ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ, ಆತ್ಮ ಸ್ಥೈರ್ಯ ಮುಖ್ಯ

ಲಯನ್‌್ಸ ಕ್ಲಬ್‌ ಅಧ್ಯಕ್ಷ ವಿ. ಗೋಪಾಲ್ ವಿದ್ಯಾರ್ಥಿಗಳಿಗೆ ಸಲಹೆ
Last Updated 4 ಮಾರ್ಚ್ 2017, 8:09 IST
ಅಕ್ಷರ ಗಾತ್ರ

ದೇವನಹಳ್ಳಿ: ಪ್ರಸ್ತುತ ಸಾಲಿನಲ್ಲಿ ವಾರ್ಷಿಕ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಲು ವಿದ್ಯಾರ್ಥಿಗಳು ಆತ್ಮಸ್ಥೈರ್ಯ ತಂದುಕೊಳ್ಳುವುದು ಮುಖ್ಯವೆಂದು ಲಯನ್‌್ಸ ಕ್ಲಬ್‌ ಅಧ್ಯಕ್ಷ ವಿ. ಗೋಪಾಲ್ ತಿಳಿಸಿದರು.

ದೇವನಹಳ್ಳಿ ಲಯನ್ ಸಂಸ್ಥೆ ಸಭಾಂಗಣದಲ್ಲಿ ಜೇಸಿಐ ಮತ್ತು ಜೇಸಿರೇಟ್ ಹಾಗೂ ಯುವ ಜೇಸಿ ಸಂಸ್ಥೆ ವತಿಯಿಂದ ನಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪೂರ್ವಭಾವಿ ಸಿದ್ಧತಾ ಪರೀಕ್ಷೆ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

ವಿಷಯವಾರು ಶಿಕ್ಷಕರು ಪೂರ್ವಭಾವಿ ಪರೀಕ್ಷೆ ಪ್ರಶ್ನೆಪತ್ರಿಕೆಯ ಪ್ರಶ್ನೆ ಮತ್ತು ಉತ್ತರಗಳ ಕೈಪಿಡಿಯನ್ನು ನೀಡಿದ್ದಾರೆ. ಕಾಲಹರಣ ಮಾಡದೆ ಪರೀಕ್ಷೆಗಳತ್ತ ಹೆಚ್ಚಿನ ಒತ್ತು ನೀಡಬೇಕು ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ನಂದಿ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ವೈ.ಕೆ.ಚಂದ್ರಶೇಖರ್ ಜೇಸಿಐ ಸಂಸ್ಥೆ ಹತ್ತಾರು ವರ್ಷಗಳ ಪರಿಶ್ರಮದಿಂದ ಪರೀಕ್ಷಾಪೂರ್ವ ಸಿದ್ಧತಾ ತರಬೇತಿ ಕಾರ್ಯಾಗಾರ ನಡೆಸಿಕೊಂಡು ಬರುತ್ತಿರುವುದರ ಫಲವಾಗಿ ಉತ್ತಮ ಗುಣಮಟ್ಟದ ಫಲಿತಾಂಶ ಸಾಧ್ಯವಾಗುತ್ತಿದೆ. ಹತ್ತು ವರ್ಷಗಳ ಹಿಂದೆ ಸರ್ಕಾರಿ ಶಾಲೆಗಳಲ್ಲಿ ಶೇ 40ರಷ್ಟು ಫಲಿತಾಂಶ ಬರುತ್ತಿತ್ತು. ಹಿಂದಿನ ವರ್ಷದ ಫಲಿತಾಂಶದಲ್ಲಿ ಶೇ 100ರಷ್ಟು ಪಡೆದ ಸರ್ಕಾರಿ ಶಾಲೆಗಳಿವೆ ಎಂದರು.

ವಾರ್ಷಿಕ ಪರೀಕ್ಷೆಗೆ ಕೇವಲ 30 ದಿನಗಳು ಉಳಿದಿವೆ. ಭವಿಷ್ಯಕ್ಕೆ ಅಡಿಗಲ್ಲು ಜತೆಗೆ ಉನ್ನತ ವ್ಯಾಸಂಗಕ್ಕೆ ಫಲಿತಾಂಶದಿಂದ ನಿರ್ಧಾರವಾಗಲಿದೆ. ಸಮಾಜ ಗುರುತಿಸುವ ನಿಟ್ಟಿನಲ್ಲಿ ಫಲಿತಾಂಶ ಬರಬೇಕು ಎಂದರು.

ಸಂಪನ್ಮೂಲ ವ್ಯಕ್ತಿ ಹಾಗೂ ತರಬೇತಿದಾರ ಶ್ರೀಧರ್ ಮಾತನಾಡಿ, ‘ಜೀವನದ ಅತ್ಯಂತ ಪ್ರಮುಖ ಘಟ್ಟದಲ್ಲಿ ಅತ್ಯಂತ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ. ದೇವರಿಗೆ ಮುಡಿ ಹರಕೆಯಿಂದ ಉತ್ತಮ ಫಲಿತಾಂಶ ಸಾಧ್ಯವಿಲ್ಲ. ನಿಮ್ಮ ಭವಿಷ್ಯವನ್ನು ನೀವೇ ರೂಪಿಸಿಕೊಳ್ಳಬೇಕು, ನಿರ್ಭಯದಿಂದ ಪರೀಕ್ಷೆಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದರು.

ಲಯನ್ಸ್‌ ನಿಕಟ ಪೂರ್ವ ಅಧ್ಯಕ್ಷ ವಿಜಯಕುಮಾರ್, ಜೇಸಿಐ ಉಪಾಧ್ಯಕ್ಷ ಬಿ. ಕೆ. ಶಿವಪ್ಪ, ಕಾರ್ಯದರ್ಶಿ ಕಿರಣ್ ಯಾದವ್, ತರಬೇತಿ ಯೋಜನಾ ನಿರ್ದೇಶಕ ಚಂದ್ರಶೇಖರ್, ಜೆ. ಸಿ. ಐ. ಮಾಜಿ ಅಧ್ಯಕ್ಷ ಆನಂದ್, ಪಿಳ್ಳಪ್ಪ, ಡಿ. ಎನ್. ನಾರಾಯಣಸ್ವಾಮಿ ಉಪಸ್ಥಿತರಿದ್ದರು.

*
ಪರೀಕ್ಷೆ ಎಂದಾಕ್ಷಣ ಆತಂಕ, ತಳಮಳ, ಭಯದ ಅವಶ್ಯಕತೆ ಇಲ್ಲ. ಈಗಾಗಲೇ ಅನೇಕ ಬಾರಿ ಕಿರು ಪರೀಕ್ಷೆ, ಪೂರ್ವಭಾವಿ ಸಿದ್ಧತಾ ಪರೀಕ್ಷೆ ನಡೆದಿದೆ.
-ವಿ. ಗೋಪಾಲ್ , ಲಯನ್ಸ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT