ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಆರ್‌ಎಸ್‌: ಪರ್ಯಾಯ ಮಾರ್ಗದ ಹುಡುಕಾಟ

ನೀರಿನ ದಾಹ ಇಂಗಿಸಲು ಮುಂದಾದ ಜಲಮಂಡಳಿ
Last Updated 4 ಮಾರ್ಚ್ 2017, 20:02 IST
ಅಕ್ಷರ ಗಾತ್ರ

ಮಂಡ್ಯ: ಬೇಸಿಗೆಯಲ್ಲಿ ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ಹಲವು ನಗರ, ನದಿಗೆ ಹೊಂದಿಕೊಂಡಿರುವ ನೂರಾರು ಗ್ರಾಮಗಳ ಕುಡಿಯುವ ನೀರಿನ ದಾಹ ಇಂಗಿಸಲು ಕಾವೇರಿ ನೀರಾವರಿ ನಿಗಮವು ಹಲವು ಮಾರ್ಗಗಳನ್ನು ತಡಕಾಡುತ್ತಿದೆ.

ಹೇಮಾವತಿ ಅಣೆಕಟ್ಟೆಯಿಂದ ಕಳೆದ ಒಂದು ವಾರದಲ್ಲಿ 1.5 ಟಿಎಂಸಿ ಅಡಿ ನೀರು ಬಂದಿರುವುದು ಅಧಿಕಾರಿಗಳು ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಆಗಿದೆ. ಆದರೂ, ಜೂನ್‌ವರೆಗೆ ನೀರು ಪೂರೈಸಲು ಬೇಕಾದ ಪರ್ಯಾಯ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗುತ್ತದೆ.

ಕೆಆರ್‌ಎಸ್‌ ಅಣೆಕಟ್ಟೆಯ ನೀರಿನ ಮಟ್ಟವು 81.50 ಅಡಿ ಇದೆ. ಅಣೆಕಟ್ಟೆಯಲ್ಲಿ ಒಟ್ಟು 11.46 ಟಿಎಂಸಿ ಅಡಿಯಷ್ಟು ನೀರಿದ್ದು, ಅದರಲ್ಲಿನ 4.40 ಟಿಎಂಸಿ ಅಡಿ ‘ಡೆಡ್‌ ಸ್ಟೋರೇಜ್‌’ ತೆಗೆದರೆ ಬಳಕೆಗೆ ಲಭ್ಯವಾಗುವುದು ಕೇವಲ 7.06 ಟಿಎಂಸಿ ಅಡಿಯಷ್ಟು ಮಾತ್ರ. ಕಳೆದ ವರ್ಷ ಮಾರ್ಚ್‌ 4ರಂದು ಅಣೆಕಟ್ಟೆಯಲ್ಲಿ ಒಟ್ಟು 17.58 ಟಿಎಂಸಿ ಅಡಿಯಷ್ಟು ನೀರಿತ್ತು. ಅದರಲ್ಲಿ 13.18 ಟಿಎಂಸಿ ಅಡಿ ನೀರು ಬಳಕೆ ಲಭ್ಯವಿತ್ತು. ಹಾಗಾಗಿ ಕಳೆದ ಬಾರಿ ಕುಡಿಯುವ ನೀರಿಗೆ ತೊಂದರೆಯಾಗಿರಲಿಲ್ಲ.

ಲೆಕ್ಕಾಚಾರ: ಪ್ರತಿ ನಿತ್ಯ 800 ಕ್ಯುಸೆಕ್‌ನಂತೆ ನೀರು ಹರಿಸಬೇಕಾಗಬಹುದು ಎಂದು ಲೆಕ್ಕ ಹಾಕಲಾಗಿದೆ. ಅಣೆಕಟ್ಟೆಯಲ್ಲಿ ಲಭ್ಯ ಇರುವ ನೀರಿನಲ್ಲಿ ಜೂನ್‌ವರೆಗೂ ಕುಡಿಯುವ ನೀರು ಸರಬರಾಜು ಮಾಡುವ ಸವಾಲು ಕರ್ನಾಟಕ ನೀರಾವರಿ ನಿಗಮ ಹಾಗೂ ಬೆಂಗಳೂರಿನ ಜಲ ಮಂಡಳಿಯ ಮುಂದಿದೆ.
ಪ್ರತಿ ತಿಂಗಳಿಗೆ 2 ಟಿಎಂಸಿ ಅಡಿಯಷ್ಟು ನೀರು ಬೇಕಾಗುತ್ತದೆ. ಲಭ್ಯ ಇರುವ 7.06 ಟಿಎಂಸಿ ಅಡಿಯ ಜತೆಗೆ ಜೂನ್‌ವರೆಗೆ ಅಣೆಕಟ್ಟೆಗೆ 1.5 ಟಿಎಂಸಿ ಅಡಿಯಷ್ಟು ನೀರು ಹರಿದು ಬರಬಹುದು ಎಂದು ಅಂದಾಜಿಸಲಾಗಿದೆ.

ಪರ್ಯಾಯ ಮಾರ್ಗ: ಕುಡಿಯುವ ನೀರು ಸರಬರಾಜಿಗೆ ನೀರಿನ ತೊಂದರೆಯಾದರೆ ಡೆಡ್‌ ಸ್ಟೋರೇಜ್‌ ನೀರು ಬಳಸಿಕೊಳ್ಳಲು ಕಾವೇರಿ ನೀರಾವರಿ ನಿಗಮ ಹಾಗೂ ಬೆಂಗಳೂರು ಜಲ ಮಂಡಳಿ ಯೋಚಿಸಿವೆ.

ಮೊದಲು 1,500 ಎಚ್‌ಪಿಯ 17 ಪಂಪ್‌ಸೆಟ್‌ಗಳನ್ನು ಖರೀದಿಸಿ, 45 ದಿನಗಳ ಕಾಲ ನೀರು ಎತ್ತಲು 45 ಕೋಟಿ ವೆಚ್ಚದ ಪ್ರಸ್ತಾವವೊಂದನ್ನು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸಿದ್ಧಪಡಿಸಿದ್ದರು. ಖರೀದಿ ವೆಚ್ಚ ಹೆಚ್ಚಾಗುವುದರಿಂದ ಜಲ ಮಂಡಳಿಯು ಈ ಪ್ರಸ್ತಾವವನ್ನು ಕೈಬಿಟ್ಟಿದೆ. ಈಗ ಪರ್ಯಾಯವಾಗಿ ಬಾಡಿಗೆ ತೆಗೆದುಕೊಂಡು ನೀರು ಎತ್ತುವ ಪ್ರಸ್ತಾವ ಸಿದ್ಧಪಡಿಸಲಾಗುತ್ತಿದೆ.

ವಿದ್ಯುತ್‌ ಅಡ್ಡಿ: ಕೇವಲ ಪಂಪ್‌ಸೆಟ್‌ ಬಾಡಿಗೆ ತೆಗೆದುಕೊಂಡು ನೀರು ಎತ್ತಿದರೆ ಹೆಚ್ಚು ಖರ್ಚಾಗುವುದಿಲ್ಲ. ಅದಕ್ಕೆ ಬೇಕಾದ ಜನರೇಟರ್‌ಗಳಿಗಾಗಿಯೇ ಹೆಚ್ಚಿನ ಖರ್ಚಾಗುತ್ತದೆ ಎನ್ನುತ್ತಾರೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಯೊಬ್ಬರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT