ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿಯ ಶೇಷಾದ್ರಿ ಮೇಷ್ಟರ ಜೀವನಪ್ರೀತಿಯ ಅರ್ಥಶಾಸ್ತ್ರ

Last Updated 4 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಇಪ್ಪತ್ತೊಂಬತ್ತು ವರ್ಷಗಳಿಂದ ನಿರಂತರವಾಗಿ ದೇಹವನ್ನು ತಿನ್ನುತ್ತಿರುವ ಮೂಳೆ ಕ್ಯಾನ್ಸರ್‌ನೊಂದಿಗೆ ಶಾಂತಿಯುತ ಸಹಜೀವನ ನಡೆಸುತ್ತಿರುವ ಬಳ್ಳಾರಿಯ ಪ್ರೊ.ಬಿ. ಶೇಷಾದ್ರಿ ಅವರಿಗೆ ಈಗ ಎಪ್ಪತ್ತೊಂಬತ್ತು.

‘ನಿಮಗೆ ಸೆವೆಂಟಿ ನೈನು, ಡಿಸೀಸಿಗೆ ಟ್ವೆಂಟಿ ನೈನು. ಆಕಸ್ಮಿಕವಾಗಿ ನೀವು ಇನ್ನೂ ಬದುಕಿದ್ದೀರಿ.. ಈಗ ನೀವಿರುವ ಸ್ಥಿತಿಯಲ್ಲೇ ಖುಷಿಯಾಗಿದ್ದುಬಿಡಿ. ಹಾಗೇ ಔಷಧಿಯನ್ನೂ ತೆಗೆದುಕೊಳ್ಳುತ್ತಿರಿ’ ಎಂದು ವೈದ್ಯರು ಇತ್ತೀಚೆಗಷ್ಟೇ ಅವರಿಗೆ ಹೇಳಿ ಕಳಿಸಿದ್ದಾರೆ.

ಕ್ಯಾನ್ಸರ್‌ ಇದೆ ಎಂದು ಅವರಿಗೆ ದೊಡ್ಡ ವಿಷಾದವೇನಿಲ್ಲ. ಆದರೆ ಅದೊಂದೇ ಕಾರಣದಿಂದ, ಇಳಿವಯಸ್ಸಿನಲ್ಲೂ ಸತತ ಓದು, ಸಂಶೋಧನೆ, ಬರಹದಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು ಎಂಬ ಸಮಾಧಾನವಿದೆ. ಕ್ಯಾನ್ಸರ್‌ ಪತ್ತೆಯಾದ ವೇಳೆಗೆ ಅವರು ಅದರ ಮೂರನೇ ಹಂತವನ್ನು ತಲುಪಿಬಿಟ್ಟಿದ್ದರು. ಅವರ ಆಯಸ್ಸು ಇನ್ನು ಹದಿನೆಂಟು ತಿಂಗಳು ಮಾತ್ರ ಎಂಬುದು ವೈದ್ಯರ ಖಚಿತ ಲೆಕ್ಕಾಚಾರವಾಗಿತ್ತು. ಆದರೆ ಅದು ತಲೆಕೆಳಗಾಗಿದೆ.
ಮನೆಗೆ ಬಂದವರೊಂದಿಗೆ ಅವರು, ‘ಆಕಸ್ಮಿಕ ಎಂಬಂತೆ ನಾನು ಇನ್ನೂ ಬದುಕಿದ್ದೇನೆ’ ಎಂದೇ ಮಾತು ಆರಂಭಿಸುತ್ತಾರೆ.

‘ನಿಮಗೆ ಮುಖ್ಯ ಔಷಧ ಎಂದರೆ ಅಧ್ಯಯನವೇ. ನೀವು ಕಲಿಯುತ್ತಿರುವಷ್ಟೂ ದಿನ ಬದುಕಿರುತ್ತೀರಿ ಎಂದು ವೈದ್ಯರು ನನ್ನ ಬದುಕನ್ನು ಒಂದು ಹಂತಕ್ಕೆ ತಂದು ನಿಲ್ಲಿಸಿದ್ದಾರೆ, ಹೀಗಾಗಿ ದಿನದ 24 ಗಂಟೆಯೂ ಅಧ್ಯಯನ ಮಾಡುತ್ತಿರುತ್ತೇನೆ’ ಎಂದು ಉದ್ವೇಗವಿಲ್ಲದ ದನಿಯಲ್ಲಿ ಹೇಳುತ್ತಾ ನೀರು ಗುಟುಕರಿಸುತ್ತಾರೆ. ಆಗಾಗ್ಗೆ ನೀರು ಕುಡಿಯದಿದ್ದರೆ ಅವರ ಗಂಟಲಿನಲ್ಲಿರುವ ಪಸೆಯಷ್ಟೇ ಆರುವುದಿಲ್ಲ; ಅಲ್ಲಿನ ಜೀವಕೋಶಗಳೂ ಜೀವ ಕಳೆದುಕೊಳ್ಳುತ್ತವೆ.

ಅವರಿಗೆ ಜೊತೆಯಾಗಿರುವ ಕ್ಯಾನ್ಸರ್‌ನ ಕುರಿತ ಪ್ರಸ್ತಾಪದ ಮೂಲಕವೇ ಅವರ ವಿದ್ಯಾರ್ಥಿಗಳು ಹಾಗೂ ಬಲ್ಲವರು ಅವರ ಪರಿಚಯವನ್ನು ಆರಂಭಿಸುತ್ತಾರೆ. ನಂತರ ಅವರ ಸಾಧನೆಯ ವಿವರಗಳು ತೆರೆದುಕೊಳ್ಳುತ್ತವೆ. ಸಣ್ಣ, ಪುಟ್ಟ ಕಾಯಿಲೆಗಳಿಗೂ ಜೀವಭಯದಿಂದ ನರಳುವ ಹಲವು ಹಿರಿ–ಕಿರಿಯರಿಗೆ ಅವರ ಅಸ್ತಿತ್ವವೇ ಒಂದು ಜೀವಂತ ಔಷಧಿಯ ಪಾಠದಂತೆ ಕಾಣುತ್ತದೆ.

ವೈದ್ಯಲೋಕಕ್ಕೇ ಸವಾಲಾಗಿರುವ ಅವರು, ಹೈದರಾಬಾದ್‌ ಕರ್ನಾಟಕ ಪ್ರದೇಶದ ಸಾಮುದಾಯಿಕ ಶಕ್ತಿಯಾಗಿಯೂ ಉಳಿದಿದ್ದಾರೆ ಎಂಬುದು ಅವರ ವ್ಯಕ್ತಿತ್ವದ ಇನ್ನೊಂದು ಬಹುಮುಖ್ಯ ಆಯಾಮ, ಬಾಲ್ಯದಲ್ಲಿ ಓದಿನಲ್ಲಿ ಆಸಕ್ತಿಯೇ ಇಲ್ಲದಿದ್ದ ಶೇಷಾದ್ರಿ, ‘ಮದ್ರಾಸ್‌ ಎಸ್‌ಎಸ್‌ಇ’ ಪರೀಕ್ಷೆ ಪಾಸಾದಾಗ, ಹೊಸಪೇಟೆಯ ಮುನ್ಸಿಪಲ್‌ ಹೈಸ್ಕೂಲಿನ ಇತಿಹಾಸದಲ್ಲೇ ಅತ್ಯಂತ ಕಡಿಮೆ ಅಂಕ ಪಡೆದ ವಿದ್ಯಾರ್ಥಿಯಾಗಿದ್ದರು. ಮುನಿರಾಬಾದ್‌ನ ಸಾಲಾರ್‌ಜಂಗ್‌ ಸಕ್ಕರೆ ಕಾರ್ಖಾನೆಯಲ್ಲಿ ಕೆಲ ಕಾಲ ಕೆಲಸ ಮಾಡಿ ನಂತರ ಬಂದಿದ್ದು ಬಳ್ಳಾರಿಯ ವೀರಶೈವ ಕಾಲೇಜಿಗೆ. ಮೈಸೂರು ವಿಶ್ವವಿದ್ಯಾಲಯದಲ್ಲಿ (ಆಗ ಬಳ್ಳಾರಿ ಜಿಲ್ಲೆ ಮೈಸೂರು ವಿವಿ ವ್ಯಾಪ್ತಿಯಲ್ಲಿತ್ತು) ಎರಡು ವರ್ಷದ ಬಿ.ಎ ಪದವಿ ಓದುತ್ತಿದ್ದಾಗಲೇ ಅವರಿಗೆ ಮದುವೆಯಾಗಿತ್ತು.

ಹುಬ್ಬಳಿಯಲ್ಲಿ ‘ಮೈಸೂರು ಸ್ಟೇಟ್‌ ಎಲೆಕ್ಟ್ರಿಸಿಟಿ ಬೋರ್ಡ್‌’ ಕಚೇರಿಯಲ್ಲಿ ಸಾಮಾನ್ಯ ಫಸ್ಟ್ ಗ್ರೇಡ್‌ ಅಕೌಂಟ್ಸ್‌ ಕ್ಲರ್ಕ್‌ ಆಗಿ ಒಂದು ದಶಕ ಕೆಲಸ ಮಾಡುವ ಅವಧಿಯಲ್ಲೇ ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ದೂರಶಿಕ್ಷಣದ ಮೂಲಕವೇ ಸ್ನಾತಕೋತ್ತರ ಇಂಗ್ಲಿಷ್ ಮತ್ತು ಅರ್ಥಶಾಸ್ತ್ರದ ಪದವಿಯನ್ನೂ ಪೂರೈಸಿದರು. ಬಳ್ಳಾರಿಯಲ್ಲಿ ತಾವು ಓದಿದ ವೀರಶೈವ ಕಾಲೇಜಿನಲ್ಲೇ ಅರ್ಥಶಾಸ್ತ್ರದ ಜನಪ್ರಿಯ ಅಧ್ಯಾಪಕರಾದರು. ಆಗ ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಸೇರಿದ್ದ ಬಳ್ಳಾರಿಯ ಸ್ನಾತಕೋತ್ತರ ಕೇಂದ್ರದ ಎಂ.ಬಿ.ಎ ವಿದ್ಯಾರ್ಥಿಗಳಿಗೂ ಅವರು ಒಂದೂವರೆ ದಶಕ ಪಾಠ ಹೇಳಿದರು.

ಇದೆಲ್ಲದರ ಜೊತೆಗೆ, ಅವರು ಡಾ. ಡಿ.ಎಂ. ನಂಜುಂಡಪ್ಪ ನೇತೃತ್ವದ ‘ಪ್ರಾದೇಶಿಕ ಅಸಮಾನತೆ ನಿವಾರಣಾ ಉನ್ನತಾಧಿಕಾರ ಸಮಿತಿ’ ಹಾಗೂ ‘ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ’ಯಲ್ಲಿ ಆರ್ಥಿಕ ತಜ್ಞರಾಗಿ ಸೇರ್ಪಡೆಗೊಳ್ಳುವುದು ಅವರ ಆಲೋಚನೆಗೂ ಮೀರಿದ ಸಂಗತಿಯಾಗಿತ್ತು. ಆದರೆ ತಲಸ್ಪರ್ಶಿ ಅಧ್ಯಯನ ಮತ್ತು ತಳಸಮುದಾಯಗಳ ಮೇಲಿನ ಮಮಕಾರವೇ ಅವರನ್ನು ಆ ಹಂತಕ್ಕೆ ಕರೆದೊಯ್ದಿತ್ತು.

ಕನ್ನಡ ವಿಶ್ವವಿದ್ಯಾಲಯದ ‘ಅಭಿವೃದ್ಧಿ ಅಧ್ಯಯನ ವಿಭಾಗ’ದ ಸ್ಥಾಪಕ ಮುಖ್ಯಸ್ಥರಾಗಿದ್ದು ಕೂಡ ಆಕಸ್ಮಿಕವೇನಲ್ಲ. ಅದು ಅವರನ್ನು ಹುಡುಕಿಕೊಂಡು ಬಂದ ಹುದ್ದೆ–ಜವಾಬ್ದಾರಿ. ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕವಾದ ಬೋಧನಾ ವೈಖರಿ ಹಾಗೂ ಸಮಾಜದಲ್ಲಿ ತಿರಸ್ಕಾರಕ್ಕೆ ಒಳಗಾದವರ ಅಧ್ಯಯನದ ಕುರಿತ ಬಂಡೆಯಂಥ ಬದ್ಧತೆಯೇ ಅವರನ್ನು ಆ ಮಟ್ಟಕ್ಕೆ ಕರೆದೊಯ್ದಿದೆ. ಕರ್ನಾಟಕದ ಹಲವು ಜಿಲ್ಲೆಗಳ ಸಮಗ್ರ ಜಿಲ್ಲಾ ಅಭಿವೃದ್ಧಿ ಯೋಜನೆಗಳಿಗೂ ಶೇಷಾದ್ರಿ ಮೂಲ ನಿರೂಪಕರಾಗಿದ್ದರು.

‘ಆಡಂ ಸ್ಮಿತ್‌ನಿಂದ ಅಮರ್ತ್ಯಸೇನ್‌ವರೆಗೆ ಅರ್ಥಶಾಸ್ತ್ರದ ಮತ್ತು ಅಭಿವೃದ್ಧಿಯ ವ್ಯಾಖ್ಯಾನಗಳನ್ನು ಖಚಿತವಾಗಿ ಅರ್ಥಮಾಡಿಕೊಂಡಿರುವ ಅಪರೂಪದ ವಿದ್ವಾಂಸ ಶೇಷಾದ್ರಿ, ನಂಜುಂಡಪ್ಪ ನೇತೃತ್ವದ ಸಮಿತಿಯಲ್ಲಿದ್ದುಕೊಂಡು ಸಮಗ್ರ ಸಂಯುಕ್ತ ಅಭಿವೃದ್ಧಿ ಸೂಚ್ಯಂಕಗಳನ್ನು ಸಿದ್ಧಪಡಿಸಲು ಅವರು ವಿಶೇಷ ಪರಿಶ್ರಮ ವಹಿಸಿದರು’ ಎಂಬುದು ವಿಭಾಗದ ಎಚ್‌.ಡಿ. ಪ್ರಶಾಂತ ಅವರ ಶ್ಲಾಘನೆಯ ನುಡಿ.

ನಂಜುಂಡಪ್ಪ ಅಧ್ಯಕ್ಷತೆಯ ಸಮಿತಿಗೆ ಅವರು ಸೇರ್ಪಡೆಗೊಳ್ಳಲು, ಅವರು ಅದಕ್ಕೂ ಮುನ್ನ ಸುಮಾರು 15 ವರ್ಷಗಳ ಹಿಂದೆ ನೀಡಿದ್ದ ಒಂದು ಉಪನ್ಯಾಸವೇ ಕಾರಣವಾಗಿತ್ತು ಎಂಬುದು ವಿಚಿತ್ರವಾದರೂ ಸತ್ಯ. ಬೆಂಗಳೂರಿನಲ್ಲಿ ನಡೆದಿದ್ದ ಅಖಿಲ ಭಾರತ ಇಸ್ಲಾಮಿಕ್‌ ಎಕನಾಮಿಕ್‌ ಕಾನ್ಫರೆನ್ಸ್‌ನಲ್ಲಿ – ‘ಕರ್ನಾಟಕದಲ್ಲಿ ಕೈಗಾರಿಕಾ ನೀತಿ’ ಕುರಿತು ಅವರು ನೀಡಿದ್ದ ಉಪನ್ಯಾಸದಿಂದ ಪ್ರಭಾವಿತರಾಗಿದ್ದ, ಅಬ್ದುಲ್‌ ಅಜೀಜ್‌ ಅವರು ಅಂದಿನ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣರ ಬಳಿ ಶೇಷಾದ್ರಿ ಹೆಸರನ್ನು ಪ್ರಸ್ತಾಪಿಸಿದ್ದರು. ಸಮಿತಿಗೆ ಅವರು ಸೇರ್ಪಡೆಗೊಳ್ಳುವ ಸಂದರ್ಭದಲ್ಲಿ ‘ಬಿ.ಶೇಷಾದ್ರಿ, ಅರ್ಥಶಾಸ್ತ್ರಜ್ಞರು, ಬಳ್ಳಾರಿ’ ಎಂಬುದಷ್ಟೇ ಅವರ ಕುರಿತ ಮಾಹಿತಿಯಾಗಿತ್ತು!

ಅದಕ್ಕೂ ಮುನ್ನ, ಎಂಬತ್ತರ ದಶಕದಲ್ಲಿ ಅವರು ಅಂದಿನ ಮುಖ್ಯಮಂತ್ರಿ ಆರ್‌. ಗುಂಡೂರಾವ್‌ ಅವರ ಪತ್ರಿಕಾ ಕಾರ್ಯದರ್ಶಿಯಾಗಿದ್ದರು. ಆಗ, ಅರ್ಥಶಾಸ್ತ್ರಜ್ಞರಾಗಿ ಸರ್ಕಾರದ ಯೋಜನೆಗಳನ್ನು ಕಟುವಾಗಿ ಟೀಕಿಸುವ ಹಂಬಲವನ್ನು ಹತ್ತಿಕ್ಕಲಾಗದ ಪರಿಸ್ಥಿತಿ ಅವರ ಮುಂದಿತ್ತು. ಯೋಜನೆಗಳನ್ನು ಹೊಗಳಿ ಭಾಷಣ ಬರೆದುಕೊಡುವ ಕೆಲಸಕ್ಕಿಂತ, ಬಳ್ಳಾರಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಹೆಚ್ಚು ಖುಷಿಯಾಗಿರಬೇಕು ಎಂಬ ಆಸೆಯಿಂದ ಅವರು ಅಧಿಕಾರದ ಉನ್ನತ ಸ್ಥಾನದಲ್ಲಿದ್ದ ಕೆಲಸವನ್ನೂ ಬಿಟ್ಟುಬಂದರು ಎಂಬುದು ಬಹಳ ಮಂದಿಗೆ ತಿಳಿದಿಲ್ಲ.

ತೆಲುಗು ಮಾತೃಭಾಷಿಕರಾಗಿದ್ದ ಅವರು ಗೋಕಾಕ್‌ ಚಳವಳಿಯ ಸಂದರ್ಭದಲ್ಲಿ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕರಾಗಿದ್ದರು. ಅವರ ನಿಲುವನ್ನು ವಿರೋಧಿಸಿದ ಬಳ್ಳಾರಿಯ ಮಂದಿಯನ್ನು ಅವರು ಸಮಾಧಾನಪಡಿಸಿದ ರೀತಿಯೂ ವಿಶಿಷ್ಟ. ಸಾಮಾಜಿಕ ಪರಿವರ್ತನೆ ಬೇಕಾದರೆ ಎಲ್ಲ ವ್ಯವಹಾರವೂ ಜನರಾಡುವ ಭಾಷೆಯಲ್ಲೇ ಇರಬೇಕು ಎಂಬ ಅವರ ವಾದವನ್ನು ಯಾರಿಂದಲೂ ತಳ್ಳಿಹಾಕಲು ಆಗಲಿಲ್ಲ. ಚಳವಳಿಯ ಅಂಗವಾಗಿ ಬಳ್ಳಾರಿಯಲ್ಲಿ ನಡೆದಿದ್ದ ಸಮಾವೇಶದಲ್ಲಿ ಚಿತ್ರರಂಗದ ಕಲಾವಿದರೊಬ್ಬರು, ‘ಇನ್ನು ಮುಂದೆ ಇಲ್ಲಿನ ಜನ ತೆಲುಗು ಸಿನಿಮಾ ನೋಡಬಾರದು’ ಎಂದು ಫರ್ಮಾನು ಹೊರಡಿಸಿದ್ದರು. ಅವರ  ಮಾತನ್ನು ಶೇಷಾದ್ರಿ ಖಚಿತ ದನಿಯಲ್ಲಿ ವಿರೋಧಿಸಿ, ಸ್ಥಳದಲ್ಲಿದ್ದ ರಾಜಕುಮಾರ್‌ ಅವರ ಕಿವಿಯಲ್ಲಿ ಉಸುರಿದ್ದರು. ‘ಕಲಾವಿದರಾಡಿದ ಮಾತು ಸ್ಥಳೀಯ ಕನ್ನಡ–ತೆಲುಗು ಭಾಷಿಕರ ನಡುವಿನ ಸೌಹಾರ್ದವನ್ನು ಕದಡುವಂತಿದೆ’ ಎಂದಿದ್ದರು. ನಂತರ ರಾಜ್‌ ತಮ್ಮ ಭಾಷಣದಲ್ಲಿ ಸನ್ನಿವೇಶವನ್ನು ತಿಳಿಗೊಳಿಸಿದ್ದರು.

ಆ ಘಟನೆಯಾದ ಬಳಿಕ, ಹೋರಾಟಗಾರರನ್ನು ಬಂಧಿಸುವ ಪ್ರಕ್ರಿಯೆ ಆರಂಭವಾದಾಗ ಶೇಷಾದ್ರಿ ಅವರೂ ಹಲವರೊಂದಿಗೆ ಕೆಲ ದಿನಗಳ ಕಾಲ ಭೂಗತರಾಗಿದ್ದರು.

‘ಬಳ್ಳಾರಿ ಹೈದರಾಬಾದ್‌ ಕರ್ನಾಟಕದ ಭಾಗವಲ್ಲ’ ಎಂದು ಕೆಲವು ವರ್ಷಗಳ ಹಿಂದೆ ಅಂದಿನ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು ಹೇಳಿಕೆ ನೀಡಿದ ಸಂದರ್ಭ. ಅವರ ಹೇಳಿಕೆಯಿಂದಾಗಿಯೇ ಜಿಲ್ಲೆ ವಿಶೇಷ ಮೀಸಲಾತಿ ಸೌಕರ್ಯದಿಂದ ವಂಚಿತವಾಗುತ್ತದೆ ಎಂಬ ಆತಂಕ ಆವರಿಸಿತ್ತು. ಯಾವೆಲ್ಲಾ ಕಾರಣಕ್ಕೆ ಬಳ್ಳಾರಿಯನ್ನು ಹೈ–ಕ ಪ್ರದೇಶಕ್ಕೆ ಸೇರಿಸಬೇಕು ಎಂಬ ಪ್ರಸ್ತಾವನೆಯನ್ನು ಸಿದ್ಧಪಡಿಸಲು ರಚನೆಗೊಂಡ ತಂಡದಲ್ಲಿ ಶೇಷಾದ್ರಿ ಅವರ ಪರಿಶ್ರಮ ಅತ್ಯುಚ್ಛ ಮಟ್ಟದ್ದು ಎಂದು ಸ್ಮರಿಸುತ್ತಾರೆ ಅವರ ವಿದ್ಯಾರ್ಥಿಗಳಾದ ಟಿ.ಜಿ. ವಿಠಲ ಮತ್ತು ಸಿರಿಗೇರಿ ಪನ್ನರಾಜ.

ಅವರು ಬೋಧಿಸಿದ ಅರ್ಥಶಾಸ್ತ್ರದ ಚೌಕಟ್ಟಿನಾಚೆಗೆ ಹೇಳುವುದಾದರೆ, ಅವರದು ಮಾನವಿಕ ಆಸಕ್ತಿಗಳನ್ನು ಬಿಟ್ಟುಕೊಡದ ಅಭಿವೃದ್ಧಿ ಅಧ್ಯಯನದ ಶ್ರೇಷ್ಠ ಮಾದರಿ.

‘ನನಗೆ ಪಾಠ ಮಾಡಿದ ಬಹಳಷ್ಟು ಮೇಷ್ಟ್ರುಗಳು ಹೆಚ್ಚು ತಿಳಿದುಕೊಂಡವರಾಗಿದ್ದರು. ಆದರೆ ತರಗತಿಗಳಲ್ಲಿ ಪ್ರಜಾಪ್ರಭುತ್ವವಾದಿಗಳಾಗಿರಲಿಲ್ಲ. ಅವರಂತೆ ನಾನು ಪಾಠ ಮಾಡಬಾರದು ಎಂಬ ಏಕೈಕ ನಿಲುವಿನಲ್ಲೇ ಇಷ್ಟೂ ವರ್ಷ ಮುಗಿದಿದೆ. ಕಲಿಯುವವರು ಮತ್ತು ಕಲಿಸುವವವರು ಎಂಬ ಪರಿಕಲ್ಪನೆಯನ್ನೇ ಆರಾಧಿಸುವ ದ್ವೈತ ಭಾವ ಕರಗಿ ಅದ್ವೈತ ಭಾವ ಹುಟ್ಟಿದರೆ ಮಾತ್ರ ತರಗತಿ ಮತ್ತು ಪಾಠ ಸಾರ್ಥಕವಾಗುತ್ತದೆ. ಇದಿಷ್ಟು ನನ್ನ ಪಯಣದ ಸಾರ...’ ಎನ್ನುತ್ತಾರೆ.

ಮಾತಿನ ನಡುವೆ ಅವರು ಸುಸ್ತಾದಂತೆ ಕಂಡರು. ಆದರೆ ಅವರ ಮಗುವಿನಂಥ ನಗುವಿನಲ್ಲಿ ಜೀವನೋತ್ಸಾಹ ಹೊಳೆಯಿತು. ಅದು ಅವರು ಇದುವರೆಗೂ ನೆಚ್ಚಿಕೊಂಡಿರುವ ಸಾಕ್ರೆಟಿಕ್‌ ವಿಧಾನದ ಮೌಖಿಕ ಸಂವಹನಕ್ಕೆ ಸಾಕ್ಷಿಯಂತೆ ಗೋಚರಿಸಿತು. ಅದು ಅವರು ವಿದ್ಯಾರ್ಥಿ–ಸಮುದಾಯದೊಂದಿಗೆ ಮಾತ್ರವಲ್ಲದೆ ತಮ್ಮ ಕಾಯಿಲೆಯೊಂದಿಗೂ ಏರ್ಪಡಿಸಿಕೊಂಡ ಆರೋಗ್ಯಕರ ಸಂವಹನ. ದಮನಿತರ ಅಭಿವೃದ್ಧಿಯನ್ನೇ ಧ್ಯಾನಿಸುವ ಅರ್ಥಶಾಸ್ತ್ರದ ಮೇಷ್ಟ್ರು ಹೀಗೂ ಇರಬಹುದು.

***

ಕಲಿಯುವುದು, ಕಲಿತದ್ದನ್ನು ಮರೆಯುವುದು, ಮತ್ತೆ ಕಲಿಯುವುದು. ಇದು ನನ್ನ ಜೀವನವನ್ನು  ಕಾಪಾಡುತ್ತಿರುವ ಏಕೈಕ ಸೂತ್ರ

– ಪ್ರೊ. ಬಿ. ಶೇಷಾದ್ರಿ

***

(ಕನ್ನಡ ಪುಸ್ತಕ ಪ್ರಾಧಿಕಾರದ ‘ಡಾ. ಎಂ.ಎಂ. ಕಲಬುರಗಿ ಮಾನವಿಕ ಅಧ್ಯಯನ ಪ್ರಶಸ್ತಿ’ ಪುರಸ್ಕೃತರಾದ ಶೇಷಾದ್ರಿ ಅವರನ್ನು, ಅವರ ವಿದ್ಯಾರ್ಥಿ–ಅಭಿಮಾನಿ ಬಳಗ ಮಾರ್ಚ್‌ 7ರಂದು ಬಳ್ಳಾರಿಯಲ್ಲಿ ಅಭಿನಂದಿಸುತ್ತಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT