ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಾರಾಧ್ಯರ ಪಾತ್ರ ಸವಾಲಿನದು: ನಟ ಸಾಯಿಕುಮಾರ್

‘ಅಬ್ಬೆತುಮಕೂರಿನ ಸಿದ್ಧಿಪುರುಷ ವಿಶ್ವಾರಾಧ್ಯರು’ ಚಿತ್ರೀಕರಣಕ್ಕೆ ಚಾಲನೆ
Last Updated 4 ಮಾರ್ಚ್ 2017, 10:43 IST
ಅಕ್ಷರ ಗಾತ್ರ

ಯಾದಗಿರಿ: ‘ಮಾನವಕುಲಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುವ ಮೂಲಕ ಅನೇಕ ಪವಾಡಗಳಿಂದ ಖ್ಯಾತಿ ಪಡೆದಿರುವ ವಿಶ್ವಾರಾಧ್ಯರ ಪಾತ್ರ ತುಂಬಾ ಸವಾಲಿನದು’ ಎಂದು ನಾಯಕನಟ ಸಾಯಿಕುಮಾರ್‌ ಅಭಿಪ್ರಾಯ ಪಟ್ಟರು.

ಅಬ್ಬೆತುಮಕೂರಿನಲ್ಲಿ ಶುಕ್ರವಾರ ‘ಅಬ್ಬೆತುಮಕೂರಿನ ಸಿದ್ಧಿಪುರುಷ ವಿಶ್ವಾರಾಧ್ಯರು’ ಚಿತ್ರ ಮುಹೂರ್ತದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಕನ್ನಡದಲ್ಲಿ ಹಲವು ಶರಣರ, ಸಿದ್ಧಿ ಪುರುಷರ ಪಾತ್ರಗಳನ್ನು ನಿಭಾಯಿಸಿದ್ದೇನೆ. ಎಲ್ಲವೂ ನಿರ್ದೇಶಕರ ಮೇಲೆ ಅವಲಂಬಿಸಿರುತ್ತದೆ. ನಿರ್ದೇಶಕರ ಮಾರ್ಗದರ್ಶನ, ಶ್ರಮ, ಏಕಾಗ್ರತೆಯಿಂದ ಮಾತ್ರ ಇಂಥ ಸವಾಲನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯ. ವಿಶ್ವಾರಾಧ್ಯರ ಪವಾಡ, ಜೀವನ ಚರಿತ್ರೆಯನ್ನು ಅಧ್ಯಯನ ಮಾಡುತ್ತಿದ್ದೇನೆ. ನೈಜ ಪಾತ್ರ ಮೂಡಿಬರುವಂತೆ ಶ್ರಮಿಸುತ್ತೇನೆ’ ಎಂದರು.

ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಮಾತನಾಡಿ,‘ಉತ್ತರ ಕರ್ನಾಟಕದ ಜನಮನದಲ್ಲಿ ನೆಲೆಸಿರುವ ವಿಶ್ವಾರಾಧ್ಯರ ಜೀವನ ಚರಿತ್ರೆ ಸಿನಿಮಾ ಆಗುತ್ತಿರುವುದು ಮತ್ತು ನಾನೇ ನಿರ್ದೇಶಿಸುತ್ತಿರುವುದಕ್ಕೆ ಹೆಮ್ಮೆ ಇದೆ. ಸಿದ್ಧಸಂಸ್ಥಾನ ಮಠದ ಶ್ರೀಗಳಾದ ಗಂಗಾಧರ ಸ್ವಾಮೀಜಿ ವಿಶ್ವಾರಾಧ್ಯ ಶ್ರೀಗಳ ಜೀವನ ಚರಿತ್ರೆ ಸಿನಿಮಾ ಮಾಡುವ ಅಭಿಲಾಷೆ ವ್ಯಕ್ತಪಡಿಸಿದಾಗ ಕಳೆದ ವರ್ಷ ಜಾತ್ರಾ ಉತ್ಸವಕ್ಕೆ ಬಂದು ನೋಡಿಕೊಂಡು ಹೋಗಿದ್ದೆ.

ಅಂದಿನಿಂದ ಇಂದಿನವರೆಗೆ ಸಿನಿಮಾ ನಿರ್ಮಾಣದ ಸಿದ್ಧತೆ ನಡೆಸಿದ್ದೇನೆ. ಶ್ರೀಗಳ ಅಭಿಲಾಷೆಯಂತೆ ನಟರನ್ನು ಪಾತ್ರಗಳಿಗೆ ಆಯ್ಕೆ ಮಾಡಲಾಗಿದೆ. ಪ್ರಧಾನ ಪಾತ್ರದಲ್ಲಿ ವಿಶ್ವಾರಾಧ್ಯರಾಗಿ ನಟ ಸಾಯಿಕುಮಾರ್, ಅವರ ಶ್ರೀಮತಿಯಾಗಿ ಶ್ರುತಿ ಹಾಗೂ ಹಾಸ್ಯ ಪಾತ್ರದಲ್ಲಿ ಸಾಧುಕೋಕಿಲ ಕಾಣಿಸಿಕೊಳ್ಳಲಿದ್ದಾರೆ. ಒಟ್ಟು 60 ಮಂದಿ ಕಲಾವಿದರು ಸಿನಿಮಾದಲ್ಲಿ ನಟಿಸಲಿದ್ದಾರೆ.

ವಿಶ್ವಾರಾಧ್ಯರು ಸಂಚ ರಿಸಿರುವ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿತ್ರೀಕರಣ ನಡೆಸಲಾಗುವುದು. ಸಿನಿಮಾದಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗುವುದು’ ಎಂದು ಹೇಳಿದರು.

ನಟಿ ಶ್ರುತಿ ಮಾತನಾಡಿ,‘ಉತ್ತರ ಕರ್ನಾಟಕ ಜನರ ಪ್ರೀತಿಗೆ ನಾನು ಸೋತಿದ್ದೇನೆ. ಹಾಗಾಗಿ, ವಿಶ್ವಾರಾಧ್ಯ ಶ್ರೀಗಳ ಜೀವನ ಚರಿತ್ರೆ ಸಿನಿಮಾಕ್ಕೆ ಅವಕಾಶ ಬಂದಾಗ ಒಪ್ಪಿಕೊಂಡೆ’ ಎಂದರು. ಸಹನಟರಾದ ಬ್ಯಾಂಕ್‌ ಜನಾರ್ದನ್, ರವಿಚೇತನ್ ಮಾತ ನಾಡಿದರು.

ಶಾಸಕ ಡಾ.ಎ.ಬಿ.ಮಾಲಕರೆಡ್ಡಿ ‘ಅಬ್ಬೆತುಮಕೂರಿನ ಸಿದ್ಧಿಪುರುಷ ವಿಶ್ವಾ ರಾಧ್ಯರು’ ಚಿತ್ರೀಕರಣಕ್ಕೆ ಕ್ಲಾಪ್‌ ಮಾಡುವ ಮೂಲಕ ಚಾಲನೆ ನೀಡಿದರು.
ಸಿದ್ಧಸಂಸ್ಥಾನ ಮಠದ ಗಂಗಾಧರ ಸ್ವಾಮೀಜಿ, ಮಾಜಿ ಶಾಸಕ ವೀರಬಸಂತರಡ್ಡಿ ಮುದ್ನಾಳ, ಶ್ರೀನಿವಾಸ ರೆಡ್ಡಿ ಕಂದಕೂರು, ವಿಶ್ವನಾಥ ಶಿರವಾಳಕರ್, ಮಾಜಿ ಶಾಸಕ ಚನ್ನಾರೆಡ್ಡಿ ಗೌಡ ತುನ್ನೂರು, ಚನ್ನಾರೆಡ್ಡಿಗೌಡ ಬಿಳಾರ, ರವಿಮಾಲಿಪಾಟೀಲ, ಸತ್ಯನಾರಾಯಣ ಗೌರ್, ಮಾಜಿ ಶಾಸಕ ದೊಡ್ಡಪ್ಪಗೌಡ ನರಬೋಳ್, ನಾಗರೆಡ್ಡಿ ಕರದಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT