ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರ್ಯಾಯ ಮಾರ್ಗಗಳ ಅಭಿವೃದ್ಧಿ

ಸಂಚಾರ ದಟ್ಟಣೆ ನಿಯಂತ್ರಿಸಲು ಕ್ರಮ: ಕೃಷಿ ಸಚಿವ ಕೃಷ್ಣಬೈರೇಗೌಡ ಹೇಳಿಕೆ
Last Updated 4 ಮಾರ್ಚ್ 2017, 20:10 IST
ಅಕ್ಷರ ಗಾತ್ರ
ಬೆಂಗಳೂರು: ‘ಭವಿಷ್ಯದಲ್ಲಿ ಉಂಟಾಗಬಹುದಾದ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಅಗತ್ಯವಿರುವ ಕಡೆ ಪರ್ಯಾಯ ರಸ್ತೆ ಮಾರ್ಗಗಳನ್ನು ಅಭಿವೃದ್ಧಿಗೊಳಿಸಬೇಕು’ ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ಹೇಳಿದರು.
 
ಬೆಂಗಳೂರು ಉತ್ತರ ತಾಲ್ಲೂಕು ಜಾಲಾ ಹೋಬಳಿ ಬೇಗೂರು ಗ್ರಾಮದಲ್ಲಿ ಕೈಗೆತ್ತಿಕೊಂಡಿರುವ ₹ 11.30 ಕೋಟಿ ವೆಚ್ಚದಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪರ್ಯಾಯ ರಸ್ತೆ ಹಾಗೂ ಸುತ್ತಮುತ್ತಲಿನ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಸಾಂಕೇತಿಕ ಭೂಪರಿಹಾರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
 
‘ಮೈಲನಹಳ್ಳಿ ಮೂಲಕ ರಸ್ತೆಯನ್ನು ವಿಸ್ತರಿಸಿ ವಿಮಾನ ನಿಲ್ದಾಣಕ್ಕೆ ಪರ್ಯಾಯ ಸಂಪರ್ಕ ರಸ್ತೆ ಅಭಿವೃದ್ಧಿ ಹಾಗೂ ಭಟ್ಟರ ಮಾರೇನಹಳ್ಳಿ ಬಳಿ 400 ಮೀಟರ್‌ ರಸ್ತೆ ಅಭಿವೃದ್ಧಿಯಿಂದ ವಿಮಾನ ನಿಲ್ದಾಣಕ್ಕೆ ತಲುಪಲು ನಗರದ ಜನರಿಗೆ ಅನುಕೂಲವಾಗಲಿದೆ. ಇದು ಭವಿಷ್ಯದಲ್ಲಿ ಉಂಟಾಗಬಹುದಾದ ಸಂಚಾರ ದಟ್ಟಣೆಗೆ ಇಂದೇ ಪರಿಹಾರ ನೀಡಿದಂತಾಗಿದೆ’ ಎಂದು ತಿಳಿಸಿದರು.
 
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಕೆ.ಜಾರ್ಜ್‌ ಮಾತನಾಡಿ, ‘ನಗರದಲ್ಲಿನ ಹಲವು ಸಮಸ್ಯೆಗಳಿಗೆ ಹಿಂದೆ ಇದ್ದ ಬಿಜೆಪಿಯೇ ಕಾರಣ. ಬಿಜೆಪಿ  ಸರ್ಕಾರದ ದೂರದೃಷ್ಟಿ ಕೊರತೆಯಿಂದ ನಮ್ಮ ಸರ್ಕಾರ ಸಾಕಷ್ಟು ಶ್ರಮವಹಿಸಬೇಕಾದ ಪ್ರಸಂಗ ಎದುರಾಗಿದೆ’ ಎಂದು ಆರೋಪಿಸಿದರು.
 
‘ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ಬಿಜೆಪಿ, ನಮಗೆ ಜನ ಬೆಂಬಲ ಸಿಗುತ್ತದೆ ಎಂಬ ಏಕೈಕ ಕಾರಣದಿಂದ ಸುಳ್ಳು ಆರೋಪಗಳನ್ನು ಮಾಡುತ್ತಿದೆ’ ಎಂದರು. 
 
‘2018ರ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಉಕ್ಕಿನ ಸೇತುವೆ ವಿಚಾರದಲ್ಲಿ ಅಕ್ರಮ ಮಾಡಿದ್ದೇವೆ ಎಂದು ಬಿಜೆಪಿಯವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ಸೂಕ್ತ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ಅಕ್ರಮ  ನಡೆದಿದ್ದರೆ ಯಾವುದೇ ತನಿಖೆ ಹಾಗೂ ಶಿಕ್ಷೆಗೆ ಸಿದ್ಧ’ ಎಂದು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT