪಿಯಿಂದ ಪ್ರತಿಭಟನೆ
Last Updated 4 ಮಾರ್ಚ್ 2017, 6:39 IST
ಅಕ್ಷರ ಗಾತ್ರ

ವಿಜಯಪುರ: ನೆರೆಯ ಮಹಾರಾಷ್ಟ್ರದ ಲ್ಲಿರುವ ನಾಲ್ಕು ಬ್ಯಾರೇಜುಗಳಿಗೆ ನೀರು ಬಿಡುಗಡೆ ಮಾಡುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಭೀಮಾನದಿ ನೀರು ರಕ್ಷಣಾ ಸಮಿತಿ ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರು ಶುಕ್ರವಾರ ಇಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದರು.

ಸಮಿತಿ ಅಧ್ಯಕ್ಷ ಪಂಚಪ್ಪ ಕಲಬುರ್ಗಿ ಮಾತನಾಡಿ, ‘ರಾಜ್ಯದಲ್ಲಿರುವ ನಾಲ್ಕು ಬ್ಯಾರೇಜುಗಳಿಗೆ ನೀರು ತುಂಬಿಸು ವುದನ್ನು ಬಿಟ್ಟು, ಮಹಾರಾಷ್ಟ್ರದಲ್ಲಿರುವ ಬ್ಯಾರೇಜುಗಳಿಗೆ ನೀರು ಬಿಡುಗಡೆಗೆ ಮುಂದಾಗುವ ಮೂಲಕ ರಾಜ್ಯ ಸರ್ಕಾರ ಇಲ್ಲಿನ ರೈತರಿಗೆ ದ್ರೋಹ ಬಗೆದಿದೆ’ ಎಂದು ದೂರಿದರು.

‘ಮಹಾರಾಷ್ಟ್ರದ ಉಜನಿ ಜಲಾಶಯದಲ್ಲಿ ಶೇ 83ರಷ್ಟು ನೀರಿದೆ. ಈ ನೀರನ್ನು ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ಯಾರೇಜುಗಳಿಗೆ  ಮಹಾರಾಷ್ಟ್ರ ಸರ್ಕಾರ ನೀರು ಬಿಡುಗಡೆ ಮಾಡಿಲ್ಲ.  ಆದರೆ, ಕಡಿಮೆ ಪ್ರಮಾಣದ ನೀರು ಸಂಗ್ರಹ ಇರುವ ಆಲಮಟ್ಟಿ ಜಲಾಶಯದ ನೀರನ್ನು ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ. ಇದ ರಿಂದ ಈ ನೀರನ್ನು ಅವಲಂಬಿಸಿರುವ ಜಿಲ್ಲೆಯ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ದೂರಿದರು.

‘ಭೀಮಾ ನದಿ ನೀರಿನ ಸಮಸ್ಯೆಗೆ ಉಜನಿ ಜಲಾಶಯದಿಂದ ಹರಿದು ಬರುವ ನೀರಿನಿಂದ ಮಾತ್ರ ಪರಿಹಾರ ಸಾಧ್ಯ ಎಂಬುದಾಗಿ ಅಂದು ವಾದಿಸಿರುವ ರಾಜ್ಯ ಸರ್ಕಾರ, ಇಂದು ತನ್ನದೇ ವಾದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿರುವುದು ಏಕೆ’ ಎಂದು ಪ್ರಶ್ನಿಸಿದ ಅವರು, ‘ಈ ಗಂಭೀರ ಸಮಸ್ಯೆಗೆ ಕೂಡಲೆ ಸರ್ಕಾರ ಸ್ಪಂದಿಸದಿದ್ದರೆ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲಾಗುವುದು’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವಿಠ್ಠಲ ಕಟಕದೊಂಡ ಮಾತನಾಡಿ, ರಾಜ್ಯ ಸರ್ಕಾರದ ಈ ಕ್ರಮ ರೈತ ವಿರೋಧಿ ಎಂದು ಟೀಕಿಸಿದರು. ‘ರಾಜ್ಯ ಸರ್ಕಾರ 2 ದಿನಗಳ ಒಳಗಾಗಿ ಈ ಆದೇಶ ಹಿಂಪಡೆಯಬೇಕು. ಬೇಡಿಕೆ ಈಡೇರಿಕೆಗಾಗಿ ನಾವು ಬಂದೂಕಿನ ಗುಂಡಿಗೆ ಎದೆ ಕೊಡಲು ಸಿದ್ಧ’ ಎಂದು ಕಿಡಿಕಾರಿದರು.

ಬಳಿಕ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ ಅವರಿಗೆ ಮನವಿ ಸಲ್ಲಿಸಿದರು. ಇದಕ್ಕೂ ಮುನ್ನ ಪ್ರತಿಭಟನಾಕಾರರು ಇಂಡಿ ತಾಲ್ಲೂಕಿನ ಧೂಳಖೇಡ ಬಳಿಯ ಭೀಮಾ ನದಿ ತೀರದಿಂದ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ಬೈಕ್‌ ರ್‌್ಯಾಲಿ ನಡೆಸಿದರು. ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಮುಖಂಡ ವಿಜುಗೌಡ ಪಾಟೀಲ, ಚಂದ್ರಶೇಖರ ಕವಟಗಿ, ರವಿ ಖಾನಾಪುರ, ಸುರೇಶ ಬಿರಾದಾರ, ದಯಾಸಾಗರ ಪಾಟೀಲ, ವಿವೇಕ ಡಬ್ಬಿ, ಪ್ರಕಾಶ ಅಕ್ಕಲಕೋಟ, ಜಗದೀಶ ಮುಚ್ಚಂಡಿ, ವಿರಾಜ್‌ ಪಾಟೀಲ, ಶರತ್‌ ಬಿರಾದಾರ, ಕೃಷ್ಣಾ ಗುನ್ನಾಳಕರ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

*
ನೀರು ಬಿಡುಗಡೆ ಕ್ರಮ ಅವೈಜ್ಞಾನಿಕ.ಸುಪ್ರೀಂಕೋರ್ಟ್‌ ಹಾಗೂ ಕೃಷ್ಣಾ 2ನೇ ನ್ಯಾಯ ಮಂಡಳಿ ಎದುರು ರಾಜ್ಯ ಸರ್ಕಾರ ಮಂಡಿಸಿರುವ ನಿಲುವಿನ ವಿರುದ್ಧದ ಆದೇಶ.
-ಪಂಚಪ್ಪ ಕಲಬುರ್ಗಿ,
ಬಿಜೆಪಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT