ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾವಂತದಲ್ಲಿ ಕೈದಿಯಾದ ನ್ಯಾಯ!

Last Updated 5 ಮಾರ್ಚ್ 2017, 4:59 IST
ಅಕ್ಷರ ಗಾತ್ರ

ಇವತ್ತು ಪ್ರತಿ ಕೆಲಸವನ್ನು ನಕಾರಾತ್ಮಕವಾಗಿ ಪ್ರಭಾವಿಸುತ್ತಿರುವುದು ಧಾವಂತ, ಸಮಯದ ಅಭಾವ, ಅವಸರ ಮತ್ತು ಒತ್ತಡ. ಇವುಗಳಿಂದ ಯಾರೂ ಹೊರತಾಗಿಲ್ಲ, ನ್ಯಾಯಾಧೀಶರನ್ನೂ ಒಳಗೊಂಡಂತೆ. ಇನ್ನು ಪೊಲೀಸ್ ತನಿಖಾಧಿಕಾರಿಗಳ ಪಾಡಂತೂ ಶೋಚನೀಯ. ಧಾವಂತವೇ ಅವರೋ, ಅವರೇ ಧಾವಂತವೋ ಹೇಳುವುದು ಕಷ್ಟ.

ಇಲ್ಲಿ ನಾನು ಹೇಳ ಹೊರಟಿರುವುದು ಇಷ್ಟೇ - ಅಪರಾಧ ಪ್ರಕರಣಗಳ ತನಿಖೆ ಮತ್ತು ವಿಚಾರಣೆ ವೇಳೆ ಧಾವಂತಕ್ಕೊಳಗಾಗಬಾರದು. ಕಾನೂನಿನ ವ್ಯಾಪ್ತಿಯಲ್ಲಿ ಅಪರಾಧವಲ್ಲದ ಘಟನೆಗಳನ್ನು ಸರಿಯಾಗಿ ಗುರುತಿಸಿ, ವ್ಯಕ್ತಿಯ ಉದ್ದೇಶ ಮತ್ತು ಸ್ವರಕ್ಷಣೆಯ ಕಾರಣಗಳನ್ನು ಸ್ಪಷ್ಟಪಡಿಸಿಕೊಳ್ಳದೆ ನಡೆಸುವ ತನಿಖೆಯಾಗಲಿ, ಆದೇಶವಾಗಲಿ ಆರೋಪಿಗೆ ಮಾಡುವ ಅನ್ಯಾಯ. ಅಪರಾಧಿಕ ಜಗತ್ತಿನಲ್ಲಿ ಧಾವಂತಕ್ಕೊಳಗಾದ ಪೊಲೀಸ್ ತನಿಖಾಧಿಕಾರಿಗಳಿಂದ ಆಗಿರುವ ಇಂಥ ದುರಂತಗಳ ಸಂಖ್ಯೆ ಅನೂಹ್ಯ. ಈ ಕಾರಣದಿಂದಲೇ ‘Justice hurried is justice burried’ (ಅವಸರದ ನ್ಯಾಯದಾನ ನ್ಯಾಯದ ಸಮಾಧಿ ಮಾಡಿದಂತೆ) ಎಂಬ ಮಾತು ಪ್ರಸಿದ್ಧಿಗೆ ಬಂದಿರುವುದು. 

ನನಗೆ ಎದುರಾದ ಇಂಥದ್ದೇ ಒಂದು ಪ್ರಕರಣದಲ್ಲಿ ಕಟ್ಟಿಕೊಟ್ಟ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನಕಪುರ ತಾಲ್ಲೂಕಿನ ಗಾಣಗಾಪುರ ಗ್ರಾಮದ ಜಯಪ್ಪಗೌಡರು ಕೃಷಿಕರು. ಮಕ್ಕಳಿಲ್ಲದ ಅವರು ಸಹೋದರನ ಮಗಳು ರತ್ನಾವತಿಯನ್ನು ದತ್ತು ಪಡೆದರು. ವಯಸ್ಸಾದ ಅವರ ತಾಯಿ, ವಯಸ್ಸಿಗೆ ಬಂದ ರತ್ನಾವತಿಯ ಮದುವೆಯನ್ನು ಕಣ್ಣಾರೆ ಕಾಣಲು ಹಂಬಲಿಸುತ್ತಿದ್ದರು. ಆದ್ದರಿಂದ ಜಯಪ್ಪನವರು ವಿಠಲಗೌಡ ಎಂಬುವವರ ಮಗ ಜಯಮೂರ್ತಿಯ ಜೊತೆ ಮಗಳ ಮದುವೆ ಗೊತ್ತು ಮಾಡಿದರು. ನಿಶ್ಚಿತಾರ್ಥವೂ ಆಯಿತು. ವರನ ಕಡೆಯವರ ಆಸೆ ಮೇರೆಗೆ ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯ ತೋಟವೊಂದರ ಮಧ್ಯೆಯಿದ್ದ ಬೃಹತ್ ಕಲ್ಯಾಣ ಮಂಟಪವನ್ನು ಗೊತ್ತುಮಾಡಿ ಮದುವೆ ದಿನ ನಿಗದಿ ಮಾಡಿದರು.

ಮದುವೆಗೆ ಕೆಲವು ದಿನಗಳ ಮುನ್ನ ಜಯಪ್ಪಗೌಡರಿಗೆ ತಮ್ಮ ಹಾಗೂ ವಿಠಲಗೌಡರ ಬಂಧು-ಬಳಗ ಮತ್ತು ಸ್ನೇಹಿತರಿಗಾಗಿ ಭೋಜನ ಕೂಟ ಏರ್ಪಡಿಸುವ ಮನಸ್ಸಾಯಿತು. ತಮ್ಮ ಮನೆಯ ಪಕ್ಕದಲ್ಲಿದ್ದ ಸಮುದಾಯ ಭವನವನ್ನು ಗೊತ್ತು ಮಾಡಿ ಸಂಬಂಧಿಕರನ್ನು ಹಾಗೂ ಪರಿಚಯದ ಸರ್ಕಾರಿ ಅಧಿಕಾರಿಗಳನ್ನೂ ಆಮಂತ್ರಿಸಿದರು. ನಿಗದಿತ ಸಮಯಕ್ಕೆ ಆಮಂತ್ರಿತರೆಲ್ಲಾ ಬಂದರು.

ಅದೇ ಸಮಯಕ್ಕೆ, ಸಮುದಾಯ ಭವನದ ಹಿಂದೆ ಆ ಊರಿನ ಎರಡು ಗುಂಪುಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಶುರುವಾಗಿ ನೋಡು ನೋಡುತ್ತಿದ್ದಂತೆ ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸತೊಡಗಿದರು. ಅವರಲ್ಲಿ ಜಯಪ್ಪಗೌಡರಿಗೆ ಬೇಕಾದವರೂ ಇದ್ದರು. ಜಯಪ್ಪಗೌಡರು ಅಲ್ಲಿಗೆ ಹೋದಾಗ ಪರಿಚಯವಿದ್ದ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಥಳಿಸುತ್ತಿದ್ದುದ್ದನ್ನು ಕಂಡರು.

ಅವರನ್ನು ಹೇಗಾದರೂ ಮಾಡಿ ಉಳಿಸದೇ ಹೋದರೆ ಅವನನ್ನು  ಸಾಯಿಸಿಯೇಬಿಡುತ್ತಾರೆಂದು ಖಚಿತವಾದಾಗ, ಆತನನ್ನು ರಕ್ಷಿಸುವ ಉದ್ದೇಶದಿಂದ ಪಕ್ಕದಲ್ಲೇ ಬಿದ್ದಿದ್ದ ಹಿಡಿ ಗಾತ್ರದ ಕಲ್ಲನ್ನು ಕೈಗೆತ್ತಿಕೊಂಡು ಮಾರಕಾಸ್ತ್ರ ಬಳಸುತ್ತಿದ್ದವನ ಕಡೆ ಬೀಸಿದರು. ದುರಾದೃಷ್ಟ ನೋಡಿ... ಅದು ಗುರಿತಪ್ಪಿ ಪಕ್ಕದಲ್ಲಿದ್ದ ಬಚ್ಚಪ್ಪನ ಕಿವಿಯ ಮೇಲೆ ಬಿದ್ದು ಕೆಳಗೆ ಬಿದ್ದು ಬಿಟ್ಟ. ಕಿವಿಯಿಂದ ಧಾರಾಕಾರವಾಗಿ ರಕ್ತ ಸುರಿಯಲಾರಂಭಿಸಿತು. ಜಯಪ್ಪಗೌಡ ಅವರೇ ತಮ್ಮ ಜೀಪಿನಲ್ಲಿ ಅವನನ್ನು ಆಸ್ಪತ್ರೆಗೆ ಸಾಗಿಸುವ ಏರ್ಪಾಟು ಮಾಡಿದರು.

ಈ ಘಟನೆಯಿಂದಾಗಿ ಭೋಜನ ಕೂಟಕ್ಕೆ ಕರಾಳ ಛಾಯೆ ಕವಿಯಿತು. ಜಯಪ್ಪಗೌಡ ಅವರು ಔತಣಕೂಟಕ್ಕೆ ಬಂದಿದ್ದವರ ಕ್ಷಮೆ ಕೇಳಿ ಕೆಲವರನ್ನು ಜೊತೆಗೂಡಿಸಿಕೊಂಡು ಪೊಲೀಸ್ ಠಾಣೆ ತಲುಪಿದರು. ಅಷ್ಟರಲ್ಲಾಗಲೇ ಬಚ್ಚಪ್ಪನ ಸಂಬಂಧಿಕರು ಪೊಲೀಸ್ ಠಾಣೆಯಲ್ಲಿದ್ದು ಇನ್ಸ್‌ಪೆಕ್ಟರ್ ಹಬೀಬುಲ್ಲಾ ಅವರಿಗೆ ಕಾಯುತ್ತಿದ್ದರು.
***
ಐದು ವರ್ಷದ ಬಾಲಕಿಯನ್ನು ವಾಮಾಚಾರಕ್ಕಾಗಿ ಅಪಹರಿಸಿ ಕೊಲೆ ಮಾಡಿದ್ದ ಸ್ಥಳದಿಂದ ನೇರವಾಗಿ ಠಾಣೆಗೆ ಬಂದರು ಅಬಿಬುಲ್ಲಾ. ಮಗುವಿನ ಕೈಗೆ ಗಾಯಮಾಡಿ ರಕ್ತವನ್ನು ಉಪಯೋಗಿಸಿ ನಂತರ ಬಲಿ ನೀಡಿದ್ದ ಮೃತದೇಹ ನೋಡಿ ಬಂದಿದ್ದ ಅವರು ಇನ್ನೂ ಬೆಂಕಿಯಲ್ಲಿ ಬೇಯುತ್ತಿದ್ದವರಂತೆ ಕಾಣುತ್ತಿದ್ದರು.  ಆ ಸಮಯದಲ್ಲಿಯೇ, ಕಲ್ಲುತೂರಿದ ವಿಷಯವನ್ನು  ಬಚ್ಚಪ್ಪನ ಕಡೆಯವರು  ವಿವರಿಸತೊಡಗಿದರು.  ಅಷ್ಟೊತ್ತಿಗಾಗಲೇ ಬಚ್ಚಪ್ಪ ಆಸ್ಪತ್ರೆಯಲ್ಲಿ ಸತ್ತುಹೋದ. ಕೆಲವರು ದೌಡಾಯಿಸಿ ಬಂದು ಈ ವಿಷಯವನ್ನು ಇನ್‌ಸ್ಪೆಕ್ಟರ್‌ ಅವರಿಗೆ ತಿಳಿಸಿದರು.

ವಾಮಾಚಾರ ಘಟನೆಯಿಂದ ಮಾನಸಿಕ ಸಮತೋಲನ ಕಳೆದುಕೊಂಡಿದ್ದ ಹಬೀಬುಲ್ಲಾ, ಹಿಂದೂ-ಮುಂದೂ ಯೋಚಿಸಲಿಲ್ಲ. ಜಯಪ್ಪಗೌಡ ಅವರ ಬಗ್ಗೆ ತಮಗಿದ್ದ ಗೌರವಾದರಗಳನ್ನೂ ಮರೆತರು. ಬಚ್ಚಪ್ಪನವರ ಕಡೆಯಿಂದ ಕೂಡಲೇ ಫಿರ್ಯಾದು ಒಂದನ್ನು ಪಡೆದು ಕೊಲೆ ಆರೋಪದ ಮೇಲೆ ಪ್ರಕರಣ ದಾಖಲಿಸಿಬಿಟ್ಟರು. ಜಯಪ್ಪಗೌಡ ಅವರನ್ನು ಬಂಧಿಸುವಂತೆ ತಮ್ಮ ಅಧೀನ ಪೊಲೀಸರಿಗೆ ಆದೇಶಿಸಿ ಅಲ್ಲಿಂದ ಹೊರಟೇ ಹೋದರು!
ಜಯಪ್ಪಗೌಡ ಹಾಗೂ ಅವರ ಜೊತೆಯಲ್ಲಿ ಬಂದಿದ್ದ ಗ್ರಾಮದ ಇತರ ಗಣ್ಯರು ಘಟನೆಗೆ ಕಾರಣವಾದ ಪರಿಸ್ಥಿತಿಯನ್ನು ‘ಕೊಲೆ’ ಎಂದು ಪರಿವರ್ತಿಸುವುದು ತಪ್ಪಾಗುತ್ತದೆ ಎಂದು ವಿವರಿಸಿದರು. ಹಾಗೊಂದು ವೇಳೆ ಮಾಡಿದರೆ ಜಯಪ್ಪಗೌಡ ಅವರ ವ್ಯಕ್ತಿತ್ವಕ್ಕೆ ಹಾನಿಯಾಗಿ ಅವರನ್ನು ಅವಲಂಬಿಸಿರುವ ಹತ್ತಾರು ಸಂಸಾರಗಳು ದಿಕ್ಕಾಪಾಲಾಗುತ್ತವೆ ಎಂದರು. ಅವರ ದತ್ತುಪುತ್ರಿಯ ಮದುವೆ ಇದೆಯೆಂದರೂ ಠಾಣೆಯಲ್ಲಿದ್ದ ಅಧಿಕಾರಿ ಎಲ್ಲದಕ್ಕೂ ಇನ್‌ಸ್ಪೆಕ್ಟರ್ ಅಬಿಬುಲ್ಲಾ ಕಡೆ ಬೊಟ್ಟು ಮಾಡುತ್ತಾ ಜಯಪ್ಪಗೌಡ ಅವರನ್ನು ಬಂಧಿಸಿದರು!

ಈ ಹಂತದಲ್ಲಿಯೇ ಪ್ರಕರಣವು ನನ್ನ ಬಳಿ ಬಂತು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಮರುದಿನವೇ ಜಾಮೀನು ಅರ್ಜಿ ಸಲ್ಲಿಸಿದೆ. ಅದು ವಿಚಾರಣೆಗೆ ಬಂದಾಗ ಸರ್ಕಾರಿ ವಕೀಲರು ಶವಪರೀಕ್ಷಾ ವರದಿ, ಶವ ತನಿಖಾ ವರದಿ ಮುಂತಾದ ದಾಖಲೆಗಳನ್ನು ಹಾಜರುಪಡಿಸುತ್ತಾ ವಾದಿಸಿದರು. ಆಗ ‘ಇದು ಕೊಲೆಯಲ್ಲ, ಇನ್ನೊಬ್ಬರನ್ನು ರಕ್ಷಿಸುವ ಭಾಗವಾಗಿ ಮಾಡಿದ ಕೃತ್ಯವು ಅಪರಾಧವಾಗುವುದಿಲ್ಲ’ ಎಂದು ಪ್ರತಿವಾದಿಸಿದ ನಾನು ಭಾರತೀಯ ದಂಡ ಸಂಹಿತೆ (ಐ.ಪಿ.ಸಿ)ಯಲ್ಲಿ ಉಲ್ಲೇಖಗೊಂಡ ಕಲಮುಗಳನ್ನೆಲ್ಲಾ ಕೋರ್ಟ್‌ ಮುಂದೆ ಬಿಡಿಸಿಟ್ಟೆ.

‘ಆತ್ಮರಕ್ಷಣೆಗೆ ಸಂಬಂಧಪಟ್ಟ ಕಾನೂನುಗಳನ್ನು ಪರಿಗಣಿಸಲು ಇದು ಸರಿಯಾದ ಹಂತವಲ್ಲ’ ಎಂದ ಕೋರ್ಟ್‌ ಜಾಮೀನು ಅರ್ಜಿಯನ್ನು ತಳ್ಳಿಹಾಕಿತು. ಅದರ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.  ಪೊಲೀಸ್ ಅಧಿಕಾರಿಗಳು ಪಡೆದುಕೊಂಡ ಸಾಕ್ಷಿಗಳ ಹೇಳಿಕೆಗಳನ್ನು,  ಘಟನೆಗೆ ಸಂಬಂಧಿಸಿದ ದಾಖಲೆಗಳನ್ನು ಸರ್ಕಾರಿ ವಕೀಲರು ಕೋರ್ಟ್‌ಗೆ ಹಾಜರುಪಡಿಸಿದರು. ‘ಸಮಯದ ದುರ್ಲಾಭವನ್ನು ಪಡೆಯುತ್ತಾ ಮಾಡಿರುವ ಕೊಲೆ ಇದಾಗಿದ್ದು, ಪೂರ್ವ ನಿರ್ಧರಿತವಾದದ್ದು’ ಎಂದು  ಅವರು ವಾದಿಸಿದರು. ಸೆಷನ್ಸ್‌ ಕೋರ್ಟ್‌ನಲ್ಲಿ ಮಾಡಿದ್ದ ವಾದವನ್ನೇ ಮತ್ತಷ್ಟು ವಿಸ್ತರಿಸಿ ಕಾನೂನಿನ ದೃಷ್ಟಿಯಲ್ಲಿ ಆರೋಪಿಗೆ ಸಹಾಯವಾಗುವ ಅಂಶಗಳನ್ನು ನ್ಯಾಯಮೂರ್ತಿಗಳ ಮುಂದಿಟ್ಟೆ, ಆದರೆ ಪ್ರಯೋಜನ ಆಗಲಿಲ್ಲ. ಹೈಕೋರ್ಟ್ ಕೂಡ ಜಾಮೀನು ನೀಡಲಿಲ್ಲ.
ಎರಡೂ ಕೋರ್ಟ್‌ಗಳ ಮುಂದೆ ಜಾಮೀನು ಅರ್ಜಿ ವಿಚಾರಣೆ ಒಂದೂವರೆ ತಿಂಗಳು ನಡೆಯಿತು. ಗಂಡಿನ ಕಡೆಯವರಿಗೆ ಇದು ದೀರ್ಘ ಕಾಲದಂತೆ ಕಂಡಿರಬೇಕು. ಜಯಪ್ಪಗೌಡ ಅವರು ಕೊಲೆ ಆರೋಪದಿಂದ ಎಂದೂ ಮುಕ್ತರಾಗಿ ಹೊರಗೆ ಬರುವುದಿಲ್ಲವೆಂದು ಭಾವಿಸಿ ಮದುವೆಯನ್ನು ಮುರಿದರು.
ಇತ್ತ ಮಗನ ಬಂಧನ ಹಾಗೂ ಮೊಮ್ಮಗಳ ಮದುವೆ ಮುರಿದದ್ದನ್ನು ಅರಗಿಸಿಕೊಳ್ಳಲಾರದೇ ಜಯಪ್ಪಗೌಡ  ಅವರ ತಾಯಿ ಅಸುನೀಗಿದರು! ಮಾಡದ ತಪ್ಪಿಗೆ ಒಂದರ ಮೇಲೊಂದರಂತೆ ಆಘಾತ ಅನುಭವಿಸಿದ  ಜಯಪ್ಪಗೌಡ ಅವರ ಪರಿಸ್ಥಿತಿ ಹೇಗಿದ್ದೇತೆಂದು ನಾನು ವಿವರಿಸಬೇಕಾದ ಅಗತ್ಯವಿಲ್ಲ...
ಎರಡೂ ಕೋರ್ಟ್‌ಗಳಲ್ಲಿ ಜಾಮೀನು ಸಿಗದಿದ್ದರೂ, ನನ್ನಲ್ಲಿಟ್ಟ ವಿಶ್ವಾಸ ಮುರಿದುಕೊಳ್ಳದೆ, ವಿಚಾರಣೆಯನ್ನು ಮುಂದುವರೆಸಿಕೊಡುವಂತೆ ಜಯಪ್ಪ ನನ್ನನ್ನು ಕೋರಿದರು. ಜಾಮೀನಿಗೆ ಸಂಬಂಧಪಟ್ಟಂತೆ ಕೋರ್ಟ್ ಬಾಗಿಲುಗಳು ಅವರಿಗೆ ಮುಚ್ಚಿಹೋಗಿದ್ದವು. ಅದಕ್ಕಾಗಿ ನಾನು ಅಪರಾಧ ದಂಡಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ)ಯ 482ನೇ ಕಲಮಿನ ಅಡಿ ವಿಶೇಷ ಅರ್ಜಿಯನ್ನು ಹೈಕೋರ್ಟ್‌ಗೆ ಸಲ್ಲಿಸಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕಲೆಹಾಕಿರುವ ಸಾಕ್ಷ್ಯಾಧಾರಗಳು ನಿರಾಧಾರವಾಗಿದ್ದು, ನಡೆದಿರುವುದು ಕೊಲೆಯೇ ಎಂದು ಬೆಂಬಲಿಸುವಷ್ಟು ಶಕ್ತಿಯುತವಾಗಿಲ್ಲ. ಆದ್ದರಿಂದ ಇಡೀ ತನಿಖೆಯನ್ನೇ ವಜಾಗೊಳಿಸಬೇಕು’ ಎಂದು ನಾನು ಆ ಅರ್ಜಿಯಲ್ಲಿ ಕೋರಿದೆ.

‘ತನಿಖೆಯನ್ನು ಪೂರ್ಣ ಪ್ರಮಾಣದಲ್ಲಿ ಮಾಡಲು ತನಿಖಾಧಿಕಾರಿಗಿರುವ ಅಧಿಕಾರವನ್ನು ಮೊಟಕುಮಾಡಲು ಮನಸ್ಸಾಗುತ್ತಿಲ್ಲ’ ಎಂದ ಹೈಕೋರ್ಟ್‌ ನನ್ನ ಅರ್ಜಿಯನ್ನು ಪುನಃ ವಜಾಗೊಳಿಸಿತು. ನನ್ನ ಸಮಾಧಾನಕ್ಕೆಂಬಂತೆ, ‘ತನಿಖೆ ಪೂರ್ಣವಾದ ಮೇಲೆ ಇಂತಹುದೇ ಅರ್ಜಿಯನ್ನು ಬೇಕಿದ್ದರೆ ಹಾಕಿಕೊಳ್ಳಿ, ಆಗ ಪರಿಹಾರ ಸಿಗಬಹುದು’ ಎಂದಿತು.

ಅರ್ಜಿ ವಜಾಗೊಂಡ ಮಾತ್ರಕ್ಕೆ ನಾನು ಸುಮ್ಮನೇ ಕುಳಿತುಕೊಳ್ಳುವಂತೆ ಇರಲಿಲ್ಲ. ನಿರಪರಾಧಿಗೆ ನ್ಯಾಯ ಕೊಡಿಸಲೇಬೇಕಿತ್ತು. ಆದರೆ, ಪೊಲೀಸರು ತನಿಖೆಯನ್ನು ಮುಗಿಸಿ ದೋಷಾರೋಪ ವರದಿಯನ್ನು ಕೋರ್ಟ್‌ಗೆ ಸಲ್ಲಿಸುವವರೆಗೆ ಕಾಯಬೇಕಾಗಿ ಬಂತು. ಪೊಲೀಸರು ಆರೋಪಿಯನ್ನು ಬಂಧಿಸಿ ಮ್ಯಾಜಿಸ್ಟ್ರೇಟ್‌ ಮುಂದೆ ಮೊದಲ ಬಾರಿಗೆ  ಹಾಜರುಪಡಿಸಿದ ದಿನದಿಂದ 90 ದಿನಗಳ ಒಳಗಾಗಿ ಅಂತಿಮ ದೋಷಾರೋಪ ಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಸಬೇಕೆಂದು ಕಾನೂನಿನಲ್ಲಿ ಇದೆ. ಆದ್ದರಿಂದ ನಾನು ಇನ್ನೂ 20 ದಿನಗಳು ಕಾಯಬೇಕಿತ್ತು.

ಈ ಅವಧಿಯ ನಡುವೆ, ಸೆಷನ್ಸ್‌ ಕೋರ್ಟ್‌, ಆರೋಪಿಯ ಮತ್ತು ಸರ್ಕಾರಿ ವಕೀಲರ ವಾದಗಳನ್ನು ಕೇಳುವ ಒಂದು ಅವಕಾಶ ನೀಡಿತು. ಅದಾಗಲೇ ಪೊಲೀಸರು ಸಲ್ಲಿಸಿದ್ದ ದೋಷಾರೋಪ ಪಟ್ಟಿಯಲ್ಲಿ ಇದ್ದ ಅಂಶಗಳನ್ನು ಗಮನಿಸಿಕೊಂಡಿದ್ದೆ.  ಘಟನೆ ನಡೆದ ಬಗೆಯನ್ನು ಅದರಲ್ಲಿ ಎಳೆಎಳೆಯಾಗಿ ವಿವರಿಸಲಾಗಿತ್ತು. ಈ ಅಂಶಗಳನ್ನು ಸೂಕ್ಷ್ಮವಾಗಿ  ಕಾನೂನಿನ ನೆಲೆಯಿಂದ ಗಮನಿಸಿದಾಗ,  ಜಯಪ್ಪಗೌಡ ಅವರು ನಿರಪರಾಧಿ ಎಂದು ಸ್ಪಷ್ಟವಾಗಿ ಕಾಣಿಸುತ್ತದೆ ಎಂಬುದನ್ನು ಕೋರ್ಟ್‌ಗೆ ಒತ್ತಿ ಒತ್ತಿ ಹೇಳಿದೆ.

‘ಜಯಪ್ಪಗೌಡ ಅವರು ಘಟನೆಯ ಸಂದರ್ಭದಲ್ಲಿ ಯಾವುದೇ ಗುಂಪಿಗೆ ಸೇರಿದ ವ್ಯಕ್ತಿಯಾಗಿ ಗುಂಪಿನ ಮಧ್ಯೆ ಇರಲಿಲ್ಲ. ಅವರು ಆ ಗಲಾಟೆಗೆ ಕಾರಣರೂ ಆಗಿರಲಿಲ್ಲ. ಗಲಾಟೆಯನ್ನು ಪ್ರತ್ಯಕ್ಷವಾಗಿಯಾಗಲಿ, ಪರೋಕ್ಷವಾಗಿಯಾಗಲಿ ಪ್ರಚೋದಿಸಿ ಅದರ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಔತಣಕೂಟ ಏರ್ಪಡಿಸಿರಲಿಲ್ಲ. ಎರಡು ಗುಂಪಿನ ನಡುವಿನ ವ್ಯಾಜ್ಯ ವಿಕೋಪದ ಪರಿಸ್ಥಿತಿ ತಲುಪಿದ್ದ ಸಮಯದಲ್ಲಿ ಅಲ್ಲಿಗೆ ಹೋದವರು ಅಷ್ಟೇ. ಒಬ್ಬನನ್ನು ಇನ್ನೊಬ್ಬ ಕೊಲ್ಲಲು ಮುಂದಾದಾಗ ತಾವು ಸುಮ್ಮನಿದ್ದರೆ ಅಲ್ಲೊಂದು ಕೊಲೆಯಾಗುತ್ತದೆ ಎಂದು ಅಂದುಕೊಂಡರು. ಕೊಲೆ ತಪ್ಪಿಸಲು ಬೇರೆಯವರಿಗೆ ಹೇಳುವಷ್ಟು ಸಮಯಾವಕಾಶವಿರಲಿಲ್ಲ. ಆ ಸಮಯದಲ್ಲಿ ಅವರಿಗೆ ತೋಚಿದ್ದು ದುರಾತ್ಮನ ಕಡೆಗೆ ಕಲ್ಲು ಬೀಸಿ ದುರಂತ ತಪ್ಪಿಸುವುದು. ಹೀಗೆ ಮಾಡಲು ಕಾನೂನಿನಲ್ಲಿ ಅವಕಾಶವೂ ಉಂಟು. ಇಂತಹ ಪ್ರಯತ್ನವನ್ನು ‘ಆತ್ಮರಕ್ಷಣೆಯ ಕಾನೂನು’ ಬೆಂಬಲಿಸುತ್ತದೆ. ಆದರೆ ಕಲ್ಲು ಗುರಿ ತಪ್ಪಿ ಬಚ್ಚಪ್ಪ ಅವರ ಮೇಲೆ ಬಿತ್ತು. ಬಚ್ಚಪ್ಪ ಹಾಗೂ ಜಯಪ್ಪಗೌಡ ಅವರಿಗೂ ಯಾವುದೇ ದ್ವೇಷ ಇರಲಿಲ್ಲ. ಇದು ಗುರಿತಪ್ಪಿ ನಡೆದ ಘಟನೆ ಅಷ್ಟೇ. ಐ.ಪಿ.ಸಿಯ ಅಡಿ ‘ಆತ್ಮರಕ್ಷಣೆ’ಗೆ ಸಂಬಂಧಿಸಿದ ಅಧ್ಯಾಯ ಜಯಪ್ಪಗೌಡ ಅವರ ಪರವಾಗಿ ನುಡಿಯುತ್ತದೆ...’ ಎಂದು ನ್ಯಾಯಾಲಯಕ್ಕೆ ಸ್ಪಷ್ಟವಾಗಿ ಮನವರಿಕೆ ಮಾಡಿಕೊಟ್ಟೆ.
ನನ್ನ ಇಡೀ ವಾದವನ್ನು ಸಾವಧಾನವಾಗಿ ಅಲಿಸಿದ ಸೆಷನ್ಸ್ ನ್ಯಾಯಾಲಯ ಕೊನೆಗೂ ನನ್ನ ವಾದವನ್ನು ಮಾನ್ಯ ಮಾಡಿತು. ‘ಪೊಲೀಸರು ನ್ಯಾಯಾಲಯಕ್ಕೆ ದಾಖಲಿಸಿರುವ ದೋಷಾರೋಪ  ವರದಿಯಲ್ಲಿ ಜಯಪ್ಪಗೌಡ ಅವರ ಕೃತ್ಯ ಒಂದು ಕೊಲೆಯಾಗುತ್ತದೆ ಎಂದು ಹೇಳಲು ಸಹಕರಿಸುವ ಯಾವುದೇ ಅಂಶಗಳು ಕಂಡುಬರುತ್ತಿಲ್ಲ’ ಎಂದು ಅಭಿಪ್ರಾಯಪಟ್ಟು ಅವರನ್ನು ಬಿಡುಗಡೆ ಮಾಡಿತು. ಕೊನೆಗೂ, ನಿರಪರಾಧಿ ಬಚ್ಚಪ್ಪಗೌಡ ಕಾನೂನಿನ  ದೃಷ್ಟಿಯಿಂದಲೂ ನಿರಪರಾಧಿಯಾಗಿಯೇ ಉಳಿದರು.
ಸೆಷನ್ಸ್ ಕೋರ್ಟ್‌ ವಿಚಾರಣೆಗಾಗಿ ತೆಗೆದುಕೊಂಡ ಅವಧಿ ಮೂರು ದಿನ. ಆ ಮೂರೂ ದಿನ ಸರ್ಕಾರಿ ವಕೀಲರು ಮತ್ತು ನನ್ನ ವಾದವನ್ನು ಕೋರ್ಟ್‌ ಸಮಾಧಾನಚಿತ್ತವಾಗಿ ಆಲಿಸಿತ್ತು. ಪೊಲೀಸರು ಸಲ್ಲಿಸಿದ್ದ ದೋಷಾರೋಪ ಪಟ್ಟಿಯನ್ನು ಸೂಕ್ಷ್ಮವಾಗಿ ತುಲನೆ ಮಾಡಿ ಕಾನೂನಿನ ದೃಷ್ಟಿಯಲ್ಲಿ ಅದನ್ನು ಅಳೆಯಿತು. ಆ ಮೂರೂ ದಿನಗಳಲ್ಲಿ ಯಾವ ಧಾವಂತ ಜರುಗಲಿಲ್ಲ. ಹೀಗಾಗಿ ಜಯಪ್ಪಗೌಡ ಅವರು ವಿಚಾರಣೆಗೆ ಮುನ್ನವೇ ಆರೋಪಮುಕ್ತರಾಗಿ ಹೊರಗೆ ಬಂದರು.

ಆದರೆ ದುರಂತ ನೋಡಿ, ಅದಾಗಲೇ  ಬಚ್ಚಪ್ಪಗೌಡ ಅವರ ತಾಯಿಯನ್ನು ಕಳೆದುಕೊಂಡಿದ್ದರು, ಮಗಳ ಮದುವೆಯೂ ಮುರಿದುಬಿದ್ದಿತ್ತು!
(ಹೆಸರುಗಳನ್ನು ಬದಲಾಯಿಸಿದೆ)


ಲೇಖಕರು ಹೈಕೋರ್ಟ್ ವಕೀಲರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT