ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರಂಪರೆಯಲ್ಲಿ ಜೈನ ಧರ್ಮಕ್ಕೆ ಮಹತ್ವ’

ಭರತೇಶ ಶಿಕ್ಷಣ ಸಂಸ್ಥೆಯ ಆ.ನೇ. ಉಪಾಧ್ಯೆ ಕನ್ನಡ ಅಧ್ಯಯನ ಕೇಂದ್ರದಿಂದ ‘ಜೈನ ವಾಸ್ತು ಶಿಲ್ಪ’ ವಿಚಾರ ಸಂಕಿರಣ
Last Updated 4 ಮಾರ್ಚ್ 2017, 7:12 IST
ಅಕ್ಷರ ಗಾತ್ರ

ಬೆಳಗಾವಿ: ದೇಶದ ಧಾರ್ಮಿಕ ಪರಂಪರೆ­­ಯಲ್ಲಿ ಜೈನ ಧರ್ಮ ಪ್ರಬುದ್ಧ­ವಾದುದು ಎಂದು ಭಾರತೀಯ ಪುರಾತತ್ವ ಮತ್ತು ವಸ್ತು­ಸಂಗ್ರಹಾಲ­ಯಗಳ ಇಲಾಖೆ ದಕ್ಷಿಣ ಪ್ರಾಂತದ ನಿವೃತ್ತ ನಿರ್ದೇಶಕ ಎಸ್.ವಿ. ವೆಂಕಟೇಶ ಇಲ್ಲಿ ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಜೈನ ಸಾಹಿತ್ಯ, ಸಂಸ್ಕೃತಿ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಭರತೇಶ ಶಿಕ್ಷಣ ಸಂಸ್ಥೆಯ ಆ.ನೇ. ಉಪಾಧ್ಯೆ ಕನ್ನಡ ಅಧ್ಯಯನ ಕೇಂದ್ರದಿಂದ ಭರತೇಶ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಶುಕ್ರ­ವಾರ ಆರಂಭವಾದ ಎರಡು ದಿನಗಳ ‘ಜೈನ ವಾಸ್ತು ಹಾಗೂ ಶಿಲ್ಪ’ ಕುರಿತ ರಾಜ್ಯಮಟ್ಟದ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದಲ್ಲಿ 1600 ಗುಹೆಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 900 ಬೌದ್ಧ ಧರ್ಮ, 100 ಜೈನಧರ್ಮ ಹಾಗೂ 200 ಹಿಂದೂ ಧರ್ಮಕ್ಕೆ ಸೇರಿದವು ಎಂದು ಗುರುತಿಸಲಾಗಿದೆ’ ಎಂದರು.

‘ಬೌದ್ಧ ಧರ್ಮ ಅವನತಿ ಕಾಲದಲ್ಲಿದ್ದಾಗ, ಅವರ ಮನವೊಲಿಸಿ ಮತಾಂತರಗೊಳಿಸಿ ಆರ್ಥಿಕ ಕ್ಷಮತೆ ನೀಡಿದ್ದರಿಂದ ಜೈನ ಧರ್ಮ ಈ ನೆಲದಲ್ಲಿ ಗಟ್ಟಿಯಾಗಿ ಉಳಿಯಿತು ಎನ್ನುವುದು ನನ್ನ ಅಭಿಪ್ರಾಯ. ಜೈನಧರ್ಮ ಹೆಚ್ಚಿನ ಜನರನ್ನು ಮುಟ್ಟುವಂತಾಗಬೇಕು. ದಲಿತರು ಬೌದ್ಧ ಧರ್ಮಕ್ಕೆ ಮತಾಂತರಗೊಂಡು ‘ನವಬೌದ್ಧ ಧರ್ಮ’ವನ್ನು ಸೃಷ್ಟಿಸಿ ಬೌದ್ಧ ಧರ್ಮವನ್ನು ಗಟ್ಟಿಗೊಳಿಸುತ್ತಿದ್ದಾರೆ’ ಎಂದರು. 

ಶಿಲ್ಪಕಲೆಯಲ್ಲಿ ಕಾಣಬಹುದು
‘ಬೌದ್ಧ ಧರ್ಮ ಮತ್ತು ಜೈನ ಧರ್ಮಗಳು ಶಾಂತಿ ಮತ್ತು ಅಹಿಂಸೆ ಪ್ರತಿಪಾದಿಸುವ ಧರ್ಮಗಳಾಗಿವೆ. ಆದರೆ, ಕಟ್ಟುನಿಟ್ಟಿನ ನಿಯಮಗಳನ್ನು ಹೊಂದಿದ ಜೈನ ಧರ್ಮ ಪ್ರಬುದ್ಧವಾಗಿ ಬೆಳೆದಿದೆ. ಜೈನ ಶಿಲ್ಪಗಳ ಇತಿಹಾಸ ಅವಲೋಕಿ­ಸಿದಾಗ ದಕ್ಷಿಣ ಮತ್ತು ಉತ್ತರ ಭಾರತದ ಶಿಲ್ಪಕಲೆಗಳ ಪರಸ್ಪರ ಸಾಮ್ಯತೆಯನ್ನು ಜೈನ ಧರ್ಮದ ಶಿಲ್ಪಕಲೆಯಲ್ಲಿ ಕಾಣ­ಬಹುದು. ಇದಕ್ಕೆ ಬಾದಾಮಿಯ ಗುಹೆ­ಗಳು ಹಾಗೂ ಮಧ್ಯಪ್ರದೇಶದ ಚಂದೇ­ರಿಯ ಗುಹೆಗಳು ಉತ್ತಮ ಉದಾ­­ ಹ­ರ­ಣೆ­­ಯಾಗಿವೆ’ ಎಂದು ತಿಳಿಸಿದರು.

‘ಜೈನ ಸಾಂಸ್ಕೃತಿಕ ವಲಯದ­ಲ್ಲಿಯೂ ಉತ್ತರ ಮತ್ತು ದಕ್ಷಿಣದ ಮಧ್ಯೆ ಸಾಮ್ಯತೆ ಕಾಣಬಹುದು. ದಕ್ಷಿಣದಲ್ಲಿ ಗಂಗರು, ರಾಷ್ಟ್ರಕೂಟರು, ಚಾಲುಕ್ಯರು ಆಡಳಿತ ನಡೆಸಿದ ಸಂದರ್ಭದಲ್ಲಿ ಉತ್ತರ ಭಾರತದಲ್ಲಿ ಗುಜ್ಜರು, ಪಾಲರು, ಪಾಲ­ಬಾರ ರಾಜರು ಆಡಳಿತ ನಡೆಸಿರು­ವುದನ್ನು ಇತಿಹಾಸದಿಂದ ತಿಳಿದುಕೊಳ್ಳ­ಬಹುದು’ ಎಂದರು.

ಜಾಗೃತಿ ಮೂಡಿಸಬೇಕು
‘ಬೌದ್ಧ ಧರ್ಮದ ಪ್ರಚಾರವಾದಂತೆ ಜೈನ ಧರ್ಮ ಪ್ರಚಾರವಾಗಿಲ್ಲ. ಅದಕ್ಕಾಗಿ ಜೈನ ಧರ್ಮದ ಪ್ರಚಾರಕ್ಕಾಗಿ  ಹಾಗೂ ಅದನ್ನು ಇತರೇ ಸಮಾಜದವರಲ್ಲಿ ಜಾಗೃತಿ ಮೂಡಿಸಬೇಕಾಗಿದೆ’ ಎಂದು ಸಲಹೆ ನೀಡಿದರು.

ನಿವೃತ್ತ ಪ್ರಾಧ್ಯಾಪಕ ಪಿ.ಎಸ್‌. ನರಸಿಂಹಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಆ.ನೇ. ಉಪಾಧ್ಯೆ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಜಿನದತ್ತ ದೇಸಾಯಿ, ಭರತೇಶ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ರಾಜೀವ ದೊಡ್ಡಣ್ಣವರ, ಕನ್ನಡ ವಿಶ್ವವಿದ್ಯಾಲಯದ ಜೈನ ಸಾಹಿತ್ಯ, ಸಂಸ್ಕೃತಿ ಅಧ್ಯಯನ ಕೇಂದ್ರದ ಸಂಯೋಜನಾಧಿಕಾರಿ ಸಿ. ಮಹದೇವ ಭಾಗವಹಿಸಿದ್ದರು.

ಭರತೇಶ ಶಿಕ್ಷಣ ಸಂಸ್ಥೆ ಖಜಾಂಚಿ ಶ್ರೀಪಾಲ ಖೇಮಲಾಪುರ ಸ್ವಾಗತಿಸಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಜೈನ ಸಾಹಿತ್ಯ, ಸಂಸ್ಕೃತಿ ಅಧ್ಯಯನ ಕೇಂದ್ರದ ಗೌರವ ಯೋಜನಾ ನಿರ್ದೇಶಕ ಎಸ್‌.ಪಿ. ಪದ್ಮಪ್ರಸಾದ್‌ ಪ್ರಾಸ್ತಾವಿಕ ಮಾತನಾಡಿದರು. ಭರತ ಅಲಸಂದಿ ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ ಪಾಟೀಲ ವಂದಿಸಿದರು.

*
ಬೌದ್ಧ ಧರ್ಮಕ್ಕೆ ಹೋಲಿಕೆ ಮಾಡಿದರೆ ಜೈನ ಧರ್ಮದ ಗುಹಾಂತರ ದೇವಾಲಯ ಬಹಳ ಕಡಿಮೆ ಇವೆ.
–ಎಸ್.ವಿ. ವೆಂಕಟೇಶ,
ನಿವೃತ್ತ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT