ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫಸಲ್ ಬಿಮಾ ಅನ್ಯಾಯ ಸರಿಪಡಿಸಿ’

ಬೈಲಹೊಂಗಲ ತಾಲ್ಲೂಕಿನ ಬೈಲವಾಡ ಗ್ರಾಮಸ್ಥರಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಮನವಿ
Last Updated 4 ಮಾರ್ಚ್ 2017, 7:13 IST
ಅಕ್ಷರ ಗಾತ್ರ

ಬೈಲಹೊಂಗಲ: ‘ಪ್ರಧಾನ ಮಂತ್ರಿ ಬಿಮಾ ಯೋಜನೆಯಡಿ ಹಿಂಗಾರು ಬೆಳೆಗಳಾದ ಜೋಳ, ಕಡಲೆ, ಗೋಧಿ ಬೆಳೆಗಳ ಮೇಲೆ ಬೆಳೆ ವಿಮೆ ಮಾಡಿಸಿರುವ ರೈತರಿಗೆ ನಿರಾಶೆ ಉಂಟಾಗಿದೆ, ವಿಮಾ ಕಂಪೆನಿಗಳು ಮೋಸ ಮಾಡುವ ಸಾಧ್ಯತೆ ಇದ್ದು, ಕಂಪೆನಿಗಳ ಮೇಲೆ ಸೂಕ್ತ ಕ್ರಮ ಕೈಕೊಳ್ಳಬೇಕು’ ಎಂದು ಆಗ್ರಹಿಸಿ ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿ ಮೂಲಕ ತಾಲ್ಲೂಕಿನ ಬೈಲವಾಡ ಗ್ರಾಮಸ್ಥರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಅರ್ಪಿಸಿದರು.

ನೂರಾರು ರೈತರು ಮೋಟಾರ್ ಬೈಕ್ ಮೇಲೆ ಮೆರವಣಿಗೆಯಲ್ಲಿ ಬಂದು ವಿಮಾ ಕಂಪೆನಿಗಳ ಮೋಸದಾಟಕ್ಕೆ ಧಿಕ್ಕಾರ ಕೂಗಿದರು. ರೈತ ಎಂ.ಸಿ.ಪಾಟೀಲ ಮಾತನಾಡಿ, ‘ಕೃಷಿ, ಕಂದಾಯ, ಗ್ರಾಮ ಪಂಚಾಯ್ತಿ, ತೋಟಗಾರಿಕೆ ಇಲಾಖೆಗಳ ಅಧಿಕಾರಿ ಗಳು ರೈತರ ಮನೆ ಮನ ಒಲಿಸಿ ವಿಮೆ ಮಾಡಿಸಲು ಶ್ರಮಿಸಿದ್ದಾರೆ. ಅದರಂತೆ ಹಿಂಗಾರು ಹಂಗಾಮಿಗೆ ಬಹುತೇಕ ರೈತರು ಬೆಳೆ ವಿಮೆ ಮಾಡಿಸಿದ್ದಾರೆ. ವಿಮಾ ಕಂಪೆನಿ ನೂರಾರು ಕೋಟಿ ಹಣ ಪಡೆದಿವೆ.

ಪ್ರತಿಯೊಬ್ಬ ರೈತ 2 ಸಾವಿರ ದಿಂದ 4 ಸಾವಿರವರೆಗೆ ವಿಮಾ ಕಂತು ಪಾವತಿಸಿದ್ದಾನೆ. ಪ್ರಸ್ತುತ ಹಿಂಗಾರು ಹಂಗಾಮು ಸಂಪೂರ್ಣ ವಿಫಲ ಆಗಿದೆ. ಇದರಿಂದ ಜೋಳ, ಕಡಲೆ, ಗೋಧಿ ಸೇರಿದಂತೆ ಯಾವ ಬೆಳೆಯ ಫಸಲು ರೈತರ ಕೈಗೆ ಬಂದಿಲ್ಲ. ಸಾಲ ಮಾಡಿ ರೈತ ಬಿತ್ತನೆ ಬೀಜ, ಗೊಬ್ಬರ, ಕ್ರಿಮಿನಾಶಕ ಖರೀದಿಸಿ ಉಪಯೋಗಿಸಿದ್ದಾನೆ.

ಬೆಳೆ ಗಳೆಲ್ಲ ಒಣಗಿ ಹೋಗಿವೆ. ಬಹುತೇಕ ಜಮೀನುಗಳಲ್ಲಿ ಬೆಳೆದ ಪೈರುಗಳು ನೆಲಕಚ್ಚಿವೆ. ರೈತ ಜಮೀನು ಸ್ವಚ್ಛಗೊಳಿ ಸಿದ್ದು ಈ ಸಂದರ್ಭದಲ್ಲಿ ವಿಮಾ ಕಂಪೆನಿ, ಕೃಷಿ, ಕಂದಾಯ ಇಲಾಖೆ ಅಧಿಕಾರಿಗಳು ಭೂಮಿಗಳಲ್ಲಿ ಬೆಳೆದ ಬೆಳೆ ಪರೀಶಿಲನೆಗೆ ಬರುತ್ತಿರುವುದು ಹಾಸ್ಯಾಸ್ಪದ’ ಎಂದರು.

ಶ್ರೀಶೈಲ ಶಿವನಗೌಡ ಪಾಟೀಲ ಮಾತನಾಡಿ, ‘ಅರ್ಥವಿಲ್ಲದ ಭೇಟಿ ನೀಡಿ ಕೃಷಿಕರಿಗೆ ಅನ್ಯಾಯದ ವರದಿ ಸಲ್ಲಿಕೆ ಆಗದಂತೆ ಎಚ್ಚರ ವಹಿಸಿಬೇಕು. ಈ ಬಗ್ಗೆ ಶಾಸಕರು, ಉಪವಿಭಾಗಾಧಿಕಾರಿಗಳು, ಸೂಕ್ತ ಕ್ರಮ ಕೈಕೊಳ್ಳಬೇಕು. ಕೇಂದ್ರ ಸರ್ಕಾರದ ಮತ್ತು ವಿಮಾ ಕಂಪನಿ ಅಧಿಕಾರಿಗಳಿಗೆ ಸೂಕ್ತ ಮನವರಿಕೆ ಮಾಡಿಕೊಟ್ಟು ಸಂಪೂರ್ಣ ಪ್ರಮಾಣ ದಲ್ಲಿ ವಿಮೆ ದೊರಕಿಸಿಕೊಡಬೇಕು’ ಎಂದು ಒತ್ತಾಯಿಸಿದರು.

ನೀಲಕಂಠ ಮುದಕನಗೌಡ್ರ, ಗುರುಪುತ್ರ ಕಲ್ಲಪ್ಪಗೌಡ್ರ, ವರ್ತಯ್ಯಾ ಚಿಕ್ಕಮಠ, ಶ್ರೀಶೈಲ ಪಾಟೀಲ, ಶಿವನಗೌಡ ಪಾಟೀಲ, ದಯಾನಂದ ಮುರಕೀ ಭಾಂವಿ, ಇಂದ್ರಾ ಮದಲಭಾವಿ, ಬಸವಣ್ಯಪ್ಪ ಗಾಡದ, ದಿಲಾವರ ಸೈಯದ್, ರುದ್ರಯ್ಯ ಹಿರೇಮಠ, ಮಹಾಬಳೇಶ್ವರ ಮಾಳಗಿ, ಗುರುಪುತ್ರ ಕರೀಕಟ್ಟಿ ಇದ್ದರು. ಗ್ರೇಡ್‌ 2 ತಹಶೀಲ್ದಾರ್‌ ಎ.ಎಫ್.ಕಾರವಾರ ಮನವಿ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT