ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನಾಭಿಪ್ರಾಯ, ಸಮೀಕ್ಷೆ ನಡೆಸಿಯೇ ಟಿಕೆಟ್’

ಬೂತ್‌ ಮಟ್ಟದ ಪದಾಧಿಕಾರಿಗಳ ಸಮಾವೇಶದಲ್ಲಿ ಟಿಕೆಟ್ ಆಕಾಂಕ್ಷಿಗಳಿಗೆ ಸಂದೇಶ ನೀಡಿದ ಬಿಎಸ್‌ವೈ
Last Updated 4 ಮಾರ್ಚ್ 2017, 6:51 IST
ಅಕ್ಷರ ಗಾತ್ರ

ಹಾವೇರಿ: ‘ಎಲ್ಲ ಕ್ಷೇತ್ರಗಳಲ್ಲೂ ಸಮೀಕ್ಷೆ ನಡೆಸಿ, ಜನಾಭಿಪ್ರಾಯ ಸಂಗ್ರಹಿಸಿದ ಬಳಿಕ ಮುಂದಿನ ವಿಧಾನಸಭಾ ಚುನಾ ವಣೆಯ ಟಿಕೆಟ್ ನೀಡಲಾಗುವುದೇ ಹೊರತು ಬೆಂಗಳೂರಿನಲ್ಲಿ ಕುಳಿತು ಕೊಂಡು ಯಡಿಯೂರಪ್ಪ  ಟಿಕೆಟ್ ಹಂಚುವುದಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸ್ಪಷ್ಟ ಸಂದೇಶ ರವಾನಿಸಿದರು.

ನಗರದ ಮಾಗಾವಿ ಸಭಾಭವನದಲ್ಲಿ ಶುಕ್ರವಾರ ಬಿಜೆಪಿ ಹಾವೇರಿ ಜಿಲ್ಲೆಯ ಬೂತ್‌ ಮಟ್ಟದ ಪದಾಧಿಕಾರಿಗಳ ಬೃಹತ್‌ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಟಿಕೆಟ್‌ಗಾಗಿ ನೀವೇ ಪೈಪೋಟಿ ನಡೆಸಿ ಬಿದ್ದು ಹೋಗಬೇಡಿ. ಪಕ್ಷ ಸಂಘಟಿಸಿ. ನಮ್ಮ ಸರ್ಕಾರ ಆಡಳಿತಕ್ಕೆ ಬಂದಾಗ ಹಲವಾರು ದೊರೆಯುತ್ತವೆ’ ಎಂದರು.

ಅನ್ನಭಾಗ್ಯ: ‘ಕೇಂದ್ರ ಸರ್ಕಾರವು ಕೆ.ಜಿಗೆ ₹ 32 ನೀಡಿ ಅಕ್ಕಿಯನ್ನು ಖರೀದಿ ಮಾಡಿ, ಕೇವಲ ₹ 3ಕ್ಕೆ ರಾಜ್ಯ ಸರ್ಕಾರಕ್ಕೆ ನೀಡುತ್ತಿದೆ. ಇದು ಪ್ರಧಾನಿ ಮೋದಿ ಯವರ ಕಾರ್ಯಕ್ರಮ. ಆದರೆ, ರಾಜ್ಯ ಸರ್ಕಾರವು ಕೇಂದ್ರ ಕೊಟ್ಟ ಅಕ್ಕಿಯನ್ನು ಮಾರಾಟ ಮಾಡಿ, ಕಳಪೆ ಅಕ್ಕಿಯನ್ನು ಜನರಿಗೆ ನೀಡುತ್ತಿದೆ’ ಎಂದರು.
‘ಕಾಂಗ್ರೆಸ್‌ ಉಚಿತ ಅಕ್ಕಿ ನೀಡುತ್ತಿದೆ ಎಂದು ಜನತೆ ತಿಳಿದರೆ, ಚುನಾವಣೆ ಯಲ್ಲಿ ದುಷ್ಪರಿಣಾಮ ಬೀರುತ್ತದೆ. ಅದಕ್ಕಾಗಿ ಮನೆ ಮನೆಗೆ ಹೋಗಿ ನಿಂತಲ್ಲಿ ಕುಂತಲ್ಲಿ ಪ್ರಚಾರ ಮಾಡಬೇಕು’ ಎಂದರು.

‘ಇನ್ನು ನಾಲ್ಕೈದು ತಿಂಗಳಲ್ಲೇ ಚುನಾವಣೆ ಬಂದರೂ ಆಶ್ಚರ್ಯವಿಲ್ಲ. ನಾನು ಮತ್ತೆ ಮತ್ತೆ ಬರುವುದಿಲ್ಲ. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 7 ರಿಂದ 8 ಸಾವಿರ ಜನರನ್ನು ಸೇರಿಸಿ ಸಭೆ ಕರೆದರೆ ಬರುತ್ತೇನೆ’ ಎಂದ ಅವರು,‘ಕೇಂದ್ರದಲ್ಲಿದ್ದ ಯುಪಿಎ ಸರ್ಕಾರವು ರಾಜ್ಯಕ್ಕೆ ಕೇವಲ ₹ 973 ಕೋಟಿ ಅನುದಾನ ನೀಡಿತ್ತು. ಮೋದಿ ನೇತೃತ್ವದ ಸರ್ಕಾರವು ಈಗಾಗಲೇ ₹ 4,068 ಕೋಟಿ ನೀಡಿದೆ.

‘ಕೃಷ್ಣಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿಗೆ ವಾರ್ಷಿಕ ₹10 ಸಾವಿರ ಕೋಟಿ ನೀಡುತ್ತೇನೆ’ ಎಂದು ಆಣೆ ಮಾಡಿದ್ದ ಸಿದ್ದರಾಮಯ್ಯ, ನಾಲ್ಕು ವರ್ಷದಲ್ಲಿ ₹ 3 ಸಾವಿರ ಕೋಟಿಯೂ ನೀಡಲಿಲ್ಲ. ನಾಲ್ಕು ವರ್ಷದಲ್ಲಿ ರಾಜ್ಯದ ಎಲ್ಲ ನೀರಾವರಿ ಯೋಜನೆಗೆ ನೀಡಿದ್ದೇ ಕೇವಲ ₹ 34,533 ಕೋಟಿ ಮಾತ್ರ’ ಎಂದರು.

‘ರೈತರ ಸಾಲಮನ್ನಾ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇದೇ 9ರಂದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕನಿಷ್ಠ 2 ಸಾವಿರ ಜನರು ಸೇರಿ ಪ್ರತಿಭಟನೆ ನಡೆಸಬೇಕು. ಏಪ್ರಿಲ್ 6ರಂದು ಎಲ್ಲ ಬೂತ್ ಮಟ್ಟದ ಮುಖ್ಯಸ್ಥರ ಮನೆಯ ಮುಂದೆ ಬಿಜೆಪಿ ಧ್ವಜಾರೋಹಣ ಮಾಡಬೇಕು. ಪ್ರತಿ ಮತಗಟ್ಟೆಯಲ್ಲಿ 25 ಹೆಸರುಗಳ ಸೇರ್ಪಡೆ ಮಾಡಬೇಕು’ ಎಂದರು.

ಮಾಜಿ ಸಚಿವ ಸಿ.ಎಂ. ಉದಾಸಿ ಮಾತನಾಡಿ, ‘ಬೆಳೆವಿಮೆ ಪರಿಹಾರದ ಹಣ ಆರ್‌ಟಿಜಿಎಸ್ ಮೂಲಕ ರೈತರ ಖಾತೆಗೆ ನೇರವಾಗಿ ಜಮೆಯಾಗುತ್ತದೆ. ಇದರಲ್ಲಿ ಏನೂ ಸಿಗುವುದಿಲ್ಲ ಎಂದು ಕಾಂಗ್ರೆಸಿಗರು ಹೋರಾಟಕ್ಕೆ ಬರುತ್ತಿಲ್ಲ. ಅಲ್ಲದೇ, ಬೆಳೆವಿಮೆ ವಿತರಿಸದೇ 10 ತಿಂಗಳು ವಿಳಂಬಗೊಂಡ ಮಾಡಿದ ಪರಿಣಾಮ,  ₹ 8 ಕೋಟಿಗೂ ಅಧಿಕ ಬಡ್ಡಿ ಬಿದ್ದಿದೆ. ಇದನ್ನೂ ಸರ್ಕಾರ ರೈತರಿಗೆ ಕೊಡಿಸಬೇಕು’ ಎಂದು ಆಗ್ರಹಿಸಿದರು.

‘ರಾಜ್ಯ ಸರ್ಕಾರವು ಹಣವಿಲ್ಲದೇ ದಿವಾಳಿ ಆಗಿದೆ. ಹಲವರಿಗೆ 2 ಮಕ್ಕಳಾದರೂ ‘ಶಾದಿ ಭಾಗ್ಯ’ದ ಹಣ ಬಂದಿಲ್ಲ, ಗುತ್ತಿಗೆದಾರರ ಹಣ ಪಾವತಿಯಾಗಿಲ್ಲ, ರೈತರಿಗೆ ಪರಿಹಾರ ಸಿಗುತ್ತಿಲ್ಲ’ ಎಂದರು.

ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಜಿಲ್ಲೆಯ ಎಲ್ಲ ಆರು ಕ್ಷೇತ್ರಗಳನ್ನು ಗೆದ್ದು ನಿಮ್ಮ (ಯಡಿಯೂರಪ್ಪ) ಮುಡಿಗೆ ಕೊಡುಗೆ ನೀಡುತ್ತೇವೆ’ ಎಂದರು.

‘ಯಡಿಯೂರಪ್ಪ ಹೆಸರಲ್ಲಿ ಶಕ್ತಿ ಹಾಗೂ ಜನಾಕರ್ಷಣೆ ಇದೆ. ಅಂತಹ ಯೋಜನೆಗಳನ್ನು ನೀಡಿದ್ದರು. ಕುಂಭಕರ್ಣ ನಿದ್ದೆಯಲ್ಲಿದ್ದ ಸಿದ್ದ ರಾಮಯ್ಯನವರು ‘ಡೈರಿ’ ಬಾಂಬ್‌ ಬಳಿಕ ನಿದ್ದೆಯೇ ಮಾಡಿಲ್ಲ.  ಲೋಕ ಸೇವಾ ಆಯೋಗಕ್ಕೆ ಭ್ರಷ್ಟ ಶ್ಯಾಂ ಭಟ್‌ ಅನ್ನು ಅಧ್ಯಕ್ಷ ಮಾಡಿದ್ದಾರೆ. ಭ್ರಷ್ಟ ಅಧಿಕಾರಿಗಳನ್ನು ಸರ್ಕಾರ ರಕ್ಷಣೆ ಮಾಡುತ್ತಿದೆ’ ಎಂದು ಆರೋಪಿಸಿದರು.

ಸಂಸದ ಶಿವಕುಮಾರ ಉದಾಸಿ ಮಾತನಾಡಿ, ‘ಎರಡು ಗಾಲಿಗಳು ಸಮಾನವಾಗಿದ್ದಾಗ ಮಾತ್ರ ಚಕ್ಕಡಿ ಓಡಲು ಸಾಧ್ಯ. ಅಂತೆಯೇ ಅಭಿವೃದ್ಧಿ ಕೂಡ. ಸದ್ಯ ಮೋದಿ ವೇಗವಾಗಿ ಹೋದರೂ, ಸಿದ್ದರಾಮಯ್ಯನವರ ಗಾಲಿ ಸಾಗುವುದೇ ಇಲ್ಲ. ಹೀಗಾಗಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಮಾಡ ಬೇಕಾಗಿದೆ. ನರೇಂದ್ರ ಮೋದಿ ಬಳಿಕದ ಮುತ್ಸದಿ ನಾಯಕ ಬಿ.ಎಸ್. ಯಡಿ ಯೂರಪ್ಪ’ ಎಂದರು. 

ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಸಜ್ಜನರ, ಶಾಸಕ ಯು.ಬಿ. ಬಣಕಾರ, ಮಾಜಿ ಶಾಸಕರಾದ ನೆಹರೂ ಓಲೇಕಾರ, ಸುರೇಶಗೌಡ್ರ ಪಾಟೀಲ ಇದ್ದರು.

‘ಹಂಗಣ್ಣ, ಹಿಂಗಣ್ಣ,..ಅಭಿವೃದ್ಧಿ ಇಲ್ಲ ರುದ್ರಪ್ಪಣ್ಣ’
‘ಹಂಗಣ್ಣ, ಹಿಂಗಣ್ಣ... ಎಂಬ ಬೆಲ್ಲದಂತಹ ಮಾತು ಬಿಟ್ಟು ಏನೂ ಕೆಲಸ ಆಗುತ್ತಿಲ್ಲ ರುದ್ರಪ್ಪಣ್ಣ. ಜಿಲ್ಲೆಯ ಬರದ ಸ್ಥಿತಿಯನ್ನು ಅರ್ಥೈಸಿಕೊಂಡು ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಕೆಲಸ ಮಾಡಬೇಕು’ ಎಂದು ಶಾಸಕ ಬಸವರಾಜ ಬೊಮ್ಮಾಯಿ ಸಚಿವ ರುದ್ರಪ್ಪ ಲಮಾಣಿಗೆ ಟಾಂಗ್ ನೀಡಿದರು.

‘ರಾಜ್ಯದಲ್ಲಿ ಉದ್ರಿ ಸರ್ಕಾರ ಇದೆ. ರೈತರು, ಗುತ್ತಿಗೆದಾರರು, ಕುಡಿಯುವ ನೀರಿನ ಕಾಮಗಾರಿಗಳು ಸೇರಿದಂತೆ ಯಾವುದಕ್ಕೂ ಹಣ ಮಂಜೂರು ಮಾಡುತ್ತಿಲ್ಲ’ ಎಂದ ಅವರು, ‘ಎಲ್ಲವೂ ಕೇಂದ್ರ ಸರ್ಕಾರವೇ ನೀಡಬೇಕಾದರೆ, ನೀನ್ಯಾಕೆ ಇರಬೇಕು ಮಾರಾಯಾ?, ನಿನ್ನ ಕೆಲಸವೂ ಉಳಿದವರು ಮಾಡಬೇಕಾ?’ ಎಂದು ಸಿ.ಎಂ ಸಿದ್ದರಾಮಯ್ಯ ಅವರಿಗೆ ಅಣಕವಾಡಿದರು.

*
ಶೀಘ್ರವೇ ಇನ್ನೊಂದು ದೊಡ್ಡ ಬಾಂಬ್ ಸಿಡಿಸಲಿದ್ದೇನೆ. ಸಿ.ಎಂ. ಸಿದ್ದರಾಮಯ್ಯ ಜಾತಕ ಜಾಲಾಡಲಿದ್ದೇನೆ.
-ಬಿ.ಎಸ್. ಯಡಿಯೂರಪ್ಪ,
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT