ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಹರಿಸಿ ಶಾಲಾ ಬಾಲಕಿ ಹತ್ಯೆ

ವಾಮಾಚಾರಕ್ಕಾಗಿ ಕೊಲೆ ಮಾಡಿದ ಶಂಕೆ– ಜನರಲ್ಲಿ ಆತಂಕ
Last Updated 4 ಮಾರ್ಚ್ 2017, 9:33 IST
ಅಕ್ಷರ ಗಾತ್ರ

ಮಾಗಡಿ: ಪಟ್ಟಣದ ವಿನ್ನರ್ಸ್‌ ಶಾಲಾ ಬಾಲಕಿಯೊಬ್ಬಳನ್ನು ಅಪಹರಿಸಿ  ಕೊಲೆ ಮಾಡಿದ ಘಟನೆ ಪಟ್ಟಣದ ಹೊಸಹಳ್ಳಿ ರಸ್ತೆಯ ಬಳಿ ಕಟ್ಟಡದ ಹಿಂದಿನ ಹಳ್ಳದಲ್ಲಿ ನಡೆದಿದೆ.

ಮೃತಳನ್ನು ಹೊಸ ಮಸೀದಿ ಮೊಹಲ್ಲಾದ ಮಹಮದ್‌ ನೂರುಲ್ಲಾ ಮತ್ತು ಜಮೀಲಾ ಬಾನು ಪುತ್ರಿ ಬಿ.ಬಿ.ಆಯಿಷಾ (10) ಎಂದು ಗುರುತಿಸಲಾಗಿದೆ. ಆಕೆ 4ನೇ ತರಗತಿ ವಿದ್ಯಾರ್ಥಿನಿ. ವಾಮಾಚಾರ ಮತ್ತು ಅತ್ಯಾಚಾರ ನಡೆಸಿ ಕೊಲೆ ಮಾಡಿದ ಬಗ್ಗೆ  ಬಾಲಕಿಯ ಪೋಷಕರು ಶಂಕಿಸಿದ್ದಾರೆ.

ಹಿನ್ನೆಲೆ: ಬುಧವಾರ ರಾತ್ರಿ 9ಕ್ಕೆ ಮನೆಗೆ ಬೀಗ ಹಾಕಿಕೊಂಡು ಸಮೀಪದ ಕಟ್ಟಡದ ಅಂಗಡಿಯಲ್ಲಿದ್ದ ತಾಯಿಗೆ ಬೀಗ ಕೊಡಲು ತೆರಳುತ್ತಿದ್ದಾಗ ದುಷ್ಕರ್ಮಿಗಳು  ಆಯಿಷಾಳನ್ನು ಅಪಹರಿಸಿದ್ದರು. ರಾತ್ರಿ ಮನೆಗೆ ಬಾರದ ಮಗಳನ್ನು ಹುಡುಕಿದ ಪೋಷಕರು ಮಗಳು ಕಾಣೆಯಾಗಿರುವ ಬಗ್ಗೆ ಗುರುವಾರ ಮಾಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಶುಕ್ರವಾರ ಮಧ್ಯಾಹ್ನ 3ಕ್ಕೆ ಹೊಸಹಳ್ಳಿ ಹಳ್ಳದ ಬಳಿ ಮೃತದೇಹ ಪತ್ತೆಯಾಗಿದೆ. ಕಟ್ಟಡದ ಪಕ್ಕದ ಕಲ್ಲಿನ ಸುತ್ತಲೂ ನಿಂಬೆಹಣ್ಣು ಕತ್ತರಿಸಿ ಹೂವು ಎಸೆಯಲಾಗಿದೆ. ಪಕ್ಕದ ಹಳ್ಳದಲ್ಲಿ ತೆಂಗಿನ ಕಾಯಿ ಊಟದ ಎಲೆ ಎಸೆಯಲಾಗಿದೆ. ಕೈಗಳೆರಡನ್ನು ಬೆನ್ನಿನ ಹಿಂದಕ್ಕೆ ಬಟ್ಟೆಯಿಂದ ಕಟ್ಟಿ ಬಾಯಿಗೆ ಬಟ್ಟೆ ತುರುಕಿ ಕೊಲೆ ಮಾಡಲಾಗಿದೆ. ಕಣ್ಣುಗುಡ್ಡೆಗಳು ಹೊರಗೆ ಬಂದಿದ್ದವು.

ನಾಲಿಗೆ ಕತ್ತರಿಸಿದಂತೆ ಕೆಂಪಾಗಿತ್ತು. ಬಾಲಕಿಯ ಸೊಂಟದವರೆಗೆ ಗೋಣಿ ಚೀಲದಲ್ಲಿಟ್ಟು ಹೊಂಗೆ ಗಿಡದ ಬಳಿ ಎಸೆಯಲಾಗಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಸಿಪಿಐ ಎಚ್‌.ಎಲ್‌.ನಂದೀಶ್‌, ಪಿಎಸ್‌ಐ ಮಂಜುನಾಥ್‌ ಡಿ.ಆರ್‌. ಸಿಬ್ಬಂದಿ ಜತೆ ಬಂದರು. ಬ್ಯಾರಿಕೇಡ್‌ಗಳನ್ನು ಹಾಕಿ  ಶ್ವಾನದಳವನ್ನು ಕರೆಸಿ ಸ್ಥಳ ಪರಿಶೀಲನೆ ನಡೆಸಲಾಯಿತು. ಎಸ್‌ಪಿ ಬಿ.ರಮೇಶ್‌, ಮತ್ತು ಡಿವೈಎಸ್‌ಪಿ ಲಕ್ಷ್ಮೀಗಣೇಶ್‌ ಭೇಟಿ  ನೀಡಿದ್ದರು.

ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮೃತಳ ದೇಹವನ್ನು ಶವಪರೀಕ್ಷೆಗೆ 108 ಆಂಬುಲೆನ್ಸ್‌ನಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ಸಾಗಿಸಲಾಯಿತು.
ಪಟ್ಟಣದ ಜನತೆ ತಂಡೋಪ ತಂಡವಾಗಿ ಸ್ಥಳಕ್ಕೆ ಬಂದು  ಮೃತದೇಹವನ್ನು ಆಸ್ಪತ್ರೆಗೆ ಸಾಗಿಸುವವರೆಗೆ ಕಾದುನಿಂತು ಮಮ್ಮಲ ಮರುಗಿದರು.  ಪಟ್ಟಣದಲ್ಲಿ ಸೂತಕದ ವಾತಾವರಣವಿತ್ತು.

ಎಸ್‌ಪಿ ಬಿ.ರಮೇಶ್‌ ಮಾತನಾಡಿ, ಕೊಲೆಗೆ ನಿಖರ ಕಾರಣ ಕಂಡು ಹಿಡಿಯಲಾಗುವುದು ಎಂದರು. ಪುರಸಭೆಯ ಸದಸ್ಯ ಮಹಮದ್‌ ರಿಯಾಜ್‌, ರಹಮತ್‌ ಉಲ್ಲಾಖಾನ್‌, ಅನ್ಸರ್‌ ಪಾಷಾ, ತಾಂಜೀಮ್‌ ಟಿಪ್ಪುಸುಲ್ತಾನ್‌ ಸೇನೆಯ ಪದಾಧಿಕಾರಿಗಳು ಸ್ಥಳದಲ್ಲಿದ್ದು ಶವ ಸಾಗಿಸಲು ಸಹಕರಿಸಿದರು.

*
ವಾಮಾಚಾರ ಇಲ್ಲವೆ ಅತ್ಯಾಚಾರ ಎಸಗಿ ನಿಧಿಯ ಆಸೆಗಾಗಿ ನಮ್ಮ ಮಗಳನ್ನು ಕೊಲೆ ಮಾಡಿದ್ದಾರೆ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು.
-ರೇಷ್ಮಾ,
ಮೃತಳ ಚಿಕ್ಕಮ್ಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT