ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿ ಎಂಬುದು ದೊಡ್ಡ ಸುಳ್ಳು

Last Updated 5 ಮಾರ್ಚ್ 2017, 4:49 IST
ಅಕ್ಷರ ಗಾತ್ರ

ನೀವು ನಿರ್ಮಿಸಿದ ಸಿನಿಮಾವೊಂದು 20–30 ವರ್ಷಗಳ ನಂತರ ವೀಕ್ಷಿಸುವ ವ್ಯಕ್ತಿಗೂ ಖುಷಿ ನೀಡುವಂತಿರಬೇಕು. ಬಹಳ ಚೆನ್ನಾಗಿದೆ ಎಂದು ನಿರ್ದೇಶಕ ಹಾಗೂ ನಟನನ್ನು ಗುಣಗಾನ ಮಾಡಬೇಕು. ಅದು ಪ್ರಶಸ್ತಿಗಿಂತಲೂ ದೊಡ್ಡ ಸಾಧನೆ. ಹೆಚ್ಚಿನವರ ಮನೆಗಳಲ್ಲಿ ಇಂದಿಗೂ ರಾಜಕುಮಾರ್‌ ಅವರ ಸಿನಿಮಾ ಸಿ.ಡಿ.ಗಳ ದೊಡ್ಡ ಸಂಗ್ರಹವೇ ಇದೆ. ಈಗಿನ ಸಿನಿಮಾಗಳಿಂದ ಬೇಸತ್ತು ಜನ ರಾಜ್‌ ಸಿನಿಮಾ ವೀಕ್ಷಿಸುತ್ತಿರುತ್ತಾರೆ. ರಾಜ್‌ ಈಗ ನಮ್ಮ ನಡುವೆ ಇಲ್ಲದಿರಬಹುದು. ಆದರೆ, ಹೆಚ್ಚಿನವರ ಪಾಲಿಗೆ ಈಗಲೂ ಅವರು ನಂಬರ್‌ 1 ನಟರಾಗಿಯೇ ಉಳಿದುಕೊಂಡಿದ್ದಾರೆ. ಟಿ.ವಿ.ಯಲ್ಲಿ ‘ಬಬ್ರುವಾಹನ’, ‘ಭಕ್ತ ಕುಂಬಾರ’ ಸಿನಿಮಾ ವೀಕ್ಷಿಸಿದೆ ಎಂದು ಹೇಳಿಕೊಂಡು ಖುಷಿಪಡುವವರನ್ನು ನಾನು ಗಮನಿಸಿದ್ದೇನೆ’.

ಕನ್ನಡ ಚಿತ್ರರಂಗದ ಅನುಭವಿ ಹಾಗೂ ಹಿರಿಯ ನಿರ್ದೇಶಕ ಕೆ.ವಿ. ರಾಜು ಅವರ ನೇರ ಮಾತಿದು. ‘ಬೆಳ್ಳಿ ಮೋಡಗಳು’, ‘ಕದನ’, ಅಮಿತಾಭ್‌ ಬಚ್ಚನ್‌ ನಟನೆಯ ‘ಇಂದ್ರಜಿತ್‌’ (ಹಿಂದಿ), ‘ಬಂಧಮುಕ್ತ’, ‘ಸಂಗ್ರಾಮ’, ‘ಬೆಳ್ಳಿ ಕಾಲುಂಗುರ’, ‘ಯುದ್ಧಕಾಂಡ’, ‘ಹುಲಿಯಾ’, ‘ರಾಷ್ಟ್ರಗೀತೆ’ ಸೇರಿದಂತೆ 20ಕ್ಕೂ ಹೆಚ್ಚು ಸಿನಿಮಾ ನಿರ್ದೇಶಿಸಿಸಿರುವ ಕೆ.ವಿ. ರಾಜು ಅವರ ಹೆಸರು ಕನ್ನಡ ಸಿನಿಮಾಪ್ರೇಮಿಗಳಿಗೆ ಚಿರಪರಿಚಿತ. ‘ಸಿಬಿಐ ಶಂಕರ್‌’, ‘ಎಸ್‌.ಪಿ. ಸಾಂಗ್ಲಿಯಾನ–2’, ‘ಪಾಪಿಗಳ ಲೋಕದಲ್ಲಿ’, ‘ಕಲಾಸಿಪಾಳ್ಯ’, ‘ಗಜ’, ‘ಡೆಡ್ಲಿ ಸೋಮ–2’, ‘ರಾಜಧಾನಿ’ ಸೇರಿದಂತೆ 50ಕ್ಕೂ ಹೆಚ್ಚು ಸಿನಿಮಾಗಳಿಗೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿರುವ ಸಾಧನೆ ಅವರದು. ‘ಕರ್ನಾಟಕ ಚಲನಚಿತ್ರ ಅಕಾಡೆಮಿ’ಯು ಪ್ರಕಟಿಸಿರುವ ‘ಬಿ.ಆರ್‌.ಪಂತುಲು’ (ನಿರ್ದೇಶನ) ಪ್ರಶಸ್ತಿ ನಿರಾಕರಿಸುವ ಮೂಲಕ ಅವರೀಗ ಸುದ್ದಿಯಲ್ಲಿದ್ದಾರೆ.

* ‘ಕರ್ನಾಟಕ ಚಲನಚಿತ್ರ ಅಕಾಡೆಮಿ’ಯ ಪ್ರಶಸ್ತಿ ನಿರಾಕರಿಸಿದ್ದು ಯಾಕೆ? ಸ್ಪಷ್ಟ ಕಾರಣ ಹೇಳಿ
ಸಿನಿಮಾ ಮಾಡುವ ಉದ್ದೇಶದಿಂದ ಈ ಕ್ಷೇತ್ರಕ್ಕೆ ಬಂದೆ. ಜನರಿಗಾಗಿ ಸಿನಿಮಾ ಮಾಡಿದೆ. ನನ್ನ ಸಿನಿಮಾ ಪ್ರಯಾಣದ ಗುರಿ ಮನರಂಜನೆಯೇ ಹೊರತು ಪ್ರಶಸ್ತಿ ಪಡೆಯುವುದಲ್ಲ. ಪ್ರಶಸ್ತಿ ಎಂಬುದು ಶುದ್ಧ ಬೋಗಸ್‌ ಹಾಗೂ ದೊಡ್ಡ ಸುಳ್ಳು. ಪ್ರಶಸ್ತಿಗಾಗಿ ನೂರು ಜನ ಸ್ಪರ್ಧೆಗಿಳಿಯುತ್ತಾರೆ, ಲಾಬಿ ನಡೆಯುತ್ತದೆ, ಪ್ರಭಾವ ಬೀರಲು ಶುರು ಮಾಡುತ್ತಾರೆ. ನಿಜವಾದ ಮತ್ತು ಶುದ್ಧ ವ್ಯಕ್ತಿಯನ್ನು ಹಿಂದಕ್ಕೆ ಎಸೆದುಬಿಡುತ್ತಾರೆ. ಇಂಥವರ ನಡುವೆ ಪ್ರಶಸ್ತಿ ಸ್ವೀಕರಿಸಿಬಿಟ್ಟರೆ ನಾನೂ ಅಶುದ್ಧನಾಗಿ ಬಿಡುತ್ತೇನೆ. ನಮ್ಮನ್ನು ಗುರುತಿಸಲು ಜನ ಇದ್ದಾರೆ. ಇವನು ಸರಿ, ಅವನು ಸರಿ ಇಲ್ಲ ಎಂದು ಹೇಳಲು ಇವರು ಯಾರು? ಹೀಗಾಗಿ, ಪ್ರಶಸ್ತಿಗಾಗಿ ಸಿನಿಮಾ ಮಾಡಬೇಡಿ ಎಂದು ಹುಡುಗರಿಗೆ ಕಿವಿಮಾತು ಹೇಳುತ್ತಿರುತ್ತೇನೆ.

* ಪ್ರಶಸ್ತಿ ನಿರಾಕರಣೆಯ ಹಿಂದೆ ‘ನನ್ನನ್ನು ತಡವಾಗಿ ಗುರುತಿಸಲಾಗಿದೆ’ ಎಂಬ ಸಿಟ್ಟು ಅಥವಾ ಬೇಸರ ಇದೆಯೇ?
ಯಾರ ಮೇಲಿನ ಸಿಟ್ಟಿನಿಂದಲೂ ನಾನು ಪ್ರಶಸ್ತಿ ತಿರಸ್ಕರಿಸಿಲ್ಲ. ಪ್ರಶಸ್ತಿಗಾಗಿ ತಪಸ್ಸು ಮಾಡುವವರ ದೊಡ್ಡ ದಂಡೇ ಇದೆ. ಕಷ್ಟದಲ್ಲಿರುವವರಿಗೆ, ತುರ್ತಾಗಿ ಬೇಕಿರುವವರಿಗೆ ಪ್ರಶಸ್ತಿ ಕೊಡಿ ಎಂದು ಹೇಳಿದ್ದೇನೆ. ಮುಂದಿನ ಪೀಳಿಗೆಯವರು ನನ್ನನ್ನು ಪ್ರಶಸ್ತಿಗಳ ಮೂಲಕ ಗುರುತಿಸಬಾರದು. ಬದಲಾಗಿ ನನ್ನ ಸಿನಿಮಾಗಳು ಮಾತನಾಡಬೇಕು.
‘ಬಾಡಿದ ಹೂ’ ಸಿನಿಮಾದ ಚಿತ್ರಕಥೆಗೆ ನನಗೆ ಪ್ರಶಸ್ತಿ ಬರಬೇಕಿತ್ತು. ಪ್ರಶಸ್ತಿ ತೀರ್ಪುಗಾರರಲ್ಲಿ ಪುಟ್ಟಣ್ಣ ಕಣಗಾಲ್‌ ಕೂಡ ಒಬ್ಬರಾಗಿದ್ದರು. ಸಿನಿಮಾವೊಂದರ ಚಿತ್ರೀಕರಣ ಸೆಟ್‌ಗೆ ಬಂದಿದ್ದ ಅವರು ‘9 ಅಂಕ ನೀಡಿದ್ದೇನೆ. ಪ್ರಶಸ್ತಿ ನಿನಗೆ ಖಚಿತ’ ಎಂದಿದ್ದರು. ‘ನನ್ನ ಮುಂದಿನ ಸಿನಿಮಾಕ್ಕೆ ಚಿತ್ರಕಥೆ ಬರೆದು ಕೊಡು’ ಎಂದೂ ಕೇಳಿಕೊಂಡರು. ಪ್ರಶಸ್ತಿ ಪಟ್ಟಿ ಪ್ರಕಟವಾಯಿತು. ನನ್ನ ಹೆಸರೇ ಇರಲಿಲ್ಲ! ಆ ಬಳಿಕ ಪ್ರಶಸ್ತಿ ಎಂದರೆ ಅಲರ್ಜಿ.

*ಪ್ರಶಸ್ತಿ ಆಯ್ಕೆ ಎಂಬುದು ದೊಡ್ಡ ದಂಧೆ ಆಗಿದೆ ಎನ್ನುವುದು ನಿಮ್ಮ ಮಾತಿನ ಅರ್ಥವೇ?
ರಾಜ್ಯ ಸರ್ಕಾರ ಪ್ರಕಟಿಸುವ ಪ್ರಶಸ್ತಿ ಪಟ್ಟಿ ವಿರುದ್ಧವೂ ನ್ಯಾಯಾಲಯದ ಮೆಟ್ಟಿಲೇರುವಂತಾಗಿದೆ. ಏನೋ ಸಮಸ್ಯೆ ಇದೆ ಎಂಬುದೇ ಇದರರ್ಥ. ಪ್ರಶಸ್ತಿ ತಿರಸ್ಕರಿಸಿ ಹೊರಗೆ ನಿಂತಾಗ ಮಾತ್ರ ಆ ಸಮಸ್ಯೆ ಗೋಚರಿಸುತ್ತದೆ. ನಮಗೆ ಬೇಕಿರುವುದು ಶುದ್ಧ ಭಾರತ; ಸುದ್ದಿ ಭಾರತ ಅಲ್ಲ. ಈಚೆಗೆ ರಾಹುಲ್‌ ದ್ರಾವಿಡ್‌ ಅವರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ ತಿರಸ್ಕರಿಸಿದರು. ಪಿಎಚ್‌.ಡಿ. ಮಾಡಿಯೇ ಆ ಗೌರವ ಪಡೆಯುವುದಾಗಿ ಹೇಳಿದರು. ಆತ ಶುದ್ಧ ವ್ಯಕ್ತಿ. ಶುದ್ಧವಾಗಿದ್ದವರು ಪ್ರಶಸ್ತಿ ತಿರಸ್ಕರಿಸಬೇಕು. ಆಗ ಜನ ಕೂಡ ಇಷ್ಟಪಡುತ್ತಾರೆ. ಜನರ ಮೆಚ್ಚುಗೆಯೇ ದೊಡ್ಡ ಪ್ರಶಸ್ತಿ. ಸಿನಿಮಾ ತೆಗೆಯುವುದು ಜನರಿಗಾಗಿ; ಪ್ರಶಸ್ತಿಗಾಗಿ ಅಲ್ಲ.

*ಹಾಗಾದರೆ ಪ್ರಶಸ್ತಿ ನೀಡಲು ಯಾವ ರೀತಿಯ ಮಾನದಂಡ ಅನುಸರಿಬೇಕು?
30–40 ವರ್ಷ ಸಿನಿಮಾಕ್ಕಾಗಿ ಹಾಗೂ ಇತರ ಕ್ಷೇತ್ರಗಳಲ್ಲಿ ದುಡಿದವರಿಗೆ ಪ್ರಶಸ್ತಿ ಕೊಡಬೇಕು. ಜೀವಮಾನ ಶ್ರೇಷ್ಠ ಸಾಧಕರನ್ನು ಗುರುತಿಸಬೇಕು. ಆದರೆ, ಮುಂದೊಂದು ದಿನ ತುಕ್ಕು ಹಿಡಿಯುವ ಫಲಕ, ಹರಿದುಹೋಗುವ ಪ್ರಮಾಣಪತ್ರ ಕೊಡಬೇಡಿ. ಒಂದು ನಿವೇಶನ ಕೊಡಿ. ಇಲ್ಲವೆಂದರೆ ವಿವಿಧ ದೇಶಗಳನ್ನು ನೋಡಿಕೊಂಡು ಬರಲು ಪ್ರವಾಸ ಕೈಗೊಳ್ಳಲು ಆರ್ಥಿಕ ನೆರವು ನೀಡಿ.

*ನಿಮ್ಮ ಪ್ರಕಾರ ಚಲನಚಿತ್ರ ಅಕಾಡೆಮಿಯ ಮೂಲ ಉದ್ದೇಶ ಏನಾಗಿರಬೇಕು?
ಪ್ರಶಸ್ತಿ ನೀಡಲು ಈಗಂತೂ ದಾರಿಗೊಂದು ಸಂಸ್ಥೆಗಳು ಹುಟ್ಟಿಕೊಂಡಿವೆ. ಹೀಗಾಗಿ, ಪ್ರಶಸ್ತಿ ನೀಡುವುದೇ ಚಲನಚಿತ್ರ ಅಕಾಡೆಮಿಯ ದೊಡ್ಡ ಕೆಲಸವಾಗಬಾರದು. ಅದು ಸಿನಿಮಾ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುವಂತಿರಬೇಕು. ಅಂತರರಾಷ್ಟ್ರೀಯ ಸಿನಿಮಾಗಳ ಬಗ್ಗೆ ಮಾಹಿತಿ ನೀಡುವ ಸಂಸ್ಥೆ ಆಗಬೇಕು. ದತ್ತಾಂಶ ಸಂಗ್ರಹಿಸಬೇಕು. ಸಂಪನ್ಮೂಲ ಕೇಂದ್ರವಾಗಿ ಕಾರ್ಯನಿರ್ವಹಿಸಬೇಕು. ಸಿನಿಮಾ ವಿದ್ಯಾರ್ಥಿಗಳಿಗೆ ದಾರಿದೀವಿಗೆ ಆಗಬೇಕು. ಸಿನಿಮಾ ಜ್ಞಾನ ಹೊಂದಿದವರು ಚಿತ್ರೋದ್ಯಮಕ್ಕೆ ಸಂಬಂಧಿಸಿದ ಅಕಾಡೆಮಿ, ಸಂಘ ಸಂಸ್ಥೆಗಳಲ್ಲಿ ಇರಬೇಕು.

*ಈಚಿನ ದಿನಗಳಲ್ಲಿ ನೀವು ಚಿತ್ರೋದ್ಯಮದಿಂದ ದೂರ ಉಳಿಯಲು ಕಾರಣ?
ಚಿತ್ರೋದ್ಯಮ ನನ್ನನ್ನು ದೂರ ಇಡಲು ಪ್ರಯತ್ನಿಸುತ್ತಿದೆ ಅಷ್ಟೆ. ಶತ್ರುವಿನಂತೆ ನೋಡುತ್ತಿದೆ. ನಾನೇ ನಿರ್ದೇಶಿಸಿದ ‘ಹುಲಿಯಾ’ ಹಾಗೂ ‘ರಾಷ್ಟ್ರಗೀತೆ’ ಸಿನಿಮಾಗಳ ಹೀರೊ ರೀತಿಯ ಪಾಡು ನನ್ನದಾಗಿದೆ. ನಾನಂತೂ ದೂರ ಉಳಿದಿಲ್ಲ. ಒಳಗಡೆಯೇ ಇದ್ದು ಬರೆಯುತ್ತಿದ್ದೇನೆ, ಹುಡುಗರನ್ನು ಬೆಳೆಸುತ್ತಿದ್ದೇನೆ. ಸಿನಿಮಾಗಳ ಬಗ್ಗೆ ಚರ್ಚಿಸುತ್ತಿರುತ್ತೇನೆ.

*ರಾಜ್ಯದಲ್ಲಿ ಈಗ ಉದ್ಭವಿಸಿರುವ ಡಬ್ಬಿಂಗ್‌ ವಿವಾದದ ಬಗ್ಗೆ ಹೇಳಿ? 
ಡಬ್ಬಿಂಗ್‌ ಸಿನಿಮಾವೊಂದು ಬಿಡುಗಡೆಯಾದ ಮೇಲಷ್ಟೇ ಅದರ ಒಳಿತು ಹಾಗೂ ಕೆಡುಕು ಬಹಿರಂಗವಾಗುತ್ತದೆ. ವಾಸ್ತವಾಂಶ ಬಯಲಾಗುತ್ತದೆ. ಕನ್ನಡ ಭಾಷೆ, ಸಂಸ್ಕೃತಿ ಮೇಲಾಗುವ ಪರಿಣಾಮ ಗೊತ್ತಾಗುತ್ತದೆ. ಜನರ ಒಪ್ಪಿಗೆ, ಸ್ವೀಕಾರದ ಮೇಲೆ ಡಬ್ಬಿಂಗ್‌ ಸಿನಿಮಾಗಳ ಯಶಸ್ಸು ಅವಲಂಬಿಸಿದೆ. ನನ್ನ ಪ್ರಕಾರ ಡಬ್ಬಿಂಗ್ ಸಿನಿಮಾಗಳಿಗೆ ಕನ್ನಡ ನೆಲದಲ್ಲಿ ಹೆಚ್ಚು ಆಯಸ್ಸು ಇಲ್ಲ.

*ಕನ್ನಡ ಚಿತ್ರರಂಗ ಎದುರಿಸುತ್ತಿರುವ ಸವಾಲುಗಳೇನು? 
ಪ್ರಶಸ್ತಿಗಾಗಿ ಸಿನಿಮಾ ತೆಗೆಯುವುದನ್ನು ಬಿಡಿಸುವುದೇ ನಮ್ಮ ಎದುರು ಈಗ ಇರುವ ಮೊದಲ ಸವಾಲು. ಕಥೆ ಎರಡನೇ ದೊಡ್ಡ ಸವಾಲು. ಸಿನಿಮಾದಲ್ಲಿ ಕಥೆಯೊಂದನ್ನು ಬಿಟ್ಟು ಉಳಿದೆಲ್ಲವೂ ಇರುತ್ತವೆ. ಇದು ದುರಂತಕಥೆ. ಒಳ್ಳೆಯ ಕಥೆ ಇರುವ ಸಿನಿಮಾ ಮಾಡಿದರೆ ಹೀರೊ ಇಲ್ಲದಿದ್ದರೂ ಗೆಲ್ಲಬಹುದು. ಸಿನಿಮಾ ರಂಜನೆ ನೀಡುವ ಉದ್ದೇಶ ಹೊಂದಿದ್ದರೂ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವಂತಿರಬೇಕು. ಈಗಿನ ಸಿನಿಮಾಗಳಲ್ಲಿ ಮಣ್ಣಿನ ಗುಣವೇ ಇಲ್ಲವಾಗಿದೆ.

*ಸಿನಿಮಾಗಳನ್ನು ಜನರಿಗೆ ತಲುಪಿಸುವಲ್ಲಿ ಕನ್ನಡ ಚಿತ್ರೋದ್ಯಮ ಎಡವುತ್ತಿದೆಯೇ?
ಜನರಿಗೆ ಇಷ್ಟವಾಗುವ ರೀತಿಯಲ್ಲಿ ಸಿನಿಮಾ ತೆಗೆದರೆ ಯಾವುದೇ ಸಮಸ್ಯೆ ಆಗಲ್ಲ. ಜನರೇ ಹುಡುಕಿಕೊಂಡು ಬರುತ್ತಾರೆ. ಕೆಲ ಸಿನಿಮಾಗಳು ₹ 20–30 ಕೋಟಿ ಗಳಿಸುತ್ತಿವೆ. ಜನರಿಂದಲೇ ಆ ಹಣ ಬರುತ್ತಿದೆ. ಆದರೆ, ನಾಲ್ಕೈದು ಭಾಷೆಯ ಸಿನಿಮಾ ನೋಡಿ ಕದ್ದ ಸರಕನ್ನೆಲ್ಲಾ ಸೇರಿಸಿ ತೆಗೆದ ಸಿನಿಮಾವನ್ನು ಯಾರು ನೋಡುತ್ತಾರೆ? ಅಂಥ ಸಿನಿಮಾಗಳನ್ನು ಜನರಿಗೆ ತಲುಪಿಸುವುದಾದರೂ ಹೇಗೆ? ಪ್ರೇಕ್ಷಕರೇನು ದಡ್ಡರೇ? ಜನರು ಇಷ್ಟಪಡುತ್ತಾರೆ ಎಂಬ ಭ್ರಮೆ ನಿರ್ದೇಶಕನದ್ದು. ಸಂಶೋಧನೆ ಮಾಡಿ, ಸ್ವಂತವಾಗಿ ಆಲೋಚಿಸಿ ಸಿನಿಮಾ ಮಾಡುವವರ ಸಂಖ್ಯೆ ತೀರಾ ಕಡಿಮೆ ಆಗಿದೆ.

*ಅಂತರ್ಜಾಲ, ಧಾರಾವಾಹಿ, ರಿಯಾಲಿಟಿ ಷೋಗಳ ಮಧ್ಯೆ ಚಿತ್ರೋದ್ಯಮ ಸೊರಗುತ್ತಿದೆಯೇ?
ಇವೆಲ್ಲಾ ಪ್ರೇಕ್ಷಕರನ್ನೇ ಗುರಿಯಾಗಿಸಿಕೊಂಡು ಪ್ರತ್ಯೇಕವಾಗಿ ಕಾರ್ಯಾಚರಣೆಯಲ್ಲಿ ತೊಡಗಿವೆ. ಪ್ರತ್ಯೇಕ ಅಭಿಮಾನಿಗಳ ವಲಯ ಸೃಷ್ಟಿಸಿಕೊಂಡಿವೆ. ಹಾಗೆಯೇ ಸಿನಿಮಾ ವೀಕ್ಷಿಸುವವರ ವಲಯವೂ ಇದೆ. ಶ್ರಮ ಹಾಕಿದರೆ ಹಾಗೂ ಗುಣಮಟ್ಟವಿದ್ದರೆ ಈ ಎಲ್ಲಾ ಸವಾಲುಗಳನ್ನು ಮೀರಿ ಸಿನಿಮಾ ಗೆಲ್ಲಿಸಬಹುದು.

*ಮಲ್ಟಿಪ್ಲೆಕ್ಸ್‌ ಥಿಯೇಟರ್‌ಗಳಲ್ಲಿ ಕನ್ನಡ ಸಿನಿಮಾಗಳ ನಿರ್ಲಕ್ಷ್ಯಕ್ಕೆ ಕಾರಣವೇನು?
ಸಿನಿಮಾಕ್ಕೆ ಸೇರಿದ ಸಂಘಟನೆಗಳು, ಅಕಾಡೆಮಿ, ಚೇಂಬರ್‌ಗಳು ಬಲಿಷ್ಠವಾಗಿರಬೇಕು. ಕನ್ನಡ ಸಿನಿಮಾಗಳಿಗೆ ಸಮಸ್ಯೆ ಬಂದಾಗ ದನಿ ಎತ್ತಬೇಕು. ನಮ್ಮ ಸಿನಿಮಾ ಎಂಬ ಭಾವನೆ ಇರಬೇಕು. ಅದೀಗ ಕಾಣದಾಗಿದೆ. ಹೀಗಾಗಿ, ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡ ಸಿನಿಮಾಗಳ ನಿರ್ಲಕ್ಷ್ಯ ಮುಂದುವರಿದಿದೆ.

*ಪ್ರಯೋಗಶೀಲ ಸಿನಿಮಾಗಳು ಕಡಿಮೆಯಾಗಿ ಗೆದ್ದೆತ್ತಿನ ಬಾಲ ಹಿಡಿಯುವ ಪ್ರವೃತ್ತಿ ಇದೆಯಲ್ಲಾ?
ಇದು ಕನ್ನಡಿಗರ ದೌರ್ಭಾಗ್ಯ. ಒಂದು ಸಿನಿಮಾ ಯಶಸ್ಸು ಕಂಡರೆ ಅದೇ ರೀತಿಯ ಹತ್ತಿಪ್ಪತ್ತು ಸಿನಿಮಾಗಳು ಬರುತ್ತವೆ. ಇದೊಂದು ಅಂಟು ರೋಗ ಅಥವಾ ಹುಚ್ಚುತನ ಎನ್ನಬಹುದು.

*ನೀವು ಕಂಡಂತೆ ಕನ್ನಡ ಸಿನಿಮಾ ರಂಗದಲ್ಲಿ ಆಗಿರುವ ಬದಲಾವಣೆಗಳೇನು?
ಹಿಂದೆ ಶ್ರದ್ಧೆ, ಗೌರವ ಇರುತ್ತಿತ್ತು. ಈಗ ಅವೆಲ್ಲಾ ಮರೆಯಾಗಿ ವಾಣಿಜ್ಯೀಕರಣಗೊಂಡಿದೆ. ಕೆಲಸ ಮಾಡಿಸಿಕೊಂಡು, ನಂತರ ಎತ್ತಿ ಒಗೆಯುವ ಪ್ರವೃತಿ ಹೆಚ್ಚುತ್ತಿದೆ.

*ಸಿನಿಮಾ ಪ್ರಚುರಪಡಿಸುವಲ್ಲಿ ನಟರ ಪಾತ್ರ ಹೇಗಿರಬೇಕು?
ನಟರು ಜನರ ಪಾಲಿಗೆ ನಕ್ಷತ್ರಗಳಿದ್ದಂತೆ. ಬೇಸರವಾದಾಗ ಅವರನ್ನು ಕೈಬಿಟ್ಟುಬಿಡುತ್ತಾರೆ. ಅಲ್ಲಿಗೆ ನಟರು ನಿವೃತ್ತರಾದಂತೆ. ನಟರು ಸಿನಿಮಾದಿಂದ ಕೋಟ್ಯಂತರ ರೂಪಾಯಿ ದುಡಿಯಬಹುದು. ಆದರೆ, ತನ್ನ ಮೂಲವನ್ನು ನೆನಪಿಟ್ಟುಕೊಂಡು ಸಿನಿಮಾಗಳಲ್ಲಿ ತೊಡಗಿಸಿಕೊಳ್ಳಬೇಕು. ದುಡ್ಡು ಹಾಕಿದ ನಿರ್ಮಾಪಕನನ್ನು ನಡುದಾರಿಯಲ್ಲಿ ಕೈಬಿಡಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT