ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಕ್ರಮಣ ತೆರವು: ಕಟ್ಟಡ ನೆಲಸಮ

ಬೀದರ್: ಓಲ್ಡ್‌ಸಿಟಿಯಲ್ಲಿ ಮತ್ತೆ ರಸ್ತೆ ವಿಸ್ತರಣೆ ಕಾರ್ಯ ಆರಂಭ
Last Updated 4 ಮಾರ್ಚ್ 2017, 9:51 IST
ಅಕ್ಷರ ಗಾತ್ರ

ಬೀದರ್: ನಗರದ ಓಲ್ಡ್‌ಸಿಟಿಯ ಆಸ್ತಾಗಲ್ಲಿ ಹಾಗೂ ಅಲಿಬಾಗಗಲ್ಲಿಯಲ್ಲಿ ಶುಕ್ರವಾರ ರಸ್ತೆ ವಿಸ್ತರಣೆ ಹಾಗೂ ಅತಿಕ್ರಮಣ ತೆರವು ಕಾರ್ಯಾಚರಣೆ  ನಡೆಯಿತು.

ಐಎಎಸ್‌ಎಸ್‌ ಪ್ರೊಬೆಷನರಿ ಅಧಿಕಾರಿ ಭೂಬಾಲನ್‌ ಹಾಗೂ ನಗರಸಭೆ ಆಯುಕ್ತ ನರಸಿಂಹಮೂರ್ತಿ ನೇತೃತ್ವದಲ್ಲಿ  ನಗರಸಭೆಯ ಸಿಬ್ಬಂದಿ ರಸ್ತೆ ವಿಸ್ತರಣೆಗೆ 30 ಅಡಿ ಗುರುತು ಮಾಡುತ್ತಿದ್ದಂತೆಯೇ ಜೆಸಿಬಿ ನೆರವಿನಿಂದ ಜೌಹರ್‌ ಪದವಿ ಪೂರ್ವ ಕಾಲೇಜು, ವಾಣಿಜ್ಯ ಮಳಿಗೆ, ಅಂಗಡಿ ಹಾಗೂ ಮನೆಗಳ ಮುಂಭಾಗದ ಗೋಡೆಗಳನ್ನು ಕೆಡವಲಾಯಿತು. 40ಕ್ಕೂ ಹೆಚ್ಚು ಕಟ್ಟಡಗಳನ್ನು ತೆರವುಗೊಳಿಸಲಾಯಿತು.

ಅತಿಕ್ರಮಣ ತೆರವು ಮಾಡಿಕೊಳ್ಳುವುದಾಗಿ ಕೆಲವರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದ  ಕಾರಣ ಅವರಿಗೆ ಮೂರು ದಿನ ಅವಕಾಶ ನೀಡಲಾಯಿತು. ಕಾರ್ಯಾಚರಣೆಗಾಗಿ ವಿದ್ಯುತ್‌ ತಂತಿಗಳು ಅಡ್ಡಿಯಾಗುತ್ತಿದ್ದ ಕಾರಣ ಅನೇಕ ಮನೆಗಳ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಯಿತು. ರಸ್ತೆಗೆ ಹೊಂದಿಕೊಂಡು ಅಕ್ರಮವಾಗಿ ನಿರ್ಮಿಸಿದ ಕಟ್ಟೆ, ಕಟ್ಟಡ ಹಾಗೂ ಆವರಣ ಗೋಡೆಗಳನ್ನು ಮೂರು ದಿನಗಳಲ್ಲಿ ತೆರವು ಮಾಡಿಕೊಳ್ಳಬೇಕು.

ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಬಾಕಿ ಉಳಿದ ಅತಿಕ್ರಮಣ ತೆರವುಗೊಳಿಸಿ ರಸ್ತೆ ಕಾಮಗಾರಿ ಆರಂಭಿಸಲಾಗುವುದು ಎಂದು ಐಎಎಸ್‌ಎಸ್‌ ಪ್ರೊಬೆಷನರಿ ಅಧಿಕಾರಿ ಭೂಬಾಲನ್‌ ತಿಳಿಸಿದರು.

ಈ ಮೊದಲು ರಸ್ತೆಯನ್ನು 40 ಅಡಿಗೆ ವಿಸ್ತರಿಸುವ ಯೋಜನೆ ಇತ್ತು. ಬೃಹತ್‌ ಕಟ್ಟಡಗಳು ನಿರ್ಮಾಣಗೊಂಡಿರುವ ಕಾರಣ ಹೆಚ್ಚಿನ ಹಾನಿಯನ್ನು ತಪ್ಪಿಸಲು ಹಾಗೂ ಸಾರ್ವಜನಿಕರ ಮನವಿಗೆ ಸ್ಪಂದಿಸಿ ಕೇವಲ 30 ಅಡಿ ವಿಸ್ತರಿಸಲು ನಿರ್ಧರಿಸಲಾಗಿದೆ. ಕಾರ್ಯಾಚರಣೆ ಮುಗಿದ ತಕ್ಷಣ ನಗರೋತ್ಥಾನ ಯೋಜನೆ ಅಡಿಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು  ಹೇಳಿದರು.

ಶಾಲಾ, ಕಾಲೇಜುಗಳ ಪರೀಕ್ಷೆಗಳು ಪ್ರಾರಂಭವಾಗಲಿವೆ. ಅತಿಕ್ರಮಣ ತೆರವು ಕಾರ್ಯಾಚರಣೆಯಿಂದ ಮಕ್ಕಳಿಗೆ ತೊಂದರೆಯಾಗಿದೆ. ಏಪ್ರಿಲ್‌ ನಂತರ ಕಾರ್ಯಾಚರಣೆ ನಡೆಸಬೇಕು ಎಂದು ಮುಬಾಸಿರ್‌ ಶಿಂದೆ ಅವರು ನಗರಸಭೆ ಅಧಿಕಾರಿಗಳಿಗೆ ಮನವಿ ಮಾಡಿದರು.

ಕಾರ್ಯಾಚರಣೆ ನೆಪದಲ್ಲಿ ಅನೇಕ ಮನೆಗಳ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿದೆ. ರಾತ್ರಿ ವೇಳೆಯಲ್ಲಿ ವಿದ್ಯುತ್‌ ಇಲ್ಲದೆ ವಿದ್ಯಾರ್ಥಿಗಳು  ತೊಂದರೆ ಅನುಭವಿಸಬೇಕಾಗಲಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಅತಿಕ್ರಮಣ ತೆರವುಗೊಳಿಸಲು ಒಂದು ತಿಂಗಳು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಇಲ್ಲಿಯ ನಿವಾಸಿಗಳಿಗೆ ಡಿಸೆಂಬರ್‌ನಲ್ಲೇ ಎಚ್ಚರಿಕೆ ನೀಡಲಾಗಿದೆ. ಆದರೂ ಅತಿಕ್ರಮಣ ತೆರವು ಮಾಡಿಕೊಂಡಿಲ್ಲ. ಆಸ್ತಾಗಲ್ಲಿ, ಅಲಿಬಾಗಗಲ್ಲಿ ಹಾಗೂ ಖುದ್ವಾಯಿಗಲ್ಲಿ ರಸ್ತೆ ಬದಿಗಳಲ್ಲಿರುವ ಕಟ್ಟಡಗಳ ಮಾಲೀಕರು ಎರಡು ದಿನಗಳಲ್ಲಿ ಅತಿಕ್ರಮಣ ತೆರವು ಮಾಡಿಕೊಳ್ಳದಿದ್ದರೆ ಮತ್ತೆ ಕಟ್ಟಡಗಳನ್ನು ಕೆಡವಲಾಗುವುದು ಎಂದು ನಗರಸಭೆ ಆಯುಕ್ತ ನರಸಿಂಹಮೂರ್ತಿ ತಿಳಿಸಿದರು. ಕಾರ್ಯಾಚರಣೆ ಪ್ರಯುಕ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

*
ನಗರೋತ್ಥಾನ ಯೋಜನೆ ಅಡಿ ಕಾಮಗಾರಿ ಕೈಗೊಳ್ಳಲು ಅಡಚಣೆಯಾಗುತ್ತಿದೆ. ಹೀಗಾಗಿ ಅತಿಕ್ರಮಣ ತೆರವು ಕಾರ್ಯಾಚ ರಣೆಯನ್ನು ತೀವ್ರಗೊಳಿಸಲಾಗಿದೆ.
-ಭೂಬಾಲನ್,
ಐಎಎಸ್‌ಎಸ್‌ ಪ್ರೊಬೆಷನರಿ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT