ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂದಿ ಆಯುವ ಚಿಣ್ಣರ ಬದುಕಿನ ಛಿದ್ರ ಚಿತ್ರಗಳು

ಪಿಸುಗುಡುವ ಚಿತ್ರಪಟ
Last Updated 4 ಮಾರ್ಚ್ 2017, 19:30 IST
ಅಕ್ಷರ ಗಾತ್ರ

–ಕೇಖ್ರಿಜಾಜೊ ಮಿಯಾಚಿಒ ಅಕಾ ಜಾಜೊ

***

ನಾನು ಚಿಕ್ಕವನಾಗಿದ್ದಾಗ ಚಿತ್ರಗಳನ್ನು ಬಿಡಿಸಿ ಅವುಗಳನ್ನು ಸಹಪಾಠಿಗಳು ಮತ್ತು ಶಿಕ್ಷಕರಿಗೆ ಐವತ್ತು ಪೈಸೆಯಿಂದ ಎರಡು ರೂಪಾಯಿಗಳವರೆಗೆ ಬೆಲೆ ನಿಗದಿಪಡಿಸಿ ಮಾರುತ್ತಿದ್ದೆ. ಹೀಗೆ ಕಲೆಯ ಸಖ್ಯ ಬೆಳೆಸಿಕೊಂಡ ನಾನು, ಛಾಯಾಗ್ರಹಣವನ್ನು ವೃತ್ತಿಯನ್ನಾಗಿ ಸ್ವೀಕರಿಸಿದ್ದು ಕಂಪ್ಯೂಟರ್‌ ಅಪ್ಲಿಕೇಷನ್‌ ವಿಷಯದಲ್ಲಿ ಪದವಿ ಮುಗಿಸಿದ ಮೇಲೆಯೇ.

ಅಪ್ಪ ನನಗೊಂದು ಪಾಯಿಂಟ್‌ ಆ್ಯಂಡ್‌ ಶೂಟ್‌ ಕ್ಯಾಮೆರಾ ತಂದುಕೊಟ್ಟಿದ್ದರು. ಆ ಕ್ಯಾಮೆರಾದಲ್ಲಿ ಚಿತ್ರಗಳನ್ನು ತೆಗೆಯುತ್ತಾ ಛಾಯಾಗ್ರಹಣದಲ್ಲಿ ಆಸಕ್ತಿ ಹುಟ್ಟಿಕೊಂಡಿತು. ಇದೇ ನನ್ನ ಅಭಿವ್ಯಕ್ತಿಗೆ ಸೂಕ್ತವಾದ ಮಾಧ್ಯಮ ಎಂದೂ ತಿಳಿಯಿತು. ಅದಾದ ನಂತರ ನಾನು ತಿರುಗಿ ನೋಡಿದ್ದೇ ಇಲ್ಲ.

ಮಾದಕ ಪದಾರ್ಥ ಸೇವನೆಯ ಚಟಕ್ಕೆ ಬಲಿಯಾಗಿರುವ ಬೀದಿ ಬದಿಯ ಚಿಂದಿ ಆಯುವ ಮಕ್ಕಳ ಈ ಚಿತ್ರಗಳನ್ನು ತೆಗೆಯಲು ಆರಂಭಿಸಿದ್ದು 2013ರಲ್ಲಿ. ನಾನು ಕೆಲಸ ಮಾಡುತ್ತಿರುವ ಪತ್ರಿಕೆಯಲ್ಲಿ ಪ್ರಕಟವಾಗಬೇಕಾಗಿದ್ದ ಒಂದು ಲೇಖನಕ್ಕಾಗಿ ಈ ಚಿತ್ರಗಳನ್ನು ತೆಗೆಯಲು ಆರಂಭಿಸಿದೆ. ಆ ಲೇಖನ ಪ್ರಕಟವಾಗಲೇ ಇಲ್ಲ. ಆದರೆ ಅದಕ್ಕಾಗಿ ಚಿತ್ರಗಳನ್ನು ತೆಗೆಯಲು ಹೋದಾಗ ಅಲ್ಲಿನ ಮಕ್ಕಳ ಬದುಕು ನನ್ನನ್ನು ದಿಗ್ಭ್ರಮೆಗೊಳಿಸಿತು. ಮನಸನ್ನು ಕಲುಕಿತು. ಅದನ್ನು ಒಂದು ಲೇಖನದ ಒಂದಿಷ್ಟು ಚಿತ್ರಗಳನ್ನಾಗಿಸಿ ಮರೆತುಬಿಡಲು ಸಾಧ್ಯವಾಗದಷ್ಟು ಕಾಡತೊಡಗಿತು. ಅಂಥ ಮಕ್ಕಳು ಇರುವ ಬೇರೆ ಬೇರೆ ಸ್ಥಳಗಳಿಗೆ ಭೇಟಿ ನೀಡಿ ಗಮನಿಸತೊಡಗಿದೆ. ಅವರಲ್ಲಿ ಬಹುತೇಕ ಮಕ್ಕಳು ರೈಲು ನಿಲ್ದಾಣದಲ್ಲಿ ಬರುವ ರೈಲುಗಳಿಂದ ಚೆಲ್ಲುವ ಚಿಂದಿಯನ್ನು ಆಯುವವರು. ಅವರು ಧರಿಸಿರುವ ಬಟ್ಟೆಯೂ ಅವರು ಆಯ್ದ ಚಿಂದಿಗಿಂತ ಭಿನ್ನವೇನೂ ಆಗಿರುವುದಿಲ್ಲ.

ಚಿಂದಿ ಆಯುವುದನ್ನು ತಮ್ಮ ಕೆಲಸವಾಗಿಸಿಕೊಂಡ ಮಕ್ಕಳು – ಖಾಲಿ ಬಾಟಲಿ, ಟಿನ್‌ ಸ್ಟ್ಕ್ರಾಪ್‌ಗಳಂಥ ತ್ಯಾಜ್ಯಗಳನ್ನು ಸಂಗ್ರಹಿಸಿ ದಿನಕ್ಕೆ 150–200 ರೂಪಾಯಿ ಗಳಿಸುತ್ತಾರೆ. ಈ ಹಣ ಮಾದಕ ಪದಾರ್ಥಗಳನ್ನು ಕೊಳ್ಳುವುದಕ್ಕಾಗಿ ಖರ್ಚಾಗುತ್ತದೆ. ಈ ಮಕ್ಕಳ ಜೊತೆ ಮಾತನಾಡುವಾಗ ನಾವು ಜಾಗರೂಕವಾಗಿರಬೇಕು. ಯಾಕೆಂದರೆ, ಅಂಥ ಬಹುತೇಕರು ಇಡೀ ದಿನ ಮಾದಕ ಪದಾರ್ಥ ಸೇವಿಸಿ ಮತ್ತಿನಲ್ಲಿಯೇ ಇರುತ್ತಾರೆ.

ಈ ಚಿತ್ರಸರಣಿ ರೂಪಿಸುತ್ತಿದ್ದ ಸಮಯದಲ್ಲಿ ಎರಡು ಬಾರಿ ನಾನು ಅವರಿಂದ ಬೆದರಿಕೆಗೆ ಒಳಗಾಗಿದ್ದೇನೆ. ಒಂದು ಸಲ ಒಬ್ಬ ಹುಡುಗ ಸೀಸದ ಕಡ್ಡಿಯಿಂದ ಚುಚ್ಚಲು ಬಂದಿದ್ದ. ಇನ್ನೊಮ್ಮೆ ಬ್ಲೇಡ್‌ ದಾಳಿಯಿಂದ ಸ್ವಲ್ಪದರಲ್ಲಿ ತಪ್ಪಿಸಿಕೊಂಡಿದ್ದೆ. ಛಾಯಾಚಿತ್ರ ಪತ್ರಿಕೋದ್ಯಮದಲ್ಲಿ ಇವೆಲ್ಲ ಸಾಮಾನ್ಯ ಸಂಗತಿಯೇ. ಅದರಲ್ಲಿಯೂ ಭಿನ್ನ ವಸ್ತುಗಳ ಬೆನ್ನುಬೀಳುವ ನನ್ನಂಥವರಿಗಂತೂ ಈ ರೀತಿಯ ಅಪಾಯಗಳು ವೃತ್ತಿಜೀವನದ ಭಾಗವೇ ಆಗಿಬಿಟ್ಟಿರುತ್ತದೆ. 

ಇಲ್ಲಿನ ಬಹುತೇಕ ಚಿತ್ರಗಳು ದೆಹಲಿಯ ಚಾಂದಿನಿ ಚೌಕ ರೈಲು ನಿಲ್ದಾಣದಲ್ಲಿ ತೆಗೆದಿದ್ದು. ಅದರಿಂದ ಬರೀ ಒಂದು ಕಿಲೋಮೀಟರ್‌ ಅಂತರದಲ್ಲಿ ಅವರ ವ್ಯಾಪಾರತಾಣವಿದೆ. ಅಲ್ಲಿ ಚಿಂದಿವಸ್ತು ಖರೀದಿ ಮಾಡುವ ಹತ್ತು ಹನ್ನೆರಡು ಅಂಗಡಿಗಳಿವೆ. ಮಕ್ಕಳು ಅಲ್ಲಿಗೆ ಹೋಗಿ ತಾವು ಸಂಗ್ರಹಿಸಿದ ಬಾಟಲಿಗಳನ್ನು ಮಾರುತ್ತಾರೆ. ಅವರಲ್ಲಿ ಹೆಚ್ಚಿನವರು ಯಾವ್ಯಾವುದೋ ಸುತ್ತಮುತ್ತಲಿನ ಹಳ್ಳಿಗಳಿಂದ ಮನೆಬಿಟ್ಟು ಓಡಿಬಂದವರು.  ಸ್ಕೂಲಿಗೆ ಹೋಗುವರಂತೂ ಇಲ್ಲವೇ ಇಲ್ಲ. ಯಾವ್ಯಾವುದೋ ಬೀದಿಗಳಲ್ಲಿ ಮಲಗಿರುತ್ತಾರೆ.

ಸ್ನೇಹಿತರೆದುರು ಪೌರುಷ ತೋರಿಸಿಕೊಳ್ಳುವುದಕ್ಕಾಗಿ, ಮನಸ್ಸಿನ ನೋವು ಹಾಗೂ ಕುಟುಂಬದ ಅಗಲಿಕೆಯ ಬೇಸರ ಮರೆಯಲು, ಸಹವರ್ತಿಗಳ ಒತ್ತಡ – ಹೀಗೆ ಹಲವು ಕಾರಣಗಳಿಂದ ಅವರು ಚಿಕ್ಕ ವಯಸ್ಸಿನಲ್ಲಿಯೇ ಮಾದಕ ಪದಾರ್ಥಗಳ ಸೇವನೆಯ ಚಟಕ್ಕೆ ಬಲಿಯಾಗುತ್ತಾರೆ. ಪತ್ರಿಕೆಯ ಕೆಲಸದ ನಡುವೆ ಬಿಡುವು ಸಿಕ್ಕಾಗಲೆಲ್ಲ ನಾನು ಕ್ಯಾಮೆರಾ ಹಿಡಿದುಕೊಂಡು ಓಡುತ್ತಿದ್ದದ್ದು ಈ ಮಕ್ಕಳು ಇದ್ದ ಬೀದಿಗಳಿಗೆ.   ಹೀಗೆ ನನ್ನನ್ನು ಇನ್ನಿಲ್ಲದಂತೆ ಕಾಡಿದ–ಕಾಡುತ್ತಿರುವ ಈ ಯೋಜನೆ ಆರಂಭವಾಗಿ ಈಗ ಮೂರು ವರ್ಷಗಳು ಕಳೆದುಹೋಗಿವೆ. ಆದರೂ ನನಗಿನ್ನೂ ತೆಗೆಯಲು ಸಾಕಷ್ಟು ಚಿತ್ರಗಳು ಇವೆ. ಅರಿಯಲು ಸಾಕಷ್ಟು ಸಂಗತಿಗಳೂ ಇವೆ.

ಒಂದಿಷ್ಟು ದಿನಗಳ ಕಾಲ ಈ ಚಿತ್ರಸರಣಿಯನ್ನು ಮುಂದುವರಿಸುತ್ತಿದ್ದ ಹಾಗೆಯೇ ಅದು ಒಂದು ಅಸೈನ್‌ಮೆಂಟ್‌ನ ಮಟ್ಟದಿಂದ ಇಳಿದು ನನಗೆ ಆಪ್ತವಾಗುತ್ತಾ ಹೋಯಿತು. ನನ್ನ ಮನಸ್ಸಿನಾಳದಲ್ಲಿ ಭಾವನಾತ್ಮಕವಾಗಿ ಬೆಳೆಯುತ್ತ ಹೋಯಿತು. ಮಾನವೀಯ ಭಾವನೆಗಳೇ ಈ ಚಿತ್ರಸರಣಿ ಆತ್ಮ. ನನ್ನ ಪ್ರಕಾರ ಕಪ್ಪು–ಬಿಳುಪು ಚಿತ್ರಗಳು ವರ್ಣಮಯ ಚಿತ್ರಗಳಿಗಿಂತ ಹೆಚ್ಚು ಸಶಕ್ತವಾಗಿ ಭಾವನೆಗಳನ್ನು ಹಿಡಿದಿಡಬಲ್ಲವು ಮತ್ತು ಆ ಭಾವವನ್ನು ಅಷ್ಟೇ ಪರಿಣಾಮಕಾರಿಯಾಗಿ ನೋಡುಗರಿಗೆ ದಾಟಿಸಬಲ್ಲವು. ಬಣ್ಣಗಳನ್ನು ತುಂಬ ಜಾಣತನದಿಂದ ಬಳಕೆ ಮಾಡದಿದ್ದರೆ ಅದು ಚಿತ್ರದ ಅಂದಕೆಡಿಸಿಬಿಡುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ ಈ ಚಿತ್ರಸರಣಿಯಲ್ಲಿ ಕಪ್ಪು–ಬಿಳುಪು ಪ್ರಕಾರವನ್ನೇ ಬಳಸಿಕೊಳ್ಳಲು ನಿರ್ಧರಿಸಿದೆ.

ಹೀಗೆ ಒಂದು ಹಂತದ ಆಳದಲ್ಲಿ ಇಳಿಯುತ್ತಾ ಹೋದ ಹಾಗೆ ನನ್ನ ಉದ್ದೇಶವೂ ಸ್ಪಷ್ಟವಾಗುತ್ತಾ ಹೋಯಿತು. ಬೀದಿ ಮಕ್ಕಳ ಬದುಕನ್ನು ಹತ್ತಿರದಿಂದ ಅರಿತುಕೊಳ್ಳಬೇಕು ಎನ್ನುವುದು ನನ್ನ ವೈಯಕ್ತಿಕ ಆಸೆಯೂ ಆಗಿತ್ತು. ಅವರ ಬದುಕನ್ನು – ಚಟುವಟಿಕೆಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು, ಅವುಗಳ ಮೂಲಕ ನೋಡುಗರಲ್ಲಿ ಬೀದಿ ಮಕ್ಕಳನ್ನು ಹೊಸ ರೀತಿಯಿಂದ ನೋಡುವ ಹಾಗೆ ಮಾಡಬೇಕು ಮತ್ತು ಅವರ ಬಗ್ಗೆ ಸಹಾನುಭೂತಿ ಬೆಳೆಸಿಕೊಳ್ಳಲು ಪ್ರೇರಣೆ ನೀಡಬೇಕು ಎನ್ನುವುದು ನನ್ನ ಚಿತ್ರಸರಣಿಯ ಮುಖ್ಯ ಉದ್ದೇಶ. ಯಾಕೆಂದರೆ ಇಲ್ಲಿನ ಬಹುತೇಕ ಮಕ್ಕಳು ಸ್ವಂತ ಇಚ್ಛೆಯಿಂದ ಈ ಬದುಕನ್ನು ಆಯ್ದುಕೊಂಡವರಲ್ಲ, ಸಂದರ್ಭಗಳು ಮತ್ತು ಹಲವು ಅನಿವಾರ್ಯ ಕಾರಣಗಳು ಅವರನ್ನು ಬಲಿಪಶುಗಳನ್ನಾಗಿಸಿವೆ.

ಅವರಲ್ಲಿ ಕನಸುಗಳೇ ಇರುವುದಿಲ್ಲ ಎನ್ನುವುದೂ ತಪ್ಪು. ಈ ಚಿತ್ರಸರಣಿ ಮಾಡುವಾಗ ನನಗೆ ಒಬ್ಬ ಹುಡುಗ ಪರಿಚಯವಾದ. ಅವನಿಗೆ 12 ವರ್ಷ ಇರಬಹುದು. ಅವನು ಉಳಿದ ಹುಡುಗರಿಗಿಂತ ತುಂಬ ಭಿನ್ನವಾಗಿದ್ದಾನೆ, ಪ್ರಬುದ್ಧವಾದ ದೃಷ್ಟಿಕೋನ ಹೊಂದಿದ್ದಾನೆ. ಒಂದಲ್ಲ ಒಂದು ದಿನ ಅಂಗಡಿ ತೆಗೆದು, ಅದರ ಮೂಲಕ ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಬೇಕು ಎನ್ನುವುದು ಅವನ ಹಂಬಲ. ತನ್ನ ಕನಸನ್ನು ನನಸಾಗಿಸಿಕೊಳ್ಳಲಿಕ್ಕಾಗಿಯೇ ಅವನು ಚಿಂದಿ ಆಯ್ದು ಮಾರಾಟ ಮಾಡಿ ಬಂದ ಹಣವನ್ನು ಕೂಡಿಡುತ್ತಿದ್ದಾನೆ. ಅವನು ಮಾದಕ ಪದಾರ್ಥಗಳನ್ನೂ ಸೇವಿಸುವುದಿಲ್ಲ. ತನ್ನದೇ ವಯಸ್ಸಿನ ಉಳಿದ ಹುಡುಗರ ದಾರುಣ ಬದುಕಿನ ವಾಸ್ತವದ ನಡುವೆಯೂ ಜೀವನೋತ್ಸಾಹ ಮತ್ತು ಛಲವನ್ನು ಉಳಿಸಿಕೊಂಡಿರುವ ಅವನು ನನಗೆ ಯಾವತ್ತಿಗೂ ಅಚ್ಚರಿಯಾಗಿಯೇ ಕಾಣುತ್ತಾನೆ. ಇವನ ಹಾಗೆಯೇ ಇನ್ನೂ ಹಲವರು ತಮ್ಮ ಬದುಕಿನ ದಾರುಣತೆಯ ನಡುವೆಯೂ ನೆಮ್ಮದಿಯ ನಾಳೆಗಳ ಕನಸನ್ನು ಬಚ್ಚಿಟ್ಟುಕೊಂಡವರಿದ್ದಾರೆ. ಅವರೆಲ್ಲರಿಗೂ ಈ ಹುಡುಗ ಸ್ಫೂರ್ತಿಯಾಗಲಿ. ಇಲ್ಲಿನ ಎಲ್ಲ ಮಕ್ಕಳಿಗೂ ಒಳ್ಳೆಯ ನಾಳೆಗಳು ಸಿಗಲಿ ಎಂದು ಪ್ರತಿ ಸಲ ಛಾಯಾಚಿತ್ರ ತೆಗೆಯುವಾಗಲೂ ನಾನು ಮನಸಾರೆ ಪ್ರಾರ್ಥಿಸುತ್ತೇನೆ.

**

ಕೇಖ್ರಿಜಾಜೊ ಮಿಯಾಚಿಒ ಅಕಾ ಜಾಜೊ ನಾಗಾಲ್ಯಾಂಡ್‌ನ ಕೊಹಿಮಾದವರು. ಪ್ರಸ್ತುತ, ದೆಹಲಿಯ ನಿಯಕಾಲಿಕೆಯೊಂದರಲ್ಲಿ ಹಿರಿಯ ಛಾಯಾಗ್ರಾಹಕರು. ಸೌಂದರ್ಯಾತ್ಮಕ ಅಂಶಗಳಿಗಿಂತಲೂ ಬದುಕಿನ ಕಟು ವಾಸ್ತವಗಳೇ ಅವರ ಚಿತ್ರಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡು ನೋಡುಗರನ್ನು ತಲ್ಲಣಗೊಳಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT