ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮೆ ಬಂತೊಂದಾಮೆ!

Last Updated 4 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಕಿರಿದಾದ ಅಂಕುಡೊಂಕಿನ ರಸ್ತೆಗಳಲ್ಲಿ ಕಾರು ಓಡಿ ಬರುವಾಗ ಕಂಡಿದ್ದು ಮೈಲುಗಟ್ಟಲೇ ದೂರದ ಸಮುದ್ರ ತೀರ, ಅದಕ್ಕೆ ಹಸಿರು ತೆಂಗಿನ ಮರಗಳ ಚೌಕಟ್ಟು, ನೆತ್ತಿಯ ಮೇಲೆ ಸುಡುವ ಸೂರ್ಯ, ಹೊಳೆವ ಮೈ ಕಡುಕಪ್ಪು ಕೂದಲಿನ ಸುಂದರಿಯರು — ಅರೆ, ಫಕ್ಕನೇ ಕೇರಳದ ನೆನಪು! ಆದರದು ನೆರೆಯ ದೇಶ, ಶ್ರೀಲಂಕಾ. ರಾಜಧಾನಿ ಕೊಲೊಂಬೋದಿಂದ ಎಪ್ಪತ್ತು ಕಿಮೀ ದೂರದಲ್ಲಿನ ಸಮುದ್ರತೀರದ ಪುಟ್ಟ ಹಳ್ಳಿ ಕೊಸ್ಗೋಡಾಕ್ಕೆ ನಮ್ಮ ಪಯಣ.

ರನೋಟಕ್ಕೆ ವಿಶೇಷವೇನೂ ಕಾಣದಿದ್ದರೂ ಪ್ರಪಂಚದಲ್ಲೇ ಪ್ರಖ್ಯಾತ ಸ್ಥಳವಿದು. ನುಣುಪಾದ ಮರಳನ್ನು ಹೊಂದಿ ಅಷ್ಟಾಗಿ ಜನಸಂಚಾರ ಹೊಂದಿಲ್ಲದ ಕೊಸ್ಗೋಡಾ, ಕಡಲಾಮೆಗಳ ಅಚ್ಚುಮೆಚ್ಚಿನ ತಾಣ! ಇದೇ ಕಾರಣಕ್ಕಾಗಿ ಅಳಿವಿನ ಅಂಚಿನಲ್ಲಿರುವ ಕಡಲಾಮೆಗಳ ಮೊಟ್ಟೆಗಳನ್ನು ಸಂಗ್ರಹಿಸಿ, ಮರಿ ಮಾಡಿ ಮತ್ತೆ ಸಮುದ್ರಕ್ಕೆ ಬಿಡುವ ಹಲವಾರು ಖಾಸಗಿ ಒಡೆತನದ ಆಮೆ ಸಂರಕ್ಷಣಾ ಕೇಂದ್ರಗಳು ಇಲ್ಲಿವೆ.

ಬಿದಿರಿನ ಬೊಂಬುಗಳಿಂದ ಮಾಡಿದ ಗೇಟು ದಾಟಿ ಒಳನಡೆದರೆ ಅಲ್ಲಲ್ಲಿ ಹುಲ್ಲು ಮಾಡಿನ ಕೋಣೆಗಳು. ಎಲ್ಲಿ ಹೋಗುವುದು ಎಂದು ಯೋಚಿಸುತ್ತಿರುವಾಗಲೇ ‘ಆಯುಬೊವಾನ್’ (ಸಿಂಹಳ ಭಾಷೆಯಲ್ಲಿ ಆಯುಷ್ಮಾನ್ ಭವ) ಎಂದು ಕೈ ಜೋಡಿಸಿ ಸ್ವಾಗತ. ಮೊದಲ ಕೋಣೆಯಲ್ಲಿ ಸಿಮೆಂಟಿನ ತೊಟ್ಟಿಯಲ್ಲಿ ಮನಸೋಇಚ್ಛೆ ಈಜುತ್ತಿದ್ದ ಮರಿಗಳು. ಎರಡನೆಯದರಲ್ಲಿ ಆ ರಾತ್ರಿ ಮನೆಗೆ ಹೋಗಲು ಸಿದ್ಧರಾದ ಪುಟಾಣಿಗಳು, ಮೂರನೆಯದರಲ್ಲಿ ಕಾಲಿಗೆ ಪೆಟ್ಟಾಗಿ ಮೂಲೆಗೆ ಸೇರಿದ ನಲವತ್ತರ ರುವಾನ್ ಮತ್ತು ಕಣ್ಣು ಕಾಣದ ಸಣ್ಣ ಮುಖದ ಮೂವತ್ತರ ಸುರಿಯಾ. ಮುಂದಿದ್ದ ಮೂರು ಕೋಣೆಗಳಲ್ಲೂ ಅಂಥದ್ದೇ ಗಾಯಾಳುಗಳು. ಅಂದಹಾಗೆ, ರುವಾನ್–ಸಿರಿಯಾ ವಯಸ್ಕ ಕಡಲಾಮೆಗಳಾದರೆ, ಉಳಿದವು ಮರಿಯಾಮೆಗಳು. ಅದು ಆಮೆ ಸಂರಕ್ಷಣಾ ಕೇಂದ್ರ! ಸಾವಿರ ಶ್ರೀಲಂಕಾ ರೂಪಾಯಿ ಅಲ್ಲಿನ ಪ್ರವೇಶ ಧನ.

ನೂರು ದಶಲಕ್ಷ ವರ್ಷಗಳಿಂದ ಭೂಮಿಯಲ್ಲಿ ಅಸ್ತಿತ್ವದಲ್ಲಿರುವ ಕಡಲಾಮೆಗಳು ಅಪೂರ್ವವಾದ ಸಮುದ್ರಜೀವಿ. ಅಂದಾಜು ನೂರು ವರ್ಷಗಳ ಕಾಲ ಬದುಕುವ ಕಡಲಾಮೆಗಳ ಸಂಖ್ಯೆ ತೀರಾ ಕಡಿಮೆಯಾಗಿದ್ದು, ನಿರ್ನಾಮವಾಗುವ ಹಂತ ತಲುಪಿವೆ. ಜಗತ್ತಿನಲ್ಲಿ ಈಗಿರುವ ಏಳು ಪ್ರಬೇಧಗಳ ಕಡಲಾಮೆಗಳಲ್ಲಿ ಐದನ್ನು (ಗ್ರೀನ್  ಟರ್ಟಲ್, ಹಾಕ್ಸ್ಬಿಲ್, ಲೆದರ್ಬಾಕ್, ಲಾಗರ್ ಹೆಡ್ ಮತ್ತು ಆಲಿವ್ ರಿಡ್ಲೆ) ಶ್ರೀಲಂಕಾದ ನಿರ್ದಿಷ್ಟ ತೀರ ಪ್ರದೇಶಗಳಲ್ಲಿ ಕಾಣಬಹುದು.

ಸಮುದ್ರದ ಆಯ್ದ ಜಾಗಗಳಲ್ಲಿ ಸಂತಾನಾಭಿವೃದ್ಧಿಗಾಗಿ ವಯಸ್ಕ ಗಂಡು-ಹೆಣ್ಣು ಆಮೆಗಳು ಜೊತೆಯಾಗುತ್ತವೆ. ಹೆಣ್ಣಾಮೆ ಸಮುದ್ರತೀರಕ್ಕೆ ಮೊಟ್ಟೆಗಳನ್ನು ಇಡಲು ಬರುತ್ತದೆ. ಮೊಟ್ಟೆ ಇಡುವ ಈ  ಕೆಲಸ ರಾತ್ರಿಯಲ್ಲಿ ನಡೆಯುತ್ತದೆ. ಒಂದು ಸಲಕ್ಕೆ ಆಮೆ, ಸುಮಾರು ಪಿಂಗ್ ಪಾಂಗ್ ಚೆಂಡಿನ ಗಾತ್ರದ ಬಿಳಿ ಬಣ್ಣದ 120 ಮೊಟ್ಟೆಗಳನ್ನು ಇಡುತ್ತದೆ. ತಾನಿಟ್ಟ ಮೊಟ್ಟೆಗಳ ಮೇಲೆ, ತೇವ ಮತ್ತು ರಕ್ಷಣೆಗಾಗಿ ಹೆಣ್ಣಾಮೆ ರಸವನ್ನು ಸುರಿಯುತ್ತದೆ. ಅಲ್ಲಿಗೆ ತಾಯಿಯ ಕೆಲಸ ಮುಗಿಯಿತು. ಮೊಟ್ಟೆ ಅಥವಾ ಹುಟ್ಟಲಿರುವ ಮರಿಯೊಂದಿಗೆ ತಾಯಿಗೆ ಏನೂ ಸಂಬಂಧವಿಲ್ಲ! ಆಮೆ ಮೊಟ್ಟೆಯಿಟ್ಟು ಸಮುದ್ರಕ್ಕೆ ಮರಳಿದ ನಂತರ ಸೂರ್ಯನ ಕಿರಣಗಳಿಂದ ಬಿಸಿಯಾದ ಮರಳಿನ ಶಾಖದಿಂದ ಮೊಟ್ಟೆಗೆ ಕಾವು ಸಿಗುತ್ತದೆ. ಸುಮಾರು ಅರವತ್ತು ದಿನಗಳಲ್ಲಿ ಮೊಟ್ಟೆಯೊಡೆದು ಮರಿಗಳು ಹೊರಬರುತ್ತವೆ. ಹೆಬ್ಬೆರಳಿನ ಗಾತ್ರದ ಪುಟ್ಟ ಮರಿಗಳು ಸಮುದ್ರಕ್ಕೆ ಹೋಗಿ ಸೇರಿ ಸ್ವತಂತ್ರವಾಗಿ ಬದುಕು ಆರಂಭಿಸುತ್ತವೆ.

ಸಮುದ್ರದಲ್ಲಿ ವಾಸಿಸುವ, ಗಟ್ಟಿಚಿಪ್ಪಿನಿಂದ ರಕ್ಷಣೆ ಪಡೆಯುವ ವಯಸ್ಕ ಆಮೆಗೆ ನಿಸರ್ಗ ಸಹಜ ಶತ್ರುಗಳ ಸಂಖ್ಯೆ ಕಡಿಮೆ. ಆದರೆ ಇನ್ನೂ ಪೂರ್ಣ ಸಾಮರ್ಥ್ಯ ಪಡೆಯದ ಕೆಲವು ಮರಿಗಳು, ಹಕ್ಕಿ–ಏಡಿಗಳಿಗೆ ಬಲಿಯಾಗುತ್ತವೆ. ಅದಾದರೂ ಹೋಗಲಿ, ಆಸೆಬುರುಕ ಮನುಷ್ಯ ಬಿಟ್ಟಾನೆಯೇ? ಮರಳಿನ ಗೂಡುಗಳಿಂದ ಮೊಟ್ಟೆಗಳನ್ನು ತೆಗೆದು ಭರ್ಜರಿ ಮಾರಾಟ ಮಾಡಲಾಗುತ್ತದೆ. ಸಿಕ್ಕ ಯಾವುದೇ ಆಮೆ ಹಿಡಿದು ಕೊಂದು, ಮಾಂಸವನ್ನು ತಿಂದು (ಆಮೆ ಸೂಪ್) ಅವುಗಳ ಚಿಪ್ಪಿನ ಆಭರಣ, ಸ್ಮರಣಿಕೆ  ತಯಾರಿಸಿ ಮಾರುವ ಉದ್ಯಮವೂ ಇದೆ. ಇದಲ್ಲದೆ ಯಾಂತ್ರೀಕೃತ ದೋಣಿ, ಮೀನಿನ ಬಲೆಗೆ ಸಿಕ್ಕಿ ಸಾಯುವ ಗಾಯಗೊಳ್ಳುವ ಆಮೆಗಳು ಸಾವಿರಾರು. ಸಮುದ್ರಕ್ಕೆ ಸೇರುವ ತ್ಯಾಜ್ಯ ವಸ್ತುಗಳು ಆಮೆಗಳ ಅಸ್ತಿತ್ವಕ್ಕೇ ಸಂಚಕಾರ ಒಡ್ಡುತ್ತವೆ. ಸಮುದ್ರ ತೀರಗಳು ಪ್ರವಾಸಿಗರ ಮೋಜು–ಮಸ್ತಿಗೆ ಉತ್ತಮ ಸ್ಥಳ. ಹಾಗಾಗಿಯೇ ಹೋಟೆಲ್ ಮತ್ತು ರೆಸಾರ್ಟ್‌ಗಳು ತೀರಪ್ರದೇಶದಲ್ಲಿ ನಾಯಿಕೊಡೆಗಳಂತೆ ತಲೆಯೆತ್ತುತ್ತವೆ. ಇಲ್ಲಿನ ಪ್ರಖರವಾದ ಬೆಳಕು ಮತ್ತು ಜೋರಾದ ಸದ್ದು, ಮೊಟ್ಟೆಯಿಡಲು ಬರುವ ಆಮೆಗಳನ್ನು ದಿಕ್ಕುತಪ್ಪಿಸುತ್ತವೆ. ಸಮುದ್ರಕ್ಕೆ ಮರಳಿ ಹೋಗುವ ಬದಲು ಅವು ಬೆಳಕು–ಸದ್ದಿನತ್ತ ಆಕರ್ಷಿತವಾಗಿ ಅತ್ತ ಧಾವಿಸುತ್ತವೆ. ಅಲ್ಲಿಗೆ ಅವುಗಳ ಕತೆ ಮುಗಿದಂತೆಯೇ!

ಈ ರೀತಿ ನಾನಾ ಕಾರಣಗಳಿಂದ ಇಳಿಮುಖವಾಗುತ್ತಿರುವ ಕಡಲಾಮೆಗಳನ್ನು ಸಂರಕ್ಷಿಸಲು ‘ಆಮೆ ಸಂರಕ್ಷಣಾ ಕೇಂದ್ರ’ಗಳನ್ನು ಅರವತ್ತರ ದಶಕದಿಂದಲೇ ಹಲವರು ಖಾಸಗಿಯಾಗಿ ನಡೆಸುತ್ತಾ ಬಂದಿದ್ದಾರೆ. ಮೊಟ್ಟೆಯಿಡುವ ಕಾಲದಲ್ಲಿ ರಾತ್ರಿ ತೀರದಲ್ಲಿ ಹೆಣ್ಣಾಮೆಗಳಿಗೆ ಕಾಯಲಾಗುತ್ತದೆ. ಇಟ್ಟ ಮೊಟ್ಟೆಗಳನ್ನು ಜೋಪಾನವಾಗಿ ಸಂಗ್ರಹಿಸಿ ಕೇಂದ್ರದಲ್ಲಿರುವ ವಿಶೇಷ ಮರಳಿನ ದಿಬ್ಬಗಳಲ್ಲಿ ಇಡಲಾಗುತ್ತದೆ. ಪ್ರತಿ ದಿಬ್ಬದ ಮೇಲೆ ಯಾವ ಪ್ರಬೇಧ, ಮರಿಯಾಗಲು ಬೇಕಾದ ದಿನ – ಇವೆಲ್ಲವನ್ನೂ ಬರೆದಿಡಲಾಗುತ್ತದೆ. ಮರಿ ಹೊರಬಂದ ಒಂದೆರಡು ದಿನಗಳಲ್ಲಿ ಅವನ್ನು ಸುರಕ್ಷಿತವಾಗಿ ಸಮುದ್ರಕ್ಕೆ ಸೇರಿಸಲಾಗುತ್ತದೆ. ಹೆಣ್ಣು ಆಮೆಗಳ ಸಂಖ್ಯೆ ತೀರಾ ಕಡಿಮೆ ಇರುವುದರಿಂದ ಹೆಣ್ಣಾದರೆ ಇಲ್ಲಿ ಖುಷಿಯ ವಿಷಯ! ಅವುಗಳಿಗೆ ವಿಶೇಷ ಆರೈಕೆ–ಉಪಚಾರ. ಪ್ರತ್ಯೇಕವಾದ ತೊಟ್ಟಿಯ ವ್ಯವಸ್ಥೆ ಬೇರೆ!

ಮೂರು ನಾಲ್ಕು ಜನರ ತಂಡ ಸರದಿಯ ಪ್ರಕಾರ ಹಗಲು–ರಾತ್ರಿ ಕೆಲಸ ಮಾಡುತ್ತದೆ. ಅವರು ‘ಮರಿ ಮಾಡುವುದು ಸುಲಭದ ಕೆಲಸವಲ್ಲ. ಕಾದು ಕುಳಿತು ಮೊಟ್ಟೆ ತಂದು, ಕಾವಿಗೆ ಇಟ್ಟು, ಅದನ್ನು ಕಾಲಕಾಲಕ್ಕೆ ಗಮನಿಸುತ್ತಾ ಕಾಯುವುದು. ಆಮೇಲೆ ಆಮೆಮರಿಗಳಿಗೆ ಸಮುದ್ರದ ಉಪ್ಪು ನೀರಿನ ಅವಶ್ಯಕತೆ ಇರುವುದರಿಂದ ತೊಟ್ಟಿಯ ನೀರನ್ನು ಮೂರು ದಿನಗಳಿಗೊಮ್ಮೆ ಬದಲಾಯಿಸುವುದು, ಹೊಸ ಮರಿಗಳಿಗೆ ಸರಿಯಾದ ಆಹಾರ ಪೂರೈಕೆ, ಕಡೆಗೆ ಸಮುದ್ರಕ್ಕೆ ಬಿಡುವುದು ಹೀಗೆ ಜವಾಬ್ದಾರಿ ದೊಡ್ಡದೇ. ಪ್ರತೀ ಮರಿ ಸಮುದ್ರಕ್ಕೆ ಸೇರುವ ತನಕ ನಾವು ತಾಯಿಯ ಆತಂಕ ಅನುಭವಿಸುತ್ತೇವೆ. ನಿಧಾನವಾಗಿ ತೆವಳುತ್ತಾ ಪುಟ್ಟ ಮರಿ ಸಮುದ್ರ ಸೇರುವಾಗ ನನ್ನ ಮರಿ ಹೆಜ್ಜೆಯಿಟ್ಟ ಹೆಮ್ಮೆಯ ಜೊತೆ ಮುಂದೆ ಹೇಗೋ ಎಂಬ ಚಿಂತೆಯೂ ಇದ್ದದ್ದೇ. ಇದುವರೆಗೆ ಲಕ್ಷಾಂತರ  ಮರಿಗಳನ್ನು ಸಮುದ್ರಕ್ಕೆ ಸೇರಿಸಿದ್ದರೂ ಪ್ರತಿಯೊಂದೂ ವಿಶಿಷ್ಟ. ಹೆಚ್ಚು ದಿನ ಉಳಿದು ಸ್ವಲ್ಪ ದೊಡ್ಡವಾದರೆ ಹೆಸರೂ ಇಡುತ್ತೇವೆ. ಯಾರಿಗೂ ಹಾನಿ ಮಾಡದ ಈ ಫಳಫಳ ಕಣ್ಣುಗಳ ಮುದ್ದು ಪ್ರಾಣಿಗಳನ್ನು ಯಾಕೆ ಕೊಲ್ಲುತ್ತಾರೆ ಎನ್ನುವುದೇ ತಿಳಿಯುವುದಿಲ್ಲ. ಗಾಯಗೊಂಡು ಒದ್ದಾಡುವ ದೊಡ್ಡ ಆಮೆಗಳನ್ನು ಕಂಡಾಗ ಸಂಕಟವಾಗುತ್ತದೆ. ಆದಷ್ಟೂ ಅವುಗಳ ಕಾಳಜಿ ವಹಿಸುತ್ತೇವೆ. ಆದರೂ ಇಲ್ಲಿ ಹೊಂದಿಕೊಳ್ಳುವುದು ಸ್ವಲ್ಪ ಕಷ್ಟವೇ’ ಎಂದು ನೋವಿನಿಂದ ನುಡಿಯುತ್ತಾರೆ.  

ಆಮೆ ಸಂರಕ್ಷಣಾ ಕೇಂದ್ರಕ್ಕೆ ಪ್ರವೇಶ ಧನ ತುಸು ಹೆಚ್ಚೆನಿಸಿದರೂ ಅದರ ಉದ್ದೇಶ ತಿಳಿದಾಗ ವ್ಯರ್ಥವೆನಿಸುವುದಿಲ್ಲ. ಹೆಚ್ಚಿನ ದರ ನೀಡಿದಲ್ಲಿ ರಾತ್ರಿ ಹೊತ್ತು ಮೊಟ್ಟೆ ಸಂಗ್ರಹಿಸುವ ಮತ್ತು ಮರಿಗಳನ್ನು ಬಿಡುವ ಕಾರ್ಯವನ್ನು ವೀಕ್ಷಿಸಬಹುದು. ಆದರೆ ಆಕರ್ಷಕ ಜಾಹೀರಾತು ನೀಡಿ, ಕೇವಲ ದುಡ್ಡು ಮಾಡುವುದನ್ನೇ ಗುರಿಯಾಗಿಟ್ಟುಕೊಂಡ ನಕಲಿ ಸಂರಕ್ಷಣಾ ಕೇಂದ್ರಗಳ ಬಗ್ಗೆ ಎಚ್ಚರಿಕೆ ವಹಿಸಬೇಕು.

ಮುಂದಿನ ವಾರ ಎಷ್ಟು ಮರಿ ಹೊರಬರಬಹುದು, ಯಾವಾಗ ಅವುಗಳನ್ನು ಬಿಡಬೇಕು ಎಂಬ ಚರ್ಚೆ ಒಳಗೆ ನಡೆದಿತ್ತು. ಆ ದಿನವಷ್ಟೇ ಸಂಗ್ರಹಿಸಿದ ಮೊಟ್ಟೆ ಕೈಯಲ್ಲಿ ಹಿಡಿದು, ನೀರಿನಲ್ಲಿ ಬಿಸಿಲಿಗೆ ಹೊಳೆಯುವ ಮರಿಗಳ ಆಟ ನೋಡುತ್ತಾ ನಾನು ನಿಂತಿದ್ದೆ. ಮೂಲೆಯಲ್ಲಿದ್ದ ಅರೆತೆರೆದ ಕಣ್ಣುಗಳ ರುವಾನ್ ಮತ್ತು ಸುರಿಯಾ – ‘ನಮ್ಮ ಸ್ಥಿತಿಗೆ ನೀವೇ ಕಾರಣ, ಈ ಮರಿಗಳನ್ನಾದರೂ ಬದುಕಲು ಬಿಡಿ’ ಎನ್ನುತ್ತಿದ್ದವು. ಆ ಭರವಸೆ ನೀಡುವ ಧೈರ್ಯ ನನ್ನಲ್ಲಿರಲಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT