ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳಿ ಮಣ್ಣಿಗೆ ‘ಚೋಮ’

Last Updated 4 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಕಳೆದ ಫೆಬ್ರುವರಿ 26ರಂದು ಗಿರಿಯ ಗೌಡರು ತೀರಿಕೊಂಡರು. ತಲೆಗೂದಲನ್ನು ಹಿಂದಕ್ಕೆ ಬಾಚಿ ಕಟ್ಟಿದ, ಎದೆಯ ಮೇಲೆಲ್ಲ ಬೆಳ್ಳಗಿನ ಕೂದಲು ಇದ್ದ ಗಿರಿಯ ಗೌಡರು ಮಂಗಳೂರಿನ ಬಜ್ಪೆ ಬಳಿಯ ಕುಡುಬಿ ಪದವಿನಲ್ಲಿ ವಾಸವಾಗಿದ್ದರು. ಕುಡುಬಿ ಸಮುದಾಯದ ಧಾರ್ಮಿಕ ಗುರುವಿನ ಪಟ್ಟ (ಗಾಡಿಯಾ) ಅವರಿಗಿದ್ದರೂ, ಅದನ್ನೆಲ್ಲ ನಿರಾಕರಿಸಿದ್ದರು. ‘ಮಂಗಳೂರು ವಿಶೇಷ ವಿತ್ತ ವಲಯ’ಕ್ಕೆ ಭೂ ಸ್ವಾಧೀನವಾದಾಗ, ಸಂತ್ರಸ್ತರ ಪೈಕಿ ಮೇಲ್ವರ್ಗದವರಿಗೆ ಉತ್ತಮವಾದ ಬದಲಿ ಜಾಗ ಕೊಡಲು ಸರ್ಕಾರ ಹುಡುಕಾಟ ನಡೆಸಿ, ಗಿರಿಯ ಗೌಡರ ಕೃಷಿ ಜಮೀನನ್ನು ಸ್ವಾಧೀನಮಾಡಿಕೊಂಡಿತ್ತು. ಈ ಭೂ ಸ್ವಾಧೀನದ ವಿರುದ್ಧ, ಕೊನೆ ಉಸಿರಿನವರೆಗೂ ಹೋರಾಟದ ಬದುಕನ್ನು ಸವೆಸಿದ ಗಿರಿಯ ಗೌಡರು ಮೊನ್ನೆ ತೀರಿಕೊಂಡಾಗ, ಪದವಿನಲ್ಲಿದ್ದ ಇತರ ಹಿರಿಯ ಜೀವಗಳೆದೆಯಲ್ಲಿ ಸೋಲಿನ ಸಣ್ಣ ಸೆಳಕು. ಆದರೆ ಗಿರಿಯ ಗೌಡರು ಬದುಕಿನಲ್ಲಿ ಒಂದಿಂಚೂ ಸೋತರವರಲ್ಲ.

ಗಿರಿಯ ಗೌಡರಿಗೆ ಇದ್ದುದು ಒಂದೆಕೆರೆಯಷ್ಟು ಜಮೀನು. ಆದರೆ ಅವರ ಚಿತೆಯ ಮುಂದೆ ಸೇರಿದವರು ಮಾತಾಡಿಕೊಳ್ಳುತ್ತಿದ್ದಾಗಲೇ ಗೊತ್ತಾಗಿದ್ದು – ಆ ಜಮೀನಿನಲ್ಲಿಯೂ ಕೆಲವು ತುಣುಕನ್ನು ಪ್ರೀತಿಪಾತ್ರರಿಗೆ ಪುಕ್ಕಟೆ ಕೊಟ್ಟಿದ್ದಾರೆ ಎನ್ನುವುದು. ಉಳಿದಿದ್ದ ಅಂಗೈ ಅಗಲದ ಭೂಮಿಯಲ್ಲಿ ಅವರು ರಾತ್ರಿಯ ಬೆಳದಿಂಗಳಲ್ಲಿ ಬಾವಿಯಿಂದ ನೀರು ಸೇದಿ ಕೃಷಿ ಮಾಡುತ್ತಿದ್ದರು. ಪಂಪ್‌ ಇರಲಿಲ್ಲ. ಉಳುಮೆಯ ಬದಲಿಗೆ ಪಾತಿ ಮಾಡಿ ಭತ್ತ ಬೆಳೆಯುತ್ತಿದ್ದರು. ಪ್ರತಿ ಗಿಡದ ಬೇರುಗಳಿಗೆ ಕೈಯಾರೆ ನೀರುಣಿಸಿ ಬೆಳೆಯುತ್ತಿದ್ದ ತರಕಾರಿಯನ್ನು ಪಕ್ಕದ ಮಾರುಕಟ್ಟೆಗೆ ಕೊಂಡೊಯ್ದು ಮಾರುತ್ತಿದ್ದರು. ಅಷ್ಟು ಪ್ರೀತಿಯಿಂದ ಭೂಮಿಗೆ ಬದುಕು ಸಮರ್ಪಿಸಿಕೊಂಡಿದ್ದ ಅವರು, ಆ ಜಮೀನನ್ನು ಕಳೆದುಕೊಳ್ಳಬೇಕಾಯಿತು.

ಕುಡುಬಿ ಪದವಿನಲ್ಲಿ ಈಗಲೂ ಒಂಬತ್ತು ಕುಟುಂಬಗಳು ಕೃಷಿ ಭೂಮಿಯ ನಿರೀಕ್ಷೆಯಲ್ಲಿವೆ. ಹೋರಾಟದ ಹಾದಿಯಲ್ಲಿರುವ ಆ ಹಿರಿಯರ ಮುಖಗಳಲ್ಲಿ ನಿರಿಗೆಗಳು ಹೆಚ್ಚಾಗಿವೆ. ನಿರೀಕ್ಷೆಯ ಕಂಗಳಲ್ಲಿ ನಿರಾಶೆಯ ಮಂದಬೆಳಕು. ಕಿರಿಯರಿಗೆ, ಹಿರಿಯರ ಹೋರಾಟದ ಮೇಲಿನ ಭರವಸೆ ಮಸುಕು ಮಸುಕು.
‘ಕೃಷಿ ಜಮೀನು ಕೊಡಿ’ ಎಂದು ಗಿರಿಯ ಗೌಡರು ಸಂಸದರು, ಶಾಸಕರನ್ನು ಎಡತಾಕಿದರು. ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ... ಹೀಗೆ ಎಲ್ಲರಿಗೂ ಮನವಿ ಕೊಟ್ಟರು. ಕೈಗಾರಿಕೆಗಳ ವಿರುದ್ಧ ಹೋರಾಡುತ್ತಿದ್ದ ಮುಖಂಡರ ಬಳಿ ಮಾತನಾಡಿದರು. ಭೂಮಿಗಾಗಿ ನಡೆದ ಹೋರಾಟಗಳಲ್ಲಿ ಭಾಗವಹಿಸಿದರು. ದೆಹಲಿಗೂ ತೆರಳಿ ಮಾತನಾಡಿದರು.

ಜಿಲ್ಲಾಧಿಕಾರಿಗಳ  ಕಚೇರಿಗೆ, ಮನೆಗಳಿಗೆ ತೆರಳಿ ಬೇಡಿಕೆಗಳನ್ನು ಸಲ್ಲಿಸಿದರು. ಕೆಲವರು ಭರವಸೆ ನೀಡಿದರು. ಮತ್ತೆ ಕೆಲವರು ಸುಮ್ಮನೇ ಮನವಿ ಸ್ವೀಕರಿಸಿ ಹೊರಟುಹೋದರು. ಅವರ ಹೋರಾಟ ಹೈಕೋರ್ಟ್‌ ಮೆಟ್ಟಿಲೇರಿತ್ತು. ಲೋಕಾಯುಕ್ತ ತನಿಖೆಯೂ ನಡೆಯಿತು.

ಭೂಮಿಗಾಗಿ ನಡೆಸಿದ ಹೋರಾಟದ ಮಾತಿರಲಿ; ಅದರ ಹೊರತಾಗಿಯೂ ಗಿರಿಯ ಗೌಡರು ಸಂತನಂತೆ ಬಾಳಿದ್ದರು. ಅವರ ಸಮುದಾಯದಲ್ಲಿ ‘ಗಾಡಿಯಾ’ ಎಂಬುದು ಧಾರ್ಮಿಕ ನೇತೃತ್ವದ ಪದವಿ. ಕುಟುಂಬದ ದೈವಾರಾಧನೆ, ಕುಡುಬಿ ಸಮುದಾಯದ ಆಚರಣೆ, ಕಟ್ಟುಪಾಡು ವಿಧಿಗಳ ಉಸ್ತುವಾರಿ ನೋಡುವ ಜವಾಬ್ದಾರಿ ಅದು. ಆದರೆ ಧಾರ್ಮಿಕ ಆಚರಣೆಯ ಹಿಂದೆ ಆಧ್ಯಾತ್ಮಿಕ ಆಶಯವಿಲ್ಲದೇ ಇದ್ದರೆ ಅದು ಕೇವಲ ನಾಟಕವಾಗುತ್ತದೆ ಎಂದು ನಂಬಿದ್ದ ಅವರು, ಈಗಿನ ತಲೆಮಾರಿಗೆ ಅಧ್ಯಾತ್ಮಕ್ಕಿಂತ ಆಚರಣೆಯೇ ಇಷ್ಟವಾಗುತ್ತಿರುವುದನ್ನು ಕಂಡು ಬೇಸರಗೊಂಡಿದ್ದರು. ಇಪ್ಪತ್ತು ವರ್ಷಗಳ ಹಿಂದೆ ‘ನನಗೆ ಈ ಪದವಿ ಬೇಡ’ ಎಂದು ನಿರಾಕರಿಸಿದ್ದರು.  ಪ್ರತಿಯೊಬ್ಬ ವ್ಯಕ್ತಿಯೂ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಬಯಸುತ್ತಿದ್ದ ಅವರು, ಭೂಮಿಯನ್ನು ಉಳಿಸಿಕೊಳ್ಳುವ ಅಥವಾ ಬಿಟ್ಟುಕೊಡುವ ಕುರಿತಂತೆ ತಮ್ಮ ಅಭಿಪ್ರಾಯವನ್ನು ತನ್ನವರ ಮೇಲೆ ಹೇರಲು ಹೋಗಿರಲಿಲ್ಲ. ನಾಯಕತ್ವ, ಪದವಿ, ಮಹತ್ವಾಕಾಂಕ್ಷೆಯನ್ನು ನಿರಾಕರಿಸಿ ಕಟ್ಟಿಕೊಂಡ ತುಂಬು ಬದುಕು ಅವರದ್ದು.  ‘ಮಾಡುವ ಕೆಲಸದ ಯಶಸ್ಸನ್ನೂ ಬಯಸದಷ್ಟು ನಿರ್ಲಿಪ್ತತೆ’ ಜೀವನದಲ್ಲಿ ಇರಬೇಕು ಎಂಬುದು ಶ್ರೀ ಅರವಿಂದೋ ಅವರ ಆಶಯ. ಆ ಆಶಯವನ್ನು ವಾಸ್ತವವಾಗಿ ಬಾಳಿದವರು ಗಿರಿಯ ಗೌಡರು. ಭೂಮಿ ಕಿತ್ತುಕೊಂಡವರ ವಿರುದ್ಧವೂ ಸಿಟ್ಟಿನ, ಹತಾಶೆಯ ಮಾತುಗಳನ್ನಾಡಿದವರಲ್ಲ.

ಕೃಷಿ ಭೂಮಿ ಕಳೆದುಕೊಂಡ ಬಳಿಕ, ಮನೆ ಮನೆ ಸುತ್ತಿ ಕರಿಬೇವಿನ ಸೊಪ್ಪನ್ನು ಕೊಯ್ದು, ಸೆಂಟ್ರಲ್‌ ಮಾರುಕಟ್ಟೆಗೆ ಹಾಕಿ, ಬರುವ ಪುಡಿಗಾಸಿನಲ್ಲಿ ಬಾಳುವೆ ಮಾಡಿದರು. ಅವರ ಮಕ್ಕಳೂ ತಮ್ಮಿಂದಾದ ಜೀವನೋಪಾಯ ಕಂಡುಕೊಂಡು ಬಾಳುತ್ತಿದ್ದರು. ಪತ್ನಿ ಇಲ್ಲದೇ ಇದ್ದುದರಿಂದ ಬಹುತೇಕ ಏಕಾಂಗಿ ಜೀವನವೇ ಅವರದಾಗಿತ್ತು. ಸಾಕ್ಷರತೆ ಆಂದೋಲನದಲ್ಲಿ ಸಹಿ ಹಾಕುವುದನ್ನು ಮಾತ್ರ ಕಲಿತಿದ್ದ ಗಿರಿಯ ಗೌಡರು ಬ್ಯಾಂಕ್‌ನಲ್ಲಿ ಸಾಲ ಪಡೆದಿದ್ದರು. ಬ್ಯಾಂಕ್‌ ಪತ್ರಗಳಿಗೆ ಸಹಿ ಪಡೆಯುವ ನೆಪದಲ್ಲಿ ಅವರ ಖಾತೆಗೆ ಬೃಹತ್‌ ಮೊತ್ತವೊಂದನ್ನು ಜಮೆ ಮಾಡಲಾಯಿತು. ವಶಪಡಿಸಿಕೊಂಡ ಕೃಷಿ ಭೂಮಿಗಾಗಿ ನೀಡಿದ ಪರಿಹಾರ ಹಣ ಅದೆಂದು ಗೊತ್ತಾದ ಕೂಡಲೇ ಗಿರಿಯ ಗೌಡರು ಅದನ್ನು ನಿರಾಕರಿಸಿದರು. ಎಲ್ಲಿಯವರೆಗೆ ನಿರಾಕರಿಸಿದರು ಎಂದರೆ – ಸ್ವಲ್ಪ ಸಮಯದ ಹಿಂದೆ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ ನಡೆದಾಗಲೂ ಅದನ್ನು ವಿತ್‌ಡ್ರಾ ಮಾಡಲು ಅವರು ಒಪ್ಪಲಿಲ್ಲ. ‘ಭೂಮಿ ಕೊಡುವುದಿಲ್ಲ ಎಂದು ದೈವದ ಮುಂದೆ ಪ್ರಮಾಣ ಮಾಡಿದ್ದೇನೆ. ಅವರು ಕಿತ್ತುಕೊಂಡು, ಬೃಹತ್‌ ಬಂಗಲೆಗಳನ್ನು, ದೈವಸ್ಥಾನಗಳನ್ನು, ನಾಗರ ಕಟ್ಟೆಗಳನ್ನು ಕಟ್ಟಿಕೊಂಡರು. ಹಾಗಂತ ನಾನು ಪ್ರಮಾಣವನ್ನು ತಪ್ಪಿ ಹಣವನ್ನು ಸ್ಪರ್ಶಿಸಲಾರೆ’ ಎನ್ನುವುದು ಅವರ ನಿಲುವಾಗಿತ್ತು.

ಸುಮಾರು ಎಂಬತ್ತು ವರ್ಷದ ಹಣ್ಣು ಹಣ್ಣು ಮುದುಕ ಕರಿಬೇವು ಸೊಪ್ಪಿನ ಕಟ್ಟುಗಳನ್ನು ಹೊತ್ತು ಜೀವನ ಸಾಗಿಸುತ್ತಿದ್ದರು. ಅವರನ್ನು ನೋಡಿದ ಯಾರಿಗೇ ಆದರೂ ಆಸೆಯನ್ನು ಗೆಲ್ಲುವುದು ಇಷ್ಟು ಸುಲಭವೇ... ಎಂದು ಅಚ್ಚರಿಯಾಗಿಬಿಡುತ್ತಿತ್ತು. ಮೌಲ್ಯಗಳನ್ನು ಬಾಳಿ ಗಿರಿಯ ಗೌಡರು ತೆರಳಿದರು. ಗಿರಿಯ ಗೌಡರ ಬದುಕು ಶಿವರಾಮ ಕಾರಂತರ ‘ಚೋಮನ ದುಡಿ’ ಕಾದಂಬರಿಯ ಚೋಮನನ್ನು ನೆನಪಿಸುತ್ತದೆ. ಕಾರಂತರ ಚೋಮನಿಗೆ ಭೂಮಿ ಇರಲಿಲ್ಲ. ಇಂದಿನ ಚೋಮನಿಗೆ ಭೂಮಿಯಿದ್ದೂ ಉಳಿಸಿಕೊಳ್ಳಲು ಹೋರಾಡುವ ಸ್ಥಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT