ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವ್ಯರ್ಷಿಗೆ ಸಂದ ಗೌರವ

Last Updated 5 ಮಾರ್ಚ್ 2017, 4:37 IST
ಅಕ್ಷರ ಗಾತ್ರ

ಮೋಹನ ನಾಗಮ್ಮನವರ
*

ಕನ್ನಡ ನಾಡಿನ ಸಾಂಸ್ಕೃತಿಕ ರಾಜಧಾನಿ, ಸಂಗೀತ ಗಂಗೋತ್ರಿ ಎಂದೆಲ್ಲ ಕರೆಯಲಾಗುವ ಧಾರವಾಡದ ಹಿರಿಮೆಯೇ ಹಾಗೆ. ಇಲ್ಲಿ ಬರೆದವರು, ಹಾಡಿದವರು ಕೂಡಲೇ ಲೋಕ ವಿಖ್ಯಾತರಾಗಲಿಕ್ಕಿಲ್ಲ. ಆದರೆ ಹಾಗೆ ಬರೆದವರನ್ನು, ಹಾಡಿದವರನ್ನು ಕಾಲ ಗಮನಿಸುತ್ತಲೇ ಇರುತ್ತದೆ. ಎಂದೋ ಕೊಂಡ ಸೈಕಲ್ಲನ್ನೇರಿ ಎಂಬತ್ತೇಳರ ಈ ಇಳಿವಯಸ್ಸಿನಲ್ಲೂ ಧಾರವಾಡದ ಸಾಂಸ್ಕೃತಿಕ ಸಂಭ್ರಮಗಳೆದುರು ಹಾಜರಾಗುವ ವೀರಭದ್ರಪ್ಪ ಚೆನ್ನಪ್ಪ ಐರಸಂಗ ಎನ್ನುವ ಎರಡೂವರೆ ಸಾವಿರ ಕವಿತೆಗಳ ರಚನೆಕಾರನಿಗೆ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡುವುದಾಗಿ ಘೋಷಣೆ ಮಾಡಿದೆ. ಆ ಮೂಲಕ ಗೌರವ ಡಾಕ್ಟರೇಟ್‌ಗಳ ಘನತೆ ಹೆಚ್ಚಿಸಿದೆ.

1930 ಸೆಪ್ಟೆಂಬರ್‌ 23ರಂದು ಧಾರವಾಡದಲ್ಲಿಯೇ ಜನಿಸಿದ ವಿ.ಸಿ. ಐರಸಂಗ ಇಲ್ಲಿನ ಕರ್ನಾಟಕ ಕಾಲೇಜಿನಲ್ಲಿ ಓದಿ ಬಿಎಸ್ಸಿ ಪದವಿ ಪಡೆದವರು. ಕುಂದಗೋಳದ ಹರಬಟ್ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಬದುಕು ಪ್ರಾರಂಭಿಸಿದ ಅವರು, 1954 ರಲ್ಲಿ ರೈಲ್ವೆ ಇಲಾಖೆಯಲ್ಲಿ ಕಾರಕೂನರಾಗಿ ವೃತ್ತಿ ಜೀವನ ಆರಂಭಿಸಿ ಚೀಫ್‌ ಕ್ಲರ್ಕ್ ಆಗಿ 1988ರಲ್ಲಿ ನಿವೃತ್ತಿ ಹೊಂದಿದರು.

ಅವರಿಗೆ ಕವಿತೆಯೆಂಬುದು ಅವರ ಉಸಿರಿನೊಂದಿಗೆ ಸದಾಕಾಲ ಮಿಡಿಯುತ್ತಿರುವ ಜೀವ ಭಾವ. ಕವಿತೆಯೊಂದನ್ನು ಹೊರತುಪಡಿಸಿ ಮತ್ತೇನನ್ನೂ ಬೇಡದ ಇವರು ಕಾವ್ಯಸಂತ, ನಿರ್ಮೋಹಿ, ಸ್ಥಿತಪ್ರಜ್ಞ.

ಪತ್ನಿ ಸರಸ್ವತಿ 2001ರಲ್ಲಿ ನಿಧನ ಹೊಂದಿದರು. ಮಗ ಜಗದೀಶ ಬೆಂಗಳೂರಿನಲ್ಲಿ ಉಳಿದರೆ ಪುತ್ರಿಯರಾದ ಶೋಭಾ, ರತ್ನಾ, ಪುಷ್ಪಾ ಉದ್ಯೋಗವನ್ನರಸಿ ಬೇರೆ ಬೇರೆ ಕಡೆ ಚದುರಿ ಹೋದರು. ಐರಸಂಗರಿಗೆ ಇದಾವುದರ ಪರಿವೆ ಇಲ್ಲ. ಒಬ್ಬಂಟಿತನವೇ ಮತ್ತಷ್ಟು ಬರೆಯಲು ಪ್ರೇರೇಪಿಸಿತೇನೋ. ಬರೆಯುವುದು ಬದುಕಿನ ಅನಿವಾರ್ಯ ಸಂಗತಿ ಎಂಬಂತೆ ಬರೆದರು. ಅವರು ಬರೆದ ಬಹುತೇಕ ಕವಿತೆಗಳನ್ನು ಸಂಗೀತಗಾರರು ಹಾಡಿದರು. ಧಾರವಾಡದ ಆಕಾಶವಾಣಿ ಅವುಗಳನ್ನು ಅಭಿಮಾನದಿಂದ ಪ್ರಸಾರ ಮಾಡಿತು. ಹಿರಿಯ ಸಾಹಿತಿ ದಿವಂಗತ ಎನ್ಕೆ ಅವರು ಐರಸಂಗ ಅವರನ್ನು  ‘AirSung’ ಎಂದೇ ಕರೆದರು.

ಇವತ್ತಿಗೂ ಧಾರವಾಡ ಆಕಾಶವಾಣಿಯಲ್ಲಿ ಅವರ ಕವಿತೆ ಪ್ರಸಾರವಾಗದೇ ದಿನ ಪೂರ್ಣಗೊಳ್ಳುವುದಿಲ್ಲ. ಉತ್ತರ ಕರ್ನಾಟಕದಲ್ಲಿ ಎಲ್ಲಿಯೋ ನಡೆಯುವ ಕಾರ್ಯಕ್ರಮದಲ್ಲಿ ಐರಸಂಗ ಕವಿತೆ ಹಾಡಲಾಗುತ್ತಿರುತ್ತದೆ. ಬಹಳಷ್ಟು ಸಾರಿ ಧಾರವಾಡದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅವರ ಕವಿತೆ ಕೇಳಿ ಬರುತ್ತಿರುವಾಗ ಅವರು ಅನಾಮಿಕರಂತೆ ನಿಂತಿರುತ್ತಾರೆ.

ಬರೆದದ್ದನ್ನೇ ಬಹುದೊಡ್ಡ ಬಂಡವಾಳ ಮಾಡಿಕೊಂಡು ಸದಾಕಾಲ ಬಡಾಯಿ ಕೊಚ್ಚಿಕೊಳ್ಳುವ ಬಗೆ ಬಗೆಯ ಸಾಹಿತ್ಯದ ಪಾತ್ರಧಾರಿಗಳ ನಡುವೆ ಬರೆದುದಕ್ಕೆ ಪ್ರತಿಯಾಗಿ ಬೇರೇನೂ ಬಯಸದವರು. ಬದುಕಿಗಾಗಿ ಪಿಂಚಣಿಯನ್ನೇ ನೆಚ್ಚಿಕೊಂಡಿರುವ ಅವರು ಮಕ್ಕಳಿಗೂ ತೊಂದರೆಯಾಗದಂತೆ ಬದುಕುತ್ತಿದ್ದಾರೆ. ಈ ವಯಸ್ಸಿನಲ್ಲಿಯೂ ಮಲ್ಲಗಂಬ ಏರುತ್ತಾರೆ, ನೀರು ಕಂಡರೆ ತಾಸುಗಟ್ಟಲೇ ಈಜುತ್ತಾರೆ. ಅವರ ವಾಹನ ‘ಸೈಕಲ್‌’.

ಅವರು ನೌಕರಿಯಲ್ಲಿದ್ದಾಗ 1970ರಲ್ಲಿ ಖರೀದಿಸಿದ್ದರು, ಅದು ಕೂಡ ಸೆಕೆಂಡ್ ಹ್ಯಾಂಡ್! ಬಾಳಸಂಗಾತಿ ಎನ್ನುವ ಮಟ್ಟಿಗೆ ಅವರನ್ನು ಹೊತ್ತು ತಿರುಗಿದೆ ಆ ಸೈಕಲ್‌. ಧಾರವಾಡದ ಬೀದಿಗಳಲ್ಲಿ ಸೈಕಲ್‌ ಇಲ್ಲದೇ ಐರಸಂಗ ಅವರನ್ನು ಉಹಿಸಿಕೊಳ್ಳಲೂ ಆಗುವುದಿಲ್ಲ. ಸೈಕಲ್ಲು ಮಾತ್ರ ಈ ವಯಸ್ಸಿನಲ್ಲಿಯೂ ಅವರಲ್ಲಿರುವ ತ್ರಾಣಕ್ಕೆ ಸಾಕ್ಷಿಯಾಗಿದೆ.

ಐರಸಂಗ ಅವರ ವೈಶಿಷ್ಟ್ಯ ಎಂದರೆ ಅವರಿಗಿರುವ ಸಂಗೀತದ ವಿಶೇಷ ತಿಳಿವಳಿಕೆ. ಅವರ ಚಿಕ್ಕಪ್ಪ ಚೆನ್ನಮಲ್ಲಪ್ಪ ಎಡಿಯಾಪೂರ ಕಲಿಸಿಕೊಟ್ಟ ಶಿಕ್ಷಣದಿಂದ ಐರಸಂಗ ಅವರಿಗೆ ಸಂಗೀತದ ರಾಗ, ಧಾಟಿಗಳು ಕರತಲಾಮಲಕ. ಬರೆದ ರಚನೆಗಳಿಗೆ ಅವರೇ ರಾಗಗಳನ್ನು ಹೆಸರಿಸುತ್ತಾರೆ.
ಬಂಡಾಯ, ದಲಿತ ಎಂದು ನಾವು ಕರೆದುಕೊಳ್ಳುವ ಮೊದಲೇ ಅವರು ದೇವರಿಗೆ ಪ್ರಶ್ನೆ ಮಾಡಿದ್ದರು.

ಏಳು ಹೊಡೆದರೂ ಏಕೆ ಏಳಲಿಲ್ಲವೋ ಹರಿಯೇ
ನಿನ್ನೆ ಮಲಗುವದು ನಿನಗೆ ತಡವಾಯಿತೆ ?
ದಿನ, ದಿನವೂ ಸುಪ್ರಭಾತದ ಗೀತೆ ಕೇಳಿಯೇ
ಏಳಬೇಕೆಂಬ ಹಠ ದೃಢವಾಯಿತೆ?
(ಹನ್ನೊಂದನೆ ಅವತಾರ ಸಂಕಲನ)
ದೇವಸ್ಥಾನದ ರೇಟುಗಳ ಬಗ್ಗೆಯೂ ಅವರು ಆ ಕಾಲದಲ್ಲಿಯೇ ಗೇಲಿ ಮಾಡಿದ್ದರು.

‘ಮತ್ತೆ ಇಲ್ಲಿ ನೋಡಿರಿ ದೇವಸ್ಥಾನದ ಯೋಗ್ಯ ದರದ ರೇಟುಗಳು
ಧರ್ಮ ದರುಶನಕ್ಕಾಗಿ ಉದ್ದ ಸರತಿಯ ಸಾಲು
ದರ್ಶನ ವಿಶೇಷಕ್ಕೆ ಬೇರೆಯೇ ದರವಿಹುದು
ಪೂಜಾರಿಗಿರುವ ಲಾಭ ನೋಡಿ ಸರಕಾರ
ವಹಿಸಿಕೊಂಡಿತು ನಿನ್ನ ದೇಗುಲದ ಅಧಿಕಾರ
ಹೀಗೆ ಪ್ರಶ್ನಿಸುವ ಐರಸಂಗ ದೇವರ ಬಗ್ಗೆ ದಾಸರಿಗಿಂತಲೂ ಹೆಚ್ಚಿನ ತಾದ್ಯಾತ್ಮ ಹೊಂದಿದ್ದಾರೆ. ಅತಿ ಹೆಚ್ಚು ಜನ ಹಾಡಿರುವ ಅವರ ಕವಿತೆ ದಾದರಾ ತಾಳದ ‘ಚರಣ, ಕಮಲಗಳಿಗೆ ನಮಿಸಿ’ಯಲ್ಲಿ ಅವರು
‘ಚರಣ ಕಮಲಗಳಿಗೆ ನಮಿಸಿ ಬೇಡಿಕೊಳ್ಳುವೆ ದೇವನೇ
ಕರುಣಿಸಯ್ಯ ದೀನ ಬಂಧು ಜೀವಕೋಟಿಕಾವನೆ’ ಎನ್ನುತ್ತಾರೆ.

ಅವರ ಕವಿತೆಗಳಲ್ಲಿ ಅಧ್ಯಾತ್ಮವಿದೆ. ಪ್ರೀತಿ, ದೇಶಭಕ್ತಿ, ಶೃಂಗಾರ, ದಾಂಪತ್ಯ, ನೀತಿ ಬೋಧೆ ಎಲ್ಲವೂ ಹಾಸು ಹೊಕ್ಕಾಗಿವೆ. ಎಲ್ಲ ಸಂಗತಿಗಳನ್ನು ಕವಿತೆಯನ್ನಾಗಿಸಿ ನೇಯುವ ಅವರ ಕುಶಲತೆಯಿಂದಾಗಿ ಅಕ್ಷರಗಳ ಕುಸುರಿ ಕೆಲಸದಂತೆ ಕವಿತೆ ಜೀವ ತಳೆಯುತ್ತದೆ.

ಹುಟ್ಟಿದ್ದು ಹಿಂದೂ ಲಿಂಗಾಯತ ನೇಕಾರ ಸಮುದಾಯದಲ್ಲಿ. ಮನೆಯ ಹಿರಿಯರೂ ಕೈಮಗ್ಗದ ನೇಯ್ಗೆಯನ್ನೇ ಅವಲಂಬಿಸಿದ್ದರು. ಆ ನೇಯ್ಗೆಯ ಕುಸುರಿ ಕೆಲಸ ಐರಸಂಗ ಅವರಿಗೆ ಕವಿತೆಯಲ್ಲಿ ಪ್ರಕಟಗೊಂಡಿತೇನೋ. ಹೀಗೆ ಬಿಡಿ ಬಿಡಿಯಾಗಿ ಪ್ರಕಟಗೊಂಡ ಅವರ ಕವಿತೆಗಳನ್ನು ‘ಸಮಗ್ರ ಕವಿತೆ’ ಯಾಗಿಸಿ ಇತ್ತೀಚೆಗೆ ಧಾರವಾಡದ ಶಿವಾನಂದ ಗಾಳಿ ಅವರ ದರ್ಪಣ ಪ್ರಕಾಶನ ಪ್ರಕಟಿಸಿದೆ.

ಬದುಕುವ ಬಗೆಯಲ್ಲಿಯೇ ಸಂತತನವನ್ನು ಕಂಡುಕೊಂಡಿರುವ ಅವರು ಏನೇ ಬರೆದಾಗಲೂ ಅದೊಂದು ಬಗೆಯ ಪ್ರಣಾಳಿಕೆಯಾಗಲಿ, ಲೋಕವಿಖ್ಯಾತವಾಗಲಿ ಎಂದು ಆಶಯ ಹೊಂದದೇ ಬರೆದು ಬದಿಗಿಟ್ಟರು. ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಹಿಂದೆಂದೋ ಬರಬೇಕಾಗಿತ್ತು. ಈ ಕಾವ್ಯ ಸಂತ  ಚೊಕ್ಕಟವಾಗಿ ಬಯೋಡಾಟಾ ಕೂಡ ಬರೆದಿಟ್ಟುಕೊಳ್ಳದವರು. ಬದುಕಿನಲ್ಲಿ ಮಲ್ಲಕಂಬ ಏರಿ ಸೈ ಎನಿಸಿಕೊಂಡ ಇವರಿಗೆ ಸಾಹಿತ್ಯದ ಒಳಪದರಿನಲ್ಲಿ ನಡೆಯುವ ಯಾವ ಸರ್ಕಸ್‌ಗಳೂ ಗೊತ್ತಿಲ್ಲದ ಕಾರಣ ಕವಿಗೆ ದಕ್ಕಬೇಕಾದ ಸಕಲಗೌರವಗಳನ್ನು ಸರ್ಕಾರ ಮತ್ತು ಸಮಾಜಗಳು ಇನ್ನು ಮುಂದೆ ನೀಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT