ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ’

Last Updated 4 ಮಾರ್ಚ್ 2017, 20:14 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ, ವಿದೇಶದಿಂದ ದೇಣಿಗೆ ಪಡೆಯುವ ಎನ್‌ಜಿಒಗಳ ಮೇಲೆ ನಿರ್ಬಂಧ, ಪೊಲೀಸರು ಮತ್ತು ಭದ್ರತಾ ಪಡೆಗಳು ನಡೆಸುವ ಶೋಷಣೆ –ಇವು ಭಾರತದ ಪ್ರಮುಖ ಮಾನವ ಹಕ್ಕು ಸಮಸ್ಯೆಗಳಾಗಿವೆ ಎಂದು ಅಮೆರಿಕ ಸರ್ಕಾರದ ವರದಿ ತಿಳಿಸಿದೆ.

ನಾಪತ್ತೆ ಪ್ರಕರಣಗಳು, ಜೈಲುಗಳಲ್ಲಿನ ಅಪಾಯಕಾರಿ ಪರಿಸ್ಥಿತಿ ಹಾಗೂ ನ್ಯಾಯದಾನ ವಿಳಂಬ ಭಾರತದಲ್ಲಿನ ಇತರ ಸಮಸ್ಯೆಗಳು ಎಂದು ವಿದೇಶಾಂಗ ಇಲಾಖೆ ಸಲ್ಲಿಸಿರುವ ಮಾನವ ಹಕ್ಕು ಸಂಬಂಧಿತ 2016ರ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಅಮಾಯಕರ ಹತ್ಯೆ, ಅತ್ಯಾಚಾರ, ಭ್ರಷ್ಟಾಚಾರ, ಮಹಿಳೆಯರು, ಮಕ್ಕಳು, ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲಿನ ಅಪರಾಧ ಕೃತ್ಯಗಳು, ಧಾರ್ಮಿಕ ಹಾಗೂ ಲಿಂಗಾಧಾರಿತವಾಗಿ ಸಮಾಜದಲ್ಲಿ ನಡೆಯುವ ಗಲಭೆಗಳು ಇನ್ನಿತರ ಸಮಸ್ಯೆಗಳಾಗಿವೆ’ ಎಂದು ವಿವರಿಸಲಾಗಿದೆ.

‘ರಾಷ್ಟ್ರದ ಅಥವಾ ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿಲ್ಲ’  ಎಂಬ ಕಾರಣ ನೀಡಿ ಹಲವು ಎನ್‌ಜಿಒಗಳ ವಿದೇಶಿ ದೇಣಿಗೆ ಮೇಲೆ ಸರ್ಕಾರ ನಿರ್ಬಂಧ ಹೇರಿದೆ. ಇದರಿಂದ ಸಾರ್ವಜನಿಕ ಕೆಲಸಗಳಿಗೆ ಅಡ್ಡಿ ಉಂಟಾಗಿದೆ ಎಂದು ಹೇಳಿದೆ.

ಭಾರತದ  ಆರು ರಾಜ್ಯಗಳಲ್ಲಿ ಮತಾಂತರದ ಮೇಲೆ ನಿರ್ಬಂಧ ಹೇರುವ ಕಾನೂನು ಜಾರಿಯಲ್ಲಿದೆ. ಮತಾಂತರಕ್ಕೆ ಯತ್ನಿಸಿದವರನ್ನು ಬಂಧಿಸಿದ ಘಟನೆಯೂ ನಡೆದಿದೆ ಎಂಬ ವಿವರ ವರದಿಯಲ್ಲಿದೆ.

ಭಾರತ ಮೂಲದ ವ್ಯಾಪಾರಿ ಹತ್ಯೆ
ನ್ಯೂಯಾರ್ಕ್‌:
ದಿನಬಳಕೆ ಅಂಗಡಿಯ ಮಾಲೀಕ, ಭಾರತ ಮೂಲದ ಹರ್ನೀಶ್ ಪಟೇಲ್ ಎನ್ನುವವರನ್ನು ಅಮೆರಿಕದ ದಕ್ಷಿಣ ಕ್ಯಾರೊಲೀನಾದ ಲ್ಯಾಂಕಸ್ಟರ್‌ ಕೌಂಟಿಯಲ್ಲಿ ಗುರುವಾರ ಗುಂಡಿಟ್ಟು ಹತ್ಯೆ ಮಾಡಲಾಗಿದೆ.

ಪಟೇಲ್ ಅವರ ಮನೆಯ ಮುಂಭಾಗದಲ್ಲೇ ಈ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೈದರಾಬಾದ್‌ನ ಎಂಜಿನಿಯರ್ ಶ್ರೀನಿವಾಸ ಕೂಚಿಭೊಟ್ಲ ಅವರನ್ನು ಕನ್ಸಾಸ್‌ ನಗರದಲ್ಲಿ ಹತ್ಯೆ ಮಾಡಿದ ಕೆಲವೇ ದಿನಗಳಲ್ಲಿ ನಡೆದಿರುವ ಈ ಘಟನೆ ಅಮೆರಿಕದಲ್ಲಿನ ಭಾರತೀಯ ಸಮುದಾಯದವರಲ್ಲಿ ಆತಂಕ ಹೆಚ್ಚಿಸಿದೆ.

ಅಂಗಡಿಯಲ್ಲಿ ವಹಿವಾಟು ಮುಗಿಸಿ ಪಟೇಲ್ ಅವರು ತಮ್ಮ ವ್ಯಾನ್‌ನಲ್ಲಿ ಮನೆ ಕಡೆ ಹೊರಟಿದ್ದರು. ಅಂಗಡಿಯಿಂದ ಮನೆ 6 ಕಿ.ಮೀ. ದೂರದಲ್ಲಿದೆ. ಹಂತಕರು ಮನೆಯ ಎದುರೇ ಪಟೇಲ್‌ ಅವರಿಗೆ ಗುಂಡಿಟ್ಟಿದ್ದಾರೆ ಎಂದು ಪೊಲೀಸರು ಊಹಿಸಿದ್ದಾರೆ.

ಅಂಗಡಿಯನ್ನು ಮುಚ್ಚಿ ಹತ್ತು ನಿಮಿಷ ಕೂಡ ಕಳೆದಿರಲಿಲ್ಲ, ಆಗಲೇ ಪಟೇಲ್ ಅವರ ಹತ್ಯೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಗುಂಡಿನ ಶಬ್ದ ಹಾಗೂ ಚೀರಾಟ ಕೇಳಿಸಿತು ಎಂದು ಕೆಲವು ಸ್ಥಳೀಯರು ಲ್ಯಾಂಕಸ್ಟರ್ ಕೌಂಟಿ ಪೊಲೀಸರಿಗೆ ರಾತ್ರಿ 11.33ಕ್ಕೆ ಕರೆ ಮಾಡಿದ್ದರು.

‘ಪಟೇಲ್‌ ಅವರು ಭಾರತೀಯ ಮೂಲದವರು ಎಂಬ ಕಾರಣಕ್ಕೆ ಹತ್ಯೆ ಆಗಿರುವಂತೆ ಕಾಣುತ್ತಿಲ್ಲ. ಈ ಹತ್ಯೆ ಜನಾಂಗೀಯ ದ್ವೇಷದಿಂದ ನಡೆದಿದೆ ಎನ್ನಲು ಕಾರಣಗಳಿಲ್ಲ’ ಎಂದು ಕಾನೂನು ಮತ್ತು ಸುವ್ಯವಸ್ಥೆಯ ಹೊಣೆ ಹೊತ್ತಿರುವ ಅಧಿಕಾರಿ ಬೆರಿ ಫಾಯ್ಲ್‌ ಹೇಳಿದ್ದಾರೆ.

ಸುಷ್ಮಾ ಸಂತಾಪ
(ನವದೆಹಲಿ ವರದಿ):
ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್‌ ಅವರು ಘಟನೆ ಬಗ್ಗೆ ಖೇದ ವ್ಯಕ್ತಪಡಿಸಿದ್ದಾರೆ.
‘ಇದು ದ್ವೇಷಾಪರಾಧ ಅಲ್ಲ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ. ಪಟೇಲ್‌ ಅವರ ಕುಟುಂಬಕ್ಕೆ ಎಲ್ಲ ನೆರವು ನೀಡುವಂತೆ ಅಟ್ಲಾಂಟದಲ್ಲಿರುವ ಭಾರತೀಯ ರಾಜತಾಂತ್ರಿಕ ಅಧಿಕಾರಿಗೆ ಸೂಚಿಸಲಾಗಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT